
ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಕೊನೆಗೂ ಸಚಿವ ಸಂಪುಟ ಭಾಗ್ಯ ದೊರಕಿದೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ 18 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯ 9 ಶಾಸಕರು ಹಾಗೂ ಶಿಂಧೆ ಬಣದ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಏಕನಾಥ್ ಶಿಂಧೆ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ, ಬಿಜೆಪಿಯ ರಾಧಾಕೃಷ್ಣ ವಿಖೆ ಪಾಟೀಲ್, ಸುಧೀರ್ ಮುಗಂತಿವಾರ್ ಹಾಗೂ ವಿಜಯ್ ಕುಮಾರ್ ಗವಿತ್ ಸಹ ನೂತನ ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಚಿವ ಸಂಪುಟದಲ್ಲಿ ಯಾವುದೇ ಮಹಿಳೆಯರಿಲ್ಲ. ಮಹಾರಾಷ್ಟ್ರದ 43 ಶಾಸಕರಿಗೆ ಸಚಿವರಾಗುವ ಅವಕಾಶವಿದ್ದು, ಶೀಘ್ರದಲ್ಲೇ ಮತ್ತೊಂದು ಹಂತದ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿದುಬಂದಿದೆ.
ಶಿವಸೇನಾದ ಗುಲಾಬ್‌ರಾವ್ ಪಾಟೀಲ್ ಹಾಗೂ ದಾದಾಜಿ ದಗಾಡು ಭೂಸೆ ಸಹ ನೂತನ ಸಚಿವರಾಗಿ ಮುಂಬೈನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಆಗಸ್ಟ್ 9, 2022 ರಂದು ಪ್ರಮಾಣ ವಚನವನ್ನು ಬೋಧಿಸಿದ್ದಾರೆ.
18 ಮಂದಿ ಸಚಿವರು ಇವರು
ಬಿಜೆಪಿಯ ರಾಧಾಕೃಷ್ಣ ವಿಖೆ ಪಾಟೀಲ್, ಸುಧೀರ್ ಮುಂಗಂತೀವಾರ್, ಚಂದ್ರಕಾಂತ್ ಪಾಟೀಲ್, ವಿಜಯಕುಮಾರ್ ಗವಿತ್, ಗಿರೀಶ್ ಮಹಾಜನ್, ಸುರೇಶ್ ಖಡೆ, ರವೀಂದ್ರ ಚವ್ಹಾಣ್, ಅತುಲ್ ಸವೆ ಹಾಗೂ ಮಂಗಲ್‌ಪ್ರಭಾತ್ ಲೋಧಾ ಸಚಿವರಾಗಿದ್ದಾರೆ.
ಇನ್ನು, ಶಿವಸೇನೆಯ ಶಿಂಧೆ ಬಣದ ಗುಲಾಬ್‌ರಾವ್ ಪಾಟೀಲ್, ದಾದಾ ಭೂಸೆ, ಸಂಜಯ್ ರಾಥೋಡ್, ಅಬ್ದುಲ್ ಸತ್ತಾರ್, ಸಂದೀಪನ್ ಭೂಮ್ರೆ, ಉದಯ್ ಸಾಮಂತ್, ತಾನಾಜಜೀ ಸಾವಂತ್, ದೀಪಕ್ ಕೇಸರ್ಕರ್ ಹಾಗೂ ಸಂಭುರಾಜ್ ದೇಸಾಯಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜೂನ್ 30, 2022 ರಂದು ಏಕನಾಥ್ ಶಿಂಧೆ ಹಾಗು ದೇವೇಂದ್ರ ಫಡ್ನವೀಸ್ ಸರ್ಕಾರ ರಚನೆಯಾಗಿದೆ. ಆದರೆ, ಒಂದು ತಿಂಗಳು ಕಳೆದರೂ ದ್ವಿ ಸದಸ್ಯ ಸಂಪುಟ ಮಾತ್ರ ರಚನೆಯಾಗಿತ್ತು. ಇಂದು 18 ಸಚಿವರು ಪ್ರಮಾಣ ವಚನ ಸ್ವೀಕರಿಸಿರುವ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರದ ಹಲವು ಶಾಸಕರಿಗೆ ಇಂದು ಸಚಿವ ಸ್ಥಾನದ ಭಾಗ್ಯ ದೊರೆತಿದೆ.
ಸುಪ್ರೀಂಕೋರ್ಟ್‌ನಲ್ಲಿ ಶಿವಸೇನೆ ಪಕ್ಷ ಯಾರಿಗೆ ಸೇರಿದ್ದು ಎಂಬ ಕುರಿತು ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆ ಅಲ್ಲಿಯವರೆಗೂ ಇತರೆ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತನಾಡಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುವ ಸುಳಿವು ನೀಡಿದ್ದರು. ಅದರಂತೆ, ಇಂದು 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ