ದಿಲ್ಲಿ ಮದ್ಯ ಹಗರಣ: ಇಬ್ಬರಿಗೆ ಜಾಮೀನು, ಮೇಲ್ನೋಟಕ್ಕೆ ಆರೋಪ ಸತ್ಯವಲ್ಲ ಎಂದ ದಿಲ್ಲಿ ಕೋರ್ಟ್‌

By Kannadaprabha News  |  First Published May 9, 2023, 9:36 AM IST

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇ.ಡಿ. ಸಲ್ಲಿಸಿರುವ ದಾಖಲೆಗಳು ಇವರನ್ನು ದೋಷಿ ಎಂದು ಪರಿಗಣಿಸಲು ಅಥವಾ ಜಾಮೀನು ಮಂಜೂರು ಮಾಡದಿರಲು ಸಾಕಾಗುತ್ತಿಲ್ಲ. ಮೇಲ್ನೋಟಕ್ಕೆ ಈ ಪ್ರಕರಣ ಸತ್ಯಕ್ಕೆ ದೂರವಾಗಿದೆ ಎನಿಸುತ್ತಿದೆ ಎಂದು ಕೋರ್ಟ್ ಹೇಳಿದೆ.


ನವದೆಹಲಿ (ಮೇ 9, 2023): ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮದ್ಯದ  ಡೀಲರ್‌ಗಳಿಗೆ ಜಾಮೀನು ಮಂಜೂರು ಮಾಡಿರುವ ದೆಹಲಿ ನ್ಯಾಯಾಲಯ, ಮೇಲ್ನೋಟಕ್ಕೆ ಇವರ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ಸತ್ಯಕ್ಕೆ ದೂರವಾಗಿದೆ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್‌ ಅವರು ಮದ್ಯದ ಡೀಲರ್‌ಗಳಾದ ರಾಜೇಶ್‌ ಜೋಶಿ ಮತ್ತು ಗೌತಮ್‌ ಮಲ್ಹೋತ್ರಾ ಎಂಬುವವರಿಗೆ ಜಾಮೀನು ಮಂಜೂರು ಮಾಡಿದ್ದು, ಇಬ್ಬರೂ 2 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ ಮತ್ತು ಅದೇ ಮೊತ್ತದ ಶ್ಯೂರಿಟಿ ನೀಡುವಂತೆ ಸೂಚಿಸಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇ.ಡಿ. ಸಲ್ಲಿಸಿರುವ ದಾಖಲೆಗಳು ಇವರನ್ನು ದೋಷಿ ಎಂದು ಪರಿಗಣಿಸಲು ಅಥವಾ ಜಾಮೀನು ಮಂಜೂರು ಮಾಡದಿರಲು ಸಾಕಾಗುತ್ತಿಲ್ಲ. ಮೇಲ್ನೋಟಕ್ಕೆ ಈ ಪ್ರಕರಣ ಸತ್ಯಕ್ಕೆ ದೂರವಾಗಿದೆ ಎನಿಸುತ್ತಿದೆ ಎಂದು ಕೋರ್ಟ್ ಹೇಳಿದೆ.

Tap to resize

Latest Videos

ಇದನ್ನು ಓದಿ: ಛತ್ತೀಸ್‌ಗಢ: 2000 ಕೋಟಿ ರೂ. ಮದ್ಯ ಹಗರಣ ಪತ್ತೆಹಚ್ಚಿದ ಇಡಿ: 'ಕೈ' ನಾಯಕನ ಸೋದರ, ಐಎಎಸ್‌ ಅಧಿಕಾರಿ ಕೈವಾಡ

ಈ ಹಗರಣದ ಹಣವನ್ನು ಗೋವಾ ವಿಧಾನಸಭೆ ಚುನಾವಣೆ ನಿಮಿತ್ತ ಆಪ್‌ಗೆ ನೀಡಲು ಜೋಶಿ ಸಹಾಯ ಮಾಡಿದ್ದರು ಎಂದು ಇ.ಡಿ. ವಾದಿಸಿತ್ತು. ಆದರೆ ಈ ರೀತಿಯ ವರ್ಗಾವಣೆ ನಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ ಕೋರ್ಟ್‌ ಇಬ್ಬರಿಗೂ ಜಾಮೀನು ಮಂಜೂರು ಮಾಡಿತು.

ಕೇಸು ನಕಲಿ ಎಂದು ಸಾಬೀತು: ಆಪ್‌ ಕಿಡಿ
ಕೋರ್ಟ್‌ ಜಾಮೀನು ನೀಡಿದ ಬಳಿಕ ಬಿಜೆಪಿ ವಿರುದ್ಧ ಕಿಡಿಕಾರಿರುವ ಆಮ್‌ಆದ್ಮಿ ಪಕ್ಷ ಈ ಪ್ರಕರಣ ಬೋಗಸ್‌ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡಿದ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ. ‘ದೆಹಲಿ ಅಬಕಾರಿ ಹಗರಣದಲ್ಲಿ ಯಾವುದೇ ಕಿಕ್‌ಬ್ಯಾಕ್‌ ಪಡೆಯಲಾಗಿಲ್ಲ ಎಂದು ಈಗ ಕೋರ್ಟ್‌ ಹೇಳಿದೆ. ಇದನ್ನೇ ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಇದು ಕೇವಲ ಒಂದು ಬೋಗಸ್‌ ಪ್ರಕರಣ. ಆಪ್‌ನ ಹೆಸರು ಕೆಡಿಸಲು ಈ ಪ್ರಕರಣ ಹೇರಲಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯನೀತಿ ಹಗರಣ: ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಭಾರಿ ಪ್ರತಿಭಟನೆ

click me!