ಸಾಕ್ಷರತೆ: ಕೇರಳ ನಂ.1, ಡೆಲ್ಲಿ 2, ಆಂಧ್ರ ಪ್ರದೇಶ ಲಾಸ್ಟ್..!

By Kannadaprabha NewsFirst Published Sep 8, 2020, 9:28 AM IST
Highlights

ಸೆಪ್ಟೆಂಬರ್ 08ನ್ನು ವಿಶ್ವಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲೇ ದೇಶದ ಸಾಕ್ಷರತೆ ಪ್ರಮಾಣ ಪ್ರಕಟಗೊಂಡಿದ್ದು, ಕೇರಳ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ಯಾವ ಸ್ಥಾನದಲ್ಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಸೆ.08): ಸಂಪೂರ್ಣ ಸಾಕ್ಷರ ರಾಜ್ಯ ಎಂದೇ ಖ್ಯಾತಿ ಪಡೆದಿರುವ ಕೇರಳ, ಸಾಕ್ಷರತೆಯಲ್ಲಿ ಈ ಸಲವೂ ಮೊದಲ ಸ್ಥಾನ ಪಡೆದಿದೆ. ಕೇರಳದಲ್ಲಿ ಶೇ.96.2 ಜನರು ಸಾಕ್ಷರರಾಗಿದ್ದಾರೆ. ಆದರೆ ಕೇವಲ ಶೇ.66.4 ಸಾಕ್ಷರರಿರುವ ಆಂಧ್ರಪ್ರದೇಶ, ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. 

ಕರ್ನಾಟಕದಲ್ಲಿ ಶೇ.77.2 ಜನ ಸಾಕ್ಷರರಿದ್ದು, ದೇಶದಲ್ಲಿ 15ನೇ ಸ್ಥಾನ ಪಡೆದಿದೆ. ಇನ್ನು ಭಾರತದಲ್ಲಿ ಒಟ್ಟಾರೆ ಶೇ.77.7 ಸಾಕ್ಷರರಿದ್ದಾರೆ. ಗ್ರಾಮೀಣ ಭಾಗದ ಸಾಕ್ಷರತೆ ಶೇ.73.5 ಇದ್ದರೆ ನಗರ ಭಾಗದ ಸಾಕ್ಷರತೆ ಶೇ.87.7 ಇದೆ. ರಾಷ್ಟ್ರೀಯ ಸಾಂಖ್ಯಿಕ ಸಚಿವಾಲಯ ಸಿದ್ಧಪಡಿಸಿದ ‘ಭಾರತದಲ್ಲಿ ಶಿಕ್ಷಣ-2017-18’ ಹೆಸರಿನ ರಾಷ್ಟ್ರೀಯ ಸಮೀಕ್ಷೆಯಲ್ಲಿ ಈ ಮೇಲಿನ ಅಂಶ ಸೇರಿದಂತೆ ಯಾವ ರಾಜ್ಯಗಳಲ್ಲಿ ಎಷ್ಟು ಸಾಕ್ಷರತೆ ಇದೆ ಎಂಬ ಎಲ್ಲ ವಿವರ ನೀಡಲಾಗಿದೆ.

ಟಾಪ್‌-5:

ಕೇರಳದ ನಂತರದ ಸ್ಥಾನದಲ್ಲಿ ದಿಲ್ಲಿ ಶೇ.88.7, ಉತ್ತರಾಖಂಡ ಶೇ.88.6, ಹಿಮಾಚಲ ಪ್ರದೇಶ ಶೇ.86.6 ಹಾಗೂ ಅಸ್ಸಾಂ ಶೇ.85.9 ಇವೆ. ಇವು ಟಾಪ್‌ 5ರಲ್ಲಿ ಸ್ಥಾನ ಪಡೆದಿವೆ.

ಕಳಪೆ ಸಾಧನೆ:

ಆದರೆ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಆಂಧ್ರಪ್ರದೇಶದ ನಂತರದ ಕಳಪೆ ಸಾಧನೆ ರಾಜಸ್ಥಾನದ್ದು. ಅಲ್ಲಿ ಕೇವಲ ಶೇ.69.7 ಮಂದಿ ಸಾಕ್ಷರರಿದ್ದಾರೆ. ತೆಲಂಗಾಣದಲ್ಲಿ ಶೇ.72.8, ಉತ್ತರ ಪ್ರದೇಶ ಶೇ.73 ಹಾಗೂ ಮಧ್ಯಪ್ರದೇಶದಲ್ಲಿ ಶೇ.73.3 ಸಾಕ್ಷರರಿದ್ದಾರೆ ಎಂದು ವರದಿ ತಿಳಿಸಿದೆ.

ಬಿಹಾರ ಜತೆ ರಾಜ್ಯದ ಎರಡು ಕ್ಷೇತ್ರಗಳಿಗೂ ಚುನಾವಣೆ

ಪುರುಷ ಸಾಕ್ಷರತೆ ಹೆಚ್ಚು:

ಮಹಿಳೆಯರು ಶೇ.70.3ರಷ್ಟು ಸಾಕ್ಷರರಾಗಿದ್ದರೆ, ಪುರುಷರ ಸಾಕ್ಷರತಾ ಪ್ರಮಾಣ ಶೇ.84.7 ಇದೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಪುರುಷರ ಸಾಕ್ಷರತೆಯೇ ಹೆಚ್ಚಿದೆ. ಕರ್ನಾಟಕದಲ್ಲಿ ಶೇ.83.4 ಪುರುಷರು ಸಾಕ್ಷರರಿದ್ದರೆ, ಮಹಿಳಾ ಸಾಕ್ಷರತೆ ಪ್ರಮಾಣ ಶೇ.70.5 ಎಂದು ವರದಿ ತಿಳಿಸಿದೆ.
 

click me!