ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

By Prashant NatuFirst Published Mar 12, 2022, 9:48 AM IST
Highlights

5 ವರ್ಷದ ಅಧಿಕಾರದ ನಂತರ ಮೋದಿ ಮತ್ತು ಯೋಗಿ ಜೋಡಿ ಯುಪಿಯಲ್ಲಿ ಭಾರಿ ಬಹುಮತ ಗಳಿಸಿರುವುದು ನೋಡಿದರೆ ಅಲ್ಲಿನ ಜನ ಜಾತಿಗಿಂತ ಆಡಳಿತಕ್ಕೆ ಮನ್ನಣೆ ಕೊಟ್ಟಿರುವುದು ಕಾಣುತ್ತಿದೆ.

ಉತ್ತರ ಪ್ರದೇಶದ ಚುನಾವಣೆ ಬರೀ ಯೋಗಿ ಆದಿತ್ಯನಾಥ್‌ ಮತ್ತು ಅಖಿಲೇಶ ಯಾದವ್‌ ನಡುವಿನ ಹೋರಾಟ ಆಗಿರಲಿಲ್ಲ. ಒಂದು ವೇಳೆ ಯುಪಿಯಲ್ಲಿ ಬಿಜೆಪಿ ಸೋತರೆ 2024ರಲ್ಲಿ ಮೋದಿ ಮತ್ತು ಬಿಜೆಪಿಗೆ ಕಠಿಣವಾಗಲಿದೆ ಅನ್ನುವ ಕಾರಣದಿಂದಲೇ ಮೋದಿ ಸಮರ್ಥಕರು ಮತ್ತು ವಿರೋಧಿಗಳ ಚಿತ್ತ ಯುಪಿ ಕಡೆ ಇತ್ತು. ಆದರೆ ಕೋವಿಡ್‌ನ ಎರಡು ಅಲೆಗಳು, ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆ, ರೈತ ಕಾನೂನಿನ ಹೋರಾಟ ಇದೆಲ್ಲದರ ಮಧ್ಯೆ ಯುಪಿ ಮತದಾರ ಯೋಗಿ ಆದಿತ್ಯನಾಥರಿಗೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾನೆ.

2014, 2019ರ ನಂತರ 2024ರ ಲೋಕಸಭಾ ಚುನಾವಣೆ ಕೂಡ ಮೋದಿ ನಾಯಕತ್ವದ ಸುತ್ತಮುತ್ತ ನಡೆಯಲಿದೆ ಎಂದು ಯುಪಿ ಫಲಿತಾಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ಒಂದು ಕಡೆ ವಿಶ್ವದ ಬಹುತೇಕ ನಾಯಕರು ಕೋವಿಡ್‌ ನಂತರ ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಅಧಿಕಾರಕ್ಕೆ ಬಂದು 8 ವರ್ಷಗಳ ನಂತರವೂ ಜನಪ್ರಿಯತೆಯ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಏರುತ್ತಿರುವುದು ಸೋಜಿಗದ ವಿಷಯ. ಯುಪಿ ಜೊತೆಗೆ ಉತ್ತರಾಖಂಡ, ಗೋವಾ, ಮಣಿಪುರಗಳಲ್ಲಿ ಕೂಡ 5 ವರ್ಷದ ಆಡಳಿತದ ನಂತರವೂ ಮತದಾರ ಪಾಸಿಟಿವ್‌ ವೋಟು ನೀಡಿರುವುದು ಮೋದಿ ಮುಖ ನೋಡಿ ಎಂದು ಫಲಿತಾಂಶಗಳಿಂದ ಸ್ಪಷ್ಟವಾಗುತ್ತಿದೆ.

ಇನ್ನೊಂದು ಕಡೆ ಶಿಥಿಲ ಆಗುತ್ತಿರುವ ಕಾಂಗ್ರೆಸ್‌ ಅಧಿಕಾರ ಇದ್ದ ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ ಕೂರಿಸಿಯೂ ಸೋತು, ಉಳಿದ 4 ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯ ಮಧ್ಯೆಯೂ ಪರಾಭವಗೊಂಡಿರುವುದು ಬಿಜೆಪಿಗೆ ಪರ್ಯಾಯವಾಗಿ ನಿಂತುಕೊಳ್ಳುವ ಆ ಪಕ್ಷದ ಸಾಮರ್ಥ್ಯದ ಬಗ್ಗೆಯೇ ಮಗದೊಮ್ಮೆ ಪ್ರಶ್ನೆ ಮೂಡಿಸಿದೆ. ಆದರೆ, 8 ವರ್ಷ ಹಳೆಯ ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್‌ನ ಶೂನ್ಯತೆಯ ಲಾಭವನ್ನು ದಿಲ್ಲಿ ನಂತರ ಪಂಜಾಬ್‌ನಲ್ಲಿ ಪಡೆದಿರುವುದು ಮೋದಿ ವಿರುದ್ಧ ನಾನು ಎಂದು ತೊಡೆ ತಟ್ಟಿಹೇಳುತ್ತಿರುವಂತಿದೆ. ಚುನಾವಣೆ ಎಂದರೆ ಬರೀ ಸೋಲು ಗೆಲುವು ಅಷ್ಟೇ ಅಲ್ಲ, ಕಲಿಯುವ ಮನಸ್ಸಿದ್ದರೆ ಅದರಲ್ಲಿ ನಾಯಕರು, ಕಾರ್ಯಕರ್ತರು, ಪತ್ರಕರ್ತರು ಹೀಗೆ ಎಲ್ಲರಿಗೂ ಪಾಠಗಳುಂಟು.

Russia-Ukraine Crisis: ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೇಕೆ ಉಕ್ರೇನ್ ಮೇಲೆ ಸಿಟ್ಟು.?

ಬಿಜೆಪಿ ಯುಪಿ ಗೆಲುವಿಗೆ ಕಾರಣ

5 ವರ್ಷದ ಅಧಿಕಾರದ ನಂತರ ಮೋದಿ ಮತ್ತು ಯೋಗಿ ಜೋಡಿ ಯುಪಿಯಲ್ಲಿ ಭಾರಿ ಬಹುಮತ ಗಳಿಸಿರುವುದು ನೋಡಿದರೆ ಅಲ್ಲಿನ ಜನ ಜಾತಿಗಿಂತ ಆಡಳಿತಕ್ಕೆ ಮನ್ನಣೆ ಕೊಟ್ಟಿರುವುದು ಕಾಣುತ್ತಿದೆ. ಕಾನೂನು ಸುವ್ಯವಸ್ಥೆ, ಕೋವಿಡ್‌ ಕಾಲದಲ್ಲಿ ಉಚಿತ ಪಡಿತರ, 35 ಲಕ್ಷ ಮನೆ ನಿರ್ಮಾಣ ಮತ್ತು ಮೋದಿ-ಯೋಗಿ ಇಬ್ಬರ ಹಿಂದುತ್ವದ ಜೊತೆಗಿನ ಸ್ವಚ್ಛ ನಾಯಕತ್ವ ಬಿಜೆಪಿಗೆ ಗೋಮತಿಯ ತಟದಲ್ಲಿ ಮತ್ತೊಮ್ಮೆ ಅಧಿಕಾರ ನೀಡಿದೆ. 1989 ರಿಂದ ಮಂಡಲ ಚಳವಳಿ ಆರಂಭದ ನಂತರ ಜಾತಿಗಳ ಅಸ್ಮಿತೆಯ ತಿಕ್ಕಾಟದಲ್ಲಿ ಕಳೆದುಹೋಗಿದ್ದ ಯುಪಿ ಮತದಾರ ಒಂದು ರಾಜ್ಯ ಸರ್ಕಾರ 5 ವರ್ಷದಲ್ಲಿ ಮಾಡಿದ ಕೆಲಸಕ್ಕೆ ವೋಟು ನೀಡಿರುವುದು ಉತ್ತರ ಪ್ರದೇಶ ಕೂಡ ಬಿಹಾರದ ನಂತರ ರಾಜಕೀಯವಾಗಿ ಗುಣಾತ್ಮಕ ಬದಲಾವಣೆಯ ಸಂಕೇತ.

ಪ್ರಾಯಶಃ ಈ ಪರಿಯ ಫಲಿತಾಂಶದ ಮೂಲಕ ಯುಪಿಯ ಜನ ನಮಗೂ ಒಳ್ಳೆ ರಸ್ತೆ, ಒಳ್ಳೆ ಆಡಳಿತ, ಸ್ಥಿರತೆ, ಒಳ್ಳೆ ನಾಯಕತ್ವ ದೊರೆತರೆ ಜಾತಿ ಅಸ್ಮಿತೆ ಮೀರಿ ಬಂದು ವೋಟು ಹಾಕುತ್ತೇವೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಮಂಡಲ ಚಳವಳಿ ಮೂಲಕ ಬಂದ ಲಾಲು, ಮುಲಾಯಂ, ಮಾಯಾವತಿ ಬರೀ ಜಾತಿಗಳಲ್ಲಿ ಮುಳುಗಿದ್ದರೇ ಹೊರತು ಅದರ ಜೊತೆ ಅಭಿವೃದ್ಧಿಯನ್ನು ಸಮೀಕರಿಸುವ ಪ್ರಯತ್ನ ಮಾಡಲಿಲ್ಲ. ಆದರೆ, ಮೋದಿ ಮತ್ತು ಯೋಗಿಯ ದೊಡ್ಡ ಸಫಲತೆ ಎಂದರೆ ಹಿಂದುತ್ವದ ಜೊತೆಗೆ ಕಣ್ಣಿಗೆ ಕಾಣುವ ಅಭಿವೃದ್ಧಿಯನ್ನು ತರುವ ಪ್ರಯತ್ನ ಮಾಡುವುದು. ಸೆಕ್ಯುಲರ್‌ ಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳದೇ ಹೋದರೆ ಬಿಜೆಪಿ, ಮೋದಿ, ಯೋಗಿ ಎದುರು ಗೆಲ್ಲೋದು ಕಷ್ಟಕಷ್ಟ.

ಅಖಿಲೇಶ್‌ ಯಾಕೆ ಸೋತರು?

2014, 2019ಕ್ಕೆ ಹೋಲಿಸಿದರೆ ಅಖಿಲೇಶ್‌ ಯಾದವ್‌ ಜನಪ್ರಿಯತೆ, ವೋಟು, ಸೀಟು 2022ರಲ್ಲಿ ಜಾಸ್ತಿ ಆಗಿದೆ. ಅಖಿಲೇಶ್‌ ಕಳೆದ ಬಾರಿಗಿಂತ 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಗೆದ್ದಿದ್ದಾರೆ. ಬಿಜೆಪಿ ಕಳೆದ ಬಾರಿಗಿಂತ 50 ಚಿಲ್ಲರೆ ಸೀಟು ಕಡಿಮೆ ಪಡೆಯಲು ಅಖಿಲೇಶ್‌ ಕಾರಣ ಹೌದಾದರೂ ಇದು ಸಾಕಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಮುಲಾಯಂ ಕಾಲದಿಂದ ಸಮಾಜವಾದಿ ಪಕ್ಷಕ್ಕೆ ಅಂಟಿಕೊಂಡಿರುವ ಗೂಂಡಾಗಿರಿ, ದಾದಾಗಿರಿ ಮಾಡುವ ಪಕ್ಷ ಎಂಬ ಹಣೆಪಟ್ಟಿಯ ಜೊತೆಗೆ ಯಾದವರ ಕಾಲದಲ್ಲಿ ಇತರ ಹಿಂದುಳಿದ ಸಮುದಾಯಗಳನ್ನು ಬೆಳೆಯಲು ಬಿಡೋದಿಲ್ಲ, ತುಳಿಯುತ್ತಾರೆ ಎನ್ನುವ ಆತಂಕಗಳು ಮತ್ತು ಮುಸ್ಲಿಮರನ್ನು ಅತಿಯಾಗಿ ಬೆಂಬಲಿಸುತ್ತಾರೆ ಎನ್ನುವ ಹಿಂದೂ ಸಮುದಾಯಗಳ ಆತಂಕ. ಇವೆಲ್ಲದರ ಒಟ್ಟು ಪರಿಣಾಮವೇ ಅಖಿಲೇಶ್‌ಗೆ ಮೋದಿ ಕೈಯಲ್ಲಿ 2014, 2017 ಮತ್ತು 2019ರ ನಂತರದ ನಾಲ್ಕನೇ ಸೋಲು.

ಯಾದವ ಪಾರ್ಟಿ ಅಧಿಕಾರದಲ್ಲಿದ್ದಾಗ ಪೊಲೀಸ್‌ ಸ್ಟೇಶನ್‌ಗಳು ಹೇಗೆ ಕೆಲಸ ನಿರ್ವಹಿಸಿವೆ ಎಂದು ಗೊತ್ತಿದ್ದ ಸಾಮಾನ್ಯ ಮತದಾರ, ಬಿಜೆಪಿ ಕಾಲದಲ್ಲಿ ಬೆಲೆ ಏರಿಕೆ ಆಗಿದ್ದು ಹೌದಾದರೂ ರಾತ್ರಿ ಗೂಂಡಾಗಳ ಕಾಟ ಇಲ್ಲದೆ ರಸ್ತೆ ಮೇಲೆ ಮನೆಯ ಹೆಣ್ಣುಮಕ್ಕಳೊಂದಿಗೆ ಓಡಾಡುವ ಸ್ವಾತಂತ್ರ್ಯವಾದರೂ ಇದೆಯಲ್ಲಾ ಎಂದು ಮೋದಿ ಮತ್ತು ಯೋಗಿಯನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ. ಮುಲಾಯಂ, ಮಾಯಾವತಿ ಕಾಲದಲ್ಲಿ ಬರೀ ಜಾತಿ ಅಸ್ಮಿತೆ, ಮೇಲ್ಜಾತಿ-ಕೆಳಜಾತಿ ಪಾಲಿಟಿಕ್ಸ್‌ ನಡೆಯುತ್ತಿತ್ತು. ಆದರೆ, ಈಗ ಅದೇ ಸಮುದಾಯದ ಜನ ಅಸ್ಮಿತೆ ಜೊತೆ ಅಭಿವೃದ್ಧಿ ಕೂಡ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಮೋದಿ, ಯೋಗಿ, ಅರವಿಂದ ಕೇಜ್ರಿವಾಲ್‌ಗೆ ಅದು ಅರ್ಥ ಆಗಿದೆ. ಉಳಿದವರು ಅರ್ಥವಾಗದೇ ಸೋಲುತ್ತಿದ್ದಾರೆ.

ಮೋದಿ ಉತ್ತರಾಖಂಡದ ಮ್ಯಾಜಿಕ್‌

ಉತ್ತರಾಖಂಡದಲ್ಲಿ ಚುನಾವಣೆಗೆ 20 ದಿನಗಳಿರುವಾಗ ಕೂಡ ಸುಮಾರು 10 ಕ್ಷೇತ್ರಗಳಲ್ಲಿ ಬಿಜೆಪಿಗೂ, ಕಾಂಗ್ರೆಸ್‌ಗೂ 1000 ಮತಗಳ ಅಂತರ ಮಾತ್ರ ಇದೆ ಎಂದು ಸಮೀಕ್ಷೆಯೊಂದು ಹೇಳಿತ್ತು. ಕೂಡಲೇ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಬಳಿ ಹೋದ ಅಲ್ಲಿನ ಉಸ್ತುವಾರಿ ಪ್ರಹ್ಲಾದ್‌ ಜೋಶಿ ಅವರು ಮೋದಿ ಖುದ್ದಾಗಿ ಬಂದು ಪ್ರಚಾರ ಮಾಡಿದರೆ ನಾವು 40 ಸೀಟು ದಾಟುತ್ತೇವೆ ಎಂದರು. ನಂತರ ಮೋದಿ ಡೆಹ್ರಾಡೂನ್‌ಗೆ ಹೋಗಿ 1000 ಮತದಾರರ ಸಭೆ ನಡೆಸಿದ ಮೇಲೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಅಂತರ ಹೆಚ್ಚಾಯಿತು. ಇವತ್ತು ದಿಲ್ಲಿಯಿಂದ ಕುಳಿತು ನೋಡಿದರೆ ಮೋದಿ ಮತ್ತು ಕಾಂಗ್ರೆಸ್‌ಗೂ ಇರುವ ಅಂತರ ಇದೇ. ಮೋದಿ ತಮಿಳುನಾಡು, ಪಂಜಾಬ್‌ ಬಿಟ್ಟು ಬೇರೆ ಯಾವುದೇ ರಾಜ್ಯಕ್ಕೆ ಹೋದರೂ ಬಿಜೆಪಿಗೆ 5ರಿಂದ 6 ಪ್ರತಿಶತ ವೋಟು ಹಾಕಿಸಿ ಅತ್ಯಂತ ತುರುಸಿನ ಕ್ಷೇತ್ರಗಳ ಪರಿಣಾಮ ಬದಲಿಸಬಲ್ಲರು. ಮೊದಲು ಇಂದಿರಾ ಗಾಂಧಿಗೆ ಆ ಶಕ್ತಿ ಇತ್ತು. ಆದರೆ ರಾಹುಲ್‌ ಮತ್ತು ಪ್ರಿಯಾಂಕಾ ಇಬ್ಬರಿಗೂ ಆ ಶಕ್ತಿ ಇಲ್ಲ, ಮುಂದೆಯೂ ಅದನ್ನು ಬೆಳೆಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ.

ಕೇಜ್ರಿವಾಲ್‌ ಎಂಬ ಔಟ್‌ಸೈಡರ್‌

2010ರಲ್ಲಿ ದಿಲ್ಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಸಮಾವೇಶ ನಡೆದಾಗ ಸಂತೋಷ್‌ ಹೆಗ್ಡೆ, ಪ್ರಶಾಂತ ಭೂಷಣ, ಅರವಿಂದ್‌ ಕೇಜ್ರಿವಾಲ…ರ ಭಾಷಣ ಕೇಳಲು ಬಂದವರ ಸಂಖ್ಯೆ ಬರೀ 70. ಅದಾದ 11 ವರ್ಷದಲ್ಲಿ ಕೇಜ್ರಿವಾಲ್ ದಿಲ್ಲಿ ಗೆದ್ದು, ಈಗ ಪಂಜಾಬ್‌ನಂಥ ದೊಡ್ಡ ರಾಜ್ಯ ಗೆದ್ದು, ಅಲ್ಲಿ ಕಾಂಗ್ರೆಸ್‌, ಅಕಾಳಿದಳ, ಬಿಜೆಪಿಯನ್ನು ಗುಡಿಸಿಬಿಟ್ಟಿದ್ದಾರೆ. ಎಲ್ಲೆಲ್ಲಿ ದಶಕಗಳಿಂದ ಅಧಿಕಾರ ಅನುಭವಿಸಿದ ಎರಡು ಪಕ್ಷಗಳು ವಿಪರೀತ ಒಳಜಗಳ, ಅತಿಯಾದ ಭ್ರಷ್ಟಾಚಾರಗಳಿಂದ ಒಂದು ಮಟ್ಟದ ಶೂನ್ಯತೆ ಆವರಿಸಿಕೊಳ್ಳುತ್ತದೆಯೋ ಅಲ್ಲಿ ಆಮ್ ಆದ್ಮಿ ಪಕ್ಷ ಬೆಳೆಯುತ್ತಿದೆ. ಅದರಲ್ಲೂ ಕಾಂಗ್ರೆಸ್‌ ಎದುರು ಬಿಜೆಪಿ ಪರಿಸ್ಥಿತಿ ಕಳಪೆ ಇದ್ದರೆ ಜನ ಆಮ… ಆದ್ಮಿಯನ್ನು ಅಪ್ಪಿಕೊಳ್ಳುತ್ತಿರುವುದು ಗಮನಿಸಬೇಕಾದ ವಿಷಯ.

ಆಮ್‌ ಆದ್ಮಿ ಬೆಳೆದರೆ ಕಾಂಗ್ರೆಸ್‌ಗೆ ಹೇಗೆ ಸಮಸ್ಯೆ ಉಂಟೋ, ಹಾಗೆಯೇ ಬಿಜೆಪಿಗೂ ಕೂಡ ಎಚ್ಚರಿಕೆಯ ಗಂಟೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷವಾಗಿ ಬೆಳೆದ ಕಾಂಗ್ರೆಸ್‌ಗೆ ಗಾಂಧೀಜಿಯ ಪುಣ್ಯ ಮತ್ತು ಪರಿಶ್ರಮದ ಬಳುವಳಿ ಇತ್ತು. ಜನಸಂಘ, ಬಿಜೆಪಿಗೆ ಆರ್‌ಎಸ್‌ಎಸ್‌ನ ವೈಚಾರಿಕ ಹಿನ್ನೆಲೆಯ ಕೇಡರ್‌ ಇತ್ತು. ಜನತಾ ಪರಿವಾರಕ್ಕೆ ಸಮಾಜವಾದಿಗಳು, ಕಾಂಗ್ರೆಸ್‌ ಸಿಂಡಿಕೇಟ್‌ ಕಾರಣದ ಬೆನ್ನೆಲುಬು ಇತ್ತು. ಆದರೆ, ಆಮ… ಆದ್ಮಿ ಪಕ್ಷಕ್ಕೆ ಆ ಯಾವುದೇ ವೈಚಾರಿಕ ಆಂದೋಲನದ ಹಿನ್ನೆಲೆ ಇಲ್ಲ. ಆದರೂ ಅದು ಉಳಿದು, ಬೆಳೆಯುತ್ತಿರುವ ಪರಿ ಕುತೂಹಲ ಹುಟ್ಟಿಸುತ್ತದೆ.

ಮಮತಾ ಬ್ಯಾನರ್ಜಿ, ಶರದ್‌ ಪವಾರ್‌, ಮುಲಾಯಂ, ಬಿಜು ಪಟ್ನಾಯಕ್‌, ದೇವೇಗೌಡ, ಚಂದ್ರಬಾಬು ನಾಯ್ಡು, ಜಯಲಲಿತಾ ಹೀಗೆ ಯಾರಿಗೂ ತಮ್ಮ ಉಚ್ಛ್ರಾಯದ ಕಾಲದಲ್ಲೂ ಸ್ವಂತ ರಾಜ್ಯ ಬಿಟ್ಟು ಪಕ್ಕದ ರಾಜ್ಯದಲ್ಲಿ ಸ್ವಂತ ಬಲದ ಅಧಿಕಾರ ಸಿಕ್ಕಿಲ್ಲ. ಆದರೆ, ಅದು ರಾಜಕಾರಣದ ಔಟ್‌ಸೈಡರ್‌ ಎಂದು ಹೇಳಿಕೊಳ್ಳುವ ಅರವಿಂದ ಕೇಜ್ರಿವಾಲ್‌ರಿಂದ ಸಾಧ್ಯ ಆಗಿದೆ. ಬಹುತೇಕ ಈ ಫಲಿತಾಂಶದ ನಂತರ ಯೋಗಿ ಆದಿತ್ಯನಾಥ್‌ ಮತ್ತು ಅರವಿಂದ ಕೇಜ್ರಿವಾಲ್‌ರನ್ನು ಮುಂದಿನ 20 ವರ್ಷಗಳ ಭಾರತೀಯ ರಾಜಕಾರಣದ ಕುದುರೆಗಳು ಎಂಬ ನಿಷ್ಕರ್ಷೆಗೆ ಬರಬಹುದು. ಒಂದು ವಿಪರ್ಯಾಸ ಎಂದರೆ ಇನ್ನುಮುಂದೆ ಆಮ್ ಆದ್ಮಿ ಪಾರ್ಟಿಯ ಪರಮೋಚ್ಚ ನಾಯಕ ದಿಲ್ಲಿಯಂಥ ಸಣ್ಣ ರಾಜ್ಯದ ಮುಖ್ಯಮಂತ್ರಿ ಆಗಿರಲಿದ್ದರೆ, ಕೇಜ್ರಿವಾಲ್‌ ಅವರೇ ಆರಿಸಿರುವ ಒಂದು ಕಾಲದ ಹಾಸ್ಯಗಾರ ಭಗವಂತ ಸಿಂಗ್‌ ಮಾನ್‌ ಪಂಜಾಬ್‌ನಂಥ ದೊಡ್ಡ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ.

Russia-Ukraine Crisis:ಪುಟಿನ್ ಅಂತಿಮವಾಗಿ ಸಾಧಿಸಲು ಹೊರಟಿದ್ದು ಏನನ್ನು?

ಕಾಂಗ್ರೆಸ್‌ ಅಸ್ತಿತ್ವ ಇಳಿಜಾರಿನಲ್ಲಿ

ಒಂದು ಕಡೆ ಬಿಜೆಪಿ ಮತ್ತು ಮೋದಿ ತಮ್ಮ 4 ಸರ್ಕಾರಗಳನ್ನು 5 ವರ್ಷದ ಅಧಿಕಾರದ ನಂತರ ಸಹಜವಾಗಿ ಬರುವ ಆಡಳಿತ ವಿರೋಧಿ ಅಲೆ ನಂತರವೂ ಉಳಿಸಿಕೊಂಡರೆ, ಕಾಂಗ್ರೆಸ್‌ಗೆ ಇದ್ದ ಒಂದು ಸರ್ಕಾರದಲ್ಲಿ ಅದರಲ್ಲೂ ದಲಿತ ಮುಖ್ಯಮಂತ್ರಿಯನ್ನು ಕೂರಿಸಿಯೂ ಪಾಸಿಟಿವ್‌ ವೋಟ್‌ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಬಿಜೆಪಿ ಆಡಳಿತ ನಡೆಸಿದ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ನೆಗೆಟಿವ್‌ ವೋಟನ್ನು ಕೂಡ ಗಳಿಸಲು ವಿಫಲವಾಗಿದೆ. ರಾಹುಲ… ನಂತರ ಈಗ ಪ್ರಿಯಾಂಕಾ ಗಾಂಧಿ ಕೂಡ ಒಂದು ವರ್ಷ ಓಡಾಡಿದರೂ 2 ಸೀಟು, 2 ಪ್ರತಿಶತ ವೋಟು ಮಾತ್ರ ಗಳಿಸಿರುವುದು ಕಾಂಗ್ರೆಸ್‌ನ ಮತ್ತು ಗಾಂಧಿ ಕುಟುಂಬದ ಹೀನಾಯ ರಾಜಕೀಯ ಸ್ಥಿತಿಯನ್ನು ತೋರಿಸುತ್ತದೆ. ತುರ್ತು ಪರಿಸ್ಥಿತಿ ನಂತರದ ದಯನೀಯ ಸೋಲಿನ ನಂತರ ಇಂದಿರಾ ಗಾಂಧಿ ವಾಪಸ್‌ ಅಧಿಕಾರ ತಂದುಕೊಟ್ಟರು.

ಬೊಫೋರ್ಸ್‌ನ ಸೋಲಿನ ನಂತರ ರಾಜೀವ್‌ ಹತ್ಯೆ ಅಧಿಕಾರ ತಂದುಕೊಟ್ಟಿತ್ತು. ವಾಜಪೇಯಿ ಅಲೆ ನಂತರ ಸೋನಿಯಾ ಗಾಂಧಿ ಎಲ್ಲ ನಾಯಕರನ್ನು ಒಟ್ಟುಗೂಡಿಸಿ ಅಧಿಕಾರ ತಂದುಕೊಟ್ಟಿದ್ದರು. ಆದರೆ, ಈಗ ಮೋದಿ ಅಲೆಯಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್‌ಗೆ ಮರಳಿ ಜೀವ ತುಂಬುವ ಕೆಲಸ ಆಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷದ ಬದಲಾಗಿ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಕೇರಳ ಹೀಗೆ ಕೆಲವು ರಾಜ್ಯಗಳ ಪಕ್ಷವಾಗಿ ಉಳಿದುಕೊಳ್ಳುವ ಹಂತಕ್ಕೆ ಬರಬಹುದು. ಕೇಜ್ರಿವಾಲ…, ಸ್ಟಾಲಿನ್‌, ಪಿಣರಾಯಿ ವಿಜಯನ್‌, ಮಮತಾ ಬ್ಯಾನರ್ಜಿ ಅವರಿಂದ ಸಾಧ್ಯ ಆಗುತ್ತಿರುವುದು ರಾಹುಲ್, ಪ್ರಿಯಾಂಕಾರಿಂದ ಯಾಕೆ ಸಾಧ್ಯ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರದಲ್ಲೇ ಕಾಂಗ್ರೆಸ್‌ನ ಭವಿಷ್ಯ ನಿಂತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಕಾರಣ

 

click me!