Yogi Adityanath Swearing: ಹೋಳಿಗೂ ಮೊದಲೇ ಯೋಗಿ ಪ್ರಮಾಣ ವಚನ: ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳಿಗೆ ಆಹ್ವಾನ?

By Kannadaprabha NewsFirst Published Mar 12, 2022, 9:39 AM IST
Highlights

*ದಾಖಲೆ 2ನೇ ಬಾರಿ ಸಿಎಂ ಹುದ್ದೆ ಏರಲಿರುವ ಆದಿತ್ಯನಾಥ್‌
*ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳಿಗೆ ಆಹ್ವಾನದ ಸಾಧ್ಯತೆ
*ಮಾ.16ಕ್ಕೆ ಮುಖ್ಯಮಂತ್ರಿಯಾಗಿ ಮಾನ್‌ ಪ್ರಮಾಣ

ಲಖನೌ (ಮಾ. 12) : ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪಷ್ಟಬಹುಮತದೊಂದಿಗೆ ಜಯ ಸಾಧಿಸಿರುವ ಬಿಜೆಪಿ, ರಾಜ್ಯದಲ್ಲಿ ನೂತನ ಸರ್ಕಾರವನ್ನು ಮಾ.18ರ ಹೋಳಿ ಹುಣ್ಣಿಮೆಗೂ ಮೊದಲೇ ರಚಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಮಾ.14 ಅಥವಾ 15ರಂದು ಲಖನೌದಲ್ಲಿ ದಾಖಲೆಯ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್‌ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

7 ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ 273 ಸ್ಥಾನಗಳನ್ನು ಗೆದ್ದುಕೊಂಡಿದೆ. 

ಉತ್ತರಪ್ರದೇಶದಲ್ಲಿ ಸರ್ಕಾರವೊಂದು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು 37 ವರ್ಷಗಳ ಬಳಿಕ, ಮುಖ್ಯಮಂತ್ರಿಯೊಬ್ಬರು 5 ವರ್ಷ ಪೂರ್ಣಗೊಳಿಸಿ ಮರಳಿ ಅಧಿಕಾರಕ್ಕೆ ಬಂದಿದ್ದು ಇದೇ ಮೊದಲು, 15 ವರ್ಷಗಳ ಬಳಿಕ ವಿಧಾನಸಭೆಯಿಂದ ಆರಿಸಿ ಬಂದ ಜನಪ್ರತಿನಿಧಿ ಸಿಎಂ ಆಗುತ್ತಿದ್ದಾರೆ ಎಂಬ ಹಲವು ದಾಖಲೆಗಳು ಇದೀಗ ಬಿಜೆಪಿ ಮತ್ತು ಯೋಗಿ ಅವರ ಹೆಸರಿಗೆ ಬಂದಿದೆ.

ಇದನ್ನೂ ಓದಿ: Election Result ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!

ಮಾ.16ಕ್ಕೆ ಮುಖ್ಯಮಂತ್ರಿಯಾಗಿ ಮಾನ್‌ ಪ್ರಮಾಣ: ಪಂಜಾಬ್‌ನಲ್ಲಿ ಭರ್ಜರಿ ಜಯದೊಂದಿಗೆ ಸಿಎಂ ಪಟ್ಟಏರಲು ಸಜ್ಜಾಗಿರುವ ಭಗವಂತ್‌ ಸಿಂಗ್‌ ಮಾನ್‌, ಮಾ.16ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ಶುಕ್ರವಾರ ಇಲ್ಲಿ ಆಮ್‌ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಯ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಮಾನ್‌ ಈ ವಿಷಯ ತಿಳಿಸಿದರು. ಕೇಜ್ರಿವಾಲ್‌ ಎದುರಾದ ಕೂಡಲೇ ಅವರ ಕಾಲಿಗೆ ಎರಗಿದರು. ಇದೇ ವೇಳೆ ಕೇಜ್ರಿವಾಲ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. 

ಜೊತೆಗೆ ಮಾ.13ರಂದು ಅಮೃತಸರದಲ್ಲಿ ಬೃಹತ್‌ ರೋಡ್‌ ಶೋ ಹಮ್ಮಿಕೊಂಡಿರುವುದಾಗಿ ಕೂಡಾ ಮಾನ್‌ ತಿಳಿಸಿದರು. ಪಂಜಾಬ್‌ನ 117 ಸ್ಥಾನಗಳ ಪೈಕಿ ಆಪ್‌ 92 ಸ್ಥಾನ ಗೆದ್ದುಕೊಂಡಿದ್ದು, ಧುರಿ ಕ್ಷೇತ್ರದಲ್ಲಿ ಮಾನ್‌ ಅವರು 58206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

4 ರಾಜ್ಯಗಳ ಸಿಎಂಗಳ ರಾಜೀನಾಮೆ: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಣಿಪುರ ಸಿಎಂ ಬಿರೇನ್‌ಸಿಂಗ್‌, ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಮತ್ತು ಪಂಜಾಬ್‌ ಸಿಎಂ ಚರಣ್‌ಜಿತ್‌ ಚನ್ನಿ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಡುವೆ ಮಾ.19ಕ್ಕೆ ಮುನ್ನ ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಬಿರೇನ್‌ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯೋಗಿಗಾಗಿ ಹರಕೆ ಹೊತ್ತಿದ್ದ ರಾಮಭಕ್ತರ ವಿಜಯೋತ್ಸವ

ಈ ನಡುವೆ ಗೋವಾದಲ್ಲಿ ಮರಳಿ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಮಾ.14ರಂದು ಹಾಲಿ ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ. ಶುಕ್ರವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇದೇ ವೇಳೆ ಉತ್ತರಾಖಂಡದಲ್ಲಿ ಮರಳಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯ ನೂತನ ಮುಖ್ಯಮಂತ್ರಿ ಆಯ್ಕೆ ಹೊಣೆಯನ್ನು, ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಮತ್ತು ಧಮೇಂದ್ರ ಪ್ರಧಾನ್‌ಗೆ ವಹಿಸಲಾಗಿದೆ. ಜೊತೆಗೆ ಇವರಿಗೆ ರಾಜ್ಯದಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಮತ್ತು ಕೈಲಾಶ್‌ ವಿಜಯ್‌ ವರ್ಗೀಯ ನೆರವು ನೀಡಲಿದ್ದಾರೆ. 

ಹಾಲಿ ಸಿಎಂ ಆಗಿದ್ದ ಪುಷ್ಕರ ಸಿಂಗ್‌ ಧಮಿ, ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಅವರನ್ನೇ ಸಿಎಂ ಹುದ್ದೆಗೆ ನೇಮಿಸಲು ಪ್ರಧಾನಿ ಮೋದಿಯಾಗಿ ಕೇಂದ್ರ ನಾಯಕರು ಒಲವು ಹೊಂದಿದ್ದಾರೆ. ಇವರ ಜೊತೆಗೆ ಸತ್ಪಾಲ್‌ ಮಹಾರಾಜ್‌ ಮತ್ತು ಧನ್‌ಸಿಂಗ್‌ ರಾವಂತ್‌ ಮುಖ್ಯಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿದ್ದಾರೆ.

click me!