ಕೇರಳ ಭೀಕರ ಮಳೆಗೆ ಇನ್ನೂ 20ಮಂದಿ ಬಲಿ!

By Kannadaprabha NewsFirst Published Oct 18, 2021, 7:32 AM IST
Highlights

* ಮೃತರ ಸಂಖ್ಯೆ 26ಕ್ಕೆ ಏರಿಕೆ, ಇನ್ನೂ ಹಲವರು ನಾಪತ್ತೆ

* ಸೇನೆ, ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣಾ ಕಾರ್ಯ

* ಕೇರಳಕ್ಕೆ ಸಕಲ ನೆರವು ಘೋಷಿಸಿದ ಮೋದಿ, ಅಮಿತ್‌ ಶಾ

ತಿರುವನಂತಪುರ/ನವದೆಹಲಿ(ಅ.18): ಅರಬ್ಬಿ ಸಮುದ್ರದಲ್ಲಿ'(Arabian Sea) ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ(Rain) ಮತ್ತು ತತ್ಸಂಬಂಧಿ ಭೂಕುಸಿತ(Landslide), ಪ್ರವಾಹಕ್ಕೆ(Flood) ತುತ್ತಾಗಿದ್ದ ಕೇರಳದಲ್ಲಿ(Kerala) ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ಏರಿದೆ. ಇನ್ನೂ ಹಲವಾರು ಜನ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.

ಶನಿವಾರ ಮಳೆ ಸಂಬಂಧಿ ಘಟನೆಗಳಿಗೆ 6 ಜನರು ಸಾವನ್ನಪ್ಪಿದ್ದರು. ಭಾನುವಾರ ಇನ್ನೂ 20 ಶವಗಳು ಪತ್ತೆಯಾಗಿವೆ. ಎಲ್ಲಾ ಸಾವು ಕೊಟ್ಟಾಯಂ (13), ಇಡುಕ್ಕಿ (9) ಹಾಗೂ ಆಲ​ಪ್ಪು​ಳ (4) ಜಿಲ್ಲೆಯಲ್ಲೇ ಸಂಭವಿಸಿವೆ.

ಈ ನಡುವೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಜೊತೆಗೆ ಹವಾಮಾನ ಇಲಾಖೆ ಕೂಡಾ ರಾಜ್ಯಾದ್ಯಂತ ಮಳೆ ಪ್ರಮಾಣ ಇಳಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವುದು ರಾಜ್ಯ ಸರ್ಕಾರ ಮತ್ತು ಜನತೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಈ ನಡುವೆ ಕೇರಳದಲ್ಲಿನ ಬೆಳವಣಿಗೆಯನ್ನು ಕೇಂದ್ರ ಸರ್ಕಾರ ಗಮನಿಸುತ್ತಿದೆ. ರಾಜ್ಯಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ನಾವು ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ.

ಅಪಾಯದಿಂದ ಪಾರು:

ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಭಾನುವಾರಕ್ಕೆ ಕೇರಳದ 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಮತ್ತು 7 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿತ್ತು. ಆದರೆ ಶನಿ​ವಾರ ರಾತ್ರಿ ಮಳೆ ಸುರಿ​ದ​ರೂ, ಭಾನುವಾರ ಬೆಳ​ಗ್ಗೆ​ಯಿಂದ ನಿರೀಕ್ಷಿಸಿದ ಪ್ರಮಾಣದಲ್ಲಿ ಎಲ್ಲಿಯೂ ಮಳೆ ಸುರಿದಿಲ್ಲ. ಜೊತೆಗೆ ಹೊಸದಾಗಿ ಎಲ್ಲಿಯೂ ಭೂಕುಸಿತ ಮತ್ತು ಪ್ರವಾಹಸ್ಥಿತಿ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಅ.20ರಿಂದ ಮತ್ತೆ 3-4 ದಿನಗಳ ಕಾಲ ರಾಜ್ಯದ ಆಯ್ದ ಪ್ರದೇಶಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆಯ ಸಾಧ್ಯತೆ ಇದೆ ಎಂದಿದ್ದಾ​ರೆ.

ಪರಿ​ಹಾ​ರಕ್ಕೆ ಸೂಚ​ನೆ:

ಮಳೆ, ಭೂಕುಸಿತ, ಪ್ರವಾಹದಿಂದ ಸಂತ್ರಸ್ತರಾಗಿರುವವರಿಗೆ ಹಲವೆಡೆ ಪರಿಕಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವಂತೆ ಸಿಎಂ ಪಿಣರಾಯಿ ವಿಜಯನ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ಭೂಕುಸಿತಕ್ಕೆ ತುತ್ತಾಗಿದ್ದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಸೇನೆ, ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್‌ ಪಡೆಗಳು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿವೆ. ಈ ಕಾರ್ಯಗಳಿಗೆ ಸ್ಥಳೀಯರು ಕೂಡಾ ಕೈಜೋಡಿಸಿದ್ದಾರೆ.

ಪರೀ​ಕ್ಷೆ ರದ್ದು​, ದರ್ಶನ ಸ್ಥಗಿ​ತ:

ಈ ನಡುವೆ ಅ.18ರಿಂದ ಆರಂಭವಾಗಬೇಕಿದ್ದ ಹಿರಿಯ ಪ್ರಾಥಮಿಕ ಶಾಲೆಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಶಬ​ರಿ​ಮಲೆ ದೇಗು​ಲದ ದರ್ಶ​ನವನ್ನು 2 ದಿನದ ಮಟ್ಟಿಗೆ ಸ್ಥಗಿ​ತ​ಗೊ​ಳಿ​ಸ​ಲಾ​ಗಿ​ದೆ.

ಇಷ್ಟೊಂದು ಪ್ರವಾ​ಹಕ್ಕೆ ಕಾರಣ ಏನು?

ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆ​ಗ​ಳಲ್ಲಿ ಸಂಭ​ವಿ​ಸಿದ ‘ಮಿನಿ ಮೇಘ​ಸ್ಫೋ​ಟ​’​ಗಳು ಕೇರ​ಳ ಪ್ರವಾ​ಹಕ್ಕೆ ಕಾರಣ. ಈ ಮೇಘ​ಸ್ಫೋ​ಟ​ಗ​ಳಿಂದ ಕೇವಲ 2 ತಾಸಿ​ನಲ್ಲಿ 5ರಿಂದ 10 ಸೆಂ.ಮೀ. ಮಳೆ ಸುರಿ​ದು ಅನಾ​ಹುತಕ್ಕೆ ನಾಂದಿ ಹಾಡಿ​ತು ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಸಿಕ್ಕಿತು 3 ಮಕ್ಕಳ ಶವ!

ಮಳೆ ಸಂಬಂಧಿತ ಒಂದು ಪ್ರಕರಣದಲ್ಲಿ 8, 7 ಮತ್ತು 4 ವರ್ಷದ ಮಕ್ಕಳ ಶವಗಳು ಪರಸ್ಪರ ಕೈಹಿಡಿದುಕೊಂಡ ಸ್ಥಿತಿಯಲ್ಲೇ ಪತ್ತೆಯಾಗಿದ್ದು, ರಕ್ಷಣಾ ಸಿಬ್ಬಂದಿಗಳ ಕಣ್ಣಲ್ಲಿ ನೀರು ತರಿಸಿದೆ. ಇನ್ನೊಂದು ಪ್ರಕರಣದಲ್ಲಿ ಮನೆ ಕೊಚ್ಚಿ ಹೋಗಿ 75 ವರ್ಷದ ವೃದ್ಧ ಮಹಿಳೆ, ಆಕೆಯ 40 ವರ್ಷದ ಪುತ್ರ, 35 ವರ್ಷದ ಸೊಸೆ, 14, 12 ಮತ್ತು 10 ವರ್ಷ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಕೇರಳದಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ ವಿಷಯ ವಿಷಾದಕರ ಸಂಗತಿ. ಘಟನೆಯಲ್ಲಿ ಮಡಿದವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಮಳೆ ಪರಿಸ್ಥಿತಿ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ. ಘಟನೆಯಲ್ಲಿ ಸಂತ್ರಸ್ತ ಜನರ ನೆರವಿಗಾಗಿ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಸುಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.

- ನರೇಂದ್ರ ಮೋದಿ, ಪ್ರಧಾನಿ

click me!