ಕೇರಳ ದೇಗುಲಗಳಲ್ಲಿ ಪುರುಷರು ಶರ್ಟ್‌ ತೆಗೆಯುವ ಪದ್ಧತಿ ರದ್ದು? ದೇವಸ್ವಂ ಮಂಡಳಿ ಚಿಂತನೆ: ಕೇರಳ ಸಿಎಂ

By Kannadaprabha News  |  First Published Jan 2, 2025, 7:23 AM IST

ಕೇರಳದಲ್ಲಿ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವುದನ್ನು ಕಡ್ಡಾಯಗೊಳಿಸುವ ಪದ್ಧತಿಯನ್ನು ರದ್ದುಗೊಳಿಸಲು ಕೇರಳ ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. 


ತಿರುವನಂತಪುರ (ಜ.02): ಕೇರಳದಲ್ಲಿ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವುದನ್ನು ಕಡ್ಡಾಯಗೊಳಿಸುವ ಪದ್ಧತಿಯನ್ನು ರದ್ದುಗೊಳಿಸಲು ಕೇರಳ ದೇವಸ್ವಂ ಮಂಡಳಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೇರಳ ಸರ್ಕಾರದ ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಮಂಗಳವಾರ ಶಿವಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಠದ ಮುಖ್ಯಸ್ಥ ಸಚ್ಚಿದಾನಂದ ಸ್ವಾಮಿ, ‘ಪುರುಷರು ಜನಿವಾರ ಧರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. 

ಇದು ಸಾಮಾಜಿಕ ಪಿಡುಗು. ಇನ್ನಾದರೂ ಈ ಪದ್ಧತಿ ಕೊನೆಗೊಳಿಸಬೇಕಿದೆ’ ಎಂದು ಆಗ್ರಹಿಸಿದ್ದರು. ಜತೆಗೆ, ಶ್ರೀ ನಾರಾಯಣ ಗುರುಗಳಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಇದನ್ನು ನಿಷೇಧಿಸಲಾಗುವುದು ಎಂದೂ ಹೇಳಿದ್ದರು. ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶ್ರೀಗಳ ಹೇಳಿಕೆ ಬೆಂಬಲಿಸಿದ್ದರು. ಅದರ ಬೆನ್ನಲ್ಲೇ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್‌, ‘ಇಂದು ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ನನ್ನನ್ನು ಭೇಟಿಯಾಗಿ ಮೇಲಂಗಿ ತೆಗೆಯುವ ಪದ್ಧತಿ ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಬಗ್ಗೆ ತಿಳಿಸಿದರು. 

Tap to resize

Latest Videos

ನನಗೂ ಇದು ಉತ್ತಮ ಸಲಹೆಯಂತೆ ಕಂಡಿತು’ ಎಂದರು. ಆದರೆ ರಾಜ್ಯದಲ್ಲಿರುವ 5 ದೇವಸ್ವಂ ಮಂಡಳಿಗಳಾದ ಗುರುವಾಯೂರು, ತಿರುವಾಂಕೂರು, ಮಲಬಾರ್‌, ಕೊಚ್ಚಿನ್‌ ಮತ್ತು ಕೂಡಲಮಾಣಿಕ್ಯಂ ಪೈಕಿ ಯಾವ ಮಂಡಳಿಯವರು ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ವಿಜಯನ್‌ ಸ್ಪಷ್ಟಪಡಿಸಿಲ್ಲ. ಈ ನಡುವೆ ದೇಗುಲ ಪ್ರವೇಶದ ವೇಳೆ ಮೇಲಂಗಿ ತೆಗೆವ ಕುರಿತು ಚರ್ಚೆಗೆ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ಇದನ್ನು ಚರ್ಚಿಸುವುದು ಮಂಡಳಿಗಳ ಕೆಲಸ, ಸರ್ಕಾರದ್ದಲ್ಲ’ ಎಂದು ವಿಜಯನ್‌ ತಿರುಗೇಟು ನೀಡಿದರು.

ದೇಗುಲದಲ್ಲಿ ಶರ್ಟ್‌ ತೆಗೆವ ಪದ್ಧತಿ ಸಾಮಾಜಿಕ ಅನಿಷ್ಠ: ಶಿವಗಿರಿ ಶ್ರೀ

ಸಾಮಾಜಿಕ ಅನಿಷ್ಠ: ಕೇರಳದ ಹಲವು ದೇವಾಲಯಗಳಲ್ಲಿ ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಮೇಲಂಗಿ ತೆಗೆಯುವ ಸಂಪ್ರದಾಯ ನಿಲ್ಲಿಸಬೇಕು ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಕರೆ ನೀಡಿದ್ದಾರೆ. ಶ್ರೀಗಳ ಮಾತಿಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಕೂಡ ಬೆಂಬಲ ಸೂಚಿಸಿದ್ದು, 'ಸ್ವಾಮೀಜಿ ತಮ್ಮ ಮಾತಿನ ಮೂಲಕ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ್ದಾರೆ' ಎಂದಿದ್ದಾರೆ. 'ದೇವಾಲಯ ಗಳಿಗೆ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರಿಗೆ ಶರ್ಟ್ ತೆಗೆಯುವಂತೆ ಹೇಳುವುದು ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾಗಿದೆ. ಇದು ಸಾಮಾಜಿಕ ಅನಿಷ್ಟ. ಇದನ್ನು ತೆಗೆದು ಹಾಕಬೇಕಾಗಿದೆ. ದೇವಾಲಯಗಳಿಗೆ ಪ್ರವೇಶಿಸುವವರು ಪನೂಲ್ (ಹಿಂದೂಮೇಲ್ಪಾತಿಯವರು ಧರಿಸುವ ಪವಿತ್ರ ದಾರ) ಧರಿಸುತ್ತಾರೆಯೇ ಎಂದು ಪರೀಕ್ಷಿಸಲು ಮೇಲಂಗಿ ತೆಗೆಯುವ ಅಭ್ಯಾಸ ರೂಢಿಯಾಯಿತು. 

click me!