
ವರದಿ: ಡೆಲ್ಲಿ ಮಂಜು, ಕನ್ನಡಪ್ರಭ ವಾರ್ತೆ
ಶ್ರೀನಗರ/ಉರಿ ಕಳೆದ ಎರಡು ಮೂರು ವಾರಗಳಿಂದ ಸದಾ ಆತಂಕ, ನೋವು, ದುಗುಡಗಳಿಂದ ಕಾಲ ಕಳೆದಿದ್ದ ಶ್ರೀನಗರದ ನಿವಾಸಿಗಳು ಈಗ ನಿಟ್ಟುಸಿರು ಬಿಡುತ್ತಿದ್ದಾರೆ. ಭಾನುವಾರ ರಾತ್ರಿವರೆಗೂ ಇಡೀ ಕಾಶ್ಮೀರ ಕಣಿವೆಯಲ್ಲಿ ಎಲ್ಲಿಯೂ ಒಂದೇ ಒಂದು ಶೆಲ್ ಸದ್ದು ಕೇಳಿ ಬಂದಿಲ್ಲ. ಎಲ್ಲೆಡೆ ಶಾಂತತೆ ಕಂಡು ಬಂತು. ಶ್ರೀನಗರ, ಉರಿ, ಬಾರಾಮುಲ್ಲಾಗಳಲ್ಲಿ ಸಹಜ ಸ್ಥಿತಿ ಮರಳುತ್ತಿದೆ.
ಕಳೆದ 2-3 ವಾರಗಳಿಂದ ಸದಾ ಆತಂಕ, ನಿರಾಸೆ, ಆಕ್ರೋಶದ ವಾತಾವರಣ ಕಂಡಿದ್ದ ಶ್ರೀನಗರದ ಲಾಲ್ ಚೌಕ್‌ನ ಟವರ್‌ಕ್ಲಾಕ್ ಮುಂದೆ ಭಾನುವಾರ ಪಾರಿವಾಳಗಳು ಸ್ವಚ್ಚಂದವಾಗಿ ಹಾರಾಡುತ್ತಿದ್ದವು. ಪಹಲ್ಗಾಂನಲ್ಲಿ ಉಗ್ರರ ದಾಳಿ ನಡೆದಾಗಿನಿಂದ ಇಲ್ಲಿ ಯಾವಾಗಲೂ ಪ್ರತಿಭಟನೆ, ಪಾಕಿಸ್ತಾನ್ ವಿರುದ್ಧದ ಧಿಕ್ಕಾರದ ಘೋಷಣೆಗಳೇ ಕೇಳಿ ಬರುತ್ತಿದ್ದವು.
ಭಾನುವಾರದ ಮಾರ್ಕೆಟ್ ಓಪನ್: ಕದನ ವಿರಾಮ ಘೋಷಣೆಯ ನಂತರವೂ ಉಲ್ಲಂಘನೆ, ಪಾಕಿಸ್ತಾನದ ಕಪಟತನ ಆಟ ನೋಡಿ ಶ್ರೀನಗರದ ಜನ ಶನಿವಾರ ದಿಕ್ಕೇ ತೋಚದಂತೆ ಕಂಗೆಟ್ಟು ಕೂತಿದ್ದರು. ತಡರಾತ್ರಿಯ ಸಂಧಾನದಿಂದಾಗಿ ಶೆಲ್ ದಾಳಿಗೆ ವಿರಾಮ ಸಿಕ್ಕಿದ್ದು, ಶ್ರೀನಗರದ ಜನತೆಯಲ್ಲಿ ಸಮಾಧಾನತಂದಿತ್ತು. ಇನ್ನು, ಲಾಲ್ ಚೌಕ್ ಬಳಿಯ ಶ್ರೀಸಾಮಾನ್ಯರ ಮಾರುಕಟ್ಟೆ 'ಸಂಡೇ ಮಾರ್ಕೆಟ್' ಓಪನ್ ಆಗಿತ್ತು. ಪೋಲೋ ವ್ಯೂ ರೆಸಿಡೆಂಟ್ ಮಾರ್ಕೆ ಟ್‌ನಿಂದ ಹಿಡಿದು ಲಾಲ್ ಚೌಕ್‌ನ ಟವರ್ ಕ್ಲಾಕ್ ತನಕ ಸಂಡೇ ಬಜಾರ್ ಚಾಚಿಕೊಂಡಿತ್ತು. ಬೆಳಗ್ಗೆಯಿಂದಲೇ ವ್ಯಾಪಾರ ಜೋರಾಗಿತ್ತು. ಈ ಮಧ್ಯೆ. ನಗರ ಸಹಜ ಸ್ಥಿತಿಗೆ ಬಂದಿದ್ದರೂ, ಜನಸಾಮಾನ್ಯರು ಶಾಂತಚಿತ್ತತೆಯಿಂದ ಓಡಾಡುತ್ತಿದ್ದರೂ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಭದ್ರತೆ ಮಾತ್ರ ಎಲ್ಲೂ ಕಡಿಮೆ ಆಗಿಲ್ಲ.
ಉರಿ, ಬಾರಾಮುಲ್ಲಾಗಳಲ್ಲೂ ಸಹಜ ಸ್ಥಿತಿ: ಇನ್ನು, ಶೆಲ್ ದಾಳಿಗೆ ಹೆಚ್ಚು ತುತ್ತಾಗುತ್ತಿದ್ದ ಉರಿ, ಬಾರಾಮುಲ್ಲಾಗಳಲ್ಲೂ ಕೂಡ ಸಹಜ ಸ್ಥಿತಿಗೆ ಮರಳುತ್ತಿದೆ. ಪಾಕಿಸ್ತಾನದ ಶೆಲ್ ದಾಳಿಯಿಂದ ಮನೆ ಕಳೆದುಕೊಂಡವರು, ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಸಂಬಂಧಿಕರ ಮನೆ ಸೇರಿದ್ದ ನಿವಾಸಿಗಳು ನಿಧಾನವಾಗಿ ತಮ್ಮ ಮನೆಗಳಿಗೆ ತೆರಳಲು ಆರಂಭಿಸಿದ್ದಾರೆ. ಬಾಂಡಿ, ಉರಿ, ಲಗಾಮ್, ಜಿಂಗಲ್ ಹಳ್ಳಿಗಳಲ್ಲಿನ ನಿವಾಸಿಗಳು ತಮ್ಮ ತಮ್ಮ ಮನೆಗಳ ಕಡೆ ಧಾವಿಸುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಈ ಬಗ್ಗೆ ಧಾವಂತ ಪಡುತ್ತಿಲ್ಲ. ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸರು ತಾವಾಗಿಯೇ, ಸ್ವ-ಇಚ್ಛೆಯಿಂದ ತಮ್ಮ ಗ್ರಾಮಕ್ಕೆ ಹೋಗುತ್ತೇವೆ ಎಂದವರನ್ನು ಮಾತ್ರ ಕಳುಹಿಸಿಕೊಡುತ್ತಿದ್ದರು. ಅವರ ಆಧಾರ್ ಕಾಡ್9 ಪರಿಶೀಲಿಸಿದ ನಂತರವೇ ಮನೆಗೆ ತೆರಳಲು ಅನುಮತಿ ನೀಡುತ್ತಿದ್ದರು.
ನಿರಾಶ್ರಿತರ ಕೇಂದ್ರ ಓಪನ್: ಬಾರಾಮುಲ್ಲಾ ಜಿಲ್ಲಾಡಳಿತ ಮನೆ ಕಳೆದುಕೊಂಡವರಿಗೆ ಆಶ್ರಯ ಕೇಂದ್ರ ತೆರೆದಿದೆ. ಬೋನಿಯಾರ್‌ನಲ್ಲಿ ನಿರಾಶ್ರಿತರ ಕೇಂದ್ರ ತೆರೆದು, 250ಕ್ಕೂ ಹೆಚ್ಚು ಮಂದಿಗೆ ಆಶ್ರಯ ಕಲ್ಪಿಸಿದೆ. ಇಲ್ಲಿ ಮನೆಗಳನ್ನು ಕಳೆದುಕೊಂಡ 35 ಕುಟುಂಬಗಳು ಆಶ್ರಯ ಪಡೆದಿವೆ. ಅವರಿಗೆ ಆಹಾರ, ಬಟ್ಟೆ, ಮಲಗಲು ವ್ಯವಸ್ಥೆ ಸೇರಿದಂತೆ ಎಲ್ಲಾ ಅನುಕೂಲ ಗಳನ್ನು ಈ ಕೇಂದ್ರದಲ್ಲಿ ಮಾಡಲಾಗಿದೆ.
ಪರಿಹಾರ ಬೇಕಿದೆ
ಇದು 75 ವರ್ಷಗಳಿಂದ ಇರುವ ವ್ಯಾಜ್ಯ. ಹಲವು ತಲೆಮಾರುಗಳೇ ಕಳೆದು ಹೋಗಿವೆ. ಹೀಗಾಗಿ, ಮುಂದಿನ ತಲೆಮಾರಿಗೆ ಇದೇ ವ್ಯಾಜ್ಯ ಮುಂದುವರಿಯಬಾರದು. ಇನ್ನು ಸಾಕು, ಭಯೋತ್ಪಾದನೆಗೆ ವಿರಾಮ ಹಾಕಬೇಕು, ಈಗ ಭಾರತಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದಿದೆ. ಈಗಲಾದ್ರೂ ಕಟ್ಟುನಿಟ್ಟಾಗಿ ನಡೆದುಕೊಳ್ಳಬೇಕು ಎಂದು ಶ್ರೀನಗರ ನಿವಾಸಿ ಪರ್ವೇಜ್ ಎಂಬುವರು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ