
ಮಲ್ಲಪುರಂ: ಅವರೆಲ್ಲಾ ಪೌರ ಕಾರ್ಮಿಕರು ಒಂದು ಹೊತ್ತಿನ ಊಟ ಮಾಡಬೇಕೆಂದರೆ ದುಡಿಯಲೇಬೇಕು. ಇಂತಹ 11 ಪೌರ ಕಾರ್ಮಿಕರ ಬಾಳಲ್ಲಿ ದಿಢೀರ್ ಅಂತ ಲಕ್ಷ್ಮಿಯ ಆಗಮನವಾಗಿದ್ದು, ಇದು ಕನಸೋ ನನಸೋ ಎಂದು ಅವರೆಲ್ಲಾ ಅಚ್ಚರಿಪಡುವಂತಾಗಿದೆ. ಇದಕ್ಕೆ ಕಾರಣವಾಗಿದ್ದು ಕೇರಳ ಲಾಟರಿ, ಕೇರಳದ 11 ಪೌರ ಕಾರ್ಮಿಕ ಮಹಿಳೆಯರ ಬಾಳಲ್ಲಿ ಲಾಟರಿ ಅದೃಷ್ಟದ ಬಾಗಿಲು ತೆರೆದಿದ್ದು, ಲಕ್ಷ್ಮಿಯ ಆಗಮನವಾಗಿದೆ. ಇವರಿಗೆ 10 ಕೋಟಿಯ ಲಾಟರಿ ಮಗುಚುವ ಮೂಲಕ ಮನೆ ಬಾಗಿಲಲ್ಲೇ ಲಕ್ಷ್ಮಿ ಮುಗ್ಗರಿಸಿದ್ದಾಳೆ.
ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ 11 ಜನ ಪೌರ ಕಾರ್ಮಿಕರು ಜಂಟಿಯಾಗಿ 10 ಕೋಟಿ ಮೊತ್ತದ ಲಾಟರಿ ಗೆದ್ದಿದ್ದಾರೆ. ಇದು ರಾಜ್ಯ ಸರ್ಕಾರದ ಈ ವರ್ಷದ ಮನ್ಸೂನ್ ಬಂಪರ್ ಲಾಟರಿಯಾಗಿದೆ. ಲಾಟರಿ ಗೆದ್ದ ಈ ಮಹಿಳೆಯರು ಹರಿತ ಕರ್ಮಸೇನೆಯ ಸದಸ್ಯರಾಗಿದ್ದು, ಇದು ರಾಜ್ಯದ ಕುಡುಂಬಶ್ರೀ ಮಿಷನ್ ಹಸಿರು ಸೇನೆಯಾಗಿದ್ದು (State kudumbashri Mission Green Army), ಪರಿಸರದಲ್ಲಿ ಜೈವಿಕವಾಗಿ ವಿಘಟನೆಯಾಗದ ಪ್ಲಾಸ್ಟಿಕ್ ಸೇರಿದಂತೆ ಹಲವು ಬೇಡದ ವಸ್ತುಗಳನ್ನು ಮನೆ ಬಾಗಿಲಿಗೆ ಬಂದು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ.
ಕೇರಳದಲ್ಲಿ 75 ಲಕ್ಷ ಲಾಟರಿ ಗೆದ್ದ ಕಾರ್ಮಿಕ: ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಓಡಿದ
ಈ ಲಾಟರಿ ಗೆದ್ದ ಎಲ್ಲಾ 11 ಮಹಿಳೆಯರು ಮಲ್ಲಪ್ಪುರಂನ ಪರಪ್ಪನಂಗಡಿ ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಪ್ರತ್ಯೇಕವಾಗಿ ಒಂದೊಂದು ಟಿಕೆಟ್ ಖರೀದಿಸಲು ಸಾಧ್ಯವಿಲ್ಲದ ಕಾರಣ ಇವರೆಲ್ಲರೂ ಸೇರಿ 250 ರೂಪಾಯಿ ಮೌಲ್ಯದ ಒಂದು ಟಿಕೆಟ್‌ನ್ನು ಖರೀದಿಸಿದ್ದರು. ಬಿಆರ್92 ಎಂಬಿ200261 ಸಂಖ್ಯೆಯ ಟಿಕೆಟನ್ನು ಇವರು ಖರೀದಿಸಿದ್ದು ಅದೃಷ್ಟ ಖುಲಾಯಿಸಿದೆ. ತೆರಿಗೆ ಹಣ ಹಾಗೂ ಏಜೆಂಟ್ ಕಮೀಷನ್ ಕಳೆದು ಉಳಿದ ಹಣವನ್ನು ಎಲ್ಲಾ 11 ಮಹಿಳೆಯರ ಖಾತೆಗೆ ಸಮವಾಗಿ ಹಂಚಲಾಗುತ್ತದೆ. ಪರಪ್ಪನಂಗಡಿಯಲ್ಲಿರುವ (Parappanagadi) ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಈ ಲಾಟರಿ ಟಿಕೆಟ್‌ನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಹೀಗೆ ಒಮ್ಮೆಗೆ ಒಲಿದು ಬಂದ ಧನಲಕ್ಷ್ಮಿಯನ್ನು ಕಂಡು ಹೆಂಗೆಳೆಯರು ಖುಷಿಯಾಗಿದ್ದು, ಕೆಲವರು ತಾವು ಮಾಡಿರುವ ಸಾಲವನ್ನು ತೀರಿಸುವ ಖುಷಿಯಲ್ಲಿದ್ದರೆ ಮತ್ತೆ ಕೆಲವರು ಮನೆಗಳ ನವೀಕರಣಗೊಳಿಸುವ ಸಂಭ್ರಮದಲ್ಲಿದ್ದಾರೆ. ಲಕ್ಷಾಧಿಪತಿಯಾಗಿರುವುದಕ್ಕೆ ಅವರು ಬಹಳ ಖುಷಿಯಾಗಿದ್ದು, ಹೀಗೆ ಲಾಟರಿ ಮಗುಚುವುದು ಎಂದು ಕನಸಲಷ್ಟೇ ಊಹಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ನಾನು ಹೀಗೆ ಲಾಟರಿ ಹೊಡೆಯುವುದು ಎಂದು ನಿರೀಕ್ಷೆಯ ಮಾಡಿರದ ಕಾರಣ ಬಹಳ ಖುಷಿಯಾಗಿದೆ ಎಂದು ಒಬ್ಬ ಮಹಿಳೆ ಹೇಳಿಕೊಂಡಿದ್ದಾರೆ.
ಅಮೆರಿಕದಲ್ಲೇ ಅತಿದೊಡ್ಡ 16.5 ಸಾವಿರ ಕೋಟಿಯ ಲಾಟರಿ ಗೆದ್ದ ವ್ಯಕ್ತಿ
ಎಲ್ಲರಿಂದ ಸಂಗ್ರಹಿಸಿದ ಮೊತ್ತದಲ್ಲಿ ಲಾಟರಿ ಖರೀದಿಸಿದವರ ಹೆಸರು ರಾಧಾ, ಅವರು ಈ ಹಿಂದೊಮ್ಮೆ 1000 ರೂಪಾಯಿ ಮೊತ್ತದ ಲಾಟರಿ ಹಣವನ್ನು ಗೆದ್ದಿದ್ದರು. ಇವರ ಬಳಿ ಈಗ ಸಿಕ್ಕ ಹಣ ಏನು ಮಾಡುತ್ತಿರಿ ಎಂದು ಕೇಳಿದಾಗ ಮನೆ ನವೀಕರಣಗೊಳಿಸುವೆ ಎಂದು ಹೇಳಿದ್ದಾರೆ. ಅಲ್ಲದೇ ಸ್ವಲ್ಪ ಸಾಲ ಪಾವತಿ ಮಾಡಲು ಬಾಕಿ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ನಾವೆಲ್ಲರೂ ಸಾಕಷ್ಟು ಜವಾಬ್ದಾರಿಗಳನ್ನು ಹೊಂದಿರುವ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಂದ ಬಂದಿದ್ದೇವೆ, ನಾನು ಲಾಟರಿಯಿಂದ ಗೆದ್ದ ಹಣದಿಂದ, ನನಗಿರುವ 3 ಲಕ್ಷ ರೂ. ಸಾಲವನ್ನು ತೀರಿಸುವೆ ಎಂದು ಅವರು ಹೇಳಿದ್ದಾರೆ.
57 ಸದಸ್ಯರನ್ನು ಹೊಂದಿರು ಹರಿತ ಕರ್ಮ ಸೇನೆಯ ಸಂಯೋಜಕಿ ಶೀಜಾ ಗಣೇಶ್ (Shija Ganesh) ಅವರು ಲಾಟರಿ ಗೆದ್ದ ತಮ್ಮ ತಂಡದ ಸದಸ್ಯರಿಗೆ ಶುಭಾಶಯ ತಿಳಿಸಿದ್ದು ಜೊತೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡದಲ್ಲಿರುವ ಎಲ್ಲರೂ ಕಷ್ಟಪಟ್ಟು ದುಡಿಯುವ ಜನರು ಜೀವನದ ಬೇಡಿಕೆಗಳನ್ನು ಪೂರೈಸಲು ಬಹಳ ಪ್ರಯತ್ನ ಮಾಡುತ್ತಾರೆ. ಇವರು ಸದಸ್ಯರು ಕಸವನ್ನು ವಿಂಗಡಿಸಿ ತೂಕ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರೆ ಇದರಲ್ಲಿ ಮೂವರು ಸದಸ್ಯರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಅವರ ಮಾಸಿಕ ಆದಾಯವು ರೂ 8000 ರಿಂದ ರೂ 14000 ರ ನಡುವೆ ಇದೆ ಎಂದು ಹೇಳಿದರು.
ಮಾನ್ಸೂನ್ ಬಂಪರ್‌ನ ಎರಡನೇ ಬಹುಮಾನ 10 ಲಕ್ಷ ರೂಪಾಯಿಗಳಾಗಿದ್ದು, 1 ಲಕ್ಷ ರೂಪಾಯಿ ಸಮಾಧಾನಕರ ಬಹುಮಾನವೂ ಇದೆ. 1967 ರಲ್ಲಿ ಕೇರಳ ಸರ್ಕಾರವು ಸ್ಥಾಪಿಸಿದ ಕೇರಳ ರಾಜ್ಯ ಲಾಟರಿ ಇಲಾಖೆಯು ಲಾಟರಿ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ವಾರಕ್ಕೊಮ್ಮೆ ಲಾಟರಿ ನಡೆಸುತ್ತಿರುವುದು ಭಾರತದಲ್ಲಿ ಇದೇ ಮೊದಲು. ಪ್ರಸ್ತುತ, ಇಲಾಖೆಯು ಏಳು ಲಾಟರಿಗಳನ್ನು ಆಯೋಜಿಸುತ್ತದೆ, ತಿರುವನಂತಪುರದಲ್ಲಿ (Thiruvananthapuram) ಪ್ರತಿದಿನ ಮಧ್ಯಾಹ್ನ 3:00 ಗಂಟೆಗೆ ಡ್ರಾಗಳು ನಡೆಯುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ