ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದು, ಮುಂದಿನ ವಾರ ಹಲವು ರಾಜ್ಯಗಳ ರಾಜ್ಯಾಧ್ಯಕ್ಷರ ಕುರಿತು ಘೋಷಣೆ ಹೊರಡಿಸಲಿದೆ. ಏಪ್ರಿಲ್ ಅಂತ್ಯದ ವೇಳೆಗೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ನವದೆಹಲಿ (ಏ.2): ಪಕ್ಷದ ರಾಜ್ಯ ಘಟಕಗಳ ಮತ್ತು ರಾಷ್ಟ್ರೀಯ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಚುರುಕು ನೀಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್, ಮುಂದಿನ ವಾರವೇ ಹಲವು ರಾಜ್ಯಗಳ ರಾಜ್ಯಾಧ್ಯಕ್ಷರ ಕುರಿತು ಘೋಷಣೆ ಮಾಡಲಿದೆ. ಜೊತೆಗೆ ಏಪ್ರಿಲ್ ಮಾಸಾಂತ್ಯಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿಯ ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೇ ಅವಧಿ ವಿಸ್ತರಣೆಗೊಂಡು ಹೆಚ್ಚುವರಿ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಹೊಸ ಅಧ್ಯಕ್ಷರ ಆಯ್ಕೆ ಆಗಬೇಕಿದ್ದಲ್ಲಿ, ಕನಿಷ್ಠ ಶೇ.50ರಷ್ಟು ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಿರಬೇಕು. ಆದರೆ ಸದ್ಯ 13 ರಾಜ್ಯಗಳಿಗೆ ಮಾತ್ರವೇ ನೂತನ ಅಧ್ಯಕ್ಷರ ಆಯ್ಕೆ ಅಥವಾ ಹಿಂದಿನ ಅಧ್ಯಕ್ಷರನ್ನೇ ಮುಂದುವರೆಸುವ ನಿರ್ಧಾರ ಪ್ರಕಟಿಸಲಾಗಿದೆ.
ಇದನ್ನೂ ಓದಿ: ವಿಜಯೇಂದ್ರ ಬದಲಾವಣೆ ಹೋರಾಟ ನಿಲ್ಲಿಸದಿರಲು ಬಿಜೆಪಿ ರೆಬೆಲ್ಸ್ ಪಣ: ಯತ್ನಾಳ್ ಜತೆಗೆ ನಿಲ್ಲುವ ಸಂದೇಶ
ಇದರ ಮುಂದುವರೆದ ಭಾಗವಾಗಿ ಮುಂದಿನ ವಾರ ಕೆಲ ರಾಜ್ಯಗಳ ಅಧ್ಯಕ್ಷರ ಕುರಿತು ಪಕ್ಷ ಘೋಷಣೆ ಮಾಡಲಿದೆ. ಅಲ್ಲಿಗೆ ಶೇ.50ರಷ್ಟು ರಾಜ್ಯಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಂತೆ ಆಗಲಿದೆ. ಹೀಗಾಗಿ ಅದರ ಮುಂದಿನ ಭಾಗವಾಗಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಳನ್ನು ಪಕ್ಷ ಮಾಡಲಿದೆ. ಬಳಿಕ ಹಂತಹಂತವಾಗಿ ಉಳಿದ ರಾಜ್ಯಗಳಿಗೂ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.