Breaking: ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್‌ 4 ರಂದು ಫಲಿತಾಂಶ

By Santosh NaikFirst Published Mar 16, 2024, 3:52 PM IST
Highlights

ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್‌ 26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ 7ಕ್ಕೆ 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ. 
 

ನವದೆಹಲಿ (ಮಾ.16): 18ನೇ ಲೋಕಸಭೆಗೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದೆ. ಏಪ್ರಿಲ್‌ 19 ರಿಂದ ಜೂನ್‌ 1ರವರೆಗೆ ಚುನಾವಣೆ ನಡೆಯಲಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದೆ. ಜೂನ್‌ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹಾಗೂ ಇತ್ತೀಚೆಗೆ ಚುನಾವಣಾ ಆಯೋಗ ಸೇರಿರುವ ಆಯುಕ್ತದ ಜ್ಞಾನೇಶ್‌ ಕುಮಾರ್‌ ಹಾಗೂ ಸುಖ್ಬೀರ್‌ ಸಿಂಗ್‌ ಸಂಧು ಶನಿವಾರ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದರು. ಲೋಕಸಭೆ ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಇನ್ನು ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಅವಧಿ ಕೂಡ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಆ ರಾಜ್ಯಗಳ ವಿಧಾನಸಭೆಗೂ ಲೋಕಸಭೆಯ ಜೊತೆಗೇ ಚುನಾವಣೆ ಘೋಷಣೆಯಾಗಿದೆ.

ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್‌ 26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ 7ಕ್ಕೆ 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಚಿತ್ರದುರ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​ಗೆ ಚುನಾವಣೆ ನಡೆಯಲಿದೆ.  ಮೊದಲ ಹಂತದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾರ್ಚ್ 28ಕ್ಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 4 ಕೊನೇ ದಿನವಾಗಿರಲಿದೆ. ಏಪ್ರಿಲ್‌ 5 ರಂದು ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್‌ 8 ಕೊನೇ ದಿನವಾಗಿದೆ.

2ನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ. ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌ಗೆ ಚುನಾವಣೆ ನಡೆಯಲಿದೆ.  2ನೇ ಹಂತದ ಚುನಾವಣೆಗೆ  ನಾಮಪತ್ರ ಸಲ್ಲಿಕೆ ಏಪ್ರಿಲ್ 12 ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 19ಕೊನೇ ದಿನವಾಗಿದೆ. ಏಪ್ರಿಲ್‌ 20 ನಾಮಪತ್ರ ಪರಿಶೀಲನೆ ನಡೆಯಲಿದ್ದರೆ, ನಾಮಪತ್ರ ಹಿಂಪಡೆಯಲು ಏಪ್ರಿಲ್‌ 22 ಕೊನೇ ದಿನವಾಗಿದೆ.

ಹಂತಗಳು ದಿನಾಂಕ ಲೋಕಸಭಾ ಕ್ಷೇತ್ರ
ಮೊದಲ ಹಂತ ಏಪ್ರಿಲ್‌ 19 102
2ನೇ ಹಂತ ಏಪ್ರಿಲ್‌ 26 89
3ನೇ ಹಂತ ಮೇ 7 94
4ನೇ ಹಂತ ಮೇ 13 96
5ನೇ ಹಂತ ಮೇ 20 49
6ನೇ ಹಂತ ಮೇ 25 57
7ನೇ ಹಂತ ಜೂನ್‌ 1 8

'ಚುನಾವ್ ಕಾ ಪವ್೯, ದೇಶ್ ಕಾ ಗವ್೯'  ಎನ್ನುವ ಧ್ಯೇಯವಾಕ್ಯದಲ್ಲಿ ಈ ಬಾರಿಯ ಚುನಾವಣೆ ನಡೆಯಲಿದೆ. ನಮ್ಮ ತಂಡವು ಈಗ ಪೂರ್ಣಗೊಂಡಿದೆ, ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ಬಾರಿ ಒಟ್ಟು 97 ಕೋಟಿ ಮತದಾರರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.  10.5 ಲಕ್ಷ ಮತಗಟ್ಟೆಗಳು ಈ ಬಾರಿ ಇರಲಿದ್ದು, ಚುನಾವಣೆಗೆ 1.5 ಕೋಟಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 55 ಲಕ್ಷ ಇವಿಎಂ, 4 ಲಕ್ಷ ವಾಹನಗಳು ಬಳಕೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 1.8  ಕೋಟಿ ಮಂದಿ ಮೊದಲ ಬಾರಿ ಮತದಾರರಿದ್ದರೆ, 49.7 ಕೋಟಿ ಪುರುಷ, 47.1 ಕೋಟಿ ಮಹಿಳಾ ಮತದಾರರಿದ್ದಾರೆ.48 ಸಾವಿರ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಜೂನ್‌ 16ಕ್ಕೆ ಈಗಿನ ಲೋಕಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್‌ ಪಕ್ಷ 52 ಸೀಟುಗಳನ್ನು ಗೆದ್ದು, ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಗಳಿಸುವುದಕ್ಕೂ ವಿಫಲವಾಗಿತ್ತು. ಈ ಬಾರಿ ವಿಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದ್ದು, ಬಿಜೆಪಿ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿ ನಡೆಯುವುದು ನಿಶ್ಚಿತವಾಗಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಹಿಂದೆಂದಿಗಿಂತ ಹೆಚ್ಚು ಸ್ಥಾನ ಪಡೆದು ‘ಐತಿಹಾಸಿಕ ಜಯ’ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 411 ಸೀಟುಗಳನ್ನೂ, ಬಿಜೆಪಿಯೊಂದೇ 350 ಸೀಟುಗಳನ್ನೂ ಗೆಲ್ಲಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆಂಧ್ರ ಪ್ರದೇಶ ಸೇರಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ!

ಇಂದಿನಿಂದಲೇ ನೀತಿ ಸಂಹಿತೆ ಜಾರಿ:
ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದೆ. ಅದರಂತೆ ಸರ್ಕಾರ/ಸಚಿವರು ಅನುದಾನ ಅಥವಾ ಭರವಸೆಗಳನ್ನು ಪ್ರಕಟಿಸುವಂತಿಲ್ಲ. ಶಂಕುಸ್ಥಾಪನೆ, ಉದ್ಘಾಟನೆ, ಚಾಲನೆ ಕಾರ್ಯಕ್ರಮ ನೆರವೇರಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವಂತಹ ನೇಮಕಾತಿ ಮಾಡುವಂತಿಲ್ಲ ಹಾಗೂ ಚುನಾವಣೆ ಕೆಲಸಕ್ಕೆ ರಾಜಕಾರಣಿಗಳು ಸರ್ಕಾರಿ ವಾಹನ ಬಳಸುವಂತಿಲ್ಲ.

ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7ರಂದು ಉಪ ಚುನಾವಣೆ ಘೋಷಣೆ

click me!