
ನ್ಯಾಯಾಲಯ, ನ್ಯಾಯಾಧೀಶರು ಎಂದರೆ ಅದಕ್ಕೆ ಅದರದ್ದೇ ಆದ ಘನತೆ, ಗೌರವ ಇದೆ. ನ್ಯಾಯಾಲಯದಲ್ಲಿನ ಸೀಟಲ್ಲಿ ಕುಳಿತ ಮೇಲೆ ನ್ಯಾಯಾಧೀಶರಿಗೆ ಅವರದ್ದೇ ಆದ ಜವಾಬ್ದಾರಿಗಳು ಇರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಘಟನೆಗಳನ್ನು ನೋಡಿದಾಗ ನ್ಯಾಯಾಲಯದ ಮೇಲಿನ ನಂಬಿಕೆ ಕಡಿಮೆ ಆಗುವಂತೆ ಕಾಣಿಸುತ್ತದೆ. ಕೆಲವು ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಸಾಕ್ಷ್ಯಗಳು ಸಿಕ್ಕಾಗ, ಕೆಲವೊಂದು ಪ್ರಕರಣಗಳಲ್ಲಿ ಕೆಲವರು ನೀಡುವ ತೀರ್ಪುಗಳನ್ನು ನೋಡಿದಾಗ ನ್ಯಾಯಾಲಯಗಳ ಮೇಲಿನ ನಂಬಿಕೆ ಬುಡಮೇಲಾಗುವುದೂ ಉಂಟು. ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿರುವ ಬಗ್ಗೆ ಇದಾಗಲೇ ಖುದ್ದು ಕೆಲವು ನ್ಯಾಯಮೂರ್ತಿಗಳೇ ಹೇಳಿದ್ದುಂಟು. ಇದೇನೂ ಈಗ ಗುಟ್ಟಾಗಿ ಉಳಿದಿಲ್ಲ.
ಹೀಗೆ ಕೆಲವರು ಮಾಡುವ ಕುಕೃತ್ಯಕ್ಕೆ ಇಡೀ ವ್ಯವಸ್ಥೆಯನ್ನೇ ದೂಷಿಸಬೇಕಾದ ಪರಿಸ್ಥಿತಿ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಪರಿಸ್ಥಿತಿ ಹೀಗಿರುವಾಗ, ನ್ಯಾಯಾಧೀಶರೊಬ್ಬರು ನ್ಯಾಯ ಕೊಡುವುದಕ್ಕಾಗಿ ತಮ್ಮ ಖುರ್ಚಿಯಿಂದಲೇ ಇಳಿದು ರಸ್ತೆಯವರೆಗೆ ಬಂದು ರಸ್ತೆಯ ಮೇಲೆ ವಿಚಾರಣೆ ನಡೆಸಿ ನ್ಯಾಯ ಕೊಡಿಸುವುದು ಎಂದರೆ ನಂಬಲು ಅಸಾಧ್ಯವೇ ಸರಿ. ಸಿನಿಮಾಗಳಲ್ಲಿ ಹೀರೋಗಳು ಹೀಗೆ ಮಾಡಬಹುದೇನೋ, ಆದರೆ ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲ ಎಂದುಕೊಳ್ಳಬಹುದು. ಆದರೆ ಇಲ್ಲೊಂದು ನಿಜವಾದ ಘಟನೆಯಲ್ಲಿ ನ್ಯಾಯಾಧೀಶರಿಂದ ಇಂಥದ್ದೊಂದು ಮಹತ್ಕಾರ್ಯ ನಡೆದಿದ್ದು, ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಹುಟ್ಟುವ ಹಾಗಾಗಿದೆ.
ಮಥುರಾದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ: ಕೊಟ್ಟ ಕಾರಣವೇ ಕುತೂಹಲಕರ...
ತೆಲಂಗಾಣದ ನಿಜಮಾಬಾದ್ನಲ್ಲಿ ಈ ಘಟನೆ ನಡೆದಿದೆ. ನ್ಯಾಯಾಧೀಶರಾಗಿರುವ ಸಾಯಿ ಶಿವಾ ಅವರು, ಮೆರೆದ ಮಾನವೀಯತೆಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ರಸ್ತೆಯಲ್ಲಿರುವ ಆಟೋದಲ್ಲಿ ಕುಳಿತಿದ್ದ ವೃದ್ಧ ದಂಪತಿಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಅಷ್ಟಕ್ಕೂ ಈ ಪ್ರಕರಣದಲ್ಲಿ ಈ ವೃದ್ಧ ದಂಪತಿ ವರದಕ್ಷಿಣೆ ಕಿರುಕುಳ ಆರೋಪಿಗಳು ಎನ್ನುವುದು ವಿಶೇಷ. ಅಷ್ಟಕ್ಕೂ ಆಗಿದ್ದೇನೆಂದರೆ, ಸಯ್ಯಾಮ್ಮ, ಗಂಗಾರಾಮ್ ಎಂಬುವರ ವಿರುದ್ಧ ಸೊಸೆ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಇರುವಾಗಲೆಲ್ಲಾ ದಂಪತಿ ಪ್ರತಿ ಬಾರಿಯೂ ಕೋರ್ಟ್‌ಗೆ ಹಾಜರಾಗುತ್ತಿದ್ದರು. ಆದರೆ ಈಗ ಗಂಗಾರಾಮ್ ಕಾಲಿಗೆ ಗಂಭೀರ ಗಾಯವಾಗಿದ್ದು, ಎದ್ದು ನಡೆಯಲಾಗದ ಸ್ಥಿತಿ ಬಂದೊಗಿತ್ತು.
ಆದ್ದರಿಂದ ಅವರು, ಆಟೋದಲ್ಲೇ ಕೋರ್ಟ್ ಬಳಿ ಬಂದಿದ್ದರು.ಅವರ ಪರ ವಕೀಲರು, ಈ ಸ್ಥಿತಿಯನ್ನು ನ್ಯಾಯಾಧೀಶರ ಗಮನಕ್ಕೆ ಬಂದರು. ಆರೋಪಿ ಬಂದಿದ್ದಾರೆ. ಆದರೆ ಕೋರ್ಟ್ ಹಾಲ್ ಗೆ ಬರುವ ದೈಹಿಕ ಸ್ಥಿತಿಯಲ್ಲಿ ಇಲ್ಲ ಎಂದು ವಕೀಲರು ಹೇಳಿದಾಗ, ನ್ಯಾಯಾಧೀಶ ಸಾಯಿ ಶಿವಾ ಅವರು ಸೀಟಿನಿಂದ ಇಳಿದು ಹೊರಕ್ಕೆ ಹೋಗಿ ಅಲ್ಲಿಯೇ ವಿಚಾರಣೆ ನಡೆಸಿ ತೀರ್ಪು ನೀಡಿರುವುದು ಎಲ್ಲರನ್ನು ಅಚ್ಚರಿಗೆ ತಳ್ಳಿತು. ಆರೋಪಿಗಳ ಹಾಜರಾತಿಯನ್ನು ಖಚಿತಪಡಿಸಿಕೊಂಡ ಬಳಿಕ ವಿಚಾರಣೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳ ಕೇಸ್ ನ ಬಗ್ಗೆ ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ಅವರು, ವೃದ್ಧ ದಂಪತಿ ಮೇಲಿದ್ದ ವರದಕ್ಷಿಣೆ ಕಿರುಕುಳ ಕೇಸ್ ವಜಾ ಮಾಡಿದ್ದಾರೆ.
ನಾಲ್ವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದ ಕನ್ನಡದ ನಟಿ ಈಕೆ! ಇವ್ರ ಸ್ಟೋರಿಯೇ ಕುತೂಹಲ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ