* ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಕೊಡುಗೆ ನಿರೀಕ್ಷೆ
* ರೈಲ್ವೆ, ಕೃಷಿ, ಮೂಲಸೌಕರ್ಯ, ಐಟಿ ಕ್ಷೇತ್ರಕ್ಕೆ ಸಾಕಷ್ಟುನೆರವಿನ ನಿರೀಕ್ಷೆ
* ಆರಿಸಿ ಕಳಿಸಿದ ರಾಜ್ಯಕ್ಕೆ ನೆರವು ನೀಡ್ತಾರಾ ಸಚಿವೆ ನಿರ್ಮಲಾ ಸೀತಾರಾಮನ್?
ಬೆಂಗಳೂರು (ಫೆ. 01) ಮುಂದಿನ ವರ್ಷ ವಿಧಾನಸಭಾ ಚುನಾವಣೆ (Assembly elections)ಎದುರಿಸಲಿರುವ ಕರ್ನಾಟಕಕ್ಕೆ (Karnataka) ಕೇಂದ್ರ ಸರ್ಕಾರ ಬಜೆಟ್‌ನಲ್ಲಿ (Union Budget) ಸಾಕಷ್ಟುಕೊಡುಗೆ, ಹೊಸ ಯೋಜನೆ ಘೋಷಿಸುವ ನಿರೀಕ್ಷೆ ಇದೆ. ರೈಲ್ವೆ (Indian Railways) ಯೋಜನೆಗೆ ಹೆಚ್ಚು ಹಣ, ಕಾರಿಡಾರ್ ರಸ್ತೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಕ್ರಮ, ಹೊಸ ಐಐಟಿ ಸ್ಥಾಪನೆ, ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡಲು ನೂತನ ಯೋಜನೆ ಘೋಷಿಸುವ ನಿರೀಕ್ಷೆಯನ್ನು ರಾಜ್ಯದ ಜನತೆ ಹೊಂದಿದೆ.
undefined
ಅದರಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣ ಅವರ ಮೇಲಿನ ನಿರೀಕ್ಷೆಗಳು ಇನ್ನಷ್ಟುಹೆಚ್ಚಾಗಿವೆ.
ರೈಲ್ವೆಗೆ ನೆರವು?: ವಿಶೇಷವಾಗಿ ರೈಲ್ವೆಗೆ ಸಂಬಂಧಪಟ್ಟಂತೆ ಈಗಾಗಲೇ ಘೋಷಿಸಿರುವ ಹೊಸ ರೈಲು ಮಾರ್ಗಗಳಿಗೆ ಹಣ ಒದಗಿಸುವ ಮೂಲಕ ಕಾಮಗಾರಿಗಳಿಗೆ ಇನ್ನಷ್ಟುವೇಗ ನೀಡಬಹುದು. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ, ಶಿವಮೊಗ್ಗ-ಹರಿಹರ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಶಿವಮೊಗ್ಗ-ಶೃಂಗೇರಿ-ಮಂಗಳೂರು, ಬಾಗಲಕೋಟೆ-ಕುಡಚಿ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಹಣ ನೀಡುವ ನಿರೀಕ್ಷೆ ಇದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ರಾಜ್ಯ ಸರ್ಕಾರ ಈ ಹಿಂದೆಯೇ ಮನವಿ ಮಾಡಿದ್ದು, ಕೇಂದ್ರದ ಬಜೆಟ್‌ನಲ್ಲಿ ಪೂರಕವಾಗಿ ಸ್ಪಂದಿಸುವ ನಿರೀಕ್ಷೆಯನ್ನು ಸಹಜವಾಗಿ ರಾಜ್ಯದ ಜನತೆ ಹೊಂದಿದೆ.
‘ಸ್ಟಾರ್ಟಪ್’ ತಾಣವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟುಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲು ವಿಶೇಷ ಯೋಜನೆ, ಹಣಕಾಸಿನ ನೆರವು, ಐಟಿ ಹಾಗೂ ಐಟಿ ಆಧಾರಿತ ಸೇವೆಗಳಿಗೆ ಉತ್ತೇಜಿಸಲು ಯೋಜನೆ ಘೋಷಿಸುವ ನಿರೀಕ್ಷೆ ಹೊಂದಲಾಗಿದೆ.
ತಂಬಾಕು, ಕಬ್ಬು, ಭತ್ತಕ್ಕೆ ಹೊಸ ಕಾರ್ಯಕ್ರಮ: ರಾಜ್ಯದ ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಕಡೆ ತಂಬಾಕು ಬೆಳೆಯುವ ರೈತರು ಅನ್ಯ ಬೆಳೆ ಬೆಳೆಯಲು ಹೊಸ ಕಾರ್ಯಕ್ರಮ, ಅದೇ ರೀತಿ ಕಬ್ಬು, ಭತ್ತ ಬೆಳೆಯಲು ಅತಿ ಹೆಚ್ಚು ನೀರಿನ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದನ್ನು ತಪ್ಪಿಸಲು ಬೇರೆ ಬೇರೆ ರೀತಿ ಬೆಳೆ ಬೆಳೆಯಲು ನೂತನ ಯೋಜನೆಯನ್ನು ಕೇಂದ್ರ ಪ್ರಕಟಿಸುವ ನಿರೀಕ್ಷೆ ಮಾಡಲಾಗಿದೆ
Economic Survey 2022: 2021ರಲ್ಲಿ ಅತ್ಯಧಿಕ ಸ್ಟಾರ್ಟ್ಅಪ್ ಗಳಿರೋ ನಗರ ಬೆಂಗಳೂರಲ್ಲ, ನವದೆಹಲಿ!
ಜವಳಿ ಮೇಲಿನ ಜಿಎಸ್‌ಟಿ ತೆರಿಗೆ ಇಳಿಕೆ ನಿರೀಕ್ಷೆ: ಜವಳಿ, ಉಡುಪು ಹಾಗೂ ವಸ್ತ್ರಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಿರುವುದನ್ನು ಕಡಿಮೆ ಮಾಡುವ, ಜಿಎಸ್‌ಟಿ/ ಇನ್‌ಪುಟ್ ತೆರಿಗೆ ಕ್ರೆಡಿಟ್ ಪಾವತಿ ವಿಳಂಬ ಹಾಗೂ ತಪ್ಪಾಗಿ ತೆರಿಗೆ ಪಾವತಿಸಿದ್ದಲ್ಲಿ ವಿಧಿಸುತ್ತಿರುವ ಶೇ. 18 ಮತ್ತು ಶೇ. 24ರಷ್ಟುದಂಡ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹೊಂದಿದೆ.
ಬಡ್ಡಿ ರಹಿತ ಸಾಲದ ನಿರೀಕ್ಷೆ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಅನುದಾನ, ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ನಿರೀಕ್ಷಿಸಿದೆ. ಪ್ರತಿ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ‘ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್’ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಹೊಸ ತಲೆಮಾರಿನ ಉದ್ದಿಮೆದಾರರಿಗೆ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆ ಸ್ಥಾಪನೆಗೆ 10 ಕೋಟಿ ರು. ವರೆಗೆ ಸಾಲ ನೀಡುವ ಯೋಜನೆ ಪ್ರಕಟಿಸುವ ನಿರೀಕ್ಷೆ ಮಾಡಿದೆ.