ಮುಧೋಳ ನಾಯಿ ಪೊಲೀಸ್‌ ಕೆಲಸಕ್ಕೆ ಲಾಯಕ್ಕಲ್ಲ!

Published : Feb 27, 2021, 08:17 AM ISTUpdated : Feb 27, 2021, 09:01 AM IST
ಮುಧೋಳ ನಾಯಿ ಪೊಲೀಸ್‌ ಕೆಲಸಕ್ಕೆ ಲಾಯಕ್ಕಲ್ಲ!

ಸಾರಾಂಶ

ಮುಧೋಳ ನಾಯಿ ಪೊಲೀಸ್‌ ಕೆಲಸಕ್ಕೆ ಲಾಯಕ್ಕಲ್ಲ!| ಗ್ರಹಿಕೆ ಸಾಮರ್ಥ್ಯ ಕಮ್ಮಿ ಇದೆ, ತರಬೇತಿಯನ್ನೇ ಮರೆಯುತ್ತವೆ| ಕೇಂದ್ರ ಸರ್ಕಾರಕ್ಕೆ 2 ಅರೆಸೇನಾ ಪಡೆಗಳಿಂದ ವರದಿ ಸಲ್ಲಿಕೆ| ‘ಮನ್‌ ಕೀ ಬಾತ್‌’ನಲ್ಲಿ ಮೋದಿ ಪ್ರಸ್ತಾಪಿಸಿದ್ದ ಶ್ವಾನಗಳಿವು

ನವದೆಹಲಿ(ಫೆ.27): ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕೀ ಬಾತ್‌’ನಲ್ಲಿ ಪ್ರಸ್ತಾಪಿಸಿದ್ದ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹೆಚ್ಚಾಗಿ ಕಂಡುಬರುವ ‘ಮುಧೋಳ ನಾಯಿ’ಗಳು ಪೊಲೀಸ್‌ ಕೆಲಸಕ್ಕೆ ಸೂಕ್ತವಾದ ಶ್ವಾನಗಳಲ್ಲ ಎಂದು ಅರೆಸೇನಾ ಪಡೆಗಳಾದ ಇಂಡೋ-ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಹಾಗೂ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ಗಳು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿವೆ.

ಕೇಂದ್ರ ಗೃಹ ಸಚಿವಾಲಯದ ಕೆ9 ಘಟಕದ ಸೂಚನೆ ಮೇರೆಗೆ 2018ರಿಂದ 8 ನಾಯಿಗಳನ್ನು ಐಟಿಬಿಪಿ ಹಾಗೂ ಎಸ್‌ಎಸ್‌ಬಿ ತರಬೇತಿಗೆ ಒಳಪಡಿಸಿದ್ದವು. ಇದೀಗ ಆ ಪಡೆಗಳ ತಜ್ಞರು ಕೆ9 ಘಟಕಕ್ಕೆ ವರದಿ ಸಲ್ಲಿಸಿದ್ದು, ಮುಧೋಳ ಶ್ವಾನಗಳು ಪೊಲೀಸ್‌ ಕೆಲಸಕ್ಕೆ ಆಗಿ ಬರುವುದಿಲ್ಲ ಎಂದು ವರದಿ ನೀಡಿದ್ದಾರೆ. ಅದನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಜತೆಗೂ ಗೃಹ ಸಚಿವಾಲಯ ಹಂಚಿಕೊಂಡಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಮುಧೋಳ ನಾಯಿಗಳು ಅತ್ಯುತ್ತಮ ನಿಷ್ಠೆ ಪ್ರದರ್ಶಿಸುತ್ತವೆ. ಚುರುಕಾಗಿವೆ. ಆರೋಗ್ಯಪೂರ್ಣವಾಗಿವೆ ಎಂಬುದೆಲ್ಲಾ ನಿಜ. ಆದರೆ ಈ ಶ್ವಾನಗಳು ಪುಕ್ಕಲು ಸ್ವಭಾವ ಹೊಂದಿವೆ. ಯಾವುದೇ ಚಲನಶೀಲ ವಸ್ತುವನ್ನು ಕಂಡರೆ ಅವುಗಳ ಚಿತ್ತ ಚಂಚಲನವಾಗುತ್ತದೆ. ಆ ವಸ್ತುವನ್ನು ಆಘ್ರಾಣಿಸಿ ಅದರ ಬಗ್ಗೆ ಗಮನಹರಿಸುವ ಬದಲು ಚಲನಶೀಲ ವಸ್ತುವನ್ನು ಅಟ್ಟಿಸಿಕೊಂಡು ಹೋಗುತ್ತವೆ. ಪೊಲೀಸ್‌ ಶ್ವಾನಗಳು ಈ ರೀತಿ ಇರಬಾರದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಪೊಲೀಸ್‌ ಕೆ9 ಜರ್ನಲ್‌ನ ಜನವರಿ ಸಂಚಿಕೆಯಲ್ಲೂ ಪ್ರಕಟವಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಮುಧೋಳ ನಾಯಿಗಳು ಈಗಾಗಲೇ ಪಡೆದಿದ್ದ ತರಬೇತಿಯನ್ನು ಮರೆಯುವ ಗುಣ ಹೊಂದಿವೆ. ತರಬೇತಿ/ಅಭ್ಯಾಸದ ಸಂದರ್ಭದಲ್ಲಿ ಹಗ್ಗ ಬಿಚ್ಚಿದರೆ ಓಡಿ ಹೋಗುತ್ತವೆ. ಈ ಶ್ವಾನಗಳಿಗೆ ತರಬೇತಿ ಕೊಡುವುದು ಕೂಡ ಕಷ್ಟ. ಏಕೆಂದರೆ ಗ್ರಹಿಕೆ ಸಾಮರ್ಥ್ಯವೇ ಕಡಿಮೆ ಇದೆ. ಯಾವಾಗಲೂ ಬೇಟೆಯಾಡುವ ಮನಸ್ಥಿತಿಯಲ್ಲೇ ಇರುತ್ತವೆ. ಅಪರಿಚಿತರ ಜತೆ ಉತ್ತಮ ನಡವಳಿಕೆ ತೋರುವುದಿಲ್ಲ. ಈ ನಾಯಿಗಳ ಉದ್ದವಿದ್ದು, ಕುತ್ತಿಗೆ ಕಿರಿದಾಗಿದೆ. ಹೀಗಾಗಿ ಕುತ್ತಿಗೆಗೆ ಕಟ್ಟುವ ಚೈನ್‌ ಅನ್ನು ಕಳಚಿ ನಿಯಂತ್ರಕರಿಂದ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಇದೇ ವೇಳೆ ಮುಧೋಳ ನಾಯಿಗಳ ಧನಾತ್ಮಕ ಅಂಶಗಳನ್ನೂ ವರದಿಯಲ್ಲಿ ತಜ್ಞರು ಪ್ರಸ್ತಾಪಿಸಿದ್ದಾರೆ. ಈ ನಾಯಿಗಳು ತಮ್ಮ ನಿಯಂತ್ರಕರಿಗೆ ನಿಷ್ಠವಾಗಿರುತ್ತವೆ. ಸುಲಭವಾಗಿ ಬೆಳೆಸಬಹುದು. ಅದಕ್ಕಾಗುವ ಖರ್ಚು ಕಡಿಮೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಉಷ್ಣ ವಾತಾವರಣಕ್ಕೂ ಹೊಂದಿಕೊಳ್ಳುತ್ತವೆ. ಯಾವುದೇ ಸಮಸ್ಯೆ ಇಲ್ಲದೆ ಬಹುದೂರ ಓಡುತ್ತವೆ ಎಂದು ವಿವರಿಸಿದ್ದಾರೆ.

2018ರಲ್ಲಿ ಐಟಿಬಿಪಿ ಹಾಗೂ ಎಸ್‌ಎಸ್‌ಬಿ ಪಡೆಗಳು 8 ಮುಧೋಳ ನಾಯಿಗಳನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡು ತರಬೇತಿ ನೀಡಿದ್ದವು. ಸ್ಫೋಟಕ ಹಾಗೂ ಮಾದಕ ವಸ್ತು ಶೋಧ ಕಾರ್ಯಾಚರಣೆ ಕುರಿತು ತರಬೇತಿಯನ್ನು ನೀಡಲಾಗಿತ್ತು. ಛತ್ತೀಸ್‌ಗಢದ ನಕ್ಸಲ್‌ ನಿಗ್ರಹ ಪಡೆ ಹಾಗೂ ಭಾರತ- ನೇಪಾಳ ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಅವುಗಳ ನಡವಳಿಕೆ, ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ವರದಿಯನ್ನು ತಜ್ಞರು ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana