ಬಹುಕೋಟಿ ಮೊತ್ತದ ಮಹದೇವ ಬೆಟ್ಟಿಂಗ್ ಆಪ್ ಹಗರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಉದ್ಯಮಿ ಸಾಹಿಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸಾಹಿಲ್ ಖಾನ್ ಮಧ್ಯಂತರ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮುಂಬೈ: ಬಹುಕೋಟಿ ಮೊತ್ತದ ಮಹದೇವ ಬೆಟ್ಟಿಂಗ್ ಆಪ್ ಹಗರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಉದ್ಯಮಿ ಸಾಹಿಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸಾಹಿಲ್ ಖಾನ್ ಮಧ್ಯಂತರ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ನಂತರ ಮುಂಬೈ ಪೊಲೀಸ್ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡ (SIT) ಸಾಹಿಲ್ ಖಾನ್‌ನನ್ನು ಛತ್ತೀಸ್‌ಗಢದಲ್ಲಿ ಬಂಧಿಸಿದೆ.
ಬಾಂಬೆ ಹೈಕೋರ್ಟ್ ತನ್ನ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಸಾಹಿಲ್ ಖಾನ್ ಮುಂಬೈನಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಆದರೆ ಛತ್ತೀಸ್‌ಗಡ ಪೊಲೀಸರ ನೆರವಿನೊಂದಿಗೆ ಮುಂಬೈ ಸೈಬರ್ ಕ್ರೈಂ ಪೊಲೀಸರು 40 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ಮುಂಬೈಗೆ ಕರೆತರಲಾಗುತ್ತಿದ್ದು, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸ್ಟೈಲ್, ಎಕ್ಸ್‌ಕ್ಯೂಸ್ ಮಿ ಮುಂತಾದ ಚಿತ್ರಗಳಲ್ಲಿ ಸಾಹಿಲ್ ಖಾನ್, ನಟಿಸಿದ್ದು ಸೋಶಿಯಲ್ ಮೀಡಿಯಾಗಳಲ್ಲೂ ವೀಡಿಯೋಗಳಿಂದ ಸಖತ್ ಆಕ್ಟಿವ್ ಆಗಿದ್ದು, ಇನ್‌ಫ್ಲುಯೆನ್ಸರ್ ಎನಿಸಿದ್ದಾರೆ.
ದುಬೈನಲ್ಲಿ ಮಹದೇವ್ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್ ಬಂಧನ
ಛತ್ತೀಸ್‌ಗಢದ ಕೆಲವು ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳು ಹಾಗೂ ವಿವಾದಿತ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರ ನಡುವೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಅಂಗಸಂಸ್ಥೆಯಾದ ಫೇರ್‌ಪ್ಲೇ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪ್ರಚಾರಕ್ಕೆ ಸಂಬಂಧಿಸಿದಂತೆ ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಮಹಾರಾಷ್ಟ್ರ ಸೈಬರ್ ಕ್ರೈಮ್ ವಿಂಗ್ ನಿಂದ ನಟಿ ತಮನ್ನಾಗೆ ಸಮನ್ಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಕಳೆದ ವರ್ಷ ಮಹದೇವ ಬೆಟ್ಟಿಂಗ್ ಆಪ್ ಹಗರಣ ಸಾಕಷ್ಟು ಸದ್ದು ಮಾಡಿತ್ತು. ಇದರ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಇಡಿ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆಸಿತ್ತು. ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಛತ್ತೀಸ್‌ಗಢದ ಭಿಲಾಯಿ ಮೂಲದವರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ದುಬೈನಿಂದ ನಿರ್ವಹಿಸುತ್ತಿದ್ದರು.
ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮಾಡಿತ್ತು, ಜಾರಿ ನಿರ್ದೇಶನಾಲಯದ ತನಿಖೆಯಿಂದ ಮಹದೇವ್ ಆನ್‌ಲೈನ್ ಆ್ಯಪ್ ಯುಎಇಯ ಕೇಂದ್ರ ಕಚೇರಿಯಿಂದ ನಡೆಸಲ್ಪಡುತ್ತಿದೆ ಎಂಬುದು ತಿಳಿದು ಬಂದಿತ್ತು. ಚಂದ್ರಾಕರ್ ಮತ್ತು ಉಪ್ಪಲ್ ಅವರು ಪೊಲೀಸರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದರು ಮತ್ತು ಈ ಆಪ್ ತನಿಖಾ ಸಂಸ್ಥೆಗಳ ರಾಡಾರ್‌ನಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಅವರಿಗೆ ಪಾವತಿಗಳನ್ನು ಮಾಡುತ್ತಿದ್ದರು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣ: ದುಬೈಗೆ ಪರಾರಿಯಾಗಲು ಹೇಳಿದ್ದೇ ಸಿಎಂ ಬಘೇಲ್: ಶುಭಂ ಸೋನಿ