ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲಖನೌ ಕೋರ್ಟ್ ಶಾಕ್ ನೀಡಿದೆ. ವೀರ ಸಾವರ್ಕರ್‌ಗೆ ಅವಮಾನ ಮಾಡಿದ್ದಾರೆ ಅನ್ನೋ ಪ್ರಕರಣದಲ್ಲಿ ಇದೀಗ ವಿಚಾರಣೆಗೆ ಹಾಜರಾಗಲು ಕೋರ್ಟ್ ಸಮನ್ಸ್ ನೀಡಿದೆ.
ನವದೆಹಲಿ(ಡಿ.13) ಅದಾನಿ ಹಾಗೂ ಮಣಿಪುರ ವಿಚಾರವನ್ನು ಚಳಿಗಾಲದಲ್ಲಿ ಪ್ರಮುಖ ವಿಷಯವನ್ನಾಗಿ ಎತ್ತಿಕೊಳ್ಳಬೇಕು ಅನ್ನೋ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾತಿಗೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಅಸಮಾಧಾನಗೊಂಡಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ಜಟಾಪಟಿಯಲ್ಲೇ ಕಳೆದು ಹೋಗುತ್ತಿದೆ. ಇದರ ನಡುವೆ ಲಖನೌ ಕೋರ್ಟ್, ರಾಹುಲ್ ಗಾಂಧಿಗೆ ಸಮನ್ಸ್ ಜಾರಿಗೊಳಿಸಿದೆ. ವೀರ ಸಾವರ್ಕರ್‌ಗೆ ಅವಮಾನ ಮಾಡಿದ್ದಾರೆ ಅನ್ನೋ ಅರ್ಜಿ ಕುರಿತು ಲಖನೌ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜನವರಿ 10 ರಂದು ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಿದೆ.
ರಾಹುಲ್ ಗಾಂಧಿ 2022ರಲ್ಲಿ ಮಾಡಿದ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ವೀರ್ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ್ದರು. ಮಹಾರಾಷ್ಟ್ರದ ಅಕೋಲದಲ್ಲಿ ನಡೆದ ಭಾರತ್ ಜೋಡೋ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆ ವಿರುದ್ಧ ಬಿಜಿಪಿ ಭಾರಿ ಪ್ರತಿಭಟನೆ ನಡೆಸಿತ್ತು. ಇದೇ ವೇಳೆ ವಕೀಲ ನೃಪೇಂದ್ರ ಪಾಂಡೆ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರನನನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಮೋದಿ ಅದಾನಿ ಅಣಕು ಸಂದರ್ಶನ ಮಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ಏನು?
ಭಾರತ್ ಜೋಡೋ ಯಾತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಪ್ರಮುಖವಾಗಿ ವೀರ್ ಸಾವರ್ಕರ್ ಗುರಿಯಾಗಿಸಿ ಮಾತನಾಡಿದ್ದರು. ವೀರ್ ಸಾವರ್ಕರ್ ಬ್ರಿಟಿಷರ ಸೇವಕನಾಗಿದ್ದರು. ಬ್ರಿಟಿಷರಿಂದ ಪಿಂಚಣಿ ಪಡೆಯದ್ದರು. ಬ್ರಿಟಿಷ್ ಪರವಾಗಿ ಕೆಲಸ ಮಾಡಿದೆ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರವನ್ನೂ ವೀರ್ ಸಾವರ್ಕರ್ ಬರೆದಿದ್ದಾರೆ. ವೀರ್ ಸಾವರ್ಕರ್ ಆರ್‌ಎಸ್‌ಎಸ್, ಬಿಜೆಪಿಯ ಹೀರೋ, ಸ್ವಾತಂತ್ರ್ಯ ಹೋರಾಟದಲ್ಲಿ ಹೀರೋ ಆಗಲಿಲ್ಲ. ಬ್ರಿಟಿಷರ ಪರ ನಿಂತ ಸೇವಕ ಎಂದು ರಾಹುಲ್ ಗಾಂಧಿ ಹೇಳಿದ್ದರು.
undefined
ರಾಹುಲ್ ಗಾಂಧಿಯ ಈ ವಿವಾದಾತ್ಮಕ ಹೇಳಿಕೆ ಭಾರಿ ಹೋರಾಟಕ್ಕೆ ಕಾರಣವಾಗಿತ್ತು. ಹೇಳಿಕೆ ವಿರುದ್ಧ ಹೋರಾಟ ನಡೆದಿತ್ತು. ವಕೀಲ ನೃಪೇಂದ್ರ ಪಾಂಡೆ ಹಜ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ವಿರುದ್ದ ದೂರು ದಾಖಲಿಸಿದ್ದರು. ಸೆಕ್ಷನ್ 156(3) ಅಡಿಯಲ್ಲಿ ದೂರು ದಾಖಲಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರನ್ನು ಅವಮಾನಿಸಿದ್ದು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇ ಇರಲಿಲ್ಲ ಎಂದಿದ್ದಾರೆ. ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇಷ್ಟೇ ಅಲ್ಲ ರಾಹುಲ್ ಗಾಂಧಿಯ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಆಡಿರುವ ಮಾತುಗಳು ಬಾಯಿತಪ್ಪಿನಿಂದ ಬಂದ ಮಾತುಗಳಲ್ಲ. ಉದ್ದೇಶಪೂರ್ವಕವಾಗಿ ಮೊದಲೇ ಪ್ಲಾನ್ ಮಾಡಿದ ಮಾತುಗಳಾಗಿದೆ. ಕಾರಣ ಈ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ಕರಪತ್ರಗಳನ್ನು ಹಂಚಲಾಗಿದೆ. ಈ ಕರಪತ್ರಗಳಲ್ಲಿ ವೀರ್ ಸಾವರ್ಕರ್‌ಗೆ ಅವಮಾನ ಮಾಡಲಾಗಿದೆ. ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹಾಗೂ ಮೊದಲೇ ಪ್ಲಾನ್ ಮಾಡಿ ಈ ವಿವಾದ ಸೃಷ್ಟಿಸಿದ್ದಾರೆ. ಸಮಾಜದಲ್ಲಿನ ಶಾಂತಿ ಹಾಳುಮಾಡಲು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಪ್ರಕರಣ ಸಂಬಂಧ ಲಖನೌದ ACJM ಕೋರ್ಟ್ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. 2025ರ ಜನವರಿ 10ರಂದು ಹಾಜರಾಗಲು ಸೂಚಿಸಿದೆ. ರಾಹುಲ್ ಗಾಂಧಿಗೆ ಈಗಾಗಲೇ ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ಕೋರ್ಟ್‌ಗಳು ಹೇಳಿಕೆ ವಿವಾದದ ಕುರಿತು ಪಾಠ ಮಾಡಿದೆ. ವಿವಾದಿತ ಹೇಳಿಕೆ ನೀಡಿ ಬಳಿಕ ಕ್ಷಮೆ ಕೋರುವ ರಾಹುಲ್ ಗಾಂಧಿ ಈ ಬಾರಿ ಏನು ಮಾಡಲಿದ್ದಾರ ಅನ್ನೋ ಕುತೂಹಲ ಮನೆ ಮಾಡಿದೆ.