brave mother: ಚಿರತೆಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ಸಾಹಸಿ ತಾಯಿ

By Suvarna News  |  First Published Dec 1, 2021, 2:38 PM IST

ಮಕ್ಕಳ ಮೇಲೆ ತಾಯಿಯ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಆಕೆ ತನ್ನ ಮಕ್ಕಳ ರಕ್ಷಣೆಗಾಗಿ ಎಂತಹ ಸಾಹಸಕ್ಕೂ ಮುಂದಾಗುತ್ತಾಳೆ. ಮಗುವನ್ನು ರಕ್ಷಿಸಿಕೊಳ್ಳುವ ಸಲುವಾಗಿ ತಾಯಿಯೊಬ್ಬಳು ಚಿರತೆಯೊಂದಿಗೆ ಕಾದಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 


ಭೋಪಾಲ್‌(ಡಿ.1): ಸಾಹಸಿ ತಾಯಿಯೊಬ್ಬಳು ತನ್ನ ಮಗುವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಚಿರತೆಯೊಂದಿಗೆ ಕಾದಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿರುವ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ(Sanjay Gandhi National Park)ದ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಾಹಸಿ ಘಟನೆ ನಡೆದಿದೆ. ಬೈಗಾ ಆದಿವಾಸಿ( tribal) ಸಮುದಾಯದ ಕಿರಣ್‌ ಬೈಗಾ(Kiran Baiga) ಎಂಬಾಕೆಯೇ ಹೀಗೆ ಚಿರತೆಯನ್ನು ಕಿಲೋ ಮೀಟರ್‌ವರೆಗೆ ಹಿಂಬಾಲಿಸಿ ಮಗುವನ್ನು ರಕ್ಷಿಸಿದ ಧೈರ್ಯವಂತ ಮಹಿಳೆ. ಭಾನುವಾರ ಸಂಜೆ ಇವರು ತಮ್ಮ  ಮೂವರು ಮಕ್ಕಳೊಂದಿಗೆ ಮನೆಯ ಮುಂಭಾಗದಲ್ಲಿ ಬೆಂಕಿ ಹಾಕಿ ಅದರ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದರು. ಈ ವೇಳೆ ಧುತ್ತನೇ ಬಂದ ಚಿರತೆಯೊಂದು ಇವರೊಂದಿಗೆ ಕುಳಿತಿದ್ದ ಕಿರಣ್‌ಳ 8 ವರ್ಷದ ಮಗು ರಾಹುಲ್‌(Rahul )ನನ್ನು ಬಾಯಿಯಲ್ಲಿ ಕಚ್ಚಿ ಹೊತ್ತೊಯ್ದಿದೆ. 


ಮಗುವನ್ನು ಹೊತ್ತೊಯ್ದು ಕಿಲೋ ಮೀಟರ್‌ವರೆಗೆ ಸಾಗಿದ ಚಿರತೆ ಕಾಡಿನ ಮಧ್ಯದಲ್ಲಿ ಮಗುವನ್ನು ತನ್ನ ಬಲಿಷ್ಠವಾದ ಉಗುರುಗಳಲ್ಲಿ ಹಿಡಿದುಕೊಂಡು ನಿಂತಿದೆ. ಈ ವೇಳೆ ಧೈರ್ಯದಿಂದ ಚಿರತೆಯತ್ತ ಮುನ್ನುಗಿದ್ದ ತಾಯಿ ಕಿರಣ್‌, ಅದರೊಂದಿಗೆ ಕಾದಾಡಿ ಮಗುವನ್ನು ಚಿರತೆಯಿಂದ ಬಿಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಬಿಡಿಸಿಕೊಂಡ ಬಳಿಕ ಚಿರತೆ ಮತ್ತೆ ಮಹಿಳೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಕಿರಣ್‌ ಅದರ ಎರಡು ಮುಂಗಾಲುಗಳನ್ನು ಹಿಡಿದು ದೂರ ತಳ್ಳಿದ್ದಾರೆ. ಈ ವೇಳೆ ಸುದ್ದಿ ತಿಳಿದ ಗ್ರಾಮದ ಜನ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಜನರನ್ನು ನೋಡಿದ ಚಿರತೆ ಓಡಿ ಹೋಗಿ ಕಾಡು ಸೇರಿದೆ. ಇನ್ನು ಮಗುವಿನ ರಕ್ಷಣೆ ವೇಳೆ ಚಿರತೆಯಿಂದ ದಾಳಿಗೊಳಗಾದ ತಾಯಿ ಕಿರಣ್‌ ಅವರು ನಂತರ ಪ್ರಜ್ಞೆ ತಪ್ಪಿದ್ದು, ನಂತರ ಅವರನ್ನು ಗ್ರಾಮಸ್ಥರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ  ಕುಸ್ಮಿಯ (Kusmi)ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

Tap to resize

Latest Videos

ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್‌ ಸ್ಟಿಕ್‌ನಿಂದ ಓಡಿಸಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್!

ಇದು ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪವಿರುವುದರಿಂದ ಈ ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಸಾಮಾನ್ಯ ಎನಿಸಿದೆ. ಇದಕ್ಕೂ ಹಿಂದೆಯೂ ಒಮ್ಮೆ ಸಂಜಯ್‌ ಹುಲಿ ಮೀಸಲು( Sanjay Tiger Reserve) ಪ್ರದೇಶದ ಸಮೀಪದಲ್ಲಿ ಬರುವ ಬರಿಜಹರಿಯಾ ಗ್ರಾಮ(Barijharia village)ದಲ್ಲಿ ಕಾಡುಪ್ರಾಣಿಗಳು ದಾಳಿ ನಡೆಸಿ ಭೀತಿ ಹುಟ್ಟಿಸಿದ್ದವು. ಇನ್ನು ಚಿರತೆಯೊಂದಿಗೆ ಕಾದಾಡಿದ ಮಹಿಳೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾವು ಬೆಂಕಿಯಲ್ಲಿ ಚಳಿ ಕಾಯಿಸುತ್ತ ಕುಳಿತಿದ್ದೆವು ಈ ವೇಳೆ ಒಮ್ಮೆಲೆ ಬಂದ ಚಿರತೆಯೊಂದು ಮಗನ್ನು ಹೊತ್ತೊಯ್ದಿತು. ಚಿರತೆಯನ್ನು ಹಿಂಬಾಲಿಸಿ ಹೋಗಿ ನಾನು ಮಗುವನ್ನು ರಕ್ಷಿಸಿಕೊಂಡೆ. ಮಗನಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಹಿಳೆ ಘಟನೆಯ ಬಗ್ಗೆ ವಿವರಿಸಿದ್ದಾರೆ. 


ಸಾವಿನ ಕದ ತಟ್ಟುತ್ತಿದ್ದ ಮಗುವನ್ನು ಕಾಪಾಡಿದ ಅಮ್ಮ!

ನಾವು ಸಂಜಯ್‌ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ವಾಸಿಸುವುದರಿಂದ ಇಂತಹ ಘಟನೆಗಳು ಪ್ರತಿದಿನ ನಡೆಯುತ್ತಿರುತ್ತವೆ. ನಮಗೆ ಪದೇ ಪದೇ ಚಿರತೆ ಹಾಗೂ ಕರಡಿಗಳು ಕಾಣ ಸಿಗುತ್ತವೆ. ಈ ವೇಳೆ ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತೇವೆ. ಈ ಘಟನೆಯ ಬಳಿಕ ನಮ್ಮ ಭಯ ಮತ್ತಷ್ಟು ಹೆಚ್ಚಾಗಿದೆ ಎಂದು ಕಿರಣ್‌ ಹೇಳಿದರು.

ಒಟ್ಟಿನಲ್ಲಿ ತಾಯಿ ಮಕ್ಕಳಿಗಾಗಿ ಎಂಥಾ ಸಾಹಸಕ್ಕೂ ಸಿದ್ದಳಾಗುತ್ತಾಳೆ ಎಂಬುದನ್ನು  ಇಂತಹ ಘಟನೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ. 

click me!