
ಕಲಬುರಗಿ(ಜ.19): ಲಂಬಾಣಿ ಸಮುದಾಯ ಸ್ವಾತಂತ್ರ್ಯ ಪೂರ್ವದಿಂದಲೂ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಇಂಥ ಸಮುದಾಯಗಳಿಗಾಗಿ ಮಂಡಳಿಯನ್ನು ನಮ್ಮ ಸರ್ಕಾರ ಆರಂಭಿಸಿದೆ. ಡಬಲ್ ಎಂಜಿನ್ ಸರ್ಕಾರ ಭಾರತದ ಎಲ್ಲ ಸಮುದಾಯಗಳನ್ನು ರಕ್ಷಿಸಿ ಅವರಿಗೆ ಸೌಲಭ್ಯಗಳನ್ನು ನೀಡಲಿದೆ. ಸಮುದಾಯಗಳ ಉಡುಗೆ, ತೊಡುಗೆ, ಪರಂಪರೆ ಸಂಸ್ಕೃತಿ ನಮ್ಮ ಶಕ್ತಿ ಎಂದು ನಾವು ಭಾವಿಸಿದ್ದೇವೆ. ಅವುಗಳನ್ನು ರಕ್ಷಿಸಿವುವುದು ನಮ್ಮ ಮೇಲಿರುವ ಅತೀ ದೊಡ್ಡ ಜವಾಬ್ದಾರಿಯಾಗಿದೆ. ಬಂಜಾರ, ಲಂಬಾಣಿ, ಬಾಜಿಗರ್ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ನೀವು ಸಂಸ್ಕೃತಿಯ ಹೆಮ್ಮೆ ಎಂದು ಮೋದಿ ಹೇಳಿದ್ದಾರೆ.
ಮಳಖೇಡದಲ್ಲಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವನ್ನು ಮೋದಿ ಲಂಬಾಣಿ, ಬಂಜಾರ ಸಮುದಾಯವನ್ನುದ್ದೇಶಿ ಮಾತನಾಡಿದರು. ನಗಾರ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಮೋದಿಗೆ ಗೋರ್ ಬಂಜಾರ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಇಷ್ಟೇ ಅಲ್ಲ, ಅನುಭವ ಮಂಟಪದ ವರ್ಣ ಚಿತ್ರ ಉಡುಗೊರೆಯಾಗಿ ನೀಡಲಾಯಿತು. ಬಳಿಕ ಮಾತನಾಡಿದ ಮೋದಿ, ಸರ್ಕಾರದ ಎಲ್ಲಾ ಸವಲತ್ತುಗಳನ್ನು ಸಮುದಾಯಕ್ಕೆ ತಲುಪಿಸುವ ಭರವಸೆ ನೀಡಿದರು.
Modi In Yadgiri: ವೋಟ್ ಬ್ಯಾಂಕ್ ರಾಜಕಾರಣ ನಮ್ಮದಲ್ಲ, ಅಭಿವೃದ್ಧಿ ಆಧಾರಿತ ರಾಜಕಾರಣ ಮಾಡಿದ್ದೇವೆ
ನಮ್ಮ ಬಂಜಾರ ಸಮುದಾಯ ದಶಕಗಳ ಕಾಲ ಹಲವು ಸಮಸ್ಯೆಗಳ ಕೂಪದಲ್ಲೇ ಜೀವನ ಸಾಗಿಸುತ್ತಿತ್ತು. ಇದೀಗ ಅವರ ಬದುಕು ಹಸನಾಗಿಸುವ ಕೆಲಸವಾಗಿದೆ. ಬಂಜಾರ ಸಮುದಾಯದ ತಾಯಿ ನನಗೆ ಆಶೀರ್ವಾದ ಮಾಡಿದರು. ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ನನಗೆ ಆ ತಾಯಿ ಆಶೀರ್ವಾದ ಸಮಾಜಕ್ಕಾಗಿ ಮತ್ತಷ್ಟು ಕೆಲಸಗಳನ್ನು ಮಾಡಲು ಪ್ರೇರಣೆಯಾಗಿದೆ.
1993 ಮೂರು ದಶಕಗಳ ಹಿಂದೆ ಸಮುದಾಯದ ಬೇಡಿಕೆ ಶಿಫಾರಸು ಮಾಡಲಾಗಿತ್ತು. ಆದರೆ ಅಂದಿನ ಸರ್ಕಾರಗಳು ಯಾವುದೇ ಪ್ರಯತ್ನಗಳು ನಡೆಯಲಿಲ್ಲ. ಇಷ್ಟು ವರ್ಷಗಳ ಕಾಲ ತಮ್ಮ ಬೇಡಿಕೆ ಈಡೇರಿಕೆಗೆ ಕಾಯಬೇಕಾಯಿತು. ಲಂಬಾಣಿ ಸಮುದಾಯಗಳು ಹಕ್ಕು ಪತ್ರ ಪಡೆಯಲು ಸಂಘರ್ಷ ಮಾಡಿದ್ದಾರೆ. ಆದರೆ ನಿಮ್ಮ ಚಿಂತೆ, ಸಮಸ್ಯೆಗಳಿಗೆ ಬಿಜಪಿ ಸರ್ಕಾರ ಉತ್ತರ ನೀಡಿದೆ.
ಕಲಬುರಗಿ ತಾಯಂದಿರಿಗೆ ಭರವಸೆ ನೀಡುತ್ತಿದ್ದೇನೆ. ಮೂಲಭೂತ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಪಿಎಂ ಅವಾಸ್ ಯೋಜನೆ, ಮನೆಯಲ್ಲಿ ಶೌಚಾಲಯ, ನಳ್ಳಿ ನೀರು, ಗ್ಯಾಸ್ ಸಂಪರ್ಕ ಎಲ್ಲವೂ ನಿಮಗೆ ಸಿಗಲಿದೆ. ಡಬಲ್ ಎಂಜಿನ್ ಸರ್ಕಾರದ ಎಲ್ಲಾ ಲಾಭಗಳು ನಿಮಗೆ ಸಿಗಲಿದೆ. ಈ ಹಿಂದಿನ ಸರ್ಕಾರಗಳು ಸುದೀರ್ಘ ಕಾಲಗಳ ಕಾಲ ಆಡಳಿತ ನಡೆಸಿತ್ತು. ನಿಮ್ಮಿಂದ ಮತ ಪಡೆದಿತ್ತು. ಆದರೆ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ. ಆದರೆ ಈಗ ಸಮುದಾಯಕ್ಕೆ ತಮ್ಮ ಎಲ್ಲಾ ಹಕ್ಕುಗಳು ಸಿಗುತ್ತಿದೆ ಎಂದು ಮೋದಿ ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಮೋದಿ ಹವಾ: ಸಂಸ್ಕೃತಿ, ಪರಂಪರೆಯೊಂದಿಗೆ ಸಂಯೋಜನೆಗೊಂಡ ಕಾರ್ಯಕ್ರಮದ ನೋಟ ಹೀಗಿದೆ.
ಕರ್ನಾಟಕ ಸರ್ಕಾರದ ಮೂಲಕ ಎಲ್ಲಾ ಲಾಭಗಳು ನಿಮಗೆ ಸಿಗಲಿದೆ. ಸಮಾಜದ ವಂಚಿತ ವರ್ಗಗಳಿಗೆ ಇದೀಗ ಮೊಟ್ಟ ಮೊದಲ ಹಕ್ಕು ಸಿಗುತ್ತಿದೆ, ಸಶಕ್ತೀಕರಣಕ್ಕೆ ನಮ್ಮ ಸರ್ಕಾರದ ಬಳಿ ಸ್ಪಷ್ಟ ಮಾರ್ಗಸೂಚಿ ಇದೆ. ಆಯುಷ್ಮಾನ ಭಾರತ್ ಯೋಜನೆ ಮೂಲಕ 5 ಲಕ್ಷ ರೂಪಾಯಿ ಸೌಲಭ್ಯ ನೀಡಿದ್ದೇವೆ. ದಲಿತರು, ಆದಿವಾಸಿ ಸೇರಿದಂತೆ ಎಲ್ಲಾ ಸಮುದಾಯಕ್ಕೆ ಆಯುಷ್ಮಾನ್ ಲಾಭ ಸಿಗುತ್ತದೆ. ಶೋಷಿತ ಸಮುದಾಯಕ್ಕೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಸಿಗುತ್ತಿದೆ. ಇದೀಗ ಆರ್ಥಿಕವಾಗಿ ಹಿಂದುಳಿದವರಿಗೆ ಪಡಿತರ ಸಿಗುತ್ತಿದೆ.
ಅವಶ್ಯಕತೆ, ಆಕಾಂಕ್ಷೆ, ಮತ್ತು ಗೌರವ ಎಲ್ಲಾ ಕಡೆ ನಮ್ಮ ಗಮನವಿದೆ. ಗುಡಿಸಲುಗಳಲ್ಲಿ ಬದುಕುವ ಕಷ್ಟ ಇನ್ನು ಇತಿಹಾಸ, ನಿಮಗೆ ಎಲ್ಲಾ ಸೌಲಭ್ಯಗಳು ಸಿಗಲಿದೆ. ಬ್ಯಾಂಕ್ ಖಾತೆ ತೆರೆಯುವುದು ಅಸಾಧ್ಯದ ಮಾತಾಗಿತ್ತು. ಈ ಸಮುದಾಯಕ್ಕೆ ಬ್ಯಾಂಕ್ ಹತ್ತುವ ಅವಕಾಶವೇ ಇರಲಿಲ್ಲ. ಇನ್ನು ಸಾಲ ಕೇಳಿದರೆ ಗ್ಯಾರೆಂಟಿ ಕೇಳುತ್ತಿತ್ತು. ಇದೀಗ ಅದೇ ಬ್ಯಾಂಕ್ ಖಾತೆ ಮೂಲಕ ನಿಮಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿದೆ. ಮುದ್ರಾ ಯೋಜನೆ ಮೂಲಕ ಹಲವರು ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ಲಾಭ ಪಡೆದುಕೊಂಡಿದ್ದಾರೆ. ಮುದ್ರಾ ಯೋಜನೆಯಡಿ ಗ್ಯಾರಂಟಿ ಇಲ್ಲದೇ ಸಾಲ ಕೊಡುವ ಯೋಜನೆ ಶುರು ಮಾಡಿದೆವು. ಈ ಯೋಜನೆಯ ಶೇ. 70ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ.
ಬೀದಿ ಬದಿಯ ವ್ಯಾಪಾರಿಗಳನ್ನು ಹಿಂದಿನ ಸರ್ಕಾರ ನಿರ್ಲಕ್ಷಿಸಿತ್ತು. ಇದೀಗ ಬೀದಿ ಬದಿ ವ್ಯಾಪಾರಿಗಳಿಗಾಗಿ ವಿಶೇಷ ಯೋಜನೆ ಜಾರಿಗೆ ತಂದಿದ್ದೇವೆ. ಮೊದಲ ಸಲ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತಿದೆ. ನಾವು ಹೊಸ ಅವಕಾಶಗಳನ್ನು ಹುಟ್ಟಿಸಲು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೇವೆ. ಹೊಸ, ಹೊಸ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೊಸ ಅವಕಾಶ ಸೃಷ್ಟಿಸುತ್ತಿದ್ದೇವೆ. ಆದಿವಾಸಿಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ