Lok Sabha Election 2024: ಬಿಹಾರದಲ್ಲಿ ಮತ್ತೆ ಕ್ಲೀನ್‌ಸ್ವೀಪ್‌ ನಿರೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ!

By Kannadaprabha News  |  First Published Apr 6, 2024, 6:23 AM IST

ಬಿಹಾರದಲ್ಲಿ ಸಂಪತ್ತು ಮತ್ತು ಅನಾಹುತ ಎರಡನ್ನೂ ಸೃಷ್ಟಿಸುವ ಕೋಸಿ ನದಿಯಲ್ಲಿ ಕಳೆದ 5 ವರ್ಷದಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಈ ಮಾತಿನಿಂದ ರಾಜ್ಯದ ರಾಜಕೀಯವೂ ಹೊರತಾಗಿಲ್ಲ.


ಪಟನಾ (ಏ.06): ಬಿಹಾರದಲ್ಲಿ ಸಂಪತ್ತು ಮತ್ತು ಅನಾಹುತ ಎರಡನ್ನೂ ಸೃಷ್ಟಿಸುವ ಕೋಸಿ ನದಿಯಲ್ಲಿ ಕಳೆದ 5 ವರ್ಷದಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಈ ಮಾತಿನಿಂದ ರಾಜ್ಯದ ರಾಜಕೀಯವೂ ಹೊರತಾಗಿಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಜೆಡಿಯು ನಾಯಕ ನಿತೀಶ್‌ ಬಳಿಕ ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿಕೂಟ ಸೇರಿ ರಾಜ್ಯದಲ್ಲಿ ಸರ್ಕಾರ ರಚಿಸಿದ್ದರು. ಆದರೆ 2024ರ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಲೇ ಮಾರುತಗಳ ವಾಸನೆ ಹಿಡಿದ ನಿತೀಶ್‌ ಮತ್ತೆ ಎನ್‌ಡಿಎ ಪಾಳಯಕ್ಕೆ ಮರಳಿದ್ದಾರೆ.

ಇದು ಸಹಜವಾಗಿಯೇ ಲೋಕಸಭೆಯಲ್ಲಿ 40 ಸ್ಥಾನ ಹೊಂದಿರುವ ರಾಜ್ಯದಲ್ಲಿ ಎನ್‌ಡಿಎ ಮತ್ತೊಮ್ಮೆ ಕ್ಲೀನ್‌ಸ್ವೀಪ್‌ ಮಾಡಲು ವೇದಿಕೆ ಸೃಷ್ಟಿಸಿದೆ. ಕಳೆದ ಬಾರಿ ಎನ್‌ಡಿಎ 39 (ಬಿಜೆಪಿ 17, ಜೆಡಿಯು 16, ಎಲ್‌ಜೆಪಿ 6) ಸ್ಥಾನ ಗೆದ್ದಿದ್ದರೆ, ಇಂಡಿಯಾ ಮೈತ್ರಿಕೂಟ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ದಶಕಗಳಿಂದಲೂ ಬಿಹಾರದಲ್ಲಿ ಜೆಡಿಯುದ ಸಹಯೋಗಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದ ಬಿಜೆಪಿ ಇದೀಗ ಅಲ್ಲಿ ಎನ್‌ಡಿಎ ಮೈತ್ರಿಕೂಟದ ದೊಡ್ಡ ಪಕ್ಷ. ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಅದರ ಸ್ಥಾನ ಬಲ ಹೆಚ್ಚಿದೆ. ಇದಕ್ಕೆ ಪೂರಕವಾಗಿ ಜೆಡಿಯು ಬೆಂಬಲ ಇದೆ. 

Tap to resize

Latest Videos

ವೈಮನಸ್ಸು ಬದಗಿಟ್ಟು ಚುನಾವಣೆ ಎದುರಿಸಿ: ಸಿಎಂ ಸಿದ್ದು, ಡಿಸಿಎಂ ಡಿಕೆಶಿ

ಇನ್ನೊಂದೆಡೆ ಮುನಿಸಿಕೊಂಡಿದ್ದ ರಾಮ್‌ ವಿಲಾಸ್‌ ಪಾಸ್ವಾನ್‌ರ ಪುತ್ರ ಚಿರಾಗ್‌ ಮತ್ತು ಸೋದರನನ್ನು ಮರಳಿ ತನ್ನ ತೆಕ್ಕೆಗೆ ತರಲು ಬಿಜೆಪಿ ಯಶಸ್ವಿಯಾಗಿರುವ ಕಾರಣ ಎನ್‌ಡಿಎ ಬಲ ಸಹಜವಾಗಿಯೇ ಹೆಚ್ಚಿದೆ. ಮತ್ತೊಂದೆಡೆ ರಾಜ್ಯ ವಿಧಾನಸಭೆಯಲ್ಲಿ ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿದ್ದರೂ ಲೋಕಸಭೆಯಲ್ಲಿ ಆ ಮ್ಯಾಜಿಕ್‌ ನಡೆಯೋಲ್ಲ ಎಂದು ಪಕ್ಷಕ್ಕೂ ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಅಯೋಮಯ. ಹೀಗಾಗಿ ಮೈತ್ರಿಕೂಟದ ಬಲದ ಮೇಲೇಯೇ ಒಂದೆರೆಡಾದರೂ ಸ್ಥಾನ ಗೆಲ್ಲುವ ಗುರಿ ಮೈತ್ರಿಕೂಟದ್ದು. ದೊಡ್ಡ ರಾಜ್ಯ ಮತ್ತು ಅಹಿತಕರ ಘಟನೆ ನಡೆಯುವ ಸಲುವಾಗಿ ಈ ಬಾರಿಯೂ ಆಯೋಗ ಏ.19ರಿಂದ ಹಿಡಿದು ಒಟ್ಟು 7 ಹಂತಗಳಲ್ಲಿ ಚುನಾವಣೆ ಆಯೋಜಿಸಿದೆ.

ಬಿಜೆಪಿ ಬಲ: ಬಿಜೆಪಿಗೆ ಆರ್‌ಎಸ್‌ಎಸ್‌, ಎಬಿವಿಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರ ದೊಡ್ಡ ಪಡೆಯೇ ದೊಡ್ಡ ಬಲ. ಇನ್ನು 1990ರ ದಶಕದಲ್ಲಿ ಕಾಂಗ್ರೆಸ್‌ ತೊರೆದ ಮೇಲ್ವರ್ಗ ಜನತೆ ಈಗಲೂ ಬಿಜೆಪಿ ಜೊತೆಗೇ ಇರುವುದು ಪಕ್ಷದ ಬೆನ್ನಲೆಬು. ಆದರೆ ರಾಜ್ಯದಲ್ಲಿ ಪಕ್ಷದಲ್ಲಿ ದೊಡ್ಡ ಮಟ್ಟದ ನಾಯಕರು ಇಲ್ಲದೇ ಇರುವುದು ಸಣ್ಣ ತೊಡಕು. ಮೋದಿ ಅಲೆ, ಕೇಂದ್ರದ ಯೋಜನೆಗಳನ್ನು ಪಕ್ಷ ಬಹುವಾಗಿ ನೆಚ್ಚಿಕೊಂಡಿದೆ. ಸ್ಥಳೀಯ ನಾಯಕ ಸುಶೀಲ್‌ ಮೋದಿ ಅನಾರೋಗ್ಯದಿಂದ ಚುನಾವಣೆಯಿಂದ ದೂರವಾಗಿದ್ದಾರೆ.

ಮತ್ತೊಂದೆಡೆ ಜೆಡಿಯುಗೆ ಅಳಿವು ಉಳಿವಿನ ಪ್ರಶ್ನೆ. ನಿತೀಶ್‌ ಬಿಟ್ಟರೆ ಪಕ್ಷ ಮುನ್ನಡೆಸುವವರು ಯಾರೂ ಇಲ್ಲ. ಪಕ್ಷ ನಿಧಾನವಾಗಿ ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ತನ್ನ ಬಲ ಕಳೆದುಕೊಳ್ಳುತ್ತಿದೆ. ಅದನ್ನು ಮರಳಿ ಪಡೆಯುವ ಉತ್ಸಾಹದಲ್ಲಿ ಸಿಎಂ ನಿತೀಶ್‌ ಇದ್ದಾರೆ. 2 ದಶಕಗಳಿಂದ ಅಧಿಕಾರದಲ್ಲಿದ್ದರೂ ಸ್ವಚ್ಛ ಎಂಬ ವೈಯಕ್ತಿಕ ವರ್ಚಸ್ಸು ಅವರಿಗೆ ನೆರವಾಗಬಹುದು. ಇತ್ತೀಚೆಗೆ ಜಾತಿ ಗಣತಿ ವರದಿ ಆಧರಿಸಿ ಹಿಂದುಳಿದ ವರ್ಗಗಳ ಮೀಸಲು ಹೆಚ್ಚಿಸಿರುವುದು ಪಕ್ಷಕ್ಕೆ ವರವಾಗುವ ನಿರೀಕ್ಷೆ ಇದೆ.

ಆರ್‌ಜೆಡಿ: ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷ. ಆದರೆ ವಿಧಾನಸಭೆಯ ಫಲಿತಾಂಶ ಲೋಕಸಭೆಯಲ್ಲಿ ಪ್ರತಿಫಲಿಸುವಂತೆ ಮಾಡುವಲ್ಲಿ ಪಕ್ಷಕ್ಕೆ ಯಶಸ್ಸು ಸಿಕ್ಕಿಲ್ಲ. ಯಾದವರು ಮತ್ತು ಮುಸ್ಲಿಮರು ಮತಗಳೇ ಪಕ್ಷಕ್ಕೆ ವರ. ಅದು ಬಿಟ್ಟರೆ ಬೇರ್‍ಯಾವ ಅಂಶಗಳೂ ಪಕ್ಷದ ಪರವಾಗಿಲ್ಲ. ಲಾಲು ನಿರ್ಗಮನದ ಬಳಿಕ ತೇಜಸ್ವಿ ಪಕ್ಷವನ್ನು ಯುವನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಪಕ್ಷದ ನಾಯಕತ್ವ ಕುಟುಂಬ ರಾಜಕೀಯಕ್ಕೆ ಸೀಮಿತ ಎಂಬ ಕಳಂಕ ಆರ್‌ಜೆಡಿಯನ್ನೂ ಬಿಟ್ಟಿಲ್ಲ.

ಸ್ಪರ್ಧೆ ಹೇಗೆ?: ಎನ್‌ಡಿಎ ಮೈತ್ರಿಕೂಟದ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ 5 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಮೋದಿ ಅಲೆ, ಕೇಂದ್ರದ ಯೋಜನೆಗಳು, ಬಿಹಾರ ಸಿಎಂ ನಿತೀಶ್‌ ವೈಯಕ್ತಿಕ ವರ್ಚಸ್ಸು, ಇತ್ತೀಚಿನ ಜಾತಿ ಗಣತಿ ಜಾರಿ ವರದಿ ಮುಂದಿಟ್ಟುಕೊಂಡು ಎನ್‌ಡಿಎ ಮೈತ್ರಿಕೂಟ ಚುನಾವಣೆ ಎದುರಿಸುತ್ತಿದೆ. ಚುನಾವಣೆ ಅಲೆ ಕೂಡಾ ಮೈತ್ರಿಕೂಟದ ಪರವಾಗಿ ಬೀಸುತ್ತಿದೆ. ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟದಲ್ಲಿ ಆರ್‌ಜೆಡಿ 26, ಕಾಂಗ್ರೆಸ್‌ 9, ಎಡಪಕ್ಷಗಳಿಗೆ 5 ಸ್ಥಾನ ನೀಡಲಾಗಿದೆ. ಇಂಡಿಯಾ ಮೈತ್ರಿಕೂಟ ಯಾವುದೇ ಸಾಧನೆ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ. ಮೋದಿ ಮತ್ತು ಕೇಂದ್ರದ ವಿರುದ್ಧ ಟೀಕೆ, ತಮ್ಮ ಹಿಂದಿನ ಮಿತ್ರ ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿಗಳಷ್ಟೇ ಸದ್ಯಕ್ಕೆ ಅವುಗಳಿ ಬಲ.

ಪ್ರಮುಖ ಲೋಕಸಭಾ ಸ್ಥಾನಗಳು: ಔರಂಗಾಬಾದ್‌, ಸಮಸ್ತಿಪುರ, ದರ್ಭಾಂಗ, ಸರಣ್‌, ಮುಜಫ್ಫುರ್‌ಪುರ, ಸರಣ್‌, ವೈಶಾಲಿ, ನಳಂದ, ಪಾಟಲೀಪುತ್ರ, ಬಕ್ಸರ್‌, ಹಾಜಿಪುರ

ಪ್ರಮುಖ ಅಭ್ಯರ್ಥಿಗಳು: ರವಿಶಂಕರ್‌ ಪ್ರಸಾದ್‌, ರಾಜೀವ್‌ ಪ್ರತಾಪ್‌ ರೂಢಿ, ಗಿರಿರಾಜ್‌ ಸಿಂಗ್‌, ಆರ್‌.ಕೆ.ಸಿಂಗ್‌, ರಾಧಾಮೋಹನ್‌ ಸಿಂಗ್‌, ಪಪ್ಪು ಯಾದವ್‌, ಲಾಲು ಯಾದವ್‌ರ ಪುತ್ರಿ ರೋಹಿಣಿ ಆಚಾರ್ಯ.

ಕಾಂಗ್ರೆಸ್‌ನ್ನು ಗೆಲ್ಲಿಸದಿದ್ರೆ ಮಾಜಿ ಆಗ್ತೀರಿ: ಪ್ರಚಾರ ಸಮಿತಿ ಅಧ್ಯಕ್ಷ, 5 ಕಾರ್ಯಾಧ್ಯಕ್ಷರಿಗೆ ಡಿಕೆಶಿ ಎಚ್ಚರಿಕೆ

2019 ಲೋಕಸಭಾ ಚುನಾವಣೆಯ ಫಲಿತಾಂಶ
ಮೈತ್ರಿಕೂ ಸ್ಥಾನ ಮತಪ್ರಮಾಣ
ಎನ್‌ಡಿಎ 39 53.25
ಇಂಡಿಯಾ 01 25.27

click me!