
ದೇಶದ ಫ್ಯಾಷನ್ ಲೋಕ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದ ಮಾಜಿ 'ಮಿಸ್ ಪುಣೆ' ಟ್ವಿಶಾ ಶರ್ಮಾ (Twisha Sharma) ಅವರ ಸಾವು ಇಡೀ ದೇಶವನ್ನು ಆಘಾತಕ್ಕೀಡು ಮಾಡಿದೆ. ಮದುವೆಯಾಗಿ ಕೇವಲ 5 ತಿಂಗಳು ಕಳೆಯುವಷ್ಟರಲ್ಲೇ ಟ್ವಿಶಾ ಭೋಪಾಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿಂದೆ ಮಾನಸಿಕ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳದ ಕೈವಾಡವಿದೆ ಎಂದು ಟ್ವಿಶಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
2012ರಲ್ಲಿ 'ಮಿಸ್ ಪುಣೆ' ಕಿರೀಟ ಮುಡಿಗೇರಿಸಿಕೊಂಡಿದ್ದ ಟ್ವಿಶಾ ಶರ್ಮಾ, ನೋಯ್ಡಾದಲ್ಲಿ ಕಾರ್ಪೊರೇಟ್ ವೃತ್ತಿಜೀವನ ನಡೆಸುತ್ತಿದ್ದರು. ಕಳೆದ ಐದು ತಿಂಗಳ ಹಿಂದೆಯಷ್ಟೇ ಅವರು ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಳೆದ ಮಂಗಳವಾರ (ಮೇ 12) ರಾತ್ರಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಮನೆಯವರನ್ನು ಆಘಾತಕ್ಕೆ ತಳ್ಳಿದೆ. ಟ್ವಿಶಾ ಅವರ ಸಹೋದರ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಕಾರ, ಸಾವಿಗೂ ಕೆಲವೇ ಸಮಯದ ಮೊದಲು ಟ್ವಿಶಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು. ಆ ವೇಳೆ ಅವರು ತನ್ನ ಅತ್ತೆ ಮನೆಯಲ್ಲಿ ತಾನು ಎದುರಿಸುತ್ತಿರುವ ತೀವ್ರ ಒತ್ತಡ ಮತ್ತು ಮಾನಸಿಕ ಹಿಂಸೆಯ ಬಗ್ಗೆ ವಿವರಿಸಿದ್ದರು ಎನ್ನಲಾಗಿದೆ.
ಟ್ವಿಶಾ ಎಂಬಿಎ ಪದವೀಧರೆಯಾಗಿದ್ದು, ಮದುವೆಯ ನಂತರ ಸಂಸಾರಕ್ಕಾಗಿ ಕೆಲಸ ಬಿಟ್ಟು ಭೋಪಾಲ್‌ಗೆ ಬಂದಿದ್ದರು. ಆದರೆ ಪತಿ ಮತ್ತು ಅತ್ತೆ ಕಡೆಯಿಂದ ಮತ್ತೆ ಕೆಲಸಕ್ಕೆ ಸೇರುವಂತೆ ನಿರಂತರ ಒತ್ತಡ ಇತ್ತೆಂದು ಹೇಳಲಾಗಿದೆ. ಇದರ ಜೊತೆಗೆ, ಟ್ವಿಶಾ ಅನಿರೀಕ್ಷಿತವಾಗಿ ಗರ್ಭಿಣಿಯಾಗಿದ್ದರು. ಆದರೆ ಅವರು ಆ ಹಂತದಲ್ಲಿ ತಾಯಿಯಾಗಲು ಮಾನಸಿಕವಾಗಿ ಸಿದ್ಧರಿರಲಿಲ್ಲ. ಇದೇ ವಿಷಯವಾಗಿ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು ಮತ್ತು ಇದು ಅವರ ಸಾವಿಗೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.
ಇನ್ನೊಂದೆಡೆ, ಟ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ (ನಿವೃತ್ತ ನ್ಯಾಯಾಧೀಶರು) ಈ ಆರೋಪಗಳನ್ನು ನಿರಾಕರಿಸಿದ್ದಾರೆ. 'ರಾತ್ರಿ 9:30 ರವರೆಗೆ ನಾವೆಲ್ಲರೂ ಒಟ್ಟಿಗೆ ಕುಳಿತು ಟಿವಿ ನೋಡುತ್ತಿದ್ದೆವು. ಇದಕ್ಕೆ ಮನೆಯ ಸಿಸಿಟಿವಿ ದೃಶ್ಯಾವಳಿಗಳೇ ಸಾಕ್ಷಿ. ನಂತರ ಅವರು ತಮ್ಮ ಕೋಣೆಗೆ ಹೋದರು. ಬಳಿಕ ಅವರನ್ನು ಅಸ್ವಸ್ಥ ಸ್ಥಿತಿಯಲ್ಲಿ ಭೋಪಾಲ್ ಏಮ್ಸ್‌ಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು' ಎಂದು ತಿಳಿಸಿದ್ದಾರೆ.
ಟ್ವಿಶಾ ಶರ್ಮಾ ಕೇವಲ ಸೌಂದರ್ಯ ಸ್ಪರ್ಧೆಯ ವಿಜೇತೆ ಮಾತ್ರವಲ್ಲ, ಪ್ರತಿಭಾವಂತ ವಿದ್ಯಾರ್ಥಿನಿಯೂ ಆಗಿದ್ದರು. 2012ರಲ್ಲಿ ಮಿಸ್ ಪುಣೆ ಪಟ್ಟ ಗೆದ್ದಿದ್ದ ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದರು. ಕಾರ್ಪೊರೇಟ್ ವಲಯದಲ್ಲೂ ಯಶಸ್ವಿ ವೃತ್ತಿಜೀವನ ಹೊಂದಿದ್ದ ಅವರು ಪ್ರೀತಿಯ ಜಾಲಕ್ಕೆ ಬಿದ್ದು ಮದುವೆಯಾಗಿದ್ದರು. ಸದ್ಯ ಭೋಪಾಲ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಒಬ್ಬ ಪ್ರತಿಭಾವಂತ ಯುವತಿಯ ಜೀವನ ಹೀಗೆ ಅಂತ್ಯಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ