ನವದೆಹಲಿ: ಕಳೆದ ಕೆಲವು ವರ್ಷಗಳಿಂದ ತಣ್ಣಗಾಗಿದ್ದ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಸ್ಥಾಪನೆ ಹೋರಾಟ ದಿಢೀರನೆ ಏರಿಕೆಯಾಗಿದೆ. ಕಳೆದ 2 ದಿನಗಳ ಅವಧಿಯಲ್ಲಿ ಬ್ರಿಟನ್, ಅಮೆರಿಕ ಹಾಗೂ ಆಸ್ಪ್ರೇಲಿಯಾಗಳಲ್ಲಿ ಖಲಿಸ್ತಾನಿಗಳು ಭಾರತ ವಿರೋಧಿ ಪ್ರತಿಭಟನೆ ನಡೆಸಿದ್ದು, ಭಾರತದ ಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸಿದ ಘಟನೆಗಳು ನಡೆದಿವೆ.
ಭಾನುವಾರ ತಡರಾತ್ರಿ ಲಂಡನ್ನಿನಲ್ಲಿರುವ (London) ಭಾರತೀಯ ರಾಯಭಾರ ಕಚೇರಿ ಕಟ್ಟಡದಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಯತ್ನಿಸಲಾಗಿದೆ. ಇದರ ಬೆನ್ನಲ್ಲೇ ಅಮೆರಿಕದ ಫ್ರಾನ್ಸಿಸ್ಕೊದಲ್ಲಿರುವ (san Francisco)ಭಾರತೀಯ ರಾಯಭಾರ ಕಚೇರಿ ಮೇಲೆಯೂ ಖಲಿಸ್ತಾನಿ ಬೆಂಬಲಿಗರು (Khalistani militants) ದಾಳಿ ನಡೆಸಿ, ಕಚೇರಿಯ ಆವರಣದಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸಿ, ಕಚೇರಿಗೆ ರಾಡ್‌ಗಳಿಂದ ಹೊಡೆದು ಹಾನಿ ಮಾಡಿದ್ದಾರೆ. ಇದೇ ವೇಳೆ, ಆಸ್ಪ್ರೇಲಿಯಾದ ಕ್ಯಾನ್‌ಬೆರಾದ ಸಂಸತ್ ಎದುರು ಖಲಿಸ್ತಾನಿ ತೀವ್ರವಾದಿಗಳು ಭಾರತದಲ್ಲಿ ಖಲಿಸ್ತಾನಿ ತೀವ್ರವಾದಿ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ನಡೆದಿರುವ ಯತ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಕೃತ್ಯಗಳನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಅದಕ್ಕೆ ಆಯಾ ದೇಶಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.
Hijab Row: ಖಲಿಸ್ತಾನಿ ಹೋರಾಟಗಾರರ ಮೂಲಕ ಪಾಕಿಸ್ತಾನ ಐಎಸ್‌ಐ ಹಿಜಾಬ್ ವಿವಾದಕ್ಕೆ ಸಾಥ್?
ಆಸ್ಪ್ರೇಲಿಯಾ, ಕೆನಡಾದಲ್ಲಿ ಈ ಹಿಂದೆಯೂ ದಾಳಿ:
ಆಸ್ಪ್ರೇಲಿಯಾದಲ್ಲಿ ಜನವರಿ ತಿಂಗಳಿಂದ ಈವರೆಗೆ 4 ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯ ವೇಳೆ ದೇವಾಲಯಗಳ ಮೇಲೆ ಖಲಿಸ್ತಾನ ಪರ ಹಾಗೂ ನರೇಂದ್ರ ಮೋದಿ/ಭಾರತ ವಿರೋಧಿ ಬರಹಗಳನ್ನು ಗೀಚಲಾಗಿತ್ತು. ಇನ್ನು ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿರುವ ಕೆನಡಾದಲ್ಲಂತೂ (Canada) ಕಳೆದ ವರ್ಷ ಹಾಗೂ ಈ ವರ್ಷ ಲೆಕ್ಕವಿಲ್ಲದಷ್ಟುಖಲಿಸ್ತಾನಿ ಉದ್ಧಟತನಗಳು ನಡೆದಿವೆ. ಕೆನಡಾದಲ್ಲಿ ಹಲವಾರು ಹಿಂದೂ ದೇಗುಲಗಳ ಮೇಲೆ ದಾಳಿ ಮಾಡಿದ್ದಲ್ಲದೆ, ಭಾರತೀಯ/ಸಿಖ್ ಮೂಲದವರ ಮೇಲೆ ಹಲ್ಲೆಗಳೂ ನಡೆದಿವೆ. ಆಸ್ಪ್ರೇಲಿಯಾ, ಬ್ರಿಟನ್, ಕೆನಡಾ, ಅಮೆರಿಕದಲ್ಲಿ (US) ಖಲಿಸ್ತಾನಿ ದೇಶ ಸ್ಥಾಪನೆಗೆ ಆಗ್ರಹಿಸಿ ಜನಮತಸಂಗ್ರಹವೂ ನಡೆದಿದೆ.
ಏಕಾಏಕಿ ಹೆಚ್ಚಳ ಏಕೆ?
ಪಂಜಾಬನ್ನು ಪ್ರತ್ಯೇಕಿಸಿ ಪ್ರತ್ಯೇಕ ಖಲಿಸ್ತಾನಿ ಹೋರಾಟ ಆರಂಭವಾಗಿದ್ದು 80ರ ದಶಕದಲ್ಲಿ. ಆದರೆ ಆಪರೇಶನ್ ಬ್ಲೂಸ್ಟಾರ್ (Operation Blue star) ಕಾರ್ಯಾಚರಣೆ ಬಳಿಕ ಖಲಿಸ್ತಾನಿ ಹೋರಾಟ ತಣ್ಣಗಾಗಿತ್ತು. ಆದರೆ 2014ರಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಏಕಾಏಕಿ ಖಲಿಸ್ತಾನಿಗಳು ಪಂಜಾಬ್‌ನಲ್ಲಿ ಸಕ್ರಿಯರಾಗಿದ್ದಾರೆ. ಇದಕ್ಕೆ ಕಾರಣ ಖಲಿಸ್ತಾನಿಗಳಿಗೆ ಪಾಕಿಸ್ತಾನದ ಚಿತಾವಣೆ. ಮೋದಿ ವಿರೋಧಿ ಭಾವನೆ ಹೊಂದಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಪಂಜಾಬ್‌ನಲ್ಲಿ ಹಾಗೂ ವಿದೇಶಗಳಲ್ಲಿನ ಖಲಿಸ್ತಾನಿಗಳಿಗೆ ಕುಮ್ಮಕ್ಕು ನೀಡಿ ಹಿಂಸೆಗೆ ಪ್ರೇರೇಪಿಸುತ್ತಿದೆ. ಈ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಎನ್ನಲಾಗಿದೆ.
Khalistan ಪ್ರತ್ಯೇಕತಾವಾದಿ ನಾಯಕನ ಮೇಲೆ Red Corner ಮನವಿ ತಿರಸ್ಕರಿಸಿದ Interpol
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ