ನಾವು ರಾಜನೀತಿಯ ಜೊತೆ ರಾಷ್ಟ್ರನೀತಿಗಾಗಿ ಕೆಲಸ ಮಾಡುತ್ತಿದ್ದೇವೆ: ಪ್ರಧಾನಿ ಮೋದಿ

By Anusha KbFirst Published Feb 19, 2024, 10:05 AM IST
Highlights

ವಿಕಸಿತ ಭಾರತದ ಬೃಹತ್ ಕನಸು ನನಸು ಮಾಡಲು ಭಾರೀ ಬೆಂಬಲದೊಂದಿಗೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದೇ ಮೊದಲ ಷರತ್ತು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ 100 ದಿನಗಳ ಕಾಲ ಹೊಸ ಚೈತನ್ಯ, ಶಕ್ತಿ ಮತ್ತು ಉತ್ಸಾಹದಿಂದ ಶ್ರಮವಹಿಸಿ ಕೆಲಸ ಮಾಡಿ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನವದೆಹಲಿ: ವಿಕಸಿತ ಭಾರತದ ಬೃಹತ್ ಕನಸು ನನಸು ಮಾಡಲು ಭಾರೀ ಬೆಂಬಲದೊಂದಿಗೆ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದೇ ಮೊದಲ ಷರತ್ತು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ 100 ದಿನಗಳ ಕಾಲ ಹೊಸ ಚೈತನ್ಯ, ಶಕ್ತಿ ಮತ್ತು ಉತ್ಸಾಹದಿಂದ ಶ್ರಮವಹಿಸಿ ಕೆಲಸ ಮಾಡಿ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇಲ್ಲಿನ ಭಾರತ ಮಂಟಪದಲ್ಲಿ ಪಕ್ಷದ ಪದಾಧಿಕಾರಿಗಳ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಭಾನುವಾರ ಮಾತನಾಡಿದ ಮೋದಿ, 'ನಾನು ಅಧಿಕಾರದ ಆಸೆಗಾಗಿ ಮೂರನೇ ಬಾರಿ ಆಯ್ಕೆ ಬಯಸುತ್ತಿಲ್ಲ, ಬದಲಾಗಿ ದೇಶದ ಅಭಿವೃದ್ಧಿಗಾಗಿ ಮರು ಆಯ್ಕೆ ಬಯಸುತ್ತಿದ್ದೇನೆ. ಏಕೆಂದರೆ ವಿಕಸಿತ ಭಾರತದ ಕನಸು ನನಸು ಮಾಡುವುದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ' ಎಂದರು. ಜೊತೆಗೆ, 'ವಿಕಸಿತ ಭಾರತ ನಿರ್ಮಾಣದಲ್ಲಿ ಮುಂದಿನ 5 ವರ್ಷ ಅತ್ಯಂತ ನಿರ್ಣಾಯಕ. 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅತ್ಯಂತ ಮುಖ್ಯ. ಹೀಗಾಗಿ ಮುಂದಿನ 100 ದಿನಗಳ ಅವಧಿಯಲ್ಲಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು' ಎಂದು ಕರೆ ಕೊಟ್ಟರು.

ಇದೇ ವೇಳೆ ಬಿಜೆಪಿಯೇ ಅಧಿಕಾರಕ್ಕೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕೆಲವು ದೇಶಗಳು ಮುಂದಿನ ಜುಲೈ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ತಮ್ಮ ದೇಶಕ್ಕೆ ಆಗಮಿಸುವಂತೆ ನನ್ನನ್ನು ಆಹ್ವಾನಿಸಿವೆ. ಏಕೆಂದರೆ ಗೆಲುವು ಸಾಧಿಸುವುದಾದರೆ ಅದು ಮೋದಿಯೇ ಎಂಬುದೂ ಅವುಗಳಿಗೂ ಖಚಿತವಿದೆ. ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲಿದೆ ಎಂಬ ಘೋಷಣೆಗಳನ್ನು ಸ್ವತಃ ವಿಪಕ್ಷಗಳು ಕೂಡಾ ಮಾಡುತ್ತಿವೆ ಎಂದು ಹೇಳಿದರು.

ಸಾಧನೆಗಳ ಮೆಲುಕು: ತಮ್ಮ 65 ನಿಮಿಷಗಳ ಸುದೀರ್ಘ ಸಮಾರೋಪ ಭಾಷಣದಲ್ಲಿ ದೇಶದ ಅಭಿವೃದ್ಧಿಯ ಕಥೆ, ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಳ, ಬಡವರು ಮತ್ತು ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಮೆಲುಕು ಹಾಕಿದ ಮೋದಿ, ಇದುವರೆಗೂ ಬಿಜೆಪಿಯತ್ತ ಮನಸು ಮಾಡದ ಮತದಾರರನ್ನು ಸೆಳೆಯಲು ಪ್ರತಿ ಕಾರ್ಯಕರ್ತರೂ ಮುಂದಾಗಬೇಕು, ಹೊಸ ಮತದಾರರು, ಪ್ರತಿಯೊಬ್ಬ ಫಲಾನುಭವಿ ಮತ್ತು ಸಮಾಜದ ಪ್ರತಿಯೊಂದು ಸಮುದಾಯವನ್ನೂ ತಲುಪುವ ಯತ್ನ ಮಾಡಬೇಕು. ಹೀಗೆ ಪ್ರತಿಯೊಬ್ಬರೂ ಶ್ರಮಿಸಿದರೆ ಬಿಜೆಪಿ 370ಕ್ಕಿಂತ ಹೆಚ್ಚು ಮತ್ತು ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ' ಎಂದು ಹೇಳಿದರು. 

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 27 ಸ್ಥಾನಗಳಲ್ಲಿ ಬಿಜೆಪಿ ಗೆಲುವು: ಜಗದೀಶ್ ಶೆಟ್ಟರ್

ದೇಶ ರಕ್ಷಿಸಿದ್ದೇವೆ: ದೇಶವನ್ನು ನಾವು ಹಗರಣಗಳು ಮತ್ತು ಉಗ್ರ ದಾಳಿಗಳಿಂದ ರಕ್ಷಿಸಿದ್ದೇವೆ. ಮಧ್ಯಮ ವರ್ಗ ಮತ್ತು ಬಡವರ ಜೀವನ ಮಟ್ಟ ಉತ್ತಮಗೊಳಿಸಿದ್ದೇವೆ. 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ. ನಾವು ರಾಜನೀತಿಗಲ್ಲದೇ ರಾಷ್ಟ್ರ ನೀತಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ವಿರುದ್ಧ ಕಿಡಿ: ಈ ನಡುವೆ ವಿಪಕ್ಷ ಕಾಂಗ್ರೆಸ್ ವಿರುದ್ದವೂ ಕಿಡಿಕಾರಿದ ಮೋದಿ, 'ಮೋದಿಯನ್ನು ಟೀಕಿಸುವುದು ಕಾಂಗ್ರೆಸ್ ನಾಯಕರ ಏಕೈಕ ಕಾರ್ಯ ಸೂಚಿಯಾಗಿದೆ. ಕಾಂಗ್ರೆಸ್ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಓಲೈಕೆ ರಾಜಕಾರಣದ ತಾಯಿ ಇದ್ದಂತೆ ಎಂದು ಅವರು ಕಿಡಿಕಾರಿದರು.

ಮಂದಿರ ರಾಮರಾಜ್ಯ ನಿರ್ಮಾಣಕ್ಕೆ ಮುನ್ನುಡಿ: ಬಿಜೆಪಿ ನಿರ್ಣಯ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ದಿಂದ ಹೊಸ ಶಕೆ ಆರಂಭವಾಗಿದ್ದು, ಮುಂದಿನ ಸಾವಿರ ವರ್ಷಗಳವರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಕನಸಾಗಿದ್ದ ರಾಮರಾಜ್ಯ ನೆಲೆಸುವ ರಾಯಭಾರಿಯಾಗಿ ಕಂಗೊಳಿಸಲಿದೆ ಎಂಬ ನಿರ್ಣಯವನ್ನು ಬಿಜೆಪಿ ತನ್ನ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ತೆಗೆದುಕೊಂಡಿದೆ. ಈ ಪವಿತ್ರ ಕಾರ್ಯವನ್ನು ನೆರವೇರಿಸಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುವುದಾಗಿಯೂ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಂವಿಧಾನದಲ್ಲಿ ರಾಮ: ಇದೇ ವೇಳೆ ನಿರ್ಣಯದಲ್ಲಿ ಸಂವಿಧಾನದ ಮೂಲಪ್ರತಿಯಲ್ಲಿ ಶ್ರೀರಾಮನಿರುವುದನ್ನು ಉಲ್ಲೇಖಿಸುತ್ತಾ, ಮೂಲ ಸಂವಿಧಾನ ಪ್ರತಿಯ ಮೂಲಭೂತ ಹಕ್ಕುಗಳ ಪುಟದ ಮೇಲ್ಬಾಗದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ಚಿತ್ರವನ್ನು ಚಿತ್ರಿಸಲಾಗಿದೆ. ಹೀಗೆ ಮೂಲಭೂತ ಹಕ್ಕು ರಚಿಸಲು ಮತ್ತು ಸಂರಕ್ಷಿಸಲು ಶ್ರೀರಾಮನೇ ಪ್ರೇರಣೆಯಾಗಿದ್ದಾನೆ ಎಂದು ತಿಳಿಸಿದೆ.

Loksabha Elections 2024: ಬಿಜೆಪಿ ವರಿಷ್ಠರಿಂದ ದೆಹಲಿಗೆ ಬುಲಾವ್: ನಿಖಿಲ್ ಕುಮಾರಸ್ವಾಮಿ

ನಡ್ಡಾ ಅಧಿಕಾರಾವಧಿ ಜೂನ್‌ವರೆಗೆ ವಿಸ್ತರಣೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧಿಕಾ ರಾವಧಿಯನ್ನು 2024ರ ಜೂನ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಇಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಮಂಡಳಿ  ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಈ ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯನ್ನು ನಡ್ಡಾ ನೇತೃತ್ವದಲ್ಲೇ ಎದುರಿಸಲಿದೆ ಎಂದು ಪ್ರಕಟಿಸಿದರು.

ಭಾಷೆ, ಪ್ರಾದೇಶಿಕತೆ ಹೆಸರಲ್ಲಿ ದೇಶ ವಿಭಜನೆ ಕೈ ಯತ್ನ
ಕಾಂಗ್ರೆಸ್, ಭಾಷೆ ಮತ್ತು ಪ್ರದೇಶದ ಆಧಾರದಲ್ಲಿ ದೇಶವನ್ನು ವಿಜಭನೆ ಮಾಡುವ ಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು. ಈಮೂಲಕ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮುಂದುವರೆದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕವಾಗಬೇಕು ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಮತ್ತೊಮ್ಮೆ ಪರೋಕ್ಷವಾಗಿ ಕಿಡಿಕಾರಿದರು.

click me!