ಆರ್‌ಜೆಡಿ ಸುಪ್ರೀಮೋ ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಿಂಗಾಪುರದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಮಗಳು ರೋಹಿಣಿ ತಂದೆಗೆ ಕಿಡ್ನಿ ದಾನ ಮಾಡಿದ್ದಾರೆ.
ಸಿಂಗಾಪುರ (ಡಿ.5): ರಾಷ್ಟ್ರೀಯ ಜನತಾ ದಳ ಪಕ್ಷದ ಸುಪ್ರೀಮೋ ಲಾಲೂ ಪ್ರಸಾದ್ ಯಾದವ್ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಸೋಮವಾರ ಸಿಂಗಾಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಮಗಳು ರೋಹಿಣಿ ಯಾದವ್ ಲಾಲೂ ಪ್ರಸಾದ್ ಅವರಿಗೆ ಒಂದು ಕಿಡ್ನಿಯನ್ನು ದಾನ ಮಾಡಿದ್ದರು. ಅಂದಾಜು ಒಂದು ಗಂಟೆಗಳ ಕಾಲ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿದೆ. ಮೊದಲಿಗೆ ರೋಹಿಣಿ ಅವರ ಶಸ್ತ್ರಚಿಕಿತ್ಸೆ ನಡೆದರೆ, ಬಳಿಕ, ಲಾಲೂ ಪ್ರಸಾದ್ ಯಾದವ್ ಅವರ ಶಸ್ತ್ರ ಚಿಕಿತ್ಸೆ ನೆರವೇರಿತು. ಪ್ರಸ್ತುತ ಇಬ್ಬರನ್ನೂ ಕೂಡ ಐಸಿಯುನಲ್ಲಿ ಇರಲಿಸಲಾಗಿದೆ. ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಮಗ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಕುರಿತಾದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಲಾಲೂಪ್ರಸಾದ್ ಯಾದವ್ ಅವರಿಗೆ ಪ್ರಜ್ಞೆ ಬಂದಿದ್ದು, ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳಿಗೆ ನಾನು ಥ್ಯಾಂಕ್ಸ್ ಹೇಳುತ್ತಿದ್ದೇನೆ ಎಂದು ಬರೆದಿದ್ದಾರೆ. ಇನ್ನು ಮಿಸಾ ಭಾರತಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಆಪರೇಷನ್‌ಗೂ ಮುನ್ನ ರೋಹಿಣಿ, ಲಾಲು ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದರು.ರಾಕ್ ಅಂಡ್ ರೋಲ್ ಮಾಡಲು ಸಿದ್ಧವಾಗಿ, ನನಗೆ ಇಷ್ಟು ಸಾಕು, ನಿಮ್ಮ ಯೋಗಕ್ಷೇಮವೇ ನನ್ನ ಜೀವನ ಎಂದು ಅವರು ಬರೆದಿದ್ದಾರೆ.
ಆರ್‌ಜೆಡಿ ಮುಖ್ಯಸ್ಥರ ಮೂತ್ರಪಿಂಡ ಕಸಿ ಪ್ರಕ್ರಿಯೆಯು ಡಿಸೆಂಬರ್ 3 ರಿಂದ ಪ್ರಾರಂಭವಾಗಿತ್ತು. ರೋಹಿಣಿ ಮತ್ತು ಲಾಲು ಇಬ್ಬರ ರಕ್ತದ ಗುಂಪು ಎಬಿ ಪಾಸಿಟಿವ್ ಆಗಿದೆ. ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಲಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಲಾಲೂ ಪ್ರಸಾದ್ ಯಾದವ್‌ಗೆ ಇನ್ನು ಮೂರು ಕಿಡ್ನಿ: ಪಾಟ್ನಾದ ರೂಬನ್ ಆಸ್ಪತ್ರೆಯ ನೆಫ್ರಾಲಜಿಸ್ಟ್ ಡಾ.ಪಂಕಜ್ ಹನ್ಸ್ ಈ ಕುರಿತಾಗಿ ಮಾತನಾಡಿದ್ದಾರೆ. ಲಾಲು ಸ್ವಚ್ಛತೆಯ ಬಗ್ಗೆಈಗ ಹೆಚ್ಚು ಕಾಳಜಿ ವಹಿಸಬೇಕು. ಜನಸಂದಣಿಯಿಂದ ದೂರ ಇರಬೇಕಾಗುತ್ತದೆ. ಆಹಾರವನ್ನು ಸ್ವಚ್ಛವಾಗಿ ಸೇವಿಸಬೇಕು. ಕ್ರಮೇಣ, ರೋಗಿಯ ಹಿಮೋಗ್ಲೋಬಿನ್ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಅದು ಕೂಡ ತುಂಬಾ ಹೆಚ್ಚಾಗದಂತೆ ಮೇಲ್ವಿಚಾರಣೆ ಮಾಡಬೇಕು. ಇಮ್ಯುನೊಸಪ್ರೆಸಿವ್ ಔಷಧಿಗಳ ಅಡ್ಡ ಪರಿಣಾಮವೆಂದರೆ ರಕ್ತದೊತ್ತಡ ಬಹಳವಾಗಿ ಹೆಚ್ಚಾಗುತ್ತದೆ ಎಂದಿದ್ದಾರೆ.
ಲಾಲೂ ಪ್ರಸಾದ್ ಯಾದವ್‌ಗೆ ಕಿಡ್ನಿದಾನ: ಅದೊಂದು ಮಾಂಸದ ತುಣುಕಷ್ಟೇ ಎಂದ ಪುತ್ರಿ ರೋಹಿಣಿ
ಲಾಲೂ ಪ್ರಸಾದ್ ಅವರ ದೇಹದಿಂದ ಕೆಟ್ಟು ಹೋದ ಕಿಡ್ನಿಯನ್ನು ಹೊರತೆಗೆಯುವುದಿಲ್ಲ. ಕಸಿ ಮಾಡಿರುವ ಕಿಡ್ನಿಯೂ ಸೇರಿದಂತೆ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೂರು ಕಿಡ್ನಿಗಳು ಇರುತ್ತದೆ. ರಕ್ತದೊತ್ತಡ, ಬಿಪಿ ಮತ್ತು ರೋಗನಿರೋಧಕ ಔಷಧಗಳನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ. ಹೊಸ ಮೂತ್ರಪಿಂಡದ ಆರೋಗ್ಯವಾಗಿರುವುದು ಇದನ್ನು ಅವಲಂಬಿಸಿರುತ್ತದೆ. ಇದು ಟ್ರೈಕ್ರೊಲಿಮಸ್ ಅಥವಾ ಸೈಕ್ಲೋಸ್ಪೊರಿನ್ ಔಷಧವನ್ನು ಹೊಂದಿರುತ್ತದೆ. ಅದರ ಮಟ್ಟವನ್ನು ಸರಿಯಾದ ವ್ಯಾಪ್ತಿಯಲ್ಲಿ ಇಟ್ಟುಕೊಳ್ಳುವುದು ಅವಶ್ಯಕ ಎಂದು ಹೇಳಿದ್ದಾರೆ.
ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ಗೆ ಮಗಳಿಂದ ಕಿಡ್ನಿ ದಾನ..!
ಲಾಲು ಪ್ರಸಾದ್ ಮತ್ತು ರೋಹಿಣಿ ಆಚಾರ್ಯ ಅವರು ಯಾವುದೇ ಕುಟುಂಬದ ಸದಸ್ಯರನ್ನು ಸದ್ಯಕ್ಕೆ ಭೇಟಿ ಮಾಡುವಂತಿಲ್ಲ. ಆಪರೇಷನ್ ನಡೆದ 48 ಗಂಟೆಗಳ ನಂತರ ಕುಟುಂಬದ ಸದಸ್ಯರು ಇಬ್ಬರನ್ನು ನೋಡಬಹುದಾಗಿದೆ.