ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ, ಗುರುವಾರ ಸಂಜೆ ಮಹತ್ವದ ಸಭೆ ನಡೆಸಿದೆ. ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 100 ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಆಗುವ ಸಾಧ್ಯತೆ ಇದೆ.
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ, ಗುರುವಾರ ಸಂಜೆ ಮಹತ್ವದ ಸಭೆ ನಡೆಸಿದೆ. ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 100 ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಆಗುವ ಸಾಧ್ಯತೆ ಇದೆ.
ಈ ಬಾರಿ 370ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಇಂಗಿತ ಹೊಂದಿರುವ ಬಿಜೆಪಿ ಈ ನಿಟ್ಟಿನಲ್ಲಿ ತಯಾರಿ ಆರಂಭಿಸಿದೆ. ಹೀಗಾಗಿ ಇದುವರೆಗೂ ಬಿಜೆಪಿ ಸಂಪೂರ್ಣ ಗೆಲುವು ಸಾಧಿಸಲು ಆಗದ ರಾಜ್ಯಗಳಿಗೆ ಹೆಚ್ಚಿನ ಮೊದಲ ಪ್ರಾಶಸ್ತ್ಯ ನೀಡಲಿದೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳು ಘೋಷಣೆಯಾದರೆ ಆಯಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಚುನಾವಣಾ ಕೆಲಸಗಳನ್ನು ಶುರು ಮಾಡಲು ಸಹಾಯವಾಗಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳು ಮೊದಲ ಪಟ್ಟಿಯಲ್ಲಿರುವ ನಿರೀಕ್ಷೆ ಇದೆ.
ಉಳಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೆಸರು ಮೊದಲ ಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾ.10ರೊಳಗೆ 300 ಸೀಟು ಅಂತಿಮಗೊಳಿಸುವ ಗುರಿ ಬಿಜೆಪಿಗಿದೆ.
ತಮಿಳುನಾಡು ಸೀಟು ಹಂಚಿಕೆ: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ ನೀಡಿದ ಡಿಎಂಕೆ
ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಜಾಸತ್ತಾತ್ಮಕ ಒಕ್ಕೂಟ (ಎಸ್‌ಪಿಎ) ಮುಂಬರುವ ಲೋಕಸಭಾ ಚುನಾವಣೆಗೆ ಸಿಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಎಂಗೆ ತಲಾ 2 ಸೀಟು ಬಿಟ್ಟುಕೊಡಲು ಡಿಎಂಕೆ ಸಮ್ಮತಿಸಿದೆ. ಇದಕ್ಕೂ ಮೊದಲು ಮೈತ್ರಿಕೂಟದ ಇತರ ಪಕ್ಷಗಳಾದ ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕೆಎಂಡಿಕೆ ಪಕ್ಷಗಳಿಗೆ ತಲಾ 1 ಸೀಟು ಬಿಟ್ಟು ಕೊಡಲಾಗಿತ್ತು. ಕಳೆದ ಬಾರಿ ಡಿಎಂಕೆ ನೇತೃತ್ವದ ಎಸ್‌ಪಿಎ ಮೈತ್ರಿಕೂಟ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ 38 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.
75 ಸಾವಿರ ಕೋಟಿ ಮೊತ್ತದ ಪಿಎಂ ಸೂರ್ಯಘರ್ ಯೋಜನೆಗೆ ಕೇಂದ್ರ ಸಂಪುಟ ಅಸ್ತ ...
ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್‌ಪಿಜಿ ಬೆಲೆ ₹2000ಕ್ಕೆ: ಮಮತಾ
ಝಾರ್‌ಗ್ರಾಮ (ಪಶ್ಚಿಮ ಬಂಗಾಳ): ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 2000 ರು.ಗೆ ಹೆಚ್ಚಳವಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಎಚ್ಚರಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿ, ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೆ ಅಡುಗೆ ಅನಿಲದ ಸಿಲಿಂಡರ್ ಮೌಲ್ಯ 1,500 ರು. ನಿಂದ 2,000 ರು.ನಷ್ಟು ಏರಲಿದೆ. ಈ ಹೆಚ್ಚಳ ಮತ್ತೆ ಮುಂದುವರಿಯಲಿದೆ. ನಾವು ಮತ್ತೆ ಮರಗಳನ್ನು ತಂದು ಸೌದೆ ಒಲೆ ಬಳಸುತ್ತಿದ್ದ ಪರಿಸ್ಥಿತಿಗೆ ಮರಳಬೇಕಾಗುತ್ತದೆ’ಎಂದರು. ಆವಾಸ್ ಯೋಜನೆಯಡಿ ಕೈಗೊಂಡಿರುವ ಮನೆಗಳ ನಿರ್ಮಾಣವನ್ನು ಏಪ್ರಿಲ್ ಒಳಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮೇನಿಂದ ತಮ್ಮ ಸರ್ಕಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಗಣಿ ಹಗರಣ: ಸಿಬಿಐ ವಿಚಾರಣೆಗೆ ಅಖಿಲೇಶ್ ಗೈರು
ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಗುರುವಾರ ಕೇಂದ್ರೀಯ ತನಿಖಾ ದಳ(ಸಿಬಿಐ) ಕರೆದಿದ್ದ ವಿಚಾರಣಾ ಸಮನ್ಸ್‌ಗೆ ಗೈರಾಗಿದ್ದಾರೆ. ಅವರು ಸಿಬಿಐಗೆ ಪತ್ರ ಬರೆದಿದ್ದು, ಕಳೆದ 5 ವರ್ಷ ಸುಮ್ಮನಿದ್ದು ಈಗೇಕೆ ವಿಚಾರಣೆಗೆ ಏಕಾಏಕಿ ಬುಲಾವ್ ನೀಡಲಾಗಿದೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಿಲೇಶ್ ಯಾದವ್ ಅವರು 2012-16ರ ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಗಣಿಗಾರಿಕೆಗೆ ಸಂಬಂಧಿಸಿದ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿಬಂದಿತ್ತು. ಈ ಕುರಿತು ಸಾಕ್ಷಿಯಾಗಿ ವಿಚಾರಣೆಗೆ ಬರುವಂತೆ ಸಿಬಿಐ ಅವರಿಗೆ ನೋಟಿಸ್ ನೀಡಿತ್ತು.