
ಕಲ್ಲಿಕೋಟೆ (ಅ.01): ಇದು ನಿಜಕ್ಕೂ ಅವಿಸ್ಮರಣೀಯ ಕ್ಷಣ. ಧರ್ಮ ಮೀರಿದ ಅಭಿವ್ಯಕ್ತಿಗೆ ಸಿಕ್ಕಿದ ಜಯ. ಸಂಪ್ರದಾಯವಾದಿ ಮುಸ್ಲಿಂ ಮಹಿಳೆಯೊಬ್ಬರು (Muslim woman) ಪ್ರೀತಿಯಿಂದ ಬಿಡಿಸಿದ ಬಾಲಕೃಷ್ಣನ (Balakrishna) ಚಿತ್ರಗಳು ಇದೀಗ ಹಿಂದೂಗಳ ಮನೆ, ದೇಗುಲಗಳಲ್ಲಿ ಸ್ಥಾನ ಪಡೆಯುತ್ತಿದೆ. ಪಟ್ಟಣಂತಿಟ್ಟಂ (Pattanamthittam) ಜಿಲ್ಲೆಯ ಪಾಂಡಲಂನ ದೇಗುಲವೊಂದು ಸ್ವತಃ ಈ ಮುಸ್ಲಿಂ ಮಹಿಳೆಯನ್ನು (Muslim woman) ದೇಗುಲಕ್ಕೆ ಕರೆಸಿ ದೇವರ ಮುಂದೆಯೇ ಆಕೆ ಬಿಡಿಸಿದ ಚಿತ್ರ ಸ್ವೀಕರಿಸಿದೆ.
ಹೌದು. ಕೊಯಿಲಾಂಡಿಯ ಜಸ್ನಾ ಸಲೀಂ(28) (Jasna Saleem) 6 ವರ್ಷದಿಂದ ಶ್ರೀಕೃಷ್ಣನ ಚಿತ್ರ ಬಿಡಿಸುತ್ತಿದ್ದಾರೆ. ಸಂಪ್ರದಾಯಬದ್ಧ ಮುಸ್ಲಿಂ ಕುಟುಂಬದಿಂದ ಬಂದ ಜಸ್ನಾ ಎಲ್ಲರ ವಿರೋಧದ ನಡುವೆಯೇ ಕೃಷ್ಣನ ಚಿತ್ರ ಬಿಡಿಸುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಲ್ಲದೆ, ಪ್ರತಿವರ್ಷ ಕೃಷ್ಣ ಜನ್ಮಾಷ್ಠಮಿಯಂದು ಗುರುವಾಯೂರಿನ (Guruvayur) ಖ್ಯಾತ ಶ್ರೀಕೃಷ್ಣ ದೇಗುಲಕ್ಕೆ ತಾವು ಬಿಡಿಸಿದ ಚಿತ್ರ ಅರ್ಪಿಸುತ್ತಾ ಬರುತ್ತಿದ್ದಾರೆ. ಆದರೆ, ಹಿಂದೂಯೇತರರಿಗೆ ಈ ದೇಗುಲ ಪ್ರವೇಶ ನಿಷಿದ್ಧವಿರುವ ಕಾರಣ ಹೊರಗಿನಿಂದಲೇ ಚಿತ್ರ ಅರ್ಪಿಸಿ ಬರುತ್ತಿದ್ದಾರೆ. ಗರ್ಭಗುಡಿ ಎದುರೇ ಈ ಚಿತ್ರ ಅರ್ಪಿಸಬೇಕೆಂಬ ಒಂದು ಕೊರಗಿದ್ದು ಅದೂ ಇತ್ತೀಚೆಗೆ ನಿವಾರಣೆಯಾಗಿದೆ. ಪಟ್ಟಣಂತಿಟ್ಟಜಿಲ್ಲೆಯ ಪಾಂಡಲಂನ ಉಲನಾಡು ಶ್ರೀಕೃಷ್ಣಸ್ವಾಮಿ ದೇವಸ್ಥಾನದವರೇ ಸ್ವತಃ ಜಸ್ನಾರನ್ನು ದೇಗುಲಕ್ಕೆ ಆಹ್ವಾನಿಸಿ ಶ್ರೀಕೃಷ್ಣನ ಚಿತ್ರವನ್ನು ಧಾರ್ಮಿಕ ವಿಧಿ-ವಿಧಾನದೊಂದಿಗೆ ಸ್ವೀಕರಿಸಿದ್ದಾರೆ. ಇದು ನಿಜಕ್ಕೂ ಕನಸು ನಿಜವಾದ ಸಮಯ. ಮೊದಲ ಬಾರಿಗೆ ಗರ್ಭಗುಡಿ ಮುಂದೆ ನಿಂತು ನಾನು ಬಿಡಿಸಿದ ಚಿತ್ರವನ್ನು ದೇವರ ಮುಂದೆಯೇ ತೆರೆದೆ ಎಂದು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ ಜಸ್ನಾ.
ಪಂಚಾಂಗ: ಮೋಕ್ಷಾಪೇಕ್ಷೆ ಇದ್ದರೆ, ನಾರಾಯಣ ಸ್ಮರಣೆ ಮಾಡಬೇಕು!
500ಕ್ಕೂ ಹೆಚ್ಚು ಚಿತ್ರ: ಜಸ್ನಾ ಅವರು ಕ್ಯಾನ್‌ವಾಸ್ ಹಾಗೂ ಗಾಜಿನ ಮೇಲೆ ಬಾಲಕೃಷ್ಣನ ಸುಮಾರು 500 ಚಿತ್ರ ಬಿಡಿಸಿದ್ದಾರೆ. ಬೆಣ್ಣೆ ತುಂಬಿದ ಮಡಕೆಯೊಂದಿಗಿನ ಬಾಲಕೃಷ್ಣನ ಚಿತ್ರವನ್ನಷ್ಟೇ ಬಿಡಿಸುತ್ತಾರೆ ಎನ್ನುವುದು ವಿಶೇಷ. ನಾನು ತರಬೇತಿ ಪಡೆದ ಪೇಂಟರ್ (Painter) ಅಲ್ಲ. ಗರ್ಭಿಣಿಯಾಗಿದ್ದಾಗ ಅಪಘಾತದಿಂದಾಗಿ ಕೆಲಸಮಯ ವಿಶ್ರಾಂತಿಯಲ್ಲಿದೆ, ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಚಿತ್ರ ಬಿಡಿಸಲಾರಂಭಿಸಿದೆ ಎನ್ನುತ್ತಾರೆ ಜಸ್ನಾ.
ಹತ್ತನೇ ತರಗತಿಯಷ್ಟೇ ಓದಿರುವ ಜಸ್ನಾ ಇಬ್ಬರು ಮಕ್ಕಳ ತಾಯಿ. ಮೊದಲ ಬಾರಿ ಬಿಡಿಸಿದ ಶ್ರೀಕೃಷ್ಣನ ಚಿತ್ರವನ್ನು ನೋಡಿದ ಈಕೆಯ ಗಂಡ ಅದನ್ನು ನಾಶಪಡಿಸುವಂತೆ ಸಲಹೆ ಕೊಟ್ಟಿದ್ದರಂತೆ. ಈ ಚಿತ್ರ ನೋಡಿದರೆ ಕುಟುಂಬದವರು ಆಕ್ಷೇಪಿಸಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದರಂತೆ. ಆದರೆ ಅದ್ಯಾಕೋ ಜಸ್ನಾರಿಗೆ ಆ ಚಿತ್ರವನ್ನು ನಾಶಪಡಿಸಲು ಮನಸ್ಸೊಪ್ಪಲೇ ಇಲ್ಲ. ಹೀಗಾಗಿ ನೆರೆಮನೆಯ ನಂಬೂದರಿ ಕುಟುಂಬಕ್ಕೆ ಒಪ್ಪಿಸಿದರಂತೆ. ಅವರು ಅದನ್ನು ದೇವರ ಕೋಣೆಯಲ್ಲಿಟ್ಟು ಪ್ರತಿನಿತ್ಯ ಪೂಜಿಸುತ್ತಿದ್ದು, ಇದರಿಂದ ಅವರ ಇಷ್ಟಾರ್ಥಗಳೆಲ್ಲ ಈಡೇರಿದೆಯಂತೆ. ಕೇರಳ ಮಾತ್ರವಲ್ಲದೆ ನೆರೆಯ ಕರ್ನಾಟಕ, ತಮಿಳುನಾಡಿನ ಸೆಲೆಬ್ರಿಟಿಗಳಿಂದಲೂ ಶ್ರೀಕೃಷ್ಣನ ಚಿತ್ರಕ್ಕಾಗಿ ಡಿಮ್ಯಾಂಡ್ ಬರುತ್ತಿದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ