ಲೆಟರ್ ‌ಬಾಂಬ್‌ ಹಾಕಿದ ಕೈ ನಾಯಕರಿಗೆ ಬಿಗ್ ಶಾಕ್!

By Suvarna NewsFirst Published Sep 7, 2020, 2:14 PM IST
Highlights
ಲೆಟರ್‌ಬಾಂಬ್‌ ಹಾಕಿದ ಕೈ ನಾಯಕರಿಗೆ ಯುಪಿ ಕಾಂಗ್ರೆಸ್‌ ಸಮಿತಿಯಲ್ಲಿಲ್ಲ ಸ್ಥಾನ| ಪಕ್ಷ ಇತಿಹಾಸ ಪುಟ ಸೇರುವ ಮುನ್ನ ರಕ್ಷಿಸಿ| ಸೋನಿಯಾಗೆ ಉ.ಪ್ರ. ನಾಯಕರ ಪತ್ರ

ನವದೆಹಲಿ(ಸೆ.07): ನಾಯಕತ್ವದ ವಿರುದ್ಧ 23 ನಾಯಕರು ಬರೆದ ಪತ್ರ ಸಂಚಲನಕ್ಕೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಮತ್ತೊಂದು ‘ಲೆಟರ್‌ ಬಾಂಬ್‌’ ಸ್ಪೋಟಗೊಂಡಿದೆ. ಇತಿಹಾಸದ ಪುಟ ಸೇರುವ ಮುನ್ನ ಪಕ್ಷವನ್ನು ಉಳಿಸುವಂತೆ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಉತ್ತರಪ್ರದೇಶದ 9 ಉಚ್ಚಾಟಿತ ನಾಯಕರು ಪತ್ರ ಬರೆದಿದ್ದಾರೆ. ಉತ್ತರಪ್ರದೇಶದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಕಾರ್ಯವೈಖರಿ ಬಗ್ಗೆ ಈ ಪತ್ರದಲ್ಲಿ ಅವರ ಹೆಸರೆತ್ತದೆ ದೂರಲಾಗಿದೆ. ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಸಂಪ್ರದಾಯವನ್ನು ಪುನಾಸ್ಥಾಪಿಸಿ, ಕುಟುಂಬ ಮೀರಿ ನಿರ್ಧಾರ ಕೈಗೊಳ್ಳಿ ಎಂದು ನಾಲ್ಕು ಪುಟಗಳ ಪತ್ರದಲ್ಲಿ ಸೋನಿಯಾಗೆ ಮನವಿ ಮಾಡಲಾಗಿದೆ.

ವಿಶೇಷವೆಂದರೆ ಇಂಥದ್ದೊಂದು ಪತ್ರದ ಕುರಿತು ಭಾನುವಾರ ಹೊರಬಿದ್ದ ಬೆನ್ನಲ್ಲೇ, ಉತ್ತರಪ್ರದೇಶದ ಪಕ್ಷದ ಹಲವು ಸಮಿತಿಗಳನ್ನು ಪುನಾರಚಿಸಿ ಎಐಸಿಸಿ ಭಾನುವಾರ ಆದೇಶ ಹೊರಡಿಸಿದೆ. ಈ ಯಾವುದೇ ಪಟ್ಟಿಯಲ್ಲಿ, ಸೋನಿಯಾಗೆ ಈ ಹಿಂದೆ ಪತ್ರ ಬರೆದ 23 ನಾಯಕರಲ್ಲಿ ಸೇರಿದ್ದ ಹಿರಿಯರಾದ ಜಿತಿನ್‌ಪ್ರಸಾದ್‌, ರಾಜ್‌ಬ್ಬರ್‌ಗೆ ಸ್ಥಾನ ನೀಡಿಲ್ಲ. ಆದರೆ ಪತ್ರ ಟೀಕಿಸಿದ್ದ ನಿರ್ಮಲ್‌ ಖತ್ರಿ, ನಸೀಬ್‌ ಪಠಾಣ್‌ ಮೊದಲಾದವರಿಗೆ ಸ್ಥಾನ ಕಲ್ಪಿಸಲಾಗಿದೆ.

ಹೊಸ ಪತ್ರ:

ಸಂಬಳದ ಆಧಾರದಲ್ಲಿ ಕೆಲಸ ಮಾಡುವವರು ಹಾಗೂ ಪ್ರಾಥಮಿಕ ಸದಸ್ಯರೇ ಅಲ್ಲದವರು ಉತ್ತರಪ್ರದೇಶ ಘಟಕದಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಈ ನಾಯಕರಿಗೆ ಪಕ್ಷದ ಸಿದ್ಧಾಂತದ ಅರಿವೇ ಇಲ್ಲ. ಆದಾಗ್ಯೂ ಅಂಥವರಿಗೆ ಉತ್ತರಪ್ರದೇಶದಲ್ಲಿ ಮಾರ್ಗದರ್ಶಕರ ಜವಾಬ್ದಾರಿ ನೀಡಲಾಗಿದೆ. 1977-80ನೇ ಇಸ್ವಿಯಲ್ಲಿ ಪಕ್ಷಕ್ಕೆ ಬಿಕ್ಕಟ್ಟು ಎದುರಾದಾಗ ಬಂಡೆಯಂತೆ ಜತೆಯಲ್ಲಿ ನಿಂತ ನಾಯಕರ ಸಾಮರ್ಥ್ಯವನ್ನು ಈ ಹೊಸ ನಾಯಕರು ಅಳೆಯುತ್ತಿದ್ದಾರೆ. ಪ್ರಜಾಸತ್ತಾತ್ಮಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹಿರಿಯ ನಾಯಕರನ್ನು ಗುರಿಯಾಗಿಸಿ, ಅಪಮಾನ ಮಾಡಲಾಗುತ್ತಿದೆ. ಉಚ್ಚಾಟನೆ ಮಾಡಲಾಗುತ್ತಿದೆ. ನಾವು ಉಚ್ಚಾಟನೆಯಾಗಿರುವ ವಿಷಯ ನಮಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಪಕ್ಷದ ರಾಜ್ಯ ಘಟಕದಲ್ಲಿ ಯಾವ ರೀತಿಯ ಹೊಸ ಕಾರ್ಯನಿರ್ವಹಣೆ ಶೈಲಿ ಇದೆ ಎಂಬುದನ್ನು ಇದೇ ತೋರಿಸುತ್ತದೆ ಎಂದು ಅಸಮಾಧಾನ ತೋಡಿಕೊಳ್ಳಲಾಗಿದೆ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಂತ ಕೆಟ್ಟಘಟ್ಟದಲ್ಲಿದೆ. ಸದ್ಯದ ಪರಿಸ್ಥಿತಿ ಕುರಿತು ತಮಗೆ (ಸೋನಿಯಾ) ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ತಮ್ಮ ಭೇಟಿಗೆ ಸಮಯಾವಕಾಶ ಕೋರುತ್ತಿದ್ದೇವೆ. ಆದರೆ ಅದನ್ನು ನಿರಾಕರಿಸಿಕೊಂಡು ಬರಲಾಗಿದೆ. ನಮ್ಮ ಉಚ್ಚಾಟನೆ ಅಕ್ರಮ. ಇದರ ವಿರುದ್ಧ ಕೇಂದ್ರ ಶಿಸ್ತು ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಆರೋಪಿಸಲಾಗಿದೆ.

ಮಾಜಿ ಸಂಸದ ಸಂತೋಷ್‌ ಸಿಂಗ್‌, ಮಾಜಿ ಸಚಿವ ಸತ್ಯದೇವ ತ್ರಿಪಾಠಿ, ಮಾಜಿ ಶಾಸಕರಾದ ವಿನೋದ್‌ ಚೌಧರಿ, ಭೂದಾರ್‌ ನಾರಾಯಣ ಮಿಶ್ರಾ, ನೆಕ್‌ಚಂದ್‌ ಪಾಂಡೆ, ಸ್ವಯಂ ಪ್ರಕಾಶ್‌ ಗೋಸ್ವಾಮಿ, ಸಂಜೀವ್‌ ಸಿಂಗ್‌ ಅವರು ಪತ್ರಕ್ಕೆ ಸಹಿ ಮಾಡಿದ್ದಾರೆ.

click me!