
ಕೊಚ್ಚಿ (ಜ.9): ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಹಾಡುಗಳ ಮೂಲಕ ಹೃದಯಗಳನ್ನು ಸೂರೆಗೊಂಡಿದ್ದ ಹಿರಿಯ ಹಿನ್ನೆಲೆ ಗಾಯಕ ಮಲಯಾಳಂ ಮೂಲದ ಪಿ. ಜಯಚಂದ್ರನ್ (80) ಗುರುವಾರ ನಿಧನರಾದರು. ತಮ್ಮ ವರ್ಣರಂಜಿತ ವೃತ್ತಿಜೀವನದಲ್ಲಿ ಜಯಚಂದ್ರನ್ ಪ್ರೀತಿ, ಹಂಬಲ, ಭಕ್ತಿ ಪ್ರತಿಯೊಂದು ಭಾವನೆಯನ್ನು ತಮ್ಮ ಭಾವಪೂರ್ಣ ಗಾಯನದ ಮೂಲಕ ಸೆರೆಹಿಡಿದಿದ್ದರು.ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 16,000 ಕ್ಕೂ ಹೆಚ್ಚು ಹಾಡುಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದರು. ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧ ಧ್ವನಿಗಳಲ್ಲಿ ಒಂದಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಅತ್ಯುತ್ತಮ ಹಿನ್ನೆಲೆ ಗಾಯಕನಿಗೆ ನೀಡಲಾಗು ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ, ಮತ್ತು ಕೇರಳ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಮತ್ತು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಜೊತೆಗೆ ನಾಲ್ಕು ತಮಿಳುನಾಡು ರಾಜ್ಯ ಪ್ರಶಸ್ತಿಗಳು ಸೇರಿವೆ. ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್ ಅವರನ್ನು ಅಗಲಿದ್ದಾರೆ. ಅವರ ಪುತ್ರ ದೀನನಾಥನ್ ಕೂಡ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರಾಗಿದ್ದಾರೆ.
1944ರ ಮಾರ್ಚ್ 3ರಂದು ಎರ್ನಾಕುಲಂನಲ್ಲಿ ಜನಿಸಿದ ಜಯಚಂದ್ರನ್, ತ್ರಿಪುಣಿತುರ ಕೋವಿಲಕಂನ ರವಿವರ್ಮ ಕೊಚಾನಿಯನ್ ತಂಬುರನ್ ಮತ್ತು ಚೆಂದಮಂಗಲಂನ ಪಲಿಯಮ್ ಅರಮನೆಯ ಸುಭದ್ರಕುಂಜಮ್ಮ ಅವರ ಮೂರನೇ ಪುತ್ರರಾಗಿದ್ದರು. ನಂತರ ಅವರ ಕುಟುಂಬವು ಇರಿಂಜಲಕುಡದಲ್ಲಿರುವ ಪಲಿಯಮ್ ಮನೆಗೆ ಸ್ಥಳಾಂತರಗೊಂಡಿತು. ಬಾಲ್ಯದಲ್ಲಿ, ಅವರು ಸಾಂಪ್ರದಾಯಿಕ ತಾಳವಾದ್ಯ ವಾದ್ಯಗಳಲ್ಲಿ ತೊಡಗಿಸಿಕೊಂಡರು, ಸ್ವಲ್ಪ ಸಮಯದವರೆಗೆ ಚೆಂಡೆ ಬಡಿಯುವುದನ್ನೂ ಅಧ್ಯಯನ ಮಾಡಿದರು ಮತ್ತು ನಂತರ ಮೃದಂಗ ವಾದವನ್ನೂ ಕಲಿತಿದ್ದರು.
ಕನ್ನಡದ ಪ್ರಸಿದ್ದ ಹಾಡುಗಳ ಗಾಯಕ: ಕನ್ನಡದಲ್ಲಿ ಪಿ.ಜಯಚಂದ್ರನ್ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬರೀಷ್ ಅಭಿನಯದ ಒಲವಿನ ಉಡುಗೊರೆ ಸಿನಿಮಾದ 'ಒಲವಿನ ಉಡುಗೊರೆ ಕೊಡಲೇನು..', ಅಮೃತ ಘಳಿಗೆ ಸಿನಿಮಾದ 'ಹಿಂದೂಸ್ತಾನವು ಎಂದೂ ಮರೆಯದ..', ರಂಗನಾಯಕಿ ಸಿನಿಮಾದ 'ಮಂದಾರ ಪುಷ್ಪವು ನೀನು..', ಮಾನಸ ಸರೋವರದ 'ಚಂದ..ಚಂದ..', ಹಂತಕನ ಸಂಚು ಸಿನಿಮಾದ 'ಜೀವನ ಸಂಜೀವನ..'. ಭಕ್ತ ಪ್ರಹ್ಲಾದ ಸಿನಿಮಾದ 'ಕಮಲ ನಯನ.. ಕಮಲ ವದನ..' ಪ್ರಾಯ ಪ್ರಾಯ ಪ್ರಾಯ ಸಿನಿಮಾದ 'ಭೂಮಿ ತಾಯಾಣೆ, ನೀ ಇಷ್ಟ ಕಣೆ..' ಹಾಗೂ ಮಸಣದ ಹೂವು ಚಿತ್ರದ 'ಕನ್ನಡ ನಾಡಿನ ಕರಾವಳಿ..' ಯಂಥ ಸುಪ್ರಸಿದ್ದ ಗೀತೆಗಳಿಗೆ ಅವರು ದನಿಯಾಗಿದ್ದರು.
ಪರಸಂಗದ ಗೆಂಡೆತಿಮ್ಮ ಸಿನಿಮಾದ 'ಮರಕಣಿ' ರೀಟಾ ಅಂಚನ್ ನಿಧನ
ಕನ್ನಡದಲ್ಲಿ ಇವರು ಮುನಿಯನ ಮಾದರಿ ಚಿತ್ರದಲ್ಲಿ 'ಕಾಲ್ಗೆಜ್ಜೆ ತಾಳಕೆ..', ಕಿಲಾಡಿಗಳು ಸಿನಿಮಾದ, 'ಕಾಲ ಮತ್ತೊಮ್ಮೆ ನಮಗಾಗಿ..', 'ಅಳುಕದೆ ಬಳುಕುತಾ..', ಸುವರ್ಣ ಸೇತುವೆ ಚಿತ್ರದ ಸಾವಿರ ಹೂಗಾಗಲಿ, ಧರಣಿ ಮಂಡಳ ಮಧ್ಯದೊಳೆಗೆ ಸಿನಿಮಾದ ಉಯ್ಯಾಲೆ ಆಡೋಣ ಬನ್ನಿರೋ, ಮಸಣದ ಹೂವು ಚಿತ್ರದ ಉಪ್ಪಿನ ಸಾಗರಕು, ಗಣೇಶನ ಮದುವೆ ಸಿನಿಮಾದ ಶ್ರೀದೇವಿ ಮಾದೇವಿ ಕಣ್ಣೋಟ ಬೇಡ, ಪ್ರೇಮದ ಶ್ರುತಿ ಮೀಟಿದೆ ಹಾಗೂ ರೈತನ ಮಕ್ಕಳು ಸಿನಿಮಾದ ಮನಸು ಕಳೆಯಿತು ಗೀತೆಯನ್ನೂ ಹಾಡಿ ಜನಪ್ರಿಯರಾಗಿದ್ದರು.
ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ಗೆ ನಟ ಕಿಶೋರ್ ಕುಮಾರ್ ರಾಯಭಾರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ