* ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲು
* ಪಾಕ್ ಜಯಕ್ಕೆ ಸಂಭ್ರಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಕೇಸ್* *
ಶ್ರೀನಗರ(ಅ.27): ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ 2 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಯುಎಪಿಎ ಅಡಿ ದಾಖಲಿಸುವ ಕೇಸುಗಳು ತುಂಬಾ ಗಂಭೀರವಾಗಿರುತ್ತವೆ. ಆದರೆ ವಿದ್ಯಾರ್ಥಿಗಳ ಅಪರಾಧ ಪರಿಗಣಿಸಿ ಈ ಪ್ರಕರಣಗಳನ್ನು ವಿದ್ಯಾರ್ಥಿಗಳ ವಿರುದ್ಧ 2 ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
undefined
ಪಾಕಿಸ್ತಾನ ಗೆದ್ದ ಕೂಡಲೇ ಕಾಲೇಜು ಹಾಸ್ಟೆಲ್‌ನಲ್ಲಿ ಹಲವು ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತ ಸಂಭ್ರಮಿಸಿದ ವಿಡಿಯೋಗಳು ವೈರಲ್ ಆಗಿದ್ದವು. ಭಾರತದಲ್ಲಿ ಇದರ ವಿರುದ್ಧ ಆಕ್ರೋಶ ಭುಗಿಲೆದ್ದು, ಅವರ ವಿರುದ್ಧದ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿತ್ತು.
‘ವಿದ್ಯಾರ್ಥಿಗಳು ಮಾಡಿದ್ದನ್ನು ನಾವು ಸಮರ್ಥಿಸುವುದಿಲ್ಲ. ಆದರೆ ಯುಎಪಿಎ ಅಡಿಯ ಕೇಸು ಗಂಭೀರವಾಗಿದ್ದು, ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತವೆ. ಪ್ರಕರಣ ಹಿಂಪಡೆಯಬೇಕು’ ಎಂದು ಜಮ್ಮು-ಕಾಶ್ಮೀರ ವಿದ್ಯಾರ್ಥಿ ಸಂಘದ ವಕ್ತಾರ ನಾಸಿರ್ ಖುಯೇಹಮಿ ಆಗ್ರಹಿದ್ದಾರೆ.
ಪಾಕ್ ಗೆಲುವು ಸಂಭ್ರಮಿಸಿದ ಶಿಕ್ಷಕಿ ವಜಾ
ಜೈಪುರ: ಭಾರತದ ವಿರುದ್ದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜಯ ಸಾಧಿಸಿದ್ದಕ್ಕೆ ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಪ್ರಖ್ಯಾತ ಶಾಲೆಯೊಂದರ ಶಿಕ್ಷಕಿಯೊಬ್ಬರನ್ನು ಸೇವೆಯಿಂದ ಮಂಗಳವಾರ ವಜಾ ಮಾಡಲಾಗಿದೆ. ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ‘ಗೆದ್ದೆವು, ನಾವು ಗೆದ್ದೆವು’ ಎಂದು ಪಾಕ್ ಗೆಲುವಿನ ಬಗ್ಗೆ ಶಿಕ್ಷಕಿ ನಫೀಸಾ ಅಟಾರಿ ಬರೆದುಕೊಡಿದ್ದಳು ಹಾಗೂ ಪಾಕ್ ಜಯದ ಚಿತ್ರ ಹಾಕಿಕೊಂಡಿದ್ದಳು. ಇದರ ಬೆನ್ನಲ್ಲೇ ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಸಂಸ್ಥೆಯು, ಆಕೆಯನ್ನು ವಜಾ ಮಾಡಿದೆ.
ಬಿಜೆಪಿಗರ ಕಿಡಿ:
ಈ ನುಡುವೆ, ಬಿಜೆಪಿ ನಾಯಕರು ಪಾಕ್ ಗೆಲುವಿಗೆ ಸಂಭ್ರಮಿಸಿದವರ ಬಗ್ಗೆ ಕಿಡಿ ಕಾರಿದ್ದಾರೆ. ‘ಪಾಕ್ ಗೆಲುವಿಗೆ ಪಟಾಕಿ ಸಿಡಿಸುವವರ ಡಿಎನ್‌ಎ (ವಂಶವಾಹಿ) ಭಾರತದ್ದಲ್ಲ’ ಎಂದು ಹರ್ಯಾಣ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
‘ದೇಶ ವಿರೋಧಿಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಕಾಶ್ಮೀರ ಬಿಜೆಪಿ ಮುಖಂಡ ರವೀಂದರ್ ರೈನಾ ಎಚ್ಚರಿಸಿದ್ದಾರೆ.
ಪಾಕ್ ಜಯಕ್ಕೆ ಸಂಭ್ರಮಿಸಿದ್ದನ್ನು ಆಕ್ಷೇಪಿಸಿದ್ದಕ್ಕೆ ಅಮಾನತು ಸಜೆ!
ಚಂಡೀಗಢ: ಪಂಜಾಬ್‌ನ ಎಂಜಿನಿಯರಿಂಗ್ ಕಾಲೇಜೊಂದರ ಹಾಸ್ಟೆಲ್‌ನಲ್ಲಿ ಪಾಕಿಸ್ತಾನ ಜಯಕ್ಕೆ ಸಂಭ್ರಮಿಸಿದ ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿ ಗಲಾಟೆ ಮಾಡಿದ್ದ ಉತ್ತರ ಪ್ರದೇಶ ಹಾಗೂ ಬಿಹಾರ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ ದಂಡ ವಿಧಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಸಂಗ್ರೂರ್‌ನ ಈ ಕಾಲೇಜಲ್ಲಿ ಪಾಕ್ ಗೆದ್ದ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದರು ಎನ್ನಲಾಗಿತ್ತು. ಇದಕ್ಕೆ ಬಿಹಾರ, ಉತ್ತರಪ್ರದೇಶ ವಿದ್ಯಾರ್ಥಿಗಳು ಆಕ್ಷೇಪಿಸಿದಾಗ ಹೊಡೆದಾಟ ನಡೆದಿತ್ತು. ಈ ವೇಳೆ ಹಾಸ್ಟೆಲ್‌ನ ವಸ್ತುಗಳನ್ನು ಧ್ವಂಸ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ಬಿಹಾರ ಹಾಗೂ ಯುಪಿ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸಿಲ್ಲ ಎಂದು ಮಾಧ್ಯಮ ವರದಿ ಹೇಳಿದೆ.