ರಾಮ ಮಂದಿರ ನಿರ್ಮಾಣ ಮಾಡಿ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಬೇಕು ಎಂದು ವಿಧಿಯೇ ನಿರ್ಧಾರ ಮಾಡಿದೆ. ಅವರು ಇಡೀ ಭಾರತವನ್ನು ಪ್ರತಿನಿಧಿಸುತ್ತಾರೆ ಎಂದು ಬಿಜೆಪಿಯ ಹಿರಿಯ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ.
ನವದೆಹಲಿ (ಜ.12): ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿಯವರು ಮಹತ್ವದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಜೀವಮಾನದ ಕನಸೊಂದು ಈಗ ಈಡೇರಿದಂತಾಗಿದೆ ಎಂದು ಹೇಳಿರುವ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠ ಕಾರ್ಯಕ್ರಮವನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಅದರೊಂದಿಗೆ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡುವ ಪಕ್ಷದ ಸಂಕಲ್ಪವನ್ನು ನೆರವೇರಿಸಿ, ಈ ಅಮೂಲ್ಯ ಕ್ಷಣವನ್ನು ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಸಾರೆ ಅಭಿನಂದಿಸಿದ್ದಾರೆ. ಹಿಂದಿ ಸಾಹಿತ್ಯ ಮಾಸ ಪತ್ರಿಕೆ ರಾಷ್ಟ್ರಧರ್ಮ ತನ್ನ ಜನವರಿ 15 ರಂದು ಬರಲಿರುವ ಸಂಚಿಕೆಯಲ್ಲಿ ಲಾಲ್ ಕೃಷ್ಣ ಆಡ್ವಾಣಿ ಅವರನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಾತನಾಡಿಸಿದೆ. ಈ ವೇಳೆ ಅವರು ತಮ್ಮ ಐತಿಹಾಸಿಕ ರಥ ಯಾತ್ರೆಯ ಬಗ್ಗೆಯೂ ಮಾತನಾಡಿದ್ದಾರೆ. 'ಶ್ರೀ ರಾಮ ಮಂದಿರ: ಫುಲ್‌ಫಿಲ್‌ಮೆಂಟ್ ಆಫ್ ಡಿವೈನ್ ಡ್ರೀಮ್' ಎನ್ನುವ ಶೀರ್ಷಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಮ್ಯಾಗಝೀನ್‌ಅನ್ನು ನೀಡಲಾಗುತ್ತಿದೆ.
ಪ್ರಕಟವಾಗಿರುವ ಲೇಖನದ ಪ್ರಕಾರ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವೇ ನಿರ್ಮಾಣ ಆಗಬೇಕು ಎಂದು ವಿಧಿಯೇ ನಿರ್ಧಾರ ಮಾಡಿತ್ತು ಎಂದು ಆಡ್ವಾಣಿ ಹೇಳಿದ್ದಾರೆ. 'ರಥಯಾತ್ರೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ನಾನು ಕೇವಲ ಇದಕ್ಕೆ ಸಾರಥಿ ಎಂದು ಅರಿತುಕೊಂಡಿದ್ದೆ. ಆ ರಥವೇ ರಥಯಾತ್ರೆಯ ಮುಖ್ಯ ಸಂದೇಶವಾಹಕವಾಗಿತ್ತು. ದೇವಾಲಯ ನಿರ್ಮಿಸುವ ಪವಿತ್ರ ಉದ್ದೇಶವನ್ನು ಪೂರೈಸಿದ ಕಾರಣ ಅದು ಪೂಜನೀಯವೂ ಆಗಿತ್ತು.ಯಾಕೆಂದರೆ, ಆ ರಥ ರಾಮ ಜನ್ಮಭೂಮಿಗೆ ಹೊರಟಿತ್ತು ಎಂದು ಹೇಳಿದ್ದಾರೆ.
ವಾಜಪೇಯಿ ಇರಬೇಕಿತ್ತು ಎಂದ ಆಡ್ವಾಣಿ: ರಾಮ ಮಂದಿರ ಸಾಕಾರವಾಗುತ್ತಿದೆ. ಇಂಥದ್ದೊಂದು ಕ್ಷಣವನ್ನು ನೋಡಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇರಬೇಕಿತ್ತು. ತಮಗೆ ಅವರ ಅನುಪಸ್ಥಿತಿ ಕಾಡುತ್ತಿದೆ ಎಂದೂ ಅಡ್ವಾಣಿ ಹೇಳಿದ್ದಾರೆ.
ನರೇಂದ್ರ ಮೋದಿಯನ್ನು ಶ್ರೀರಾಮನೇ ಆಯ್ಕೆ ಮಾಡಿದ್ದಾನೆ: ಹಿಂದಿನ ದಿನಗಳನ್ನು ನೆನೆಸಿಕೊಂಡ ಬಿಜೆಪಿ ಹಿರಿಯ ನಾಯಕ, ಇಂದು ಐತಿಹಾಸಿಕ ರಥಯಾತ್ರೆಗೆ 33 ವರ್ಷವಾಗಿದೆ. 1990ರ ಸೆಪ್ಟೆಂಬರ್ 25ರ ಬೆಳಗ್ಗೆ ರಥಯಾತ್ರೆ ಆರಂಭವಾಗಿತ್ತು. ನಿಜವಾಗಿಯೂ ಹೇಳುತ್ತೇನೆ, ಈ ಯಾತ್ರೆಯನ್ನು ಆರಂಭ ಮಾಡಿದ ದಿನ, ಭಗವಾನ್ ರಾಮನ ಮೇಲಿನ ನಂಬಿಕೆ ದೇಶದಲ್ಲಿ ಚಳವಳಿ ರೂಪವನ್ನು ತೆಗೆದುಕೊಳ್ಳುತ್ತದೆ ಎಂದು ನಮಲ್ಲಿದ್ದ ಯಾರಿಗೂ ಅನಿಸಿರಲಿಲ್ಲ. ರಥಯಾತ್ರೆಯ ವೇಳೆ ಈಗಿನ ಪ್ರಧಾನಿ ನರೇಂದ್ರ ಮೋದಿ ನನ್ನ ಸಹಾಯಕರಾಗಿದ್ದರು. ಇಡೀ ರಥಯಾತ್ರೆಯ ಪ್ರಯಾಣದಲ್ಲಿ ಅವರು ನನ್ನ ಜೊತೆಗಿದ್ದರು. ಅಂದು ಅವರು ಇಷ್ಟು ಪ್ರಸಿದ್ಧರಾಗಿರಲಿಲ್ಲ. ಆದರೆ, ಅದಾಗಲೇ ರಾಮ ಮಾತ್ರ ತನ್ನ ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ವಿಶೇಷ ಭಕ್ತನನ್ನು ಆರಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಪ್ರಯಾಣಕ್ಕೆ ಸಂಬಂಧಿಸಿದ ಹೋರಾಟದ ಬಗ್ಗೆ ಮಾತನಾಡಿದ ಅವರು, ರಥ ಮುಂದೆ ಮುಂದೆ ಸಾಗುತ್ತಿದ್ದಂತೆ, ಜನಸಮೂಹವೇ ಸೇರುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಗುಜರಾತ್‌ನಿಂದ ಮಹಾರಾಷ್ಟ್ರದವರೆಗೆ ದೊಡ್ಡ ಮಟ್ಟದಲ್ಲಿ ಜನ ಬೆಂಬಲ ದೊರೆಯಿತು. ನಂತರ ರಥ ಹೋದ ರಾಜ್ಯದಲ್ಲೆಲ್ಲಾ ಕ್ರಮೇಣವಾಗಿ ಜನಸಮೂಹ ಸೇರಿತು. 'ಜೈ ಶ್ರೀ ರಾಮ್' ಮತ್ತು 'ಸೌಗಂದ್ ರಾಮ್ ಕಿ ಕಾತೇ ಹೈ, ಮಂದಿರ್ ವಹೀ ಬನಾಯೇಂಗೆ' ಮುಂತಾದ ಪ್ರಸಿದ್ಧ ಘೋಷಣೆ ಮೊಳಗಿದವು. ರಥಯಾತ್ರೆಯ ಸಮಯದಲ್ಲಿ ನನ್ನ ಜೀವನದ ಮೇಲೆ ಪ್ರಭಾವ ಬೀರಿದ ಅನೇಕ ಅನುಭವಗಳಿವೆ ಎಂದು ಬಿಜೆಪಿಯ ಭೀಷ್ಮ ಹೇಳಿದ್ದಾರೆ.
ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಾಯಿ ಹೀರಾಬೆನ್ ಸಂದೇಶ ನೆನಪಿಸಿಕೊಂಡು ಭಾವುಕರಾದ ಪ್ರಧಾನಿ ಮೋದಿ!
ರಥಯಾತ್ರೆಯ ವೇಳೆ ದೂರದ ಹಳ್ಳಿಗಳ ಅಪರಿಚಿತ ಗ್ರಾಮಸ್ಥರು ಭಾವುಕರಾಗಿ ರಥದ ಬಳಿಕ ಬಂದು ರಾಮನ ಸ್ತುತಿಯನ್ನು ಪಠಿಸಿ ಹೋಗುತ್ತಿದ್ದರು. ಇಡೀ ದೇಶದಲ್ಲಿ ರಾಮ ಮಂದಿರದ ಕನಸು ಕಾಣುವ ಅನೇಖ ಜನರಿದ್ದರು ಎನ್ನುವ ಸಂದೇಶ ಅದಾಗಿತ್ತು. ಆದರೆ, ತನ್ನ ನಂಬಿಕೆಯನ್ನು ಬಲವಂತವಾಗಿ ಮುಚ್ಚಿಟ್ಟು ಆತ ಬದುಕುತ್ತಿದ್ದ. ಜನವರಿ 22 ರಂದು ದೇವಾಲಯದ ಉದ್ಘಾಟನೆಯೊಂದಿಗೆ ರಥಯಾತ್ರೆಯಲ್ಲಿ ಸಿಕ್ಕ ಅಂಥ ವ್ಯಕ್ತಿಗಳ ಬಯಕೆ ಹಾಗೂ ಕನಸುಗಳು ಕೂಡ ಈಡೇರುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವಸ್ಥಾನವನ್ನು ಉದ್ಘಾಟನೆ ಮಾಡಿದಾಗ, ದೇಶದ ಪ್ರತಿಯೊಬ್ಬರನ್ನು ಅವರು ಪ್ರತಿನಿಧಿಸುತ್ತಾರೆ. ದೇವಾಲಯವು ಎಲ್ಲಾ ಭಾರತೀಯರಿಗೆ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಆಡ್ವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ.
ಅಯೋಧ್ಯಾ ರಾಮ ಮಂದಿರಕ್ಕೆ ಸೂರ್ಯ ತಿಲಕ ಯಂತ್ರ ದಾನವಾಗಿ ನೀಡಿದ ಬೆಂಗಳೂರು ಕಂಪನಿ!