ಉಗ್ರ ದಾಳಿ ಸ್ಥಳದಲ್ಲೇ ತಂಗಿ ಯೋಧರಿಗೆ ಅಮಿತ ಗೌರವ!

By Kannadaprabha News  |  First Published Oct 27, 2021, 7:02 AM IST

* ಪುಲ್ವಾಮಾ ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲಿ ರಾತ್ರಿ ಕಳೆದ ಗೃಹ ಸಚಿವ

* ಉಗ್ರ ದಾಳಿ ಸ್ಥಳದಲ್ಲೇ ತಂಗಿ ಯೋಧರಿಗೆ ಅಮಿತ ಗೌರವ


ಶ್ರೀನಗರ(ಅ.27): 3 ದಿನಗಳ ಕಾಶ್ಮೀರ ಭೇಟಿಗಾಗಿ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಬಲಿಯಾದ 40 ಸಿಆರ್‌ಪಿಎಫ್‌ ಯೋಧರಿಗೆ ವಿಶೇಷವಾದ ಗೌರವ ಸಲ್ಲಿಸಿದ್ದಾರೆ.

ಅಮಿತ್‌ ಶಾ ಸೋಮವಾರ ಪುಲ್ವಾಮಾದ ಲೇತ್‌ಪೋರಾದಲ್ಲಿರುವ ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲೇ ಯೋಧರ ಜೊತೆ ಉಳಿದುಕೊಂಡು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ವಾಸ್ತವವಾಗಿ ಶಾ ಸೋಮವಾರವೇ ದೆಹಲಿಗೆ ಮರಳಬೇಕಿತ್ತು. ಆದರೆ ಕ್ಯಾಂಪ್‌ನಲ್ಲಿ ಉಳಿದು ನಿಮ್ಮ ಜೊತೆ ನಾವಿದ್ದೇವೆ ಎಂದು ಯೋಧರಿಗೆ ಭರವಸೆ ನೀಡುವ ಜೊತೆಗೆ, ಉಗ್ರರಿಗೆ ತಕ್ಕ ಸಂದೇಶ ರವಾನಿಸು ಸಲುವಾಗಿ ಸೋಮವಾರ ಕಾಶ್ಮೀರದಲ್ಲೇ ಉಳಿದುಕೊಂಡ ಅಮಿತ್‌ ಶಾ, ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲಿ ರಾತ್ರಿ ಯೋಧರ ಜೊತೆ ತಂಗಿದರು.

Tap to resize

Latest Videos

undefined

2019ರಲ್ಲಿ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಸ್ಥಳವು, ಸಿಆರ್‌ಪಿಎಫ್‌ ಕ್ಯಾಂಪ್‌ನಿಂದ ಕೂಗಳತೆ ದೂರದಲ್ಲಿದೆ. ಜೊತೆಗೆ 2017ರಲ್ಲಿ ಇದೇ ಕ್ಯಾಂಪ್‌ ಮೇಲೆ ಜೈಷ್‌ ಎ ಮೊಹಮ್ಮದ್‌ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 5 ಜನರು ಸಾವನ್ನಪ್ಪಿದ್ದರು. ಇನ್ನೊಂದು ವಿಶೇಷವೆಂದರೆ 74 ವರ್ಷಗಳ ಹಿಂದೆ ಇದೇ ದಿನ ಜಮ್ಮು ಮತ್ತು ಕಾಶ್ಮೀರ ಭಾರತದ ವಶಕ್ಕೆ ಬಂದಿತ್ತು.

ಕ್ಯಾಂಪ್‌ನಲ್ಲಿ ಸೋಮವಾರ ರಾತ್ರಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘ನಾನು ಒಂದು ರಾತ್ರಿ ನಿಮ್ಮ ಜೊತೆ ತಂಗಲು ಬಯಸುತ್ತೇನೆ ಮತ್ತು ನಿಮ್ಮ ಸಂಕಷ್ಟಗಳನ್ನು ಆಲಿಸಲು ಬಯಸುತ್ತೇನೆ. ಕೇಂದ್ರಾಡಳಿತ ಪ್ರದೇಶದ ನನ್ನ ಭೇಟಿಯಲ್ಲಿ ಇದು ಅತ್ಯಂತ ಮಹತ್ವದ ಕ್ಷಣ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ ನೆಲೆಸುವ ವಿಶ್ವಾಸವಿದೆ ಎಂದು ಹೇಳಿದರು.

ಪುಷ್ಪ ನಮನ:

ಮಂಗಳವಾರ ಬೆಳಗ್ಗೆ ಅಮಿತ್‌ ಶಾ ಅವರು ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕ ಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಯೋಧರ ಸ್ಮರಣಾರ್ಥ ಸ್ಥಳದಲ್ಲಿ ಗಿಡವೊಂದನ್ನು ನೆಟ್ಟರು.

click me!