ಗುರುವಾಯೂರು ದೇಗುಲದಲ್ಲಿ ಐತಿಹಾಸಿಕ ದಾಖಲೆ: ಚಿಂಗಂ ಮಾಸದ ಶುಭ ಮುಹೂರ್ತ, 7 ಗಂಟೆಯಲ್ಲಿ  ಹಸೆಮಣೆ ಏರಿದ 416 ಜೋಡಿ!

Published : Aug 24, 2026, 09:14 AM IST
guruvayur temple wedding

ಸಾರಾಂಶ

ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ, ಮಲಯಾಳಂ ಪಂಚಾಂಗದ ಚಿಂಗಂ ಮಾಸದ ಶುಭ ದಿನದಂದು ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ವಿವಾಹಗಳು ನಡೆದು ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಐತಿಹಾಸಿಕ ಸಂದರ್ಭಕ್ಕಾಗಿ ದೇವಸ್ಥಾನದಲ್ಲಿ 6 ಮಂಟಪಗಳನ್ನು ನಿರ್ಮಿಸಿ, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆಯೊಂದಿಗೆ ವಿವಾಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಗುರುವಾಯೂರು: ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಭಾನುವಾರ ದಾಖಲೆ ಮಟ್ಟದ ಮದುವೆಗಳು ನೆರವೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮಲಯಾಳಂ ಪಂಚಾಂಗದ ಚಿಂಗಂ ಮಾಸದ ಮೊದಲ ಭಾನುವಾರವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುವ ಕಾರಣ ದಿನವೊಂದರಲ್ಲೇ 400ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 6 ಮಂಟಪಗಳನ್ನು ಹಾಕಲಾಗಿದ್ದು, ಬೆಳಗ್ಗೆ 4.10ಕ್ಕೆ ವಿಧಿವಿಧಾನಗಳು ಆರಂಭವಾದವು. 2 ತಾಸಿನಲ್ಲಿ 137 ಮದುವೆಗಳಾದವು. ಪ್ರತಿ ಗಂಟೆಗೆ 60 ಮದುವೆಗಳಾದವು’ ಎಂದು ವರದಿ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಗುರುವಾಯೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್, "ದೇಗುಲದ ಇತಿಹಾಸದಲ್ಲೇ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವಿವಾಹಗಳು ನೆರವೇರಿರುವುದು ಇದೇ ಮೊದಲು. ಈ ಹಿಂದೆ 2024ರ ಸೆಪ್ಟೆಂಬರ್ 8ರಂದು 334 ವಿವಾಹಗಳು ನಡೆದದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿ ಸ್ಪಾಟ್ ಬುಕಿಂಗ್ ಸೇರಿದಂತೆ ಒಟ್ಟು 442 ವಿವಾಹಗಳು ನೋಂದಣಿಯಾಗಿದ್ದು, ಅದರಲ್ಲಿ 400ಕ್ಕೂ ಹೆಚ್ಚು ಮದುವೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ" ಎಂದು ತಿಳಿಸಿದ್ದಾರೆ.

ಸುಸೂತ್ರವಾಗಿ ಜರುಗಿದ ಸಾಂಪ್ರದಾಯಿಕ ವಿಧಿವಿಧಾನಗಳು

ದೇವಸ್ಥಾನದ ಪೂರ್ವ ದ್ವಾರದಲ್ಲಿರುವ ಮೊದಲ ಮಂಟಪದಲ್ಲಿ ಬೆಳಗಿನ ಜಾವ ದೇವಸ್ವಂ ಮಂಡಳಿಯ ಅಧ್ಯಕ್ಷ ಎ.ವಿ. ಗೋಪಿನಾಥ್ ಅವರು ದೀಪ ಬೆಳಗಿಸುವುದರೊಂದಿಗೆ ಮದುವೆ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು. ಸಾಂಪ್ರದಾಯಿಕ ಮಂಗಲವಾದ್ಯಗಳ ನಡುವೆ, ತಲಶ್ಶೇರಿ ಮೂಲದ ಅರ್ಣವ್ ಮೋಹನ್ ಕುಮಾರ್ ಅವರು ಪಝಾಯಂಗಡಿ ಮೂಲದ ವಿದ್ಯಾ ಆನಂದ್ ರಾಜ್ ಅವರಿಗೆ ಮಂಗಳಸೂತ್ರ ಧರಿಸುವ ಮೂಲಕ ದಿನದ ಮೊದಲ ವಿವಾಹ ನೆರವೇರಿತು. ಉಷಾಪೂಜೆ ಮತ್ತು ಪಂತೀರದಿ ಪೂಜೆಯ ಅಲ್ಪಾವಧಿಯ ಸಮಯವನ್ನು ಹೊರತುಪಡಿಸಿ, ಬೆಳಗಿನ ಜಾವ 4.10ಕ್ಕೆ ಆರಂಭಗೊಂಡ ವಿವಾಹ ವಿಧಿವಿಧಾನಗಳು ಮಧ್ಯಾಹ್ನ 12.45ರವರೆಗೆ ನಿರಂತರವಾಗಿ ಜರುಗಿದವು.

6 ಮಂಟಪಗಳು, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆ

ವಿವಾಹಗಳ ಸುಲಭ ನಿರ್ವಹಣೆಗಾಗಿ ದೇವಾಲಯದ ಅಂಗಳದಲ್ಲಿ 6 ವಿಶೇಷ ಮಂಟಪಗಳನ್ನು ನಿರ್ಮಿಸಲಾಗಿತ್ತು. ಜನದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಕ್ರಿಯೆಯನ್ನು ಸುಸೂತ್ರಗೊಳಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಪ್ರತ್ಯೇಕ ಟೋಕನ್ ಹಾಗೂ ಪ್ರವೇಶ ಮಿತಿ: ಪ್ರತಿಯೊಂದು ಮದುವೆ ತಂಡಕ್ಕೂ ಪ್ರತ್ಯೇಕ ಟೋಕನ್ ನೀಡಲಾಗಿತ್ತು. ಮಂಟಪದ ಬಳಿ ನೂಕುನುಗ್ಗಲು ತಡೆಯಲು ವಧು-ವರರೊಂದಿಗೆ ಕೇವಲ 24 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆರು ಮಂಟಪಗಳಲ್ಲಿ ಸೇರಿ ಪ್ರತಿ ಗಂಟೆಗೆ ಸರಾಸರಿ 60ಕ್ಕೂ ಹೆಚ್ಚು ವಿವಾಹಗಳನ್ನು ನಡೆಸಲಾಯಿತು. ಆರಂಭಿಕ 2 ತಾಸುಗಳಲ್ಲೇ ಬರೋಬ್ಬರಿ 137 ಮದುವೆಗಳು ಪೂರ್ಣಗೊಂಡಿದ್ದವು. ಶುಭ ಮುಹೂರ್ತದಲ್ಲಿ ಮದುವೆ ಕಾರ್ಯಕ್ರಮಗಳು ಸುಲಭವಾಗಿ ನಡೆಯಲು ಅನುಕೂಲವಾಗುವಂತೆ ಸಾಮಾನ್ಯ ಭಕ್ತಾದಿಗಳ ದರ್ಶನದ ಮೇಲೆ ತಾತ್ಕಾಲಿಕ ರದ್ದು ಮಾಡಲಾಗಿತ್ತು.

ಸುರಕ್ಷತೆ ಮತ್ತು ತುರ್ತು ಸೇವೆಗಳು

ಬೃಹತ್ ಪ್ರಮಾಣದ ಜನಸಂದಣಿಯನ್ನು ನಿರ್ವಹಿಸಲು ಪೊಲೀಸ್ ಇಲಾಖೆಯಿಂದ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಸ್ವಸ್ಥರಾಗುವ ಭಕ್ತರ ನೆರವಿಗೆ ಆಂಬ್ಯುಲೆನ್ಸ್ ಸೇವೆಗಳು ಮತ್ತು ವೈದ್ಯರ ತಂಡವನ್ನು ಸ್ಥಳದಲ್ಲೇ ಸಜ್ಜಾಗಿರಿಸಲಾಗಿತ್ತು. ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿಯನ್ನು ದೇವಾಲಯದ ಒಳಗಿನ ರಿಂಗ್ ರಸ್ತೆಯ ಬಳಿ ನಿಯೋಜಿಸಲಾಗಿತ್ತು.

ಸ್ಥಳೀಯ ಸಾರ್ವಜನಿಕರ ಸಂಪೂರ್ಣ ಸಹಕಾರದಿಂದಾಗಿ ಈ ಐತಿಹಾಸಿಕ ಘಟನೆ ಯಾವುದೇ ಅಡಚಣೆಯಿಲ್ಲದೆ ನೆರವೇರಿದೆ. ದೇವಸ್ವಂ ಮಂಡಳಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ನವಜೋಡಿಗಳು ದೇವಾಲಯದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೋಗಳನ್ನು ಹಂಚಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಿಯತಮೆಗೆ ಮಾಡಿದ ಒಂದು ಪ್ರಾಂಕ್ ಮೆಸೇಜ್ ತಂತು ಸಂಕಷ್ಟ.. 30 ಲಕ್ಷ ಹವಾಲಾ ಹಣದ ದಂಧೆ ಬಯಲು
Jobs: ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! ಆರ್‌ಟಿಐ ಅರ್ಜಿಯಲ್ಲಿ ಮಾಹಿತಿ ಬಯಲು