ಬದುಕುಳಿದಿದ್ದೇನೆ, ಹಾಗಾಗಿ ಮಾತಾಡ್ತಿದ್ದೇನೆ!ವೈರಲ್ ಆಯ್ತು ಕಾಶ್ಮೀರಿ ಹೆಣ್ಣುಮಗಳ ಭಾಷಣ

By Kannadaprabha NewsFirst Published Nov 19, 2019, 4:26 PM IST
Highlights

ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಮೇಲೆ ಕಾಶ್ಮೀರದಲ್ಲಿ ಭಾರತವು ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಪಗಳು ಕೇಳಿಬಂದಿವೆ. ಜಗತ್ತಿನ ಯಾವುದೇ ಭಾಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಕೇಳಿಬಂದರೆ ಅದರ ಕುರಿತು ವಿಚಾರಣೆ ನಡೆಸುವುದಕ್ಕಾಗಿಯೇ ಅಮೆರಿಕದ ಸಂಸತ್ತು ‘ಟಾಮ್‌ ಲ್ಯಾಂಟೋಸ್‌ ಹ್ಯೂಮನ್‌ ರೈಟ್ಸ್‌ ಕಮಿಷನ್‌’ ಎಂಬ ಆಯೋಗವನ್ನು ಹೊಂದಿದೆ. ಈ ಆಯೋಗದ ಆಹ್ವಾನಿತರಾಗಿ  ಸುನಂದಾ ವಸಿಷ್ಠ ಸಾಕ್ಷ್ಯ ನುಡಿದಿದ್ದಾರೆ.

ಈ ಆಯೋಗಕ್ಕೆ ಅಮೆರಿಕದ ದಿವಂಗತ ಸಂಸದ ‘ಟಾಮ್‌ ಲ್ಯಾಂಟೋಸ್‌ ಆಯೋಗ’ ಎಂದು ಕರೆಯುತ್ತೀರಿ. ಹಂಗೇರಿ ಮೂಲದ, ನಾಜಿ ನರಮೇಧದಲ್ಲಿ ಬದುಕುಳಿದ ವ್ಯಕ್ತಿ ಟಾಮ್‌ ಲ್ಯಾಂಟೋಸ್‌. ‘ಭಾರತೀಯರು ಹಾಗೂ ಯಹೂದಿಗಳು ಕಾನೂನಿಗೆ ಬಹಳ ಗೌರವ ಕೊಡುತ್ತಾರೆ. ಜೊತೆಗೆ ಇಸ್ಲಾಮಿಕ್‌ ಭಯೋತ್ಪಾದನೆಯ ಮನಸೋಇಚ್ಛೆ ಹುಚ್ಚಾಟವನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಾರೆ’ ಎಂದು 2003ರಲ್ಲಿ ಲ್ಯಾಂಟೋಸ್‌ ಹೇಳಿದ್ದರು.

ಪಾಕಿಸ್ತಾನಿ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ, ಶಿರಚ್ಛೇದ ಮಾಡಿಸಿಕೊಂಡು ಮೃತಪಟ್ಟಅಮೆರಿಕದ ಪತ್ರಕರ್ತ ಡ್ಯಾನಿಯಲ್‌ ಪಲ್‌ರ್‍ ಸಾಯುವ ಮುನ್ನ ಹೇಳಿದ ಮಾತು, ‘ನನ್ನ ತಂದೆ ಯಹೂದಿ, ನನ್ನ ತಾಯಿ ಯಹೂದಿ, ನಾನು ಯಹೂದಿ.’ ಅದನ್ನೇ ನನ್ನ ಮಾತಿನಲ್ಲಿ ಹೇಳುತ್ತೇನೆ, ‘ನನ್ನ ತಂದೆ ಕಾಶ್ಮೀರಿ ಹಿಂದು, ನನ್ನ ತಾಯಿ ಕಾಶ್ಮೀರಿ ಹಿಂದು, ನಾನು ಕಾಶ್ಮೀರಿ ಹಿಂದು. ಕಾಶ್ಮೀರದಲ್ಲಿರುವ ನಮ್ಮ ಮನೆ ಹಾಗೂ ಜೀವನವನ್ನು ಇಸ್ಲಾಮಿಕ್‌ ಭಯೋತ್ಪಾದನೆ ನಾಶಗೊಳಿಸಿದೆ.’

ಕಣಿವೆಗೆ ಉಪಗ್ರಹದಿಂದ ಇಂಟರ್ನೆಟ್: ಟ್ರೋಲ್‌ಗೊಳಗಾದ ಪಾಕ್ ಸಚಿವನ ಸ್ಪಷ್ಟನೆ!

ನಾನಿಂದು ಅವರೆಲ್ಲರ ದನಿಯಾಗಿ ಇಲ್ಲಿದ್ದೇನೆ. ಏಕೆಂದರೆ ಅವರೆಲ್ಲರ ದನಿಯನ್ನು ಅಮಾನುಷವಾಗಿ ಹತ್ತಿಕ್ಕಲಾಗಿದೆ. ನಾನು ಕಾಶ್ಮೀರದಿಂದ ಬಂದ ಅಲ್ಪಸಂಖ್ಯಾತ ಹಿಂದು ಸಮುದಾಯದ ಪ್ರತಿನಿಧಿ. ಅಷ್ಟೇ ಅಲ್ಲ, ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಅಮಾನುಷ ಜನಾಂಗೀಯ ದಾಳಿಯ ಸಂತ್ರಸ್ತೆ. ನಾನಿಂದು ಇಲ್ಲಿ ಮಾತನಾಡುತ್ತಿದ್ದೇನೆ ಏಕೆಂದರೆ ನಾನು ಬದುಕುಳಿದಿದ್ದೇನೆ.

 

'Where were the advocates of human rights when my rights were taken away?’ asks noted columnist Sunanda Vashisht at the US Congressional hearing on Human Rights in Washington.

'Abrogation of Article 370 is in fact a restoration of human rights’, she says. A must watch. pic.twitter.com/TTqLN1ZDNq

— BJP (@BJP4India)

ಆ ನತದೃಷ್ಟರ ಧ್ವನಿ ನಾನು

ಕಾಶ್ಮೀರದ ಶಾಲೆಯೊಂದರಲ್ಲಿ ಲ್ಯಾಬ್‌ ಅಸಿಸ್ಟೆಂಟ್‌ ಆಗಿದ್ದ ಮುಗ್ಧ ಯುವತಿ ನನ್ನಂತೆ ಅದೃಷ್ಟವಂತೆಯಾಗಿರಲಿಲ್ಲ. ಅವಳನ್ನು ಅಪಹರಿಸಿ, ಕಣ್ಣಿಗೆ ಬಟ್ಟೆಕಟ್ಟಿ, ಗ್ಯಾಂಗ್‌ರೇಪ್‌ ಮಾಡಿ, ಜೀವಂತವಾಗಿರುವಾಗಲೇ ಮೆಕ್ಯಾನಿಕಲ್‌ ಗರಗಸದಿಂದ ಅವಳನ್ನು ಎರಡು ತುಂಡಾಗಿ ಕತ್ತರಿಸಿದರು. ಅವಳ ಹೆಸರು ಗಿರಿಜಾ ಟಿಕ್ಕೂ. ಅವಳು ಮಾಡಿದ ತಪ್ಪೇನು? ಹಿಂದು ಧರ್ಮವನ್ನು ನಂಬಿದ್ದು. ನಾನು ಅವಳ ಧ್ವನಿ.

ಕಾಶ್ಮೀರದ ಯುವ ಎಂಜಿನಿಯರ್‌ ಒಬ್ಬನನ್ನು ಭಯೋತ್ಪಾದಕರು ಬರ್ಬರವಾಗಿ ಕೊಂದರು. ಭಯೋತ್ಪಾದಕರು ಕೊಲ್ಲಲು ಬಂದಾಗ ಅವನು ಅಕ್ಕಿ ಡಬ್ಬಿಯಲ್ಲಿ ಅಡಗಿ ಕುಳಿತಿದ್ದ. ಅವನು ಎಲ್ಲಿದ್ದಾನೆಂದು ಅವನದೇ ಅಕ್ಕಪಕ್ಕದ ಮನೆಯವರು ಭಯೋತ್ಪಾದಕರಿಗೆ ಹೇಳಿರದೆ ಇದ್ದಿದ್ದರೆ ಇವತ್ತು ಬದುಕಿರುತ್ತಿದ್ದ. ಅವನು ಹಾಗೂ ನಾವು ನಂಬಿದ್ದ ನೆರೆಹೊರೆಯವರೇ ಅವನಿರುವ ಜಾಗ ಹೇಳಿದ್ದರು. ಅವನು ಅಕ್ಕಿಯ ಪೆಟ್ಟಿಗೆಯಲ್ಲಿ ಮುದುಡಿ ಕುಳಿತಿದ್ದಾಗಲೇ ಭಯೋತ್ಪಾದಕರು ಗುಂಡಿಕ್ಕಿದರು. ನಂತರ ಅವನ ಹೆಂಡತಿಗೆ ರಕ್ತಸಿಕ್ತ ಅಕ್ಕಿ ತಿನ್ನಿಸಿದರು. ಅವನ ಹೆಸರು ಬಿ.ಕೆ.ಗಂಜು. ಅವನು ಮಾಡಿದ ತಪ್ಪೇನು? ಹಿಂದು ಧರ್ಮವನ್ನು ನಂಬಿದ್ದು. ನಾನಿಂದು ಅವನ ಪರವಾಗಿ ಮಾತನಾಡುತ್ತಿದ್ದೇನೆ. ಇಂತಹ ಘಟನೆಗಳನ್ನು ನಾನು ಹೇಳುತ್ತಲೇ ಹೋಗಬಲ್ಲೆ.

ಶ್ವಾಸಕೋಶ ದಾನ ಮಾಡಿದ ಧೂಮಪಾನ ವ್ಯಸನಿ: ವೈರಲ್ ಆಯ್ತು ವಿಡಿಯೋ!

ಐಸಿಸ್‌ ಮಟ್ಟದ ಕ್ರೌರ‍್ಯವನ್ನು ನಾವು 30 ವರ್ಷ ಹಿಂದೆಯೇ ನೋಡಿದ್ದೇವೆ

ಕಾಶ್ಮೀರದಲ್ಲಿ ನಾವು ಐಸಿಸ್‌ ಮಟ್ಟದ ಅಮಾನುಷ ಕ್ರೌರ್ಯವನ್ನು ಪಶ್ಚಿಮದ ದೇಶಗಳು ಇಸ್ಲಾಮಿಕ್‌ ಭಯೋತ್ಪಾದನೆಯ ಬಗ್ಗೆ ಕೇಳುವುದಕ್ಕಿಂತ 30 ವರ್ಷ ಹಿಂದೆಯೇ ನೋಡಿದ್ದೇವೆ. ಕನಿಷ್ಠ ಪಕ್ಷ ನೀವು ಇದನ್ನೆಲ್ಲ ಇಂದು ಕಿವಿಗೊಟ್ಟು ಕೇಳುತ್ತಿದ್ದೀರಿ ಎಂಬುದೇ ನನಗೆ ಖುಷಿಯ ವಿಚಾರ. ಏಕೆಂದರೆ, ಕಾಶ್ಮೀರದಲ್ಲಿದ್ದ ನಮ್ಮ ಮನೆ ಹಾಗೂ ಅಲ್ಲಿ ಕಟ್ಟಿಕೊಂಡಿದ್ದ ಬದುಕನ್ನು ನಾವು ಕಳೆದುಕೊಂಡಾಗ ಜಗತ್ತು ಮೌನವಾಗಿತ್ತು. ನನ್ನ ಹಕ್ಕುಗಳನ್ನು ಅವರೆಲ್ಲ ಸೇರಿ ಕಿತ್ತುಕೊಂಡು ಹೋದಾಗ ಈ ಮಾನವ ಹಕ್ಕುಗಳ ಪ್ರತಿಪಾದಕರು ಎಲ್ಲಿಗೆ ಹೋಗಿದ್ದರು?

1990ರ ಜನವರಿ 19ರಂದು ಕಾಶ್ಮೀರದ ಗಲ್ಲಿಗಲ್ಲಿಗಳಲ್ಲಿ ‘ನಮಗೆ ಹಿಂದೂ ಮಹಿಳೆಯರು ಬೇಕು, ಆದರೆ ಪುರುಷರು ಬೇಡ’ ಎಂದು ಅವರೆಲ್ಲ ಸೇರಿ ಅಣಕಿಸುತ್ತಿದ್ದಾಗ ಈ ಮಾನವ ಹಕ್ಕುಗಳ ಹೋರಾಟಗಾರರು ಎಲ್ಲಿಗೆ ಹೋಗಿದ್ದರು? ಭಯೋತ್ಪಾದಕರ ಕೈಗೇನಾದರೂ ನಾವು ಸಿಕ್ಕಿಬಿದ್ದರೆ ಚಿತ್ರಹಿಂಸೆಯಿಂದ ಸಾಯುವುದು ಬೇಡ ಎಂದು ನನ್ನನ್ನೂ, ನನ್ನ ತಾಯಿಯನ್ನೂ ತಾನೇ ಕೊಲ್ಲಲು ಎರಡು ಚಾಕು ಹಾಗೂ ತುಕ್ಕುಹಿಡಿದ ಬ್ಲೇಡ್‌ ಹಿಡಿದು ಆವತ್ತು ರಾತ್ರಿಯಿಡೀ ನನ್ನ ಅಜ್ಜ ನಿಂತಿದ್ದಾಗ ಈ ಮಾನವ ಹಕ್ಕುಗಳ ಹೋರಾಟಗಾರರು ಎಲ್ಲಿಗೆ ಹೋಗಿದ್ದರು? ಓಡಿಹೋಗಿ, ಮತಾಂತರವಾಗಿ ಇಲ್ಲಾ ಸಾಯಿರಿ - ಎಂದು ಆವತ್ತು ರಾತ್ರಿಯೇ ನಮಗೆ ಮೂರು ಆಯ್ಕೆಗಳನ್ನು ಕೊಟ್ಟಿದ್ದರು. ಸುಮಾರು ನಾಲ್ಕು ಕೋಟಿ ಕಾಶ್ಮೀರಿ ಪಂಡಿತರು ಆವತ್ತೇ ರಾತ್ರಿ ಜೀವ ಉಳಿಸಿಕೊಳ್ಳಲು ಓಡಿಹೋದರು. ಯಾರು ಓಡಿಹೋಗಲಿಲ್ಲವೋ ಅವರು ಹತ್ಯೆಯಾದರು.

ನನ್ನ ಮನೆಯಲ್ಲಿ ಇನ್ನಾರೋ ಇದ್ದಾರೆ

ಇಂದು 30 ವರ್ಷಗಳ ನಂತರವೂ ನಾನು ಕಾಶ್ಮೀರಕ್ಕೆ ಹೋಗಿ ಬದುಕುವಂತಿಲ್ಲ. ಇವತ್ತಿಗೂ ನಾನು ಹೆದರಿಕೆಯಿಲ್ಲದೆ ನನ್ನ ಧರ್ಮವನ್ನು ಅಲ್ಲಿ ಪಾಲಿಸುವಂತಿಲ್ಲ. ನನ್ನ ಮನೆಯನ್ನು ಇನ್ನಾರೋ ಆಕ್ರಮಿಸಿಕೊಂಡಿದ್ದಾರೆ. ಯಾವ ಮನೆಯನ್ನು ಅಲ್ಲಿನ ಜನ ಆಕ್ರಮಿಸಿಕೊಂಡಿಲ್ಲವೋ ಅವುಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ನಮ್ಮ ಸಾವಿರಾರು ದೇವಸ್ಥಾನಗಳನ್ನು ಕೆಡವಿದ್ದಾರೆ. ಕಾಶ್ಮೀರದಲ್ಲಿ ಹಿಂದು ಧರ್ಮವನ್ನೇ ನಾಮಾವಶೇಷಗೊಳಿಸಲು ಸರ್ವ ರೀತಿಯಲ್ಲೂ ಪ್ರಯತ್ನಿಸಿದ್ದಾರೆ. ಇಂದು ಕಾಶ್ಮೀರದಲ್ಲಿ ಕೇವಲ ಒಂದು ಧರ್ಮವಿದೆ.

ಇದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲದೇ ಮತ್ತೇನು. ವಿವಿಧತೆ ಮತ್ತು ಎಲ್ಲರನ್ನೂ ಸ್ವೀಕರಿಸುವ ಮನೋಭಾವ ಇಂದಿನ ಕಾಶ್ಮೀರದಲ್ಲಿ ಎಲ್ಲೂ ಇಲ್ಲ. ಕೇವಲ ಹಿಂದುಗಳನ್ನಷ್ಟೇ ಅಲ್ಲ, ಸಿಖ್ಖರನ್ನೂ ಹತ್ಯೆಗೈದಿದ್ದಾರೆ. ಕ್ರಿಶ್ಚಿಯನ್ನರ ಮೇಲೆ ಫತ್ವಾ ಹೊರಡಿಸಿದ್ದಾರೆ.

ಎಲ್ಲ ಅಲ್ಪಸಂಖ್ಯಾತರನ್ನೂ ಹೊರಹಾಕಿದ ಅಥವಾ ಬಾಯಿಮುಚ್ಚಿಸಿದ ಮೇಲೆ ನಾವು ಯಾವ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ? ಬೇರಾವ ಧರ್ಮಕ್ಕೂ ಬೆಲೆ ಇಲ್ಲ ಎಂದು ಹೇಳುವ ರಾಜ್ಯ ಯಾವ ಲೆಕ್ಕದಲ್ಲಿ ಮಾನವ ಹಕ್ಕುಗಳ ದೇಗುಲವಾದೀತು? ಮಾನವ ಹಕ್ಕುಗಳ ಬಗ್ಗೆ ಮಾತನಾಡುವವರು ಕಾಶ್ಮೀರದಲ್ಲಿ ನಿರ್ಮಾಣ ಮಾಡಿದ ಸಮಾಜದ ಹೀಗಿದೆ ನೋಡಿ.

ಮಾನವ ಹಕ್ಕುಗಳಿಗೆ ತದ್ವಿರುದ್ಧ ಸಂಗತಿ ಭಯೋತ್ಪಾದನೆ. ಮನುಷ್ಯನ ಜೀವದ ಮೇಲೆ ಮಾನವ ಹಕ್ಕು ಸವಾರಿ ಮಾಡಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಮತ್ತು ಬದುಕುವ ಹಕ್ಕಿಗಾಗಿ ಎದ್ದುನಿಲ್ಲುವ ಪ್ರತಿಯೊಬ್ಬರೂ ಭಯೋತ್ಪಾದನೆಗೆ ಇಂಬು ನೀಡುವ ಕಟ್ಟರ್‌ವಾದವನ್ನು ವಿರೋಧಿಸಬೇಕು. 65 ವರ್ಷದ ಅಂಗಡಿಕಾರ ಗುಲಾಂ ಮಹಮ್ಮದ್‌ ಮೀರ್‌ ತನ್ನ ಅಂಗಡಿಯ ಬಾಗಿಲು ತೆರೆದ ಕಾರಣಕ್ಕೆ ಹತ್ಯೆಯಾಗುತ್ತಾನೆ.

ಡ್ರೈವರ್‌ಗಳು ಮತ್ತು ಸೇಬು ವ್ಯಾಪಾರಿಗಳು ಜೀವನೋಪಾಯಕ್ಕಾಗಿ ನಾಲ್ಕು ಕಾಸು ಗಳಿಸಲು ಹೊರಬಂದರೆ ಅವರನ್ನೂ ಹತ್ಯೆಗೈಯುತ್ತಾರೆ. ಜನರು ದುಡಿಯಲು ಹೊರಬಂದರೆ ಕಾಶ್ಮೀರವು ಸಹಜತೆಯತ್ತ ಸಾಗಿಬಿಡುತ್ತದೆ ಎಂಬ ಏಕೈಕ ಕಾರಣಕ್ಕೆ ಹಾಗೆ ಹೊರಬರುವವರನ್ನು ಭಯೋತ್ಪಾದಕರು ಕೊಲ್ಲುತ್ತಾರೆ.

ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರುಕಳಿಸುವುದಕ್ಕೆ ಹೆದರುವ ಇವರು ಯಾರು? ಮುಕ್ತ ಓಡಾಟ, ಮುಕ್ತ ಚಿಂತನೆ ಹಾಗೂ ಮುಕ್ತ ದುಡಿಮೆಗೆ ಹೆದರುವ ಇವರು ಮಾನವ ಹಕ್ಕುಗಳ ಬಗ್ಗೆ ಹೇಗೆ ಮಾತನಾಡುತ್ತಾರೆ? ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಕಳವಳ ಎಬ್ಬಿಸಿರುವ 370ನೇ ಪರಿಚ್ಛೇದದ ರದ್ದತಿ ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ.

ನಾನು ಕಾಶ್ಮೀರದ ಹೆಮ್ಮೆಯ ಮಗಳು

ಅಮೆರಿಕದ ಸಂವಿಧಾನಕ್ಕೂ ಮಾದರಿಯಾಗಿರುವ ಭಾರತದ ಸಂವಿಧಾನವು ಜಗತ್ತಿನಲ್ಲೇ ಅತ್ಯಂತ ಉದಾರವಾದ ಸಂವಿಧಾನ. 370ನೇ ಪರಿಚ್ಛೇದ ಜಾರಿಯಲ್ಲಿರುವತನಕ ಈ ಸಂವಿಧಾನ ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ಈ ಪರಿಚ್ಛೇದ ರದ್ದುಪಡಿಸಿದ ನಂತರ ಜಮ್ಮು ಮತ್ತು ಲಡಾಕಿನ ಜನರು ತಮ್ಮದೇ ನೆಲದಲ್ಲಿ ಅನುಭವಿಸುತ್ತಿದ್ದ ಪರಕೀಯ ಭಾವನೆಯ ಹಿಂಸೆಯಿಂದ ಮುಕ್ತವಾಗಿದ್ದಾರೆ. ಈ ಪರಿಚ್ಛೇದದ ರದ್ದತಿಯ ನಂತರ ಕಾಶ್ಮೀರದಲ್ಲಿ ಹೆಣ್ಮಕ್ಕಳು ಹಾಗೂ ಮಾನವ ಕಳ್ಳಸಾಗಣೆ ಶಿಕ್ಷಾರ್ಹ ಅಪರಾಧವಾಗಿದೆ. ಎಲ್‌ಜಿಬಿಟಿ ಜನರಿಗೆ ಭಾರತದಾದ್ಯಂತ ಇರುವ ಹಕ್ಕು ಕಾಶ್ಮೀರದಲ್ಲೂ ದೊರೆತಿದೆ. ಕಾಶ್ಮೀರದಲ್ಲೀಗ ಬಾಲ್ಯವಿವಾಹ ಅಪರಾಧವಾಗಿದೆ ಎಂಬುದು ಒಬ್ಬ ತಾಯಿಯಾಗಿ ನನಗೆ ಬಹಳ ಮುಖ್ಯ. ಕಾಶ್ಮೀರದ ಹೆಣ್ಮಕ್ಕಳು ಇಂದು ಆಸ್ತಿಯ ಮಾಲಿಕರಾಗಬಹುದು. ಇಂದು ಎಲ್ಲ ಭಾರತೀಯರಿಗೆ ಇರುವ ಹಕ್ಕುಗಳೇ ಕಾಶ್ಮೀರಿಗಳಿಗೂ ಲಭಿಸಿದೆ ಎಂಬುದೇ ನನಗೆ ಖುಷಿ.

ನಾನು ಕಾಶ್ಮೀರದ ಹೆಮ್ಮೆಯ ಮಗಳು. ನಾನು ಭಾರತದ ಭವ್ಯ ನಾಗರಿಕತೆಯ ಪ್ರತಿನಿಧಿ. ಭಯೋತ್ಪಾದನೆಯು ನನ್ನ ಬೇರು ಕಿತ್ತು ಬದುಕನ್ನು ನಾಶಪಡಿಸಿದೆ. ನನ್ನ ‘ಮಾನವ ಹಕ್ಕು’ ಕೂಡ ಒಂದು ದಿನ ಮರಳಿ ನನಗೆ ಸಿಗುತ್ತದೆ ಎಂಬ ವಿಶ್ವಾಸದಿಂದ ಕಾಯುತ್ತಿದ್ದೇನೆ.

- ಸುನಂದಾ ವಸಿಷ್ಠ,

ಕಾಶ್ಮೀರಿ ಮೂಲದ ಅಮೆರಿಕನ್‌ ಬರಹಗಾರ್ತಿ

click me!