ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ಬಾರಿಗೆ ರಣಕಹಳೆ ಮೊಳಗಿಸಿದ್ದ ಮೇರಠ್ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ರಾಮ ಪಾತ್ರಧಾರಿ ಅರುಣ್ ಗೋವಿಲ್ ಆಗಮನದಿಂದ ರಂಗೇರಿದೆ.
ಮೇರಠ್ (ಏ.06): ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ಬಾರಿಗೆ ರಣಕಹಳೆ ಮೊಳಗಿಸಿದ್ದ ಮೇರಠ್ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ರಾಮ ಪಾತ್ರಧಾರಿ ಅರುಣ್ ಗೋವಿಲ್ ಆಗಮನದಿಂದ ರಂಗೇರಿದೆ. ಬಿಜೆಪಿ ಅಚ್ಚರಿ ಅಭ್ಯರ್ಥಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವೂ ಕೂಡ 2 ಸಲ ತನ್ನ ಅಭ್ಯರ್ಥಿಗಳನ್ನು ಬದಲಿಸಿ ಕೊನೆಗೆ ಮೇರಠ್ ಮಾಜಿ ಮೇಯರ್ ಹಾಗೂ ಹಾಲಿ ಶಾಸಕ ಸುನಿತಾ ವರ್ಮಾ ಪ್ರಧಾನ್‌ರಿಗೆ ಹಾಗೂ ಬಿಎಸ್ಪಿ ದೇವವ್ರತ ತ್ಯಾಗಿಗೆ ಟಿಕೆಟ್ ನೀಡಿದೆ. ಈ ಮೂಲಕ ಚುನಾವಣಾ ಅಖಾಡವನ್ನು ಮತ್ತಷ್ಟು ರೋಚಕತೆಗೆ ಕೊಂಡೊಯ್ದಿದೆ.
ಸ್ಥಳೀಯ ಅಸ್ಮಿತೆ: ಬಿಜೆಪಿ ಅಭ್ಯರ್ಥಿಯಾಗಿ ರಾಮ ಪಾತ್ರಧಾರಿ ಅರುಣ್ ಗೋವಿಲ್‌ರನ್ನು ಕಣಕ್ಕಿಳಿಸಿದ ಮರುಕ್ಷಣವೇ ಅವರು ಮಾಡಿದ ಮೊದಲ ಚುನಾವಣಾ ಪ್ರಚಾರ ಭಾಷಣದಲ್ಲಿ ಸ್ಥಳೀಯ ಅಸ್ಮಿತೆಯನ್ನು ಹೊರಹಾಕಿ ಭಾವನಾತ್ಮಕವಾಗಿ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು. ಮೇರಠ್ ತನ್ನ ಜನ್ಮಸ್ಥಳವಾಗಿದ್ದು, ಬಹಳ ಸಮಯದ ನಂತರ ಇಲ್ಲಿನ ಜನರಿಗೆ ಸೇವೆ ಮಾಡಲು ಅವಕಾಶ ಲಭಿಸಿರುವುದಾಗಿ ತಿಳಿಸಿದ್ದು ಕ್ಷೇತ್ರದಲ್ಲಿ ಶ್ರೀರಾಮನು ಅಯೋಧ್ಯೆಗೆ 14 ವರ್ಷ ವನವಾಸ ಪೂರೈಸಿ ಮರಳಿ ಬಂದಷ್ಟು ಪ್ರಭಾವ ಬೀರಿದೆ.
ಕುಮಾರಸ್ವಾಮಿ ಆಗಮನದಿಂದ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಬಲ: ಡಾ.ಕೆ.ಸುಧಾಕರ್
ಎಸ್‌ಪಿ ಅಭ್ಯರ್ಥಿ 2 ಸಲ ಬದಲು: ಅತ್ತ ಬಿಜೆಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ‘ಶ್ರೀರಾಮ’ನಿಗೆ ಮಣೆ ಹಾಕಿದ ಹಿನ್ನೆಲೆಯಲ್ಲಿದ ಬೆನ್ನಲ್ಲೇ ಸಮಾಜವಾದಿ ಪಕ್ಷ ಮೊದಲು ಭಾನುಪ್ರತಾಪ್ ಸಿಂಗ್ ಅವರಿಗೆ ಮಣೆ ಹಾಕಿತ್ತು. ನಂತರ ಅವರನ್ನು ಬದಲಿಸಿ ದಲಿತ ಯುವ ನಾಯಕ ಹಾಗೂ ಹಾಲಿ ಶಾಸಕ ಅತುಲ್ ಪ್ರಧಾನ್‌ಗೆ ಟಿಕೆಟ್ ನೀಡಿತ್ತು. ಅತುಲ್ ಪ್ರಧಾನ್ ಬಿಜೆಪಿಯ ಫೈರ್‌ಬ್ರ್ಯಾಂಡ್ ಎಂದೇ ಖ್ಯಾತರಾದ ಸಂಗೀತ್ ಸೋಮ್‌ರನ್ನು ಮಣಿಸಿ ಶಾಸಕರಾಗಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಸರ್ಢಾನಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಮೇರಠ್ ಮಾಜಿ ಮೇಯರ್ ಸುನಿತಾ ವರ್ಮಾ ಪ್ರಧಾನ್ ಎಂಬ ಹಿರಿಯ ನಾಯಕಗೆ ಎಸ್‌ಪಿ ಮಣೆ ಹಾಕಿದೆ. ಬಿಎಸ್‌ಪಿ ದೇವವ್ರತ ತ್ಯಾಗಿಗೆ ಟಿಕೆಟ್ ನೀಡಿದೆ. ಹೀಗಾಗಿ ತ್ರಿಕೋನ ಕದನದಲ್ಲಿ ಗೆಲ್ಲೋರು ಯಾರೆಂಬ ಅನುಮಾನ ಕುತೂಹಲ ಸೃಷ್ಟಿಯಾಗಿದೆ.
ಹೇಗಿದೆ ವಾತಾವರಣ?: ಮುಸ್ಲಿಂ ಮತದಾರರೇ ಹೆಚ್ಚಿರುವ ಮೇರಠ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಹಿಂದುತ್ವ ಅಸ್ಮಿತೆಯನ್ನು ಪ್ರಯೋಗಿಸಿದೆ. ಇದಕ್ಕೆ ಪ್ರಬಲ ಸವಾಲು ಒಡ್ಡುವ ಸಲುವಾಗಿ ಇತರ ಪ್ರಮುಖ ಪಕ್ಷಗಳೂ ಸಹ ಇದೇ ಮೊದಲ ಬಾರಿಗೆ ಮುಸ್ಲಿಮೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಮುಸ್ಲಿಂ ಅಭ್ಯರ್ಥಿಯ ವಿರುದ್ಧ ಗೆದ್ದಿದ್ದ ಬಿಜೆಪಿ ಅಭ್ಯರ್ಥಿಯನ್ನು ಈ ಬಾರಿಯೂ ಮತದಾರರೂ ಕೈ ಹಿಡಿಯುವರೇ ಎಂಬುದು ಕುತೂಹಲಕರ ಸಂಗತಿಯಾಗಿದೆ.
ಮತದಾನ ನಡೆಯುವ ದಿನ: ಏ.26
ವಿಧಾನಸಭಾ ಕ್ಷೇತ್ರಗಳು: 5 (ಬಿಜೆಪಿ-3, ಎಸ್‌ಪಿ-2)
ಪ್ರಮುಖ ಅಭ್ಯರ್ಥಿಗಳು:
ಅರುಣ್ ಗೋವಿಲ್ ಬಿಜೆಪಿ
ಸುನಿತಾ ವರ್ಮಾ ಪ್ರಧಾನ್ ಎಸ್‌ಪಿ
ದೇವವ್ರತ್ ತ್ಯಾಗಿ ಬಿಎಸ್‌ಪಿ
2019ರ ಚುನಾವಣೆ ಫಲಿತಾಂಶ:
ಜಯ: ಬಿಜೆಪಿ ರಾಜೇಂದ್ರ ಅಗರ್ವಾಲ್
ಸೋಲು: ಬಿಎಸ್‌ಪಿ ಹಾಜಿ ಯಾಕೂಬ್ ಖುರೇಷಿ
ಚುನಾವಣಾ ವಿಷಯಗಳು:
ಸ್ಥಳೀಯ ಅಸ್ಮಿತೆ
ಶ್ರೀರಾಮ ಪಾತ್ರಧಾರಿಯ ಪ್ರಭಾವ
ಮುಸ್ಲಿಂ ಮತಗಳ ಚದುರಿಕೆ
ಗಲಭೆಗಳ ಕಹಿನೆನಪು
ಕುಮಾರಸ್ವಾಮಿ ಸಹಕಾರ ಕೇಳಿದ್ದಾರೆಯೇ ವಿನಾ ಪ್ರಚಾರಕ್ಕೆ ಬನ್ನಿ ಎಂದಿಲ್ಲ: ಸುಮಲತಾ ಅಂಬರೀಶ್
ಸ್ಟಾರ್ ಕ್ಷೇತ್ರ ಮೇರಠ್
ರಾಜ್ಯ ಉತ್ತರಪ್ರದೇಶ