Wayanad Landslide: ಸಾವಿನ ಸಂಖ್ಯೆ 115ಕ್ಕೆ ಏರಿಕೆ, ಶವಗಳಿಂದ ಆಸ್ಪತ್ರೆಗಳೇ ಭರ್ತಿ!

Published : Jul 30, 2024, 06:16 PM IST
Wayanad Landslide: ಸಾವಿನ ಸಂಖ್ಯೆ 115ಕ್ಕೆ ಏರಿಕೆ, ಶವಗಳಿಂದ ಆಸ್ಪತ್ರೆಗಳೇ ಭರ್ತಿ!

ಸಾರಾಂಶ

Mundakkai Chooralmala Attamala Noolpuzha Death ವಯನಾಡ್‌ ಜಿಲ್ಲೆಯ ನಾಲ್ಕು ಗ್ರಾಮಗಳ ಮೇಲೆ ಎರಗಿದ ಭೀಕರ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಸಂಜೆ 6 ಗಂಟೆಯ ವೇಳೆಗೆ 115ಕ್ಕೆ ಏರಿದೆ. ಸ್ಥಳೀಯ ಆಸ್ಪತ್ರೆಗಳು ಶವಗಳಿಂದಲೇ ತುಂಬಿಹೋಗಿರುವ ಬಗ್ಗೆ ವರದಿಯಾಗಿದೆ.

ವಯನಾಡ್‌ (ಜು.30): ಭಾರೀ ಮಳೆಯ ನಡುವೆ ಮಂಗಳವಾರ ಬೆಳಗ್ಗೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ 115ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಸಂಜೆ 6 ಗಂಟೆಯ ಸುದ್ದಿ ಅಪ್‌ಡೇಟ್‌ ವೇಳೆ 115ಕ್ಕೂ ಅಧಿಕ ಶವ ಸಿಕ್ಕಿದೆ ಎನ್ನುವ ಮಾಹಿತಿ ಲಭಿಸಿದೆ. 128 ಮಂದಿ ಗಾಯಗೊಂಡಿದ್ದು, ಗುಡ್ಡ ಪ್ರದೇಶಗಳಲ್ಲಿ ಇನ್ನೂ ನೂರಾರು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.  ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಭೂಕುಸಿತಗಳು ವಯನಾಡ್‌ಗೆ ಅಪ್ಪಳಿಸಿದ ಕಾರಣ ಎನ್‌ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಹಲವು ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸಂಜೆ 5 ಗಂಟೆಯ ವೇಳೆ ವಯನಾಡ್‌ ಜಿಲ್ಲಾಡಳಿತ 107 ಮಂದಿ ಸಾವು ಕಂಡಿದ್ದಾಗಿ ದೃಢಪಡಿಸಿತ್ತು. ಈಗ ಆ ಸಂಖ್ಯೆ 6 ಗಂಟೆಯ ವೇಳೆಗೆ ಇನ್ನಷ್ಟು ಏರಿಕೆಯಾಗಿದೆ.

ಮೆಪ್ಪಾಡಿ ಆರೋಗ್ಯ ಕೇಂದ್ರದಲ್ಲಿ 42 ಸಾವು ದೃಢವಾಗಿದ್ದರೆ.  ವಿಮ್ಸ್ ಆಸ್ಪತ್ರೆ 3, ಬತ್ತೇರಿ ತಾಲೂಕು ಆಸ್ಪತ್ರೆ 1, ನಿಲಂಬೂರ್ ಜಿಲ್ಲಾಸ್ಪತ್ರೆಯಲ್ಲಿ 41 ಮೃತದೇಹಗಳಿದ್ದು 16 ದೇಹದ ಭಾಗಗಳಿವೆ. 120ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ  83 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೆಪ್ಪಾಡಿಯಲ್ಲಿ 27, ಕಲ್ಪೆಟ್ಟಾ ಜನರಲ್ ಆಸ್ಪತ್ರೆಯಲ್ಲಿ 13 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ 98 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, 20 ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿದಿದೆ ಎನ್ನುವ ಮಾಹಿತಿ ಬಂದಿದೆ. ಉಳಿದಂತೆ ಸ್ಥಳೀಯ ಆಸ್ಪತ್ರೆಗಳು ಶವದಿಂದ ಸಂಪೂರ್ಣವಾಗಿ ಭರ್ತಿಯಾಗಿದ್ದು, ಶವಗಳನ್ನು ಇಡಲು ಆಸ್ಪತ್ರೆಯ ಎದುರುಗಡೆಯೇ ಶಾಮಿಯಾನ ಹಾಕಲಾಗಿದೆ.

ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸೇರಿವೆ. ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿಹೋಗಿರುವ ಬಗ್ಗೆ ಈಗಾಗಲೇ ಆತಂಕವಿದೆ.  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದೊಂದು ಹೃದಯ ವಿದ್ರಾವಕ ದುರಂತ ಎಂದು ಬಣ್ಣಿಸಿದ್ದು, ಇಡೀ ಪ್ರದೇಶವೇ ನಾಶವಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನೂ ಘೋಷಿಸಿದೆ.

"ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತವು ಹೃದಯ ವಿದ್ರಾವಕ ದುರಂತವಾಗಿದೆ. ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇಡೀ ಪ್ರದೇಶವು ನಾಶವಾಗಿದೆ. ನಿನ್ನೆ ರಾತ್ರಿ ಮಲಗಿದ್ದ ಅನೇಕರು ಕೊಚ್ಚಿ ಹೋಗಿದ್ದಾರೆ" ಎಂದು ವಿಜಯನ್ ಹೇಳಿದರು. ವೈದ್ಯಕೀಯ ತಂಡಗಳು ಸೇರಿದಂತೆ 225 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಎಂಐ-17 ಮತ್ತು ಎಎಲ್‌ಹೆಚ್ (ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್) ಸಹ ಸೇವೆಗೆ ಒಳಪಟ್ಟಿವೆ.

Wayanad Landslide: ಮುಂಡಕೈಯಲ್ಲಿ ಉಳಿದಿರೋದು 10 ಮನೆಗಳು ಮಾತ್ರ!

ಎಲ್ಲಾ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಪ್ಯಾರಾ ರೆಜಿಮೆಂಟ್ ಅಡಿಯಲ್ಲಿ ಕ್ಯಾಲಿಕಟ್‌ನಲ್ಲಿ ನಿಯಂತ್ರಣ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಭಾರತೀಯ ನೌಕಾಪಡೆಯ ತಂಡವೊಂದು ರಕ್ಷಣಾ ಕಾರ್ಯದಲ್ಲಿ ನೆರವಾಗಲಿದೆ ಎಂದು ಕೇರಳ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಪೀಡಿತ ಪ್ರದೇಶಗಳನ್ನು ಸಮೀಪದ ಚೂರಲ್ಮಲಾ ಪಟ್ಟಣಕ್ಕೆ ಸಂಪರ್ಕಿಸುವ ಜಿಲ್ಲೆಯ ಸೇತುವೆಯೂ ಕೊಚ್ಚಿಹೋಗಿದೆ ಎಂದು ಜಾರ್ಜ್ ಹೇಳಿದರು. "ಸುಮಾರು 70 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಯನ್ನು ನಾವು ನೀಡುತ್ತಿದ್ದೇವೆ" ಎಂದು ಅವರು ಹೇಳಿದರು.

Wayanad Landslide: ಚಿತ್ರಗಳಲ್ಲಿ ದೇವರನಾಡಿನ ಭೀಕರ ಭೂಕುಸಿತ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು