
ಬೆಂಗಳೂರು (ಆ.21): ಇಂದಿನ ಪ್ರಮುಖ ಸುದ್ದಿಗಳಲ್ಲಿ ಕೇಂದ್ರ ಸರ್ಕಾರ ಹಣವಿಟ್ಟು ಆಡುವ ಆನ್‌ಲೈನ್ ಗೇಮಿಂಗ್‌ಅನ್ನು ಕಡ್ಡಾಯವಾಗಿ ನಿಷೇಧ ಮಾಡಿದೆ. ಈ ಕುರಿತಾಗಿ ಮಂಡಿಸಿದ ಮಸೂದೆ ಲೋಕಸಭೆಯಲ್ಲಿ ಪಾಸ್ ಆಗಿದೆ. ಅದರೊಂದಿಗೆ ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಇನ್ನು ಮುಂದೆ ದೇಶದಲ್ಲಿ ಪ್ರಧಾನಿ ಹಾಗೂ ಸಿಎಂಗಳು ಜೈಲಿಗೆ ಹೋದರೆ ಅವರನ್ನು ವಜಾ ಮಾಡುವ ವಿಧೇಯಕವನ್ನೂ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಉಳಿದಂತೆ ದಿನದ ಐದು ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.
1. ಹಣ ಇಟ್ಟು ಆಡುವ ಎಲ್ಲಾ ಆನ್‌ಲೈನ್ ಗೇಮ್‌ಗಳು ಕಡ್ಡಾಯ ನಿಷೇಧ
ನೈಜ ಹಣಬಳಸಿ ಆಡುವ ಎಲ್ಲಾ ರೀತಿಯ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ-2025 ವಿಧೇಯಕವು ಬುಧವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಹೆಚ್ಚುತ್ತಿರುವ ಆನ್‌ಲೈನ್ ಗೇಮ್ ಚಟ, ಅಕ್ರಮ ಹಣ ವರ್ಗಾವಣೆ ಮತ್ತು ಆ್ಯಪ್‌ಗಳ ಮೂಲಕ ನಡೆಯುತ್ತಿರುವ ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
2. ಪ್ರಧಾನಿ, ಸಿಎಂಗಳು ಜೈಲಿಗೆ ಹೋದ್ರೆ ವಜಾ : ಮಸೂದೆ ಮಂಡನೆ
5 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗುವ ಆರೋಪದ ಪ್ರಕರಣದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರ ವಜಾಕ್ಕೆ ಅವಕಾಶ ಕಲ್ಪಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು. ಆದರೆ ಇಂದು ಸಂವಿಧಾನ ಮತ್ತು ಒಕ್ಕೂಟ ವಿರೋಧಿ ಕಾಯ್ದೆ ಎಂದು ಮಸೂದೆಯನ್ನು ಪ್ರತಿ ಹರಿದು ಎಸೆದು ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಕಾರಣ ಲೋಕಸಭೆಯಲ್ಲಿ ಭಾರೀ ಗದ್ದಲದ ವಾತಾವರಣ ನಿರ್ಮಾಣವಾಯಿತು.
3. ಟ್ರಂಪ್ ಬೆದರಿಕೆ ಇದ್ರೂ ಭಾರತಕ್ಕೆ ರಷ್ಯಾದಿಂದ ಶೇ.5 ತೈಲ ಡಿಸ್ಕೌಂಟ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹಿನ್ನೆಲೆ ಕೆಲ ಕಾಲ ರಷ್ಯಾ ತೈಲ ಖರೀದಿ ಕಡಿತಗೊಳಿಸಿದ್ದ ಭಾರತದ ತೈಲ ಕಂಪನಿಗಳು ಮತ್ತೆ ರಷ್ಯಾದಿಂದ ತೈಲ ಖರೀದಿ ಪುನಾರಂಭ ಮಾಡಿವೆ. ಈ ಬಾರಿ ರಷ್ಯಾ ಕಂಪನಿಗಳು ಭಾರತಕ್ಕೆ ಹೆಚ್ಚುವರಿಯಾಗಿ ಶೇ.5ರಷ್ಟು ರಿಯಾಯ್ತಿ ಘೋಷಿಸಿವೆ ಎನ್ನಲಾಗಿದೆ.
4. ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು
ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗೆ ಪ್ರಸ್ತುತ ಇರುವ ಶೇ.18ರಷ್ಟು ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಸುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ. ಬುಧವಾರ ಇಲ್ಲಿ ನಡೆದ ವಿಮೆ ಕುರಿತ ರಾಜ್ಯಗಳ ಸಚಿವರ ಮಟ್ಟದ ಸಭೆಯಲ್ಲಿ, ಸಭೆಯ ಸಮನ್ವಯಕಾರ ಸಾಮ್ರಾಟ್ ಚೌಧರಿ ಈ ವಿಷಯದ ತಿಳಿಸಿದ್ದಾರೆ.
5. ಎಸ್ಸಿಎಸ್ಪಿ/ಟಿಎಸ್‌ಪಿ 13 ಸಾವಿರ ಕೋಟಿ ಅನುದಾನ ‘ಗ್ಯಾರಂಟಿ’ಗೆ ಬಳಕೆ
ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ ನೀಡಲಾಗಿರುವ ₹42 ಸಾವಿರ ಕೋಟಿ ಅನುದಾನ ಪೈಕಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ₹13.43 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ