ಮಾಮ-ಮೋದಿ ಮೋಡಿಗೆ ಮಧ್ಯಪ್ರದೇಶ ಬಿಜೆಪಿ ಮಡಿಲಿಗೆ, ಗೆಲುವಿಗಿದೆ ಮತ್ತೆರೆಡು ಕಾರಣ!

By Suvarna NewsFirst Published Dec 3, 2023, 10:38 PM IST
Highlights

ಮಧ್ಯಪ್ರದೇಶದಲ್ಲಿ ಬಿಜೆಪಿ ಅಬ್ಬರದ ಮುಂದೆ ಕಾಂಗ್ರೆಸ್ ಧೂಳೀಪಟವಾಗಿದೆ. ಆಡಳಿತ ವಿರೋಧಿ ಅಲೆ ನಡುವೆಯೂ ಬಿಜೆಪಿ ಗೆಲುವಿಗೆ ನಾಲ್ಕು ಪ್ರಮುಖ ಕಾರಣಗಳಿವೆ. 17 ವರ್ಷದಿಂದ ಸಿಎಂ ಆಗಿರುವ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತೆ ಮುಖ್ಯಮಂತ್ರಿಯಾಗ್ತಾರಾ? ಹಲವು ಕುತೂಹಲಕ್ಕೆ ಇಲ್ಲಿದೆ ಉತ್ತರ.

ಭೋಪಾಲ್(ಡಿ.03) ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ  ಜಿದ್ದಾಜಿದ್ದಿನ ಹೋರಾಟ ಎಂದೇ ಬಿಂಬಿತವಾಗಿತ್ತು. ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಕಮಲನಾಥ್ ಸರ್ಕಾರ ಖಚಿತ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ನೀಡಿದೆ. ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ.  

ಮಧ್ಯಪ್ರದೇಶ ಚುನಾವಣಾ ಫಲಿತಾಂಶ
ಬಿಜೆಪಿ: 163
ಕಾಂಗ್ರೆಸ್:66 
ಇತರ: 1

ಬಿಜೆಪಿ ಸ್ಟ್ರೋಕ್‌ಗೆ ಛತ್ತೀಸಘಡದಲ್ಲಿ ಕಾಂಗ್ರೆಸ್ ಧೂಳೀಪಟ, ಬುಡಕಟ್ಟು ನಾಯಕನಿಗೆ ಸಿಎಂ ಪಟ್ಟ?

ಕಳೆದ 17 ವರ್ಷದಿಂದ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚವ್ಹಾಣ್ ಮತ್ತೊಂದು ಬಾರಿ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಅಭೂತಪೂರ್ವ ಗೆಲುವು ದಾಖಲಿಸುತ್ತಿದ್ದಂತೆ ಶಿವರಾಜ್ ಸಿಂಗ್ ಚವ್ಹಾಣ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ್ದಾರೆ. ಬಿಜೆಪಿ ಘೋಷಣೆ ಮಾಡಿದ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಶಿವರಾಜ್ ಸಿಂಗ್ ಚವ್ಹಾಣ್, ಭರ್ಜರಿ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಲಾಡ್ಲಿ ಬೆಹನಾ ಯೋಜನೆಗೆ ಅರ್ಪಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಚುನಾವಣಾ ಗೆಲುವಿಗೆ ಪ್ರಮುಖವಾಗಿ ಶಿವರಾಜ್ ಸಿಂಗ್ ಘೋಷಿಸಿದ ಲಾಡ್ಲಿ ಬೆಹಾನ ಯೋಜನೆ ಒಂದು ಕಾರಣವಾಗಿದೆ. ಲಾಡ್ಲಿ ಬೆಹೆನಾ’ ಯೋಜನೆಯಡಿ ಮಹಿಳೆಯರಿಗೆ 1250 ರು. ನೀಡಲಾಗುವುದು (ಈ ಹಿಂದೆ ಮಾಸಿಕ 1000 ರು. ಇತ್ತು). ಅಕ್ಟೋಬರ್‌ ತಿಂಗಳಿನಿಂದ ಇದನ್ನು ಶಾಶ್ವತವಾಗಿ 1250 ರು.ಗೆ ಏರಿಸಲಾಗುವುದು. ಶ್ರಾವಣ ಮಾಸದಲ್ಲಿ 450 ರು.ಗೆ ಎಲ್‌ಪಿಜಿ ಸಿಲಿಂಡರ್‌ ನೀಡಲಾಗುವುದು. ಮುಂದೆ ಇದೇ ದರಕ್ಕೆ ಸಿಲಿಂಡರ್‌ ನೀಡಲು ಶಾಶ್ವತ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗಿರುವ ಮೀಸಲಾತಿಯನ್ನು ಈಗಿನ ಶೇ.30ರಿಂದ ಶೇ.35ಕ್ಕೆ ಏರಿಸಲಾಗುವುದು ಎಂದು ಶಿವರಾಜ ಸಿಂಗ್‌ ಪ್ರಕಟಿಸಿದ್ದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ, ವರ್ಚಸ್ಸು ಕೂಡ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ವರವಾಗಿದೆ. ಇದರ ಜೊತೆಗೆ ಆಡಳಿತ ವಿರೋಧಿ ಅಲೆ ಕಾರಣ ಮುಂದಿನ ಸಿಎಂ ಅಭ್ಯರ್ಥಿಯಾಗಿ ಶಿವರಾಜ್ ಸಿಂಗ್ ಚೌವ್ಹಾಣ್ ಹೆಸರನ್ನು ಬಿಜೆಪಿ ಉಲ್ಲೇಖಿಸಲಿಲ್ಲ. ಪ್ರಧಾನಿ ಮೋದಿ ನಾಯಕತ್ವದಲ್ಲೇ ಮಧ್ಯಪ್ರದೇಶದಲ್ಲಿ ಬಿಜೆಪಿ ಚುನಾವಣಾ ಅಖಾಡಕ್ಕೆ ಇಳಿದಿತ್ತು.

ರಾಜಸ್ಥಾನದ 25 ಸಚಿವರ ಪೈಕಿ ಗೆದ್ದವರು 9 ಮಂದಿ ಮಾತ್ರ, ಗೆಹ್ಲೋಟ್‌ಗೆ ಕೈಕೊಟ್ಟ ಮಿನಿಸ್ಟರ್ಸ್!

ಕಾಂಗ್ರೆಸ್‌ನಲ್ಲಿ ಮಾಸ್ ಲೀಡರ್ ಕೊರತೆ ಕಾಣಿಸಿತ್ತು. ಕಮಲನಾಥ್ ಹಾಗೂ ದಿಗ್ವಿಜಯ್ ಸಿಂಗ್ ವಯಸ್ಸು 70 ದಾಟಿದೆ. ಎಲ್ಲಾ ಕ್ಷೇತ್ರದಲ್ಲಿ ರ್ಯಾಲಿ ನಡೆಸಲು ಸಾಧ್ಯವಾಗಿಲ್ಲ. 100 ರ್ಯಾಲಿ ನಡೆಸಿದರೂ ಅದು ಸಾಕಾಗಲಿಲ್ಲ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದರೂ ಜನರ ಬಳಿ ತಲುಪಲಿಲ್ಲ. 2018ರಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಈ ಬಾರಿ ಬಿಜೆಪಿಯಲ್ಲಿ ಟ್ರಂಪ್ ಕಾರ್ಡ್ ಆಗಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾ ನೆರವು ಕೂಡ ಮಧ್ಯಪ್ರದೇಶ ಗೆಲುವಿಗೆ ನೆರವಾಗಿದೆ.

ರಾಹುಲ್ ಗಾಂಧಿಯ ಒಬಿಸಿ ಹಾಗೂ ಜಾತಿ ಗಣತಿ ಅಸ್ತ್ರಗಳು ತಿರುಗುಬಾಣವಾಯಿತು. ಒಬಿಸಿ ಹಾಗೂ ಜಾತಿ ಗಣತಿ ರಾಜಕೀಯ ಮಾಡಲು ಹೋದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕೈಸುಟ್ಟುಕೊಂಡಿದೆ. 

click me!