20 ಕೋಟಿಯ ಬಂಪರ್‌ ಲಾಟರಿ ಹಣಕ್ಕಾಗಿ ಕೋರ್ಟ್‌ಗೆ ಕಥೆ ಕಟ್ಟಿದ ನಿವೃತ್ತ ಪೊಲೀಸ್‌, ಸೀಲ್ಡ್ ಕವರ್ ಓಪನ್ ಮಾಡಿದಾಗ ಬಯಲಾಯ್ತು ಸತ್ಯ!

Published : Mar 05, 2026, 08:14 PM IST
Sajimon KK Kerala Lottory

ಸಾರಾಂಶ

ಶಬರಿಮಲೆ ತುಪ್ಪದ ಪಾರ್ಸೆಲ್‌ನಲ್ಲಿ ತನ್ನ 20 ಕೋಟಿ ರೂಪಾಯಿ ಬಂಪರ್ ಲಾಟರಿ ಟಿಕೆಟ್ ಕಳುವಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯವು ಮೂಲ ಟಿಕೆಟ್ ಅನ್ನು ಪರಿಶೀಲಿಸಿ, ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ತೀರ್ಪು ನೀಡಿದೆ.

ಕೊಚ್ಚಿ (ಮಾ.5): ಶಬರಿಮಲೆ ದೇವಳದ ತುಪ್ಪದ ಪಾರ್ಸೆಲ್‌ನಲ್ಲಿ ತನ್ನ 20 ಕೋಟಿ ರೂಪಾಯಿ ಬಂಪರ್ ಲಾಟರಿ ಟಿಕೆಟ್ ಇಟ್ಟು ಕೊರಿಯರ್ ಮಾಡಿದ್ದೆ, ಆದರೆ ಅದು ಕಳುವಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ್ದ ವಿಲಕ್ಷಣ ವಾದವನ್ನು ಕೇರಳ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ ಲಾಟರಿ ಇಲಾಖೆಯು ಅಸಲಿ ವಿಜೇತರಿಗೆ ಬಹುಮಾನದ ಹಣವನ್ನು ಬಿಡುಗಡೆ ಮಾಡಲು ಇದ್ದ ಅಡೆತಡೆಗಳು ನಿವಾರಣೆ ಮಾಡಿದೆ.

ರಾಜ್ಯ ಲಾಟರಿ ಇಲಾಖೆಯು ಈ ಹಿಂದೆ ನಿರ್ದೇಶಿಸಿದಂತೆ ಮೂಲ ವಿಜೇತ ಟಿಕೆಟ್ ಅನ್ನು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಎರ್ನಾಕುಲಂನ ಪಿರಾವೋಮ್ ಬಳಿಯ ಪಜೂರ್‌ನ ನಿವೃತ್ತ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಸಜಿಮೋನ್ ಕೆಕೆ (57) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ವಜಾಗೊಳಿಸಿದರು. ಇಲಾಖೆಯ ವರದಿಯ ಪ್ರಕಾರ, ಟಿಕೆಟ್‌ನಲ್ಲಿರುವ ಎಲ್ಲಾ ಭದ್ರತಾ ವೈಶಿಷ್ಟ್ಯಗಳು ಹಾಗೆಯೇ ಇದ್ದವು ಮತ್ತು ಅದರಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವ ಸೂಚನೆ ಇರಲಿಲ್ಲ.

ಸೀಲ್ಡ್‌ ಕವರ್‌ ಓಪನ್‌ ಮಾಡಿ ನೋಡಿದ ಕೋರ್ಟ್‌!

20 ಕೋಟಿ ಬಹುಮಾನ ಗೆದ್ದಿರುವ ತಮ್ಮ ಕಾಣೆಯಾದ ಟಿಕೆಟ್‌ನ ಹಿಂಭಾಗದಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಫೋನ್‌ ಸಂಖ್ಯೆ ಬರೆದಿದ್ದಾಗಿ ಸಜಿಮೋನ್‌ ಕೋರ್ಟ್‌ಗೆ ಹೇಳಿದ್ದರು. ಆದರೆ, ರಾಜ್ಯ ಲಾಟರಿ ಇಲಾಖೆ ನ್ಯಾಯಾಲಯಲ್ಲೆ ನೀಡಿದ ಮೂಲ ಟಿಕೆಟ್‌ನಲ್ಲಿ ಇಂಥ ಯಾವುದೇ ವಿಚಾರಗಳು ಇರದ ಹಿನ್ನಲೆಯಲ್ಲಿ ಕೇಸ್‌ಅನ್ನು ವಜಾ ಮಾಡಿ, ಸಜಿಮೋನ್‌ ಅವರ ವಾದವನ್ನು ತಳ್ಳಿಹಾಕಿದೆ.

"ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿದ ಟಿಕೆಟ್ ಅನ್ನು ನ್ಯಾಯಾಲಯದಲ್ಲಿ ತೆರೆಯಲಾಗಿದೆ. ಟಿಕೆಟ್‌ನ ಎಲ್ಲಾ ಭದ್ರತಾ ವೈಶಿಷ್ಟ್ಯಗಳು ಹಾಗೇ ಇವೆ ಮತ್ತು ಅಕ್ರಮದ ಯಾವುದೇ ಪುರಾವೆಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿರುವುದರಿಂದ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ" ಎಂದು ಅರ್ಜಿದಾರರ ಪರ ವಕೀಲ ವಿವೇಕ್ ಎಂ ತಿಳಿಸಿದ್ದಾರೆ. ಅರ್ಜಿ ವಜಾ ಮಾಡಿರುವ ಕಾರಣ, ಬಂಪರ್ ಬಹುಮಾನ ವಿತರಣೆಯ ಮೇಲಿನ ತಡೆಯಾಜ್ಞೆ ತೆರವುಗೊಂಡಿದ್ದು, ಕೇರಳ ಲಾಟರಿ ಇಲಾಖೆಯು ಮೂಲ ಟಿಕೆಟ್ ಸಲ್ಲಿಸಿದ ವ್ಯಕ್ತಿಗೆ 20 ಕೋಟಿ ರೂಪಾಯಿಗಳ ಮೊದಲ ಬಹುಮಾನವನ್ನು ವಿತರಿಸಲು ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ. 20 ಕೋಟಿಯ ಬಂಪರ್‌ ಹೊಡೆದಿದ್ದ ಜಾಕ್‌ಪಾಟ್‌ ಟಿಕೆಟ್‌ ಕಳೆದುಕೊಂಡಿದ್ದೇವೆ ಎಂದು ವಾದಿಸಿದ್ದ, ವಿಲಕ್ಷಣ ಘಟನೆಗಳ ಸರಮಾಲೆಯಿಂದ ಗಮನಸೆಳೆದಿದ್ದ ಈ ಪ್ರಕರಣ ಈ ತೀರ್ಪಿನೊಂದಿಗೆ ಕೊನೆಗೊಂಡಂತಾಗಿದೆ.

ಜಾಕ್‌ಪಾಟ್‌ ಹೊಡೆದ XC138455 ಸಂಖ್ಯೆಯ ಆ ಟಿಕೆಟ್ ಮೂಲತಃ ತನಗೆ ಸೇರಿದ್ದು, ಕೊರಿಯರ್‌ ಪಾರ್ಸೆಲ್‌ ಒಂದರಲ್ಲಿ ಮಿಸ್‌ ಆಗಿ ಸೇರಿತ್ತು, ಕೊರಿಯರ್‌ ಸಿಬ್ಬಂದಿ ಪಾರ್ಸಲ್‌ ಮಾಡುವ ವೇಳೆ ಇದನ್ನು ಕದ್ದಿದ್ದಾರೆ ಎಂದು ಸಜಿಮೋನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸಜಿಮೋನ್‌ ಕೋರ್ಟ್‌ಗೆ ಕಟ್ಟಿದ ಕಥೆಯೇನು?

ಸಜಿಮೋನ್‌ ಸಲ್ಲಿಸಿದ್ದ ಅರ್ಜಿಯ ಪ್ರಕಾರ, 2025ರ ಡಿಸೆಂಬರ್‌ 10 ರಂದು ಈ ಕಥೆ ಆರಂಭವಾಗಿತ್ತು. ತಮ್ಮ ಜೀವನದಲ್ಲಿ ಉಳಿದ ಹಣವನ್ನು ಹಾಕಿ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯಲು 17 ಆಸನಗಳ ಟೆಂಪೋ ಟ್ರಾವೆಲರ್‌ ಖರೀದಿ ಮಾಡಿದ್ದರು. ಇದೇ ತೀರ್ಥಯಾತ್ರೆಯ ನಂತರ ತಮ್ಮ ವಾಹನದಲ್ಲಿ ಬಿಟ್ಟು ಹೋಗಿದ್ದ "ಶಬರಿಮಲೆ ದೇವಳದ ತುಪ್ಪದ ಅಭಿಷೇಕ ಪ್ರಸಾದ"ವನ್ನು ಹೊಂದಿರುವ ಉಕ್ಕಿನ ಪಾತ್ರೆಯನ್ನು ಕಂಡುಕೊಂಡರು. ನಂತರ ಈ ಪ್ರಸಾದ ಯಾರದ್ದು ಎನ್ನುವುದನ್ನು ಪತ್ತೆ ಮಾಡಿದಾಗ ವಿಶಾಖಪಟ್ಟಣ ಬೆಂಗಾರ ನಾಯ್ಡು ಎನ್ನುವವರದ್ದು ಎಂದು ಗೊತ್ತಾಗಿತ್ತು. ಅವರನ್ನು ಸಂಪರ್ಕಿಸಿದಾಗ ಅವರು, ಮಕರವಿಳಕ್ಕು ಹಬ್ಬಕ್ಕಾಗಿ ಶಬರಿಮಲೆಗೆ ಭೇಟಿ ನೀಡುವ ಸಂಬಂಧಿಕರು ಅದನ್ನು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಯವರೆಗೂ ಅದನ್ನು ಸುರಕ್ಷಿತವಾಗಿ ಇಡಲು ಕೇಳಿಕೊಂಡಿದ್ದರು.

ಕೇರಳ ಲಾಟರಿ ಟಿಕೆಟ್‌ಗಳನ್ನು ನಿಯಮಿತವಾಗಿ ಖರೀದಿಸುವ ಸಜಿಮೋನ್, ಶಬರಿಮಲೆ ಪ್ರಸಾದದ ಬಳಿ ತಮ್ಮ ಲಾಟರಿ ಟಿಕೆಟ್‌ ಇಟ್ಟಲ್ಲಿ ಅದೃಷ್ಟ ತರಲಿದೆ ಎಂದು ಆಶಿಸುತ್ತಾ, ತಾವು ಖರೀದಿಸಿದ ಕ್ರಿಸ್‌ಮಸ್ ಬಂಪರ್ 2025 ಲಾಟರಿ ಟಿಕೆಟ್ ಅನ್ನು ಪವಿತ್ರ ತುಪ್ಪದ ಪಾತ್ರೆಯನ್ನು ಹೊಂದಿರುವ ಕ್ಯಾರಿ ಬ್ಯಾಗ್‌ನೊಳಗೆ ಇಟ್ಟಿದ್ದೆ ಎಂದಿದ್ದರು.

ಜನವರಿ 24 ರಂದು ಲಾಟರಿ ಫಲಿತಾಂಶ ಪ್ರಕಟವಾದ ದಿನ ಇಡ ವಿಚಾರ ಅನಿರೀಕ್ಷಿತ ತಿರುವು ಪಡೆದುಕೊಂಡಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತಮ್ಮ ಏರಿಯಾದಲ್ಲಿ ವಾಟರ್‌ ಪೈಪ್‌ಲೈನ್‌ ಯೋಜನೆ ಮೇಲ್ವಿಚಾರಣೆ ಮಾಡುತ್ತಿದ್ದಾಗ ಸಜಿಮೋನ್‌ ಹೊಂಡಕ್ಕೆ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಒಂದು ವಾರಗಳ ಕಾಲ ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಇದರಿಂದಾಗಿ ಲಾಟರಿ ಗೆದ್ದ ಟಿಕೆಟ್‌ಅನ್ನು ಎಲ್ಲಿ ಇಟ್ಟಿದ್ದೆ ಅನ್ನೋದನ್ನೇ ಮರೆತಿದ್ದರು. ಆದರೆ, ತಮ್ಮ ಟಿಕೆಟ್‌ಗೆ ಬಹುಮಾನ ಬಂದಿದ್ದು ಮಾತ್ರವೇ ಅವರಿಗೆ ತಿಳಿದಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಜಿಮೋನ್‌ ಹಾಗೂ ಆತನ ಪತ್ನಿ ಲಾಟರಿ ಟಿಕೆಟ್‌ಗಾಗಿ ಇಡೀ ಮನೆಯಲ್ಲಿ ಹುಡುಕಾಟ ಮಾಡಿದ್ದರು.

ಈ ಅವಧಿಯಲ್ಲಿ, ನಾಯ್ಡು ಅವರು ಸಜಿಮೋನ್‌ಗೆ ಕರೆ ಮಾಡಿದ್ದಾರೆ. ತಮ್ಮ ಸಂಬಂಧಿಗಳು ಶಬರಿಮಲೆಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ, ಶಬರಿಮಲೆ ತುಪ್ಪದ ಪಾತ್ರೆಯನ್ನು ಕೊರಿಯರ್‌ ಮೂಲಕ ಕಳಿಸುವಂತೆ ವಿನಂತಿ ಮಾಡಿದ್ದರು.

ಕೊರಿಯರ್‌ ಮಾಡಿದ್ದೆ ಎಂದ ಸಜಿಮೋನ್‌

ಜನವರಿ 30 ರ ಸಮಯ. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಸಜಿಮೋನ್, ಕ್ಯಾರಿ ಬ್ಯಾಗ್ ಅನ್ನು ಪಿರಾವೋಮ್‌ನಲ್ಲಿರುವ ಡಿಟಿಡಿಸಿ ಕೊರಿಯರ್ ಕಚೇರಿಗೆ ತೆಗೆದುಕೊಂಡು ಹೋಗಿದ್ದರು. ಅರೆ-ದ್ರವ ತುಪ್ಪ ತುಂಬಿದ ಉಕ್ಕಿನ ಪಾತ್ರೆಯನ್ನು ಹೇಗೆ ಪ್ಯಾಕ್ ಮಾಡಬೇಕೆಂದು ಅವರಿಗೆ ತಿಳಿದಿಲ್ಲದ ಕಾರಣ, ಅವರು ಬ್ಯಾಗ್ ಅನ್ನು ಕೊರಿಯರ್ ಸಿಬ್ಬಂದಿಗೆ ಕೊಟ್ಟಿದ್ದರು. ಕೊರಿಯರ್‌ ಸಿಬ್ಬಂದಿಗಳು 390 ರೂಪಾಯಿ ಶುಲ್ಕ ಪಡೆದು ಅದನ್ನು ಪ್ಯಾಕ್‌ ಮಾಡಿ ತೆಗೆದುಕೊಂಡಿದ್ದರು. ಕೊರಿಯರ್ ಕಚೇರಿಯಿಂದ ಹೊರಬಂದ ನಂತರವೇ, ತಮ್ಮ ಲಾಟರಿ ಟಿಕೆಟ್‌ ಅದೇ ಚೀಲದೊಳಗೆ ಇದೆ ಅನ್ನೋದು ನನ್ನ ಅರಿವಿಗೆ ಬಂದಿತ್ತು ಎಂದು ಸಜಿಮೋನ್ ಹೇಳಿದ್ದರು.

ಆ ಬಳಿಕ ಸಜಿಮೋನ್‌ ಈ ಡೆಲಿವರಿಯನ್ನು ತಡೆಯಲು ಪ್ರಯತ್ನಿಸಿದರಾದರೂ, ಕೊರಿಯರ್‌ ಸಿಬ್ಬಂದು ಪಾರ್ಸಲ್‌ ಅನ್ನು ತಡೆಹಿಡಿದು ನಿಮಗೆ ವಾಪಾಸ್‌ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಅವರ ಡೆಲಿವರಿ ವಿಶಾಖಪಟ್ಟಣದಲ್ಲಿದ್ದ ನಾಯ್ಡು ಅವರಿಗೆ ತಲುಪಿತ್ತು. ಆದರೆ, ಚೀಲದ ಒಳಗಿನ ಕ್ಯಾರಿಬ್ಯಾಗ್‌ ಹಾಗೂ ಟಿಕೆಟ್‌ ನಾಪತ್ತೆಯಾಗಿತ್ತು ಎಂದು ಸಜಿಮೋನ್‌ ಆರೋಪಿಸಿದ್ದರು.

ಆ ಬಳಿಕ ಸಜಿಮೋನ್‌ ಕೊರಿಯರ್‌ ಆಫೀಸ್‌ನಲ್ಲಿ ಪ್ಯಾಕಿಂಗ್‌ ಮಾಡುವಾಗ ಯಾರೋ ಒಬ್ಬರು ಟಿಕೆಟ್‌ಅನ್ನು ಗಮನಿಸಿ ಅದನ್ನು ತೆಗೆದುಕೊಂಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಅವರು ರಾವೋಮ್ ಪೊಲೀಸರಿಗೆ ದೂರು ನೀಡಿ ಲಾಟರಿ ಇಲಾಖೆಯನ್ನು ಸಂಪರ್ಕಿಸಿ ಬಹುಮಾನದ ಹಣವನ್ನು ಬಿಡುಗಡೆ ಮಾಡದಂತೆ ಕೇಳಿಕೊಂಡಿದ್ದರು.

ತನಿಖೆ ಮುಗಿಯುವ ಮೊದಲು ಬೇರೆಯವರು ಬಹುಮಾನವನ್ನು ಕ್ಲೇಮ್‌ ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದ ಸಜಿಮೋನ್, 20 ಕೋಟಿ ರೂಪಾಯಿಗಳ ಪ್ರಥಮ ಬಹುಮಾನದ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಕೇರಳ ಲಾಟರಿ ಇಲಾಖೆಗೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ಹಿಂದೆ ಸಜಿಮೋನ್‌ ಸಲ್ಲಿಸಿದ್ದ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಆದೇಶದವರೆಗೆ ಬಹುಮಾನವನ್ನು ವಿತರಿಸದಂತೆ ಲಾಟರಿ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು ಮತ್ತು ಜಾಕ್‌ಪಾಟ್ ಪಡೆಯಲು ಸಲ್ಲಿಸಿದ ಟಿಕೆಟ್ ಅನ್ನು ಹಾಜರುಪಡಿಸುವಂತೆ ಸೂಚಿಸಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ
Ayatollah Khamenei death: ಖಮೇನಿ ಮರಣದ ಐದು ದಿನಗಳ ಬಳಿಕ ಭಾರತ ಸಂತಾಪ