Kashi Vishwanath Dham: ಉ. ಪ್ರದೇಶದಲ್ಲಿ ಗಾಂಧಿಗಳಿಗೆ ಸಾಧ್ಯವಾಗದ್ದು, ಮೋದಿಗೆ ಸಾಧ್ಯವಾಗಿದ್ಹೇಗೆ.?

By Suvarna NewsFirst Published Dec 17, 2021, 12:53 PM IST
Highlights

ಕಾಂಗ್ರೆಸ್‌ನ (Congress) ಇವತ್ತಿನ ಸ್ಥಿತಿಗೆ ಕಾರಣ ಏನೆಂದು ಗೊತ್ತಾಗಬೇಕಾದರೆ ಒಮ್ಮೆ ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌಗೆ (Lucknow)  ಹೋಗಿ ಅಲ್ಲಿಂದ ಕಾಶಿ ಮತ್ತು ಅಮೇಠಿ, ರಾಯ್‌ಬರೇಲಿಗೆ ಹೋಗಿ ಬರಬೇಕು. 

ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ ಕಾಶಿಯವರೇ ಆದ ಕಾಶಿನಾಥ ಸಿಂಗ್‌ ‘ನಮ್ಮ ಕಾಶಿ ಎಂದರೆ ಸಣ್ಣ ಸಣ್ಣ ಗಲ್ಲಿಗಳು, ನಾಯಿಗಳು ಮತ್ತು ಬೀದಿ ತುಂಬಾ ಕಸ ಕಡ್ಡಿ ಹೊಲಸು. ಇದು ನಮ್ಮ ಕಾಶಿಯ ಪರಿಚಯ ಎಂದು ‘ಕಾಶಿ ಕಿ ಅಸ್ಸಿ’ ಪುಸ್ತಕದ ಆರಂಭದಲ್ಲೇ ಬರೆದಿದ್ದರು. ಆದರೆ ಕಾಶಿಯ ಸಂಸದ ಪ್ರಧಾನಿ ಮೋದಿ ಮೋಕ್ಷ ನಗರಿಯ ಮುಖಚರ್ಯೆಯನ್ನೇ ಬದಲಾಯಿಸಿಬಿಟ್ಟಿದ್ದಾರೆ.

ಪಾಪ ಪುಣ್ಯಗಳ ಲೆಕ್ಕದಲ್ಲಿ ಗಂಗೆಗೆ ಹೋಗಿ ಮುಳುಗಿ ಬರುತ್ತಿದ್ದ ಹಿಂದೂ ಯಾತ್ರಾರ್ಥಿಗಳಿಗೆ ಅಲ್ಲಿನ ಗಲೀಜು, ಅವ್ಯವಸ್ಥೆ, ಅರಾಜಕತೆ ನೋಡಿ ಮನಸ್ಸಿಗೆ ಬೇಸರ ಎನಿಸಿದರೂ ಶ್ರದ್ಧೆಯ ವಿಷಯ ಎಂದು ಬೇಸರಗೊಂಡು ಸುಮ್ಮನಿರುತ್ತಿದ್ದರು. ಆದರೆ ಮೋದಿ 2014ರಲ್ಲಿ ‘ಮಾ ಗಂಗೆ ಕರೆದಿದ್ದಾಳೆ’ ಎಂದಾಗ ನೀಡಿದ ಭರವಸೆಯಂತೆ ಪ್ರಾಚೀನ ಪುರಾತನ ನಗರಿಯಲ್ಲಿ ಅಸಾಧ್ಯ ಆದುದನ್ನು ಮಾಡಿ ತೋರಿಸಿದ್ದಾರೆ. ನಮ್ಮ ನಮ್ಮ ಊರುಗಳಲ್ಲಿ ಒಂದು ಪ್ರಕಲ್ಪ ಮುಗಿಸಲು ದಶಕಗಳಷ್ಟುಸಮಯ ತೆಗೆದುಕೊಳ್ಳುವ ಅದೇ ಸರ್ಕಾರಿ ವ್ಯವಸ್ಥೆಯ ಕೈಯಲ್ಲೇ ಮೋದಿ ಸರಿಯಾಗಿ 3 ವರ್ಷದಲ್ಲಿ 5 ಲಕ್ಷ ಚದರ ಅಡಿ ಜಾಗೆಯಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿ, ಹೊಸ ನಿರ್ಮಾಣ ಕಾರ್ಯ ಮಾಡಿಸಿದ್ದಾರೆ. ಒಂದು ಪ್ರಶ್ನೆ ಮನದಲ್ಲಿ ಮೂಡಿಯೇ ಮೂಡುತ್ತದೆ. ಅಲ್ಲಿ ಮೋದಿ ಸಾಹೇಬರಿಗೆ ಸಾಧ್ಯ ಆಗಿದ್ದು ನಮ್ಮ ಜನ ಪ್ರತಿನಿಧಿಗಳಿಗೆ ಏಕೆ ಸಾಧ್ಯ ಆಗುವುದಿಲ್ಲ? ಸಮಸ್ಯೆ ಬರೀ ಭ್ರಷ್ಟಾಚಾರವೇ, ಇಚ್ಛಾಶಕ್ತಿಯ ಕೊರತೆಯೇ ಅಥವಾ ಹೊಸ ಆಲೋಚನೆಗಳ ಇಲ್ಲದಿರುವಿಕೆಯೇ?

Uttar Pradesh Elections: ಅಖಿಲೇಶ್ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು

ಗಂಗೆಯಿಂದ ಮಂದಿರದವರೆಗೆ

ಏಪ್ರಿಲ… 24, 2014. ಕಾಶಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಲು ಹೋಗಿದ್ದ ಮೋದಿ ಅವರನ್ನು ಅಲ್ಲಿನ ಪಂಡಿತರು ಹಿಂದುತ್ವದ ಕಾರಣದಿಂದ ಅಪ್ಪಿಕೊಂಡಿದ್ದರಾದರೂ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದಾಗ ಜೋರಾಗಿ ನಗುತ್ತಿದ್ದರು. ಕಾಶಿ ಪಂಡಿತರಿಗೆ ಬೆಳಿಗ್ಗೆ ಪೂಜೆ ಮತ್ತು ಕರ್ಮ ಮುಗಿಸಿ ಬನಾರಸ್‌ ಪಾನ್‌ ತಿನ್ನುತ್ತಾ ಗಂಗೆ ತಟದಲ್ಲಿ ಕುಳಿತು ಜೋ ಬೈಡೆನ್‌ನಿಂದ ಹಿಡಿದು ಮೋದಿ, ಯೋಗಿ ಬಗ್ಗೆ ಹರಟೆ ಹೊಡೆಯುವುದೆಂದರೆ ಅತಿ ಇಷ್ಟದ ವಿಷಯ. ಆದರೆ 2015ರಲ್ಲೇ ಕಾಶಿಯ ಘಾಟ್‌ಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಒಂದೊಂದೇ ಖಾಸಗಿ ಕಂಪನಿಗೆ ವಹಿಸುತ್ತಾ ಬಂದ ಮೋದಿ, ಇಸ್ರೇಲ್ನಿಂ‌ದ ನೀರು ಸ್ವಚ್ಛಗೊಳಿಸುವ ಯಂತ್ರ ತಂದು ನದಿಯಲ್ಲಿ ಬಿಟ್ಟರು.

ಸ್ಥಳೀಯ ಆಡಳಿತದಿಂದ ಯಾರು ಕೂಡ ನದಿಗೆ ಹೆಣ ಬಿಡಬಾರದು ಎಂದು ಫರ್ಮಾನು ಹೊರಡಿಸಿದ ಮೋದಿ ಇಕ್ಕಟ್ಟಾದ ಜಾಗೆಯಲ್ಲಿದ್ದ ವಾರಾಣಸಿ ರೈಲ್ವೆ ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿದ್ದ ಸಣ್ಣ ಮಂಡೂದಿಹ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಬನಾರಸ್‌ ಎಂದು ಹೆಸರು ಕೊಟ್ಟರು. ಮಧ್ಯರಾತ್ರಿ ಮೋದಿ ಮತ್ತು ಯೋಗಿ ಪರಿಶೀಲನೆಗೆ ಹೋಗಿದ್ದು ಅದೇ ರೈಲ್ವೆ ನಿಲ್ದಾಣಕ್ಕೆ. ಈಗ ದಾಖಲೆಯ 3 ವರ್ಷದಲ್ಲಿ 330ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಿ ಕಾಶಿ ವಿಶ್ವನಾಥನ ಮಂದಿರದ ಸೊಬಗನ್ನು ಹೆಚ್ಚಿಸಿದ್ದಾರೆ. ಸರಿ, ಮೋದಿ 3 ತಿಂಗಳ ನಂತರದ ಚುನಾವಣೆ ಮೇಲೆ ಕಣ್ಣಿಟ್ಟು ಈಗ ಕಾರಿಡಾರ್‌ ಉದ್ಘಾಟನೆ ಮಾಡಿದ್ದಾರೆ ಅಂದುಕೊಳ್ಳೋಣ. ಇದರಲ್ಲಿ ತಪ್ಪೇನು? ಚುನಾವಣೆ ಇರುವುದೇ ಕೆಲಸ ಮಾಡಿ ವೋಟು ಕೇಳಲು ತಾನೇ?

ಗಾಂಧಿಗಳಿಗೇಕೆ ಸಾಧ್ಯವಾಗಿಲ್ಲ?

ನಾವೆಲ್ಲ ಕಾಂಗ್ರೆಸ್‌ನ ಇವತ್ತಿನ ಸ್ಥಿತಿಗತಿಗೆ ಕಾರಣ ಏನು ಎಂದು ದಿನವೀಡಿ ಚರ್ಚೆ ಮಾಡುತ್ತಲೇ ಇರುತ್ತೇವೆ. ಇದು ಗೊತ್ತಾಗಬೇಕಾದರೆ ಒಮ್ಮೆ ಉತ್ತರ ಪ್ರದೇಶದ ರಾಜಧಾನಿ ಲಖನೌಗೆ ಹೋಗಿ ಅಲ್ಲಿಂದ ಕಾಶಿ ಮತ್ತು ಅಮೇಠಿ, ರಾಯ್‌ಬರೇಲಿಗೆ ಪ್ರವಾಸ ಹೋಗಿ ಬರಬೇಕು. ಗಾಂಧಿಗಳ ಕೈಯಲ್ಲಿ ಅಪರಿಮಿತ ಅಧಿಕಾರ, ಗಾಡಿ, ಘೋಡಾ ಎಲ್ಲವೂ ಇತ್ತು. ಆದರೆ ತಾವು ಪ್ರತಿನಿಧಿಸಿದ ಅಮೇಠಿ, ರಾಯ್‌ಬರೇಲಿ ಕ್ಷೇತ್ರದಲ್ಲಿ ಒಂದು ಸಣ್ಣ ಬದಲಾವಣೆ ಕೂಡ ತರಲು ಸಾಧ್ಯ ಆಗಲಿಲ್ಲ.

India Gate: ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಮೋದಿ, ಶಾ ಜೊತೆ ಸೇರಿ ರಣತಂತ್ರ ರೂಪಿಸಿದರಾ ದೇವೇಗೌಡ?

ರಾಹುಲ್‌ ಗಾಂಧಿ 2004, 2009, 2014 ಮೂರು ಬಾರಿ ಅಮೇಠಿ ಗೆದ್ದರು. ಕೈಯಲ್ಲೇ ಇಲಾಖೆಗಳಿದ್ದವು, ಮಂತ್ರಿಗಳಿದ್ದರು. ಆದರೆ ಒಂದು ಸಣ್ಣ ರಸ್ತೆಯನ್ನೂ ನಿರ್ಮಾಣ ಮಾಡುವ ಇಚ್ಛಾಶಕ್ತಿ ತೋರಿಸಲಿಲ್ಲ. ಪ್ರಜಾಪ್ರಭುತ್ವ ಎಂದರೆ ವಾದ, ಪ್ರತಿವಾದ, ಸಂವಾದ, ಅಧಿಕಾರ, ಸಾಮಾಜಿಕ ನ್ಯಾಯ ಅಷ್ಟಕ್ಕೇ ಸೀಮಿತ ಅಲ್ಲ. ಹೇಳಿದ ಕೆಲಸಗಳನ್ನು, ಹೇಳಿದ ಸಮಯದಲ್ಲಿ ಮಾಡಿಸುವ ಇಚ್ಛಾಶಕ್ತಿಯ ನಾಯಕತ್ವವೂ ಬೇಕು.

ರಾಜಕೀಯ ಲಾಭ-ನಷ್ಟಗಳು

ರಾಜಕೀಯ ನಷ್ಟದ ಲೆಕ್ಕ ಹಾಕಿ ಕೃಷಿ ಕಾನೂನು ಹಿಂದೆ ತೆಗೆದುಕೊಂಡ ಮೋದಿಯವರಿಗೆ ಕಾಶಿ ಮತ್ತು ಅಯೋಧ್ಯೆಯ ನಿರ್ಮಾಣ ಕಾರ್ಯಗಳಿಂದ ರಾಜಕೀಯ ಲಾಭದ ನಿರೀಕ್ಷೆ ಇರುವುದು ಸ್ವಾಭಾವಿಕ. ದಕ್ಷಿಣ ಭಾರತದ ಮಂದಿರಗಳು ಮತ್ತು ನಗರಗಳಂತೆ ಉತ್ತರ ಭಾರತದ ಮಂದಿರಗಳು ಮತ್ತು ನಗರಗಳು ನೋಡಿದ ಕೂಡಲೇ ಖುಷಿ ತರುವ ರೀತಿಯಲ್ಲಿ ಇರುವುದಿಲ್ಲ. ಹೀಗಾಗಿಯೇ ದಿಲ್ಲಿಯಲ್ಲಿ ಸ್ವಚ್ಛ ಸುಂದರ ವ್ಯವಸ್ಥಿತ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರ ನಿರ್ಮಾಣ ಆದಾಗ ಅಲ್ಲಿನ ಜನ ಜಗತ್ತಿನ ಅದ್ಭುತ ಎನ್ನುವಂತೆ ನೋಡಲು ಬರುತ್ತಿದ್ದರು.

ಈಗ ಮೋದಿ, ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಹೋಗಿ ಗಂಗೆಯಲ್ಲಿ ಮಿಂದು ಈಶ್ವರನ ದರ್ಶನ ಪಡೆಯಬೇಕೆನ್ನುವ, ಸಾವು ಬಂದರೆ ಅಲ್ಲೇ ಬರಲಿ ಎನ್ನುವ ಕಾಶಿಗೆ ಅವ್ಯವಸ್ಥೆ ಅರಾಜಕತೆಗಳಿಂದ ಮೋಕ್ಷ ನೀಡಿದ್ದಾರೆ. ಈ ಕೆಲಸಗಳಿಂದ ಬೇರೆ ಪಕ್ಷದ ಮತದಾರರು ಮೋದಿಯತ್ತ ವಾಲುವ ಸಾಧ್ಯತೆ ಕಡಿಮೆ. ಆದರೆ ಹಿಂದುತ್ವ ಎನ್ನುವ ಕಟ್ಟಾಮತದಾರರು ಬಿಜೆಪಿ ಜೊತೆ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು.

ಬಿಜೆಪಿಗೆ ಮುಂಬೈ ಕರ್ನಾಟಕ ಚಿಂತೆ?

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಬಳ್ಳಾರಿ, ಚಿತ್ರದುರ್ಗ ಮತ್ತು ಬೆಂಗಳೂರು ನಗರದಲ್ಲಿ ಗೆದ್ದಿದ್ದರೂ, ಮುಂಬೈ ಕರ್ನಾಟಕದ ಜಿಲ್ಲೆಗಳ ಫಲಿತಾಂಶ ಆ ಪಕ್ಷದ ನಿದ್ದೆಗೆಡಿಸಿದೆ. 13 ಬಿಜೆಪಿ ಶಾಸಕರು, ಒಬ್ಬ ಮುಖ್ಯಮಂತ್ರಿ, ಒಬ್ಬ ಕೇಂದ್ರ ಸಚಿವರು ಇರುವ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಯ ಸಹೋದರನಿಗಿಂತ ಬೆಂಗಳೂರಿನಲ್ಲೇ ರಾಜಕಾರಣ ಮಾಡುವ 4 ಶಾಸಕರ ಬೆಂಬಲ ಮಾತ್ರ ಇದ್ದ ಸಲೀಂ ಅಹ್ಮದ್‌ 900 ಹೆಚ್ಚು ಮತಗಳನ್ನು ಪಡೆದಿರುವುದು ಬಿಜೆಪಿಗೆ ಹಾನಗಲ್ ಸೋಲಿನ ನಂತರದ ಒಳ್ಳೆ ಸುದ್ದಿ ಏನಲ್ಲ. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣು ಇಟ್ಟಿರುವ ಘಟಾನುಘಟಿ ನಿರಾಣಿ, ಕಾರಜೋಳ ಮತ್ತು ಯತ್ನಾಳ್‌ ಇರುವ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮೊದಲನೇ ಪ್ರಾಶಸ್ತ್ಯದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಬೆಳಗಾವಿಯಂತೂ ರಾಷ್ಟ್ರೀಯ ಪಕ್ಷಕ್ಕಾದ ದೊಡ್ಡ ಮುಖಭಂಗ. ಲಿಂಗಾಯತ ಬಾಹುಳ್ಯದ ಜಿಲ್ಲೆಗಳಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಪಂಚಮಸಾಲಿ ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ ಮೇಲೆ ಮುನಿಸಿಕೊಂಡಿರುವುದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದು ಮುಂದುವರೆದರೆ 2023ರಲ್ಲಿ ಬಿಜೆಪಿಗೆ ಕಷ್ಟ.

ಸೋಲು- ಗೆಲುವು ಚಲ್ತಾ ಹೈ, ಆದರೆ ನೀವು ಇನ್ನಷ್ಟು ಫಾಸ್ಟ್ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ

ಹೊರಟ್ಟಿ ಬಿಜೆಪಿಗೆ ಹೋಗುತ್ತಾರಾ?

ಒಂದು ಕಾಲದಲ್ಲಿ ಕುಮಾರಣ್ಣ ಎಂದು ತಲೆ ಮೇಲೆ ಹೊತ್ತು ತಿರುಗುತ್ತಿದ್ದ ಎನ್‌.ಎಚ್‌.ಕೋನರೆಡ್ಡಿ ಕಾಂಗ್ರೆಸ್‌ ಸೇರಿದ್ದಾರೆ. ಈಗ ದೊಡ್ಡ ಪ್ರಶ್ನೆ ಇರುವುದು ಸಭಾಪತಿ ಬಸವರಾಜ ಹೊರಟ್ಟಿಏನು ಮಾಡುತ್ತಾರೆ ಎನ್ನುವುದು. ಬಿಜೆಪಿ ಮೂಲಗಳು ಹೊರಟ್ಟಿ2022ರಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳುತ್ತಿವೆ. ಆದರೆ ಈ ಬಗ್ಗೆ ಕೇಳಿದರೆ ಹೊರಟ್ಟಿನಕ್ಕು ಸುಮ್ಮನಾಗುತ್ತಾರೆ. ಆದರೆ ಹೊರಟ್ಟಿ ಕಳೆದ 30 ದಿನಗಳಲ್ಲಿ ಮೂರು ಬಾರಿ ದಿಲ್ಲಿಗೆ ಬಂದು ಹೋಗಿದ್ದಾರೆ.

ಅಂದಹಾಗೆ ಮತ್ತೊಮ್ಮೆ ಆರಿಸಿ ಬಂದರೂ ಹೊರಟ್ಟಿಪುನರಪಿ ಸಭಾಪತಿ ಆಗುವುದು ಕಷ್ಟ. ಹೀಗಾಗಿ ಬಿಜೆಪಿಯಿಂದಲೇ ಸ್ಪರ್ಧಿಸಿದರೆ ಮರಳಿ ಸಭಾಪತಿ ಆಗಬಹುದು ಎನ್ನುವುದು ಲೆಕ್ಕಾಚಾರ. ಹೊರಟ್ಟಿ-ಬೊಮ್ಮಾಯಿ ನಡುವೆ ಸಂಬಂಧಗಳು ಅಷ್ಟಕಷ್ಟೇ ಆದರೂ ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ, ಶೆಟ್ಟರ್‌ ಜೊತೆ ಹೊರಟ್ಟಿಸಂಬಂಧಗಳು ಚೆನ್ನಾಗಿವೆ. ಹೊರಟ್ಟಿಕೂಡ ಜೆಡಿಎಸ್‌ ಬಿಡಲು ತೀರ್ಮಾನಿಸಿದರೆ ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಬಳಿ ಉಳಿಯೋದು ಬಂಡೆಪ್ಪ ಕಾಶೆಂಪುರ್‌ ಮಾತ್ರ.

ಕ್ಷೇತ್ರ ನೋಡಿಕೊಳ್ಳುವುದು ಹೇಗೆ?

ಊರು, ದೇಶ, ಜಗತ್ತು, ಸಿದ್ಧಾಂತದ ಬಗ್ಗೆ ಮಾತನಾಡುವುದು ಸುಲಭ. ಆದರೆ ತಮ್ಮ ಕ್ಷೇತ್ರದ ಕೆಲಸ ಮಾಡುವುದು ಕಷ್ಟ. ಈಗ ಮೋದಿ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಶರದ್‌ ಪವಾರ್‌ ಅವರ ಬಾರಾಮತಿ, ಯಡಿಯೂರಪ್ಪ ಅವರ ಶಿಕಾರಿಪುರ, ಶಿವಮೊಗ್ಗ, ದೇವೇಗೌಡರ ಹಾಸನ, ನಿತೀಶ್‌ ಕುಮಾರ ಅವರ ನಳಂದಾ, ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ಪಟಿಯಾಲಾ, ಸುಮಿತ್ರಾ ಮಹಾಜನ್‌ ಅವರ ಇಂದೋರ್‌, ನಿತಿನ್‌ ಗಡ್ಕರಿ ಮತ್ತು ದೇವೇಂದ್ರ ಫಡ್ನವೀಸ್‌ ಅವರ ನಾಗಪುರಗಳಲ್ಲಿ ಮೂಲಭೂತ ಸೌಕರ್ಯ ಗಣನೀಯವಾಗಿ ಅಭಿವೃದ್ಧಿಗೊಂಡಿವೆ.

ಲಾಲು ಪ್ರಸಾದ್‌ ಯಾದವ್‌ ಮುಖ್ಯಮಂತ್ರಿ ಆದರೂ ಬಿಹಾರದ ಅವರ ಕ್ಷೇತ್ರ ರಘೋಪುರ, ಮಮತಾ ಬ್ಯಾನರ್ಜಿ ಅವರ ಭವಾನಿಪುರ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವ ಕೆಲಸಗಳು ಆಗಿಲ್ಲ. ಹಿಂದೆ ಬಂಗಾರಪ್ಪನವರು ಸೊರಬದಿಂದ ಯಾರಾದರೂ ರಸ್ತೆ ಮಾಡಿಸಿ ಎಂದು ಬಂದರೆ ತಗೋ ಮಕ್ಕಳ ಖರ್ಚಿಗೆ ಸ್ವಲ್ಪ ದುಡ್ಡು ಇಟ್ಟುಕೋ. ರಸ್ತೆ ಕಟ್ಟಿಕೊಂಡು ಏನು ಮಾಡ್ತೀಯ ಎಂದು ಕಳುಹಿಸುತ್ತಿದ್ದರಂತೆ. ಈಗ ಕಾಲ ಬದಲಾಗುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!