ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದು ವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಲೋಕಸಭಾ ಚುನಾವಣೆ ಹಂತಹಂತಾಗಿ ಪ್ರಧಾನಿ ಮೋದಿ ಅವರ ಕೈತಪ್ಪುತ್ತಿದೆ.
ನವದೆಹಲಿ (ಮೇ.10): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದು ವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಲೋಕಸಭಾ ಚುನಾವಣೆ ಹಂತಹಂತಾಗಿ ಪ್ರಧಾನಿ ಮೋದಿ ಅವರ ಕೈತಪ್ಪುತ್ತಿದೆ. ಹೀಗಾಗಿ ದೇಶದ ಯುವಜನರ ದಿಕ್ಕು ತಪ್ಪಿಸಲು ಅವರು ಇನ್ನು 3-4 ದಿನಗಳಲ್ಲಿ ಹೊಸ ನಾಟಕ ಆಡಲಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶದ ಯುವಸಮೂಹ ಉದ್ದೇಶಿಸಿ ಗುರುವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ರಾಹುಲ್, 'ನೀವು ಯಾವುದೇ ಕಾರಣಕ್ಕೂ ಮೋದಿ ಅವರ ಪ್ರಾಪಗೆಂಡಾಕ್ಕೆ ಬಲಿಯಾಗಬೇಡಿ. ಒಮ್ಮೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ನಾವು ಆ.15ರೊಳಗೆ ಯುವಸಮೂಹಕ್ಕೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲವನ್ನು ಮನ್ನಾ ಮಾಡಲಾಗುವುದು. ಗ್ರಾಮೀಣ ಉದ್ಯೋಗ ಖಾತ್ರಿಯ ದಿನಗೂಲಿಯನ್ನು 250 ರಿಂದ 400 ರು. ಗೆ ಏರಿಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಸೋಮವಾರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತದ ಸಂಪತ್ತನ್ನು ಅದಾನಿ ಸೇರಿದಂತೆ 22 ರಿಂದ 25 ಮಂದಿ ಶ್ರೀಮಂತರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ರಕ್ಷಿಸುವುದರ ಜೊತೆಗೆ ಪ್ರಮುಖವಾಗಿ ಬುಡಕಟ್ಟು ಜನರ ಕಾಡು, ಜಲ, ಜಮೀನನ್ನು ರಕ್ಷಿಸುತ್ತದೆ ಎಂದರು.
ಪಾರದರ್ಶಕತೆಗಾಗಿ ಟೀ ಶರ್ಟ್ ಧರಿಸುವೆ: ಸರಳತೆ ಮತ್ತು ಪಾರದರ್ಶಕತೆಯ ಉದ್ದೇಶದಿಂದ ತಾವು ಸದಾ ಟೀ ಶರ್ಟ್ ಧರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್, ಈ ವೇಳೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಲಘು ವಿಷಯಗಳ ಕುರಿತು ಹರಟಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಕಾಂಗ್ರೆಸ್ ತನ್ನ ಜಾಲತಾಣ ಪುಟದಲ್ಲಿ ಹಂಚಿಕೊಂಡಿದೆ.
Prajwal Revanna Case: ನಾನು ಒಕ್ಕಲಿಗ ನೆಪ ಹೇಳಿ ರಕ್ಷಣೆ ಕೇಳಲ್ಲ: ಎಚ್.ಡಿ.ಕುಮಾರಸ್ವಾಮಿ
ಈ ವೇಳೆ ಪ್ರಚಾರದಲ್ಲಿ ಅತ್ಯುತ್ತಮ ಭಾಗ ಯಾವುದು ಎಂಬ ಪ್ರಶ್ನೆಗೆ, ‘ಅದು ಮುಗಿದಾಗ’ ಎಂದು ರಾಹುಲ್ ಉತ್ತರಿಸಿದ್ದಾರೆ. ಇನ್ನೊಂದೆಡೆ ಖರ್ಗೆಗೆ ರಾಹುಲ್, ಚುನಾವಣೆಯಲ್ಲಿ ಏನು ಇಷ್ಟವಾಯಿತು? ಏನು ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಖರ್ಗೆ, ಬೇಸರ ವಿಷಯದ ಯಾವುದೂ ಇಲ್ಲ. ಏಕೆಂದರೆ ನಾವು ಇದನ್ನು ದೇಶಕ್ಕಾಗಿ ಮಾಡುತ್ತಿದ್ದೇವೆ. ಒಬ್ಬರು ದೇಶವನ್ನು ನಾಶ ಮಾಡುತ್ತಿರುವಾಗ, ನಾವು ಅದನ್ನು ತಡೆಯಲು ಯತ್ನಿಸುತ್ತಿರುವುದರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’ ಎಂದಿದ್ದಾರೆ.