ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಂಪೂರ್ಣ 4 ಗ್ರಾಮಗಳೇ ನಾಪತ್ತೆಯಾಗಿವೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ 40ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ವಯನಾಡ್ (ಜು.30): ಕೇರಳದ ವಯ್ನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಇದರಲ್ಲಿ ಸಂಪೂರ್ಣ ನಾಲ್ಕು ಗ್ರಾಮಗಳೇ ನಾಪತ್ತೆಯಾಗಿವೆ ಎಂದು ವರದಿಯಾಗಿದೆ. ಇಲ್ಲಿಯವರೆಗೂ 40ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಭಾರಿ ಮಳೆ, ಭೂಕುಸಿತದ ಬೆನ್ನಲ್ಲಿಯೇ ಸಂಭವಿಸಿದ ಪ್ರವಾಹದಲ್ಲಿ ಶವಗಳು ವಯನಾಡ್ ಜಿಲ್ಲೆಯ ಗಲ್ಲಿಗಲ್ಲಿಗಳಿಗೆ ತೇಲಿಬಂದಿವೆ ಎನ್ನಲಾಗಿದೆ. ನಿಲಂಬೂರಿನ ಪೋತುಕಲ್ ಪ್ರದೇಶದ ನದಿಯಲ್ಲಿ 19 ಮಂದಿಯ ಶವಗಳು ವಿವಿಧೆಡೆ ಕೊಚ್ಚಿ ಹೋಗಿವೆ. ಬೆಳಗಿನ ಜಾವ ಹಲವೆಡೆ ಇತರ ದೇಹಗಳು ಹಾಗೂ ದೇಹದ ಭಾಗಗಳು ತೇಲುತ್ತಿವೆ ಎಂದು ವರದಿಯಾಗಿದೆ. ಒಂದು ಮಗು ಸೇರಿದಂತೆ ಆರು ಮಂದಿಯ ಮೃತದೇಹಗಳು ಮುಂಜಾನೆ ಪತ್ತೆಯಾಗಿವೆ. ಭೂಕುಸಿತದಿಂದ ವಯನಾಡ್‌ನ ಬಹುತೇಕ ಗ್ರಾಮಗಳು ಕೊಚ್ಚಿ ಹೋಗಿದೆ ಎಂಬುದು ಇದರಿಂದ ಗೊತ್ತಾಗಿದೆ. ಪೋತುಕಲ್ ವಯನಾಡಿನ ಗಡಿ ಪ್ರದೇಶವಾಗಿದ್ದು, ಚಾಲಿಯಾರ್ ಅರಣ್ಯದ ಮೂಲಕ ಬಂದ ಬಲವಾದ ಪ್ರವಾಹದಲ್ಲಿ ಮೃತದೇಹಗಳು ಜನನಿಬಿಡ ಪ್ರದೇಶವನ್ನು ತಲುಪಿವೆ ಎಂದು ಶಂಕಿಸಲಾಗಿದೆ.
ವೆಲ್ಲಿಲಂಪಾರ ಕಾಲೋನಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಭೂತಾನಂ ಮಾಚಿಕೈಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ವೆಲ್ಲಿಮಡುವಿನಿಂದ ದೇಹದ ಭಾಗವನ್ನು ವಶಪಡಿಸಿಕೊಳ್ಳಲಾಗಿದೆ. ಕುಣಿಪಾರದಲ್ಲಿ ಮೂರು ವರ್ಷದ ಮಗುವಿನ ಶವ ಪತ್ತೆಯಾಗಿದೆ. ಪ್ರಧಾನಿ ವರೇಂದ್ರ ಮೋದಿ ಅವರು ವಯನಾಡ್ ದುರಂತಕ್ಕೆ ಆರ್ಥಿಕ ನೆರವು ಘೋಷಿಸುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಚುರಲ್ ಮಾಲಾ ಮಾರುಕಟ್ಟೆ ಪ್ರವಾಹದಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೇಳಿದೆ. ಇಡೀ ಪ್ರದೇಶದಲ್ಲಿ ಹೃದಯ ವಿದ್ರಾವಕ ದೃಶ್ಯಗಳೇ ಕಾಣಸಿಗುತ್ತಿದೆ.
ವಯನಾಡು ಜಿಲ್ಲೆಯ ಮೂರು ಗ್ರಾಮಗಳಲ್ಲಿ ಗುಡ್ಡ ಕುಸಿತವಾಗಿದೆ ಎನ್ನಲಾಗಿದೆ. ಅದರಲ್ಲೂ ಮಂಡಕೈ ಗ್ರಾಮ ಸಂಪೂರ್ಣವಾಗಿ ನಾಪತ್ತೆಯಾಗಿದೆ. ರಕ್ಷಣಾ ಕಾರ್ಯಾಚರಣೆಗೆ 225 ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈತನಕ 40ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.
ಸೇನಾ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸ್ಥಳವಿಲ್ಲ: ವಯನಾಡ್‌ನ ಭೂಕುಸಿದ ಪ್ರದೇಶ ಎಷ್ಟು ತೀವ್ರವಾಗಿದೆಯೆಂದರೆ, ಸೇನಾ ಹೆಲಿಕಾಪ್ಟರ್‌ಗೆ ಈ ಪ್ರದೇಶದಲ್ಲಿ ಲ್ಯಾಂಡ್ ಮಾಡಲು ಕೂಡ ಸಾಧ್ಯವಾಗಲಿಲ್ಲ. ರಕ್ಷಣಾ ಸಿಬ್ಬಂದಿಯನ್ನು ಹೊತ್ತ ಸೇನಾ ಹೆಲಿಕಾಪ್ಟರ್‌ಅನ್ನು ಭೂಕುಸಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಕಳಿಸಿತ್ತು. ಆದರೆ, ಇಡೀ ಪ್ರದೇಶ ಯಾವ ರೀತಿಯಲ್ಲಿ ಕೊಚ್ಚಿ ಹೋಗಿದೆಯೆಂದರೆ, ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಕೂಡ ಸ್ಥಳವಿದ್ದಿರಲಿಲ್ಲ. ಕೊನೆಗೆ ಕೋಯಿಕ್ಕೋಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಅಲ್ಲಿಂದ ಸೇನಾ ತಂಡವನ್ನು ಕರೆಸಿಕೊಳ್ಳಲಾಗಿದೆ. ಕೇರಳದ ಎಲ್ಲಾ ಆರ್ಮಿ, ನೇಮಿ ಹಾಗೂ ಏರ್‌ಪೋರ್ಸ್ ತಂಡಗಳನ್ನು ಭೂಕುಸಿತ ಪ್ರದೇಶಕ್ಕೆ ಕಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ ಎಂದು ಕೇರಳ ಸಚಿವರು ತಿಳಿಸಿದ್ದಾರೆ.
ಕೇರಳದಲ್ಲಿ ಭೀಕರ ಭೂಕುಸಿತ, 40ಕ್ಕೂ ಹೆಚ್ಚು ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!
ಕೇರಳ ಸಿಎಂ ಪಿಣರಾಯಿ ವಿಜಯನ್ ಪೊಲೀಸ್ ಡ್ರೋನ್‌ಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲು ತಿಳಿಸಿದ್ದಾರೆ. ಆದಷ್ಟು ಹೆಚ್ಚಿನ ಪ್ರಮಾಣದ ಡ್ರೋನ್‌ಗಳ ನಿಯೋಜನೆಯಾಗಲಿ ಎಂದಿದ್ದಾರೆ. ಅದರೊಂದಿಗೆ ಶ್ವಾನ ದಳವನ್ನು ಕೂಡ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ.
ಶಿರೂರು ಗುಡ್ಡ ಕುಸಿತ ದುರಂತ: 3 ಜನ, ಲಾರಿ ತಲಾಶ್ ಸ್ಥಗಿತ, 13 ದಿನ ಹುಡುಕಿದರೂ ಫಲವಿಲ್ಲ