
ನವದೆಹಲಿ (ಜು.14): ಭಾರತದ ಕೇಂದ್ರ ಸರ್ಕಾರದಿಂದ ಯೆಮೆನ್ ಸರ್ಕಾರದ ಜೊತೆಗೆ ಮಲೆಯಾಳಿ ನರ್ಸ್ ನಿಮಿಷಪ್ರಿಯಾ ಅವರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡುವಂತೆ ನಡೆಸಲಾದ ಚರ್ಚೆಯಲ್ಲಿ ಅನೌಪಚಾರಿಕವಾಗಿ ಗಲ್ಲು ಶಿಕ್ಷೆ ಸ್ಥಗಿತ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ಮಾಡಿದ್ದು, ಪ್ರಕರಣವನ್ನು ಜು.18ಕ್ಕೆ ಮುಂದೂಡಿಕೆ ಮಾಡಿದೆ.
ಯೆಮೆನ್‌ನಲ್ಲಿ ಕೊಲೆ ಆರೋಪಕ್ಕೆ ಗುರಿಯಾಗಿ ಮರಣದಂಡನೆ ವಿಧಿಸಲ್ಪಟ್ಟಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ. ಪ್ರಕರಣವನ್ನು ತುರ್ತು ಪ್ರಕರಣವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಅರ್ಜಿದಾರರಿಂದ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ಇಂದು ಬೆಳಿಗ್ಗೆ 10.30 ಗಂಟೆಗೆ ಕೇಂದ್ರ ಸರ್ಕಾರ ಮತ್ತು ಯೆಮೆನ್ ಸರ್ಕಾರದ ನಡುವೆ ನೇರ ಮಾತುಕತೆ ನಡೆದಿದ್ದು, ಭಾರತೀಯ ನರ್ಸ್‌ನ ಮರಣದಂಡನೆ ಸ್ಥಗಿತಗೊಳ್ಳುವ ಬಗ್ಗೆ ಅನೌಪಚಾರಿಕ ಮಾಹಿತಿ ಬಂದಿದ್ದು ಸಹ, ಅದು ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ತಿಳಿಸಿದ್ದಾರೆ.
ಯೆಮೆನ್ ಸರ್ಕಾರದಿಂದ ಸ್ಪಷ್ಟತೆ ಇಲ್ಲ:
ಭಾರತ ಸರ್ಕಾರ ಈ ಪ್ರಕರಣದ ಕುರಿತು ಯೆಮೆನ್ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದು, ಅಲ್ಲಿಯ ಆಡಳಿತಾಧಿಕಾರಿ ಶೇಖ್ ಅವರ ಜೊತೆಗೂ ಸಂಪರ್ಕ ಸಾಧಿಸಲಾಗಿದೆ. ಆದರೆ ಯಾವುದೇ ಸ್ಪಷ್ಟ ಮತ್ತು ನಿಖರವಾದ ಉತ್ತರ ದೊರಕಿಲ್ಲ. 'ಅವರು ಈ ಬಗ್ಗೆ ಬಹಳಷ್ಟು ಗೌಪ್ಯತೆ ಕಾಪಾಡುತ್ತಿದ್ದಾರೆ' ಎಂದು ಎಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪರಿಹಾರ ರೂಪದಲ್ಲಿ ಹಣ ನೀಡುವ ಪ್ರಯತ್ನ ವಿಫಲ:
ನಿಮಿಷಾ ಪ್ರಿಯಾಳ ಮರಣದಂಡನೆ ತಪ್ಪಿಸಲು ಪರಿಹಾರದ ರೂಪದಲ್ಲಿ ಹಣ ನೀಡುವ ಕುರಿತು ಮಾತುಕತೆ ನಡೆಸಲಾಗಿದ್ದು, ಅದೂ ಪ್ರಯೋಜನಕಾರಿಯಾಗಿಲ್ಲ. ಯೆಮೆನ್ ಸರ್ಕಾರ ಈ ಸಂಬಂಧ ಸ್ಪಷ್ಟ ನಿರ್ಧಾರವನ್ನೇ ತೆಗೆದುಕೊಳ್ಳದ ಕಾರಣ ಪರಿಸ್ಥಿತಿ ಗಂಭೀರವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ವಿಚಾರಣೆ ಮುಂದೂಡಿಕೆ:
ಈ ಬೆಳವಣಿಗೆಯ ಮಧ್ಯೆ, ಸುಪ್ರೀಂ ಕೋರ್ಟ್ ತನಿಖೆ ನಿರಂತರವಾಗಿ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರಣೆಯನ್ನು ಶುಕ್ರವಾರಕ್ಕೆ (ಜು.18) ಮುಂದೂಡಿದೆ. ಅರ್ಜಿದಾರರು ವಸ್ತು ಸ್ಥಿತಿಯನ್ನು ವಿವರಿಸಿ ವಿವರವಾದ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ