ಹೈದರಾಬಾದ್(ಮಾ.28): ತೆಲಂಗಾಣದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪುನರ್ನಿರ್ಮಾಣದ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ 28 ರಂದು ಉದ್ಘಾಟನೆಗೊಳ್ಳಲಿದೆ. ಪುನರ್ನಿರ್ಮಾಣದಿಂದಾಗಿ ಈ ದೇವಾಲಯವನ್ನು ಭಕ್ತರಿಗೆ ಮುಚ್ಚಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕೆಸಿಆರ್ ಅವರ ಆಧ್ಯಾತ್ಮಿಕ ಗುರು ಚಿನ್ನ ಜೀಯರ್ ಸ್ವಾಮಿ ಅವರು ನವೀಕರಿಸಿದ ದೇವಾಲಯವನ್ನು ಪುನಃ ತೆರೆಯಲು ಸಮಯವನ್ನು ನಿಗದಿಪಡಿಸಿದ್ದರು. ಭಕ್ತಾದಿಗಳಿಗೆ ದೇವಾಲಯವನ್ನು ತೆರೆಯುವ ಮೊದಲು ಯಾಗವನ್ನು ಸಹ ನಡೆಸಲಾಗುವುದು ಎಂದಿದ್ದಾರೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಹ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸುಮಾರು 1800 ಕೋಟಿ ರೂ ತಗುಲಿದೆ. ಈ ದೇವಸ್ಥಾನದ ಪುನರ್ ನಿರ್ಮಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕನಸಿನ ಯೋಜನೆಯಾಗಿತ್ತು. ಸಿಎಂ ಕೆ. ಚಂದ್ರಶೇಖರ ರಾವ್ ಅವರ ಕನಸಿನ ಯೋಜನೆಗೆ ಚಾಲನೆ ನೀಡುವ ಮುನ್ನ ದೇವಸ್ಥಾನದಲ್ಲಿ ಋತ್ವಿಕರ ಪರವಾಗಿ ‘ಮಹಾ ಸುದರ್ಶನ ಯಾಗ’ ಕೂಡ ನಡೆಯಲಿದೆ. 1048 ಯಜ್ಞಕುಂಡಲಗಳೊಂದಿಗೆ ನೂರು ಎಕರೆ ಯಜ್ಞ ವಾಟಿಕಾದಲ್ಲಿ ಈ ಯಾಗವನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಈ ಹಿಂದೆ ತಿಳಿಸಿದ್ದರು.
ಈ ಹಿಂದೆ, ತೆಲಂಗಾಣ ಮುಖ್ಯಮಂತ್ರಿ ಸಹ ಸಾವಿರಾರು ಋಷಿಗಳು ಮತ್ತು ಮೂರು ಸಾವಿರ ಸಹಾಯಕರು ಭಗವಂತನನ್ನು ಮೆಚ್ಚಿಸಲು ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಾರೆ ಎಂದು ಘೋಷಿಸಿದ್ದರು. ದೇವಾಲಯದ ಉದ್ಘಾಟನೆಗೆ ಹಿಂದೂ ಧರ್ಮದ ಎಲ್ಲಾ ಪಂಗಡಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಚಿವರು ಮತ್ತು ಸಂತರನ್ನು ಯಾಗಕ್ಕೆ ಆಹ್ವಾನಿಸಲು ಮೊದಲು ಯೋಜಿಸಲಾಗಿತ್ತು.
ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಮಾಡಲಾಗಿಲ್ಲ. ಹೀಗಾಗಿ ಕೆಲವು ವಿಐಪಿಗಳು ಮಾತ್ರ ಈ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಹೇಳಲಾಗಿದೆ. ಚಂದ್ರಶೇಖರ ರಾವ್ ಅವರ ಆಧ್ಯಾತ್ಮಿಕ ಗುರು ಚಿನ್ನ ಜೀಯರ್ ಸ್ವಾಮಿ ಕೂಡ ಸಮಾರಂಭಕ್ಕೆ ಹಾಜರಾಗದಿರುವ ಸಾಧ್ಯತೆ ಇದೆ.
ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವು ಹೈದರಾಬಾದ್‌ನಿಂದ ಸುಮಾರು 80 ಕಿಮೀ ದೂರದಲ್ಲಿದೆ. ದೇವಾಲಯದ ಸಂಕೀರ್ಣವು 14.5 ಎಕರೆಗಳಷ್ಟು ವಿಸ್ತಾರವಾಗಿದೆ. 2016 ರಲ್ಲಿ, ಈ ದೇವಾಲಯದ ಪುನರ್ನಿರ್ಮಾಣದ ಕೆಲಸ ಪ್ರಾರಂಭವಾಯಿತು, ಇದಕ್ಕಾಗಿ ಸುಮಾರು 1600 ಕೋಟಿ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಇಡೀ ದೇವಾಲಯದ ಟೌನ್‌ಶಿಪ್ ಯೋಜನೆಯು 2500 ಎಕರೆಗಳಲ್ಲಿ ಹರಡಿದೆ.
ಆಂಧ್ರಪ್ರದೇಶದ ಪ್ರಕಾಶಂನಿಂದ ವಿಶೇಷವಾಗಿ ತರಲಾದ 2.5 ಲಕ್ಷ ಟನ್‌ಗಳಷ್ಟು ಗ್ರಾನೈಟ್‌ನಿಂದ ದೇವಾಲಯವನ್ನು ಪುನರ್ನಿರ್ಮಿಸಲಾಗಿದೆ. ಇದೇ ವೇಳೆ, ದೇವಾಲಯದ ಕಂಬವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಸಿಮೆಂಟ್ ಬಳಸಿಲ್ಲ. ಖ್ಯಾತ ಚಲನಚಿತ್ರ ಸೆಟ್ ಡಿಸೈನರ್ ಆನಂದ್ ಸಾಯಿ ಈ ದೇವಾಲಯವನ್ನು ವಿನ್ಯಾಸಗೊಳಿಸಿದ್ದಾರೆ.
ಈ ದೇವಾಲಯದ ಮುಖ್ಯ ಪ್ರವೇಶ ದ್ವಾರಗಳನ್ನು ಪೆಂಬಾರ್ತಿ (ಲೋಹ ಮತ್ತು ಹಿತ್ತಾಳೆಯ ಕೆಲಸಗಳಿಗೆ ಹೆಸರುವಾಸಿಯಾಗಿದೆ) ಕುಶಲಕರ್ಮಿಗಳು ಮಾಡಿದ್ದಾರೆ. ದೇವಾಲಯದ ಗರ್ಭಗುಡಿಯ ಮುಖ್ಯದ್ವಾರವನ್ನು ಚಿನ್ನದಿಂದ ಅಲಂಕರಿಸಲಾಗಿದೆ. ದೇವಸ್ಥಾನದಲ್ಲಿ ತಂಜೂರ ಶೈಲಿಯ ಚಿತ್ರಕಲೆಯನ್ನೂ ಅಳವಡಿಸಲಾಗಿದೆ. ಈ ದೇವಾಲಯದ ಗೋಪುರಕ್ಕೆ (ವಿಶೇಷ ದ್ವಾರ) 125 ಕೆಜಿ ಚಿನ್ನವನ್ನು ಹೊದಿಸಲಾಗಿದ್ದು, ಇದನ್ನು ಸಿಎಂ ಕೆಸಿಆರ್, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಹಲವಾರು ಕೈಗಾರಿಕೋದ್ಯಮಿಗಳು ದೇವಾಲಯಕ್ಕೆ ನೀಡಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ತಮ್ಮ ಕುಟುಂಬದ ಪರವಾಗಿ ದೇವಸ್ಥಾನಕ್ಕೆ 1116 ಗ್ರಾಂ ಚಿನ್ನಾಭರಣ ನೀಡಿದ್ದಾರೆ.
ಅದೇ ಸಮಯದಲ್ಲಿ, ಹೈದರಾಬಾದ್ ಮೂಲದ MNC ಮೇಘಾ ಇಂಜಿನಿಯರಿಂಗ್ 6 ಕೆಜಿ ಚಿನ್ನವನ್ನು ನೀಡುವುದಾಗಿ ಘೋಷಿಸಿದೆ. ಹೆಟೆರೊ ಫಾರ್ಮಾ ಮಾಲೀಕರು 5 ಕೆಜಿ ಚಿನ್ನವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ