* ಮಧ್ಯಪ್ರದೇಶ, ಬಂಗಾಳದಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಆದೇಶ
* ಕೆನಡಾ ಪ್ರಧಾನಿ ಟ್ರುಡ್ಯುಗೆ ಕೊರೋನಾ ಸೋಂಕು
* ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ: ಬ್ರಿಟನ್ ಪ್ರಧಾನಿ ಕ್ಷಮೆ
*3ನೇ ಅಲೆ ಗರಿಷ್ಠದ ಅರ್ಧಕ್ಕಿಳಿದ ಸೋಂಕು!
ಭೋಪಾಲ್/ಕೋಲ್ಕತಾ(ಫೆ. 01) ಕೋವಿಡ್ (Coronavirus) ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ (Madhya Pradesh) ಹಾಗೂ ಪಶ್ಚಿಮ ಬಂಗಾಳದಲ್ಲಿ (West Bengal) ಶಾಲೆ ಕಾಲೇಜುಗಳನ್ನು (School) ಪುನಾರಂಭಿಸಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಫೆ.1 ರಿಂದ ಶೇ. 50 ರಷ್ಟುಹಾಜರಾತಿಯೊಂದಿಗೆ 1ರಿಂದ 12 ನೇ ತರಗತಿಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಹೇಳಿದ್ದಾರೆ. ಅಂತೆಯೇ ಫೆ.3ರಿಂದ ಪಶ್ಚಿಮ ಬಂಗಾಳದಲ್ಲೂ 8ನೇ ತರಗತಿಯಿಂದ 12ನೇ ತರಗತಿಗಳನ್ನು ಆರಂಭಿಸಲಾಗುವುದು. ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಲವು ಕೋವಿಡ್ ನಿರ್ಬಂಧಗಳನ್ನು ಸಹ ಸಡಿಲಗೊಳಿಸಲಾಗಿದೆ. ರಾತ್ರಿ ಕಫ್ರ್ಯೂವನ್ನು 11 ಗಂಟೆಯಿಂದ 5 ಗಂಟೆವರೆಗೆ ನಿಗದಿ ಮಾಡಲಾಗಿದೆ. ಶೇ.75ರ ಮಿತಿಯೊಂದಿಗೆ ರೆಸ್ಟೋರೆಂಟ್ ಮತ್ತು ಸಿನಿಮಾ ಹಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಪಾರ್ಕ್ ಮತ್ತು ಪ್ರವಾಸಿ ತಾಣಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
undefined
ಕೆನಡಾ ಪ್ರಧಾನಿ ಟ್ರುಡ್ಯುಗೆ ಕೊರೋನಾ ಸೋಂಕು: ಟೊರಂಟೊ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊಗೆ ಕೊರೋನಾ ಸೋಂಕು ದೃಢಪಟ್ಟಿದೆ. ಟ್ರೂಡೋ ಅವರ ಮಕ್ಕಳಲ್ಲಿ ಒಬ್ಬನಿಗೆ ಕೋವಿಡ್ ತಗುಲಿದ್ದು, ಅವರ ಸಂಪರ್ಕಕ್ಕೆ ಬಂದ ಕಾರಣ ಶುಕ್ರವಾರದಿಂದಲೂ ಪ್ರಧಾನಿ ಐಸೋಲೇಶನ್‌ನಲ್ಲೇ ಇದ್ದರು. ಸೋಮವಾರ ಅವರಿಗೂ ಸೋಂಕು ದೃಢಪಟ್ಟಿದೆ. ‘ಕೋವಿಡ್ ಪಾಸಿಟಿವ್ ಬಂದರೂ ನಾನು ಚೆನ್ನಾಗಿದ್ದೇನೆ. ಐಸೋಲೇಶನ್‌ನಲ್ಲಿದ್ದೇ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಟ್ರುಡೋ ಟ್ವೀಟ್ ಮಾಡಿದ್ದಾರೆ. ಜೊತೆಗೆ ನಾಗರಿಕರಿಗೆ ಲಸಿಕೆ ಹಾಗೂ ಬೂಸ್ಟರ್ ಡೋಸು ಪಡೆದುಕೊಳ್ಳಿ ಎಂದು ವಿನಂತಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿ, ಬ್ರಿಟನ್ ಪ್ರಧಾನಿ ಕ್ಷಮೆ: ಕೊರೋನಾ ನಿಯಂತ್ರಣಕ್ಕೆ ತಮ್ಮದೇ ಸರ್ಕಾರ ಹೇರಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ತಮ್ಮ ಅಧಿಕೃತ ನಿವಾಸದಲ್ಲಿ ಪಾರ್ಟಿ ಏರ್ಪಡಿಸಿದ್ದಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕ್ಷಮೆ ಕೋರಿದ್ದಾರೆ. ತಮ್ಮ ವಿರುದ್ಧ ಈ ಬಗ್ಗೆ ವಿರುದ್ಧ ವರದಿ ಸಲ್ಲಿಕೆ ಆಗುತ್ತಿದ್ದಂತೆಯೇ ಅವರು ಕ್ಷಮೆ ಕೋರಿದ್ದಾರೆ ಹಾಗೂ ತಮ್ಮನ್ನು ಮತ್ತು ತಮ್ಮ ಸರ್ಕಾರದ ಮೇಲೆ ಭರವಸೆಯಿಡಬೇಕು ಎಂದು ಸಂಸದರಲ್ಲಿ ಕೇಳಿಕೊಂಡರು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಪಾರ್ಟಿ ಏರ್ಪಡಿಸಿದ ಹಗರಣ ಸಂಬಂಧ ಸೋಮವಾರ ಸಂಸದರನ್ನುದ್ದೇಶಿಸಿ ಅವರು ಮಾತನಾಡಿದರು. ಪಾರ್ಟಿಗೇಟ್ ಹಗರಣದ ಬಳಿಕ ಎಚ್ಚೆತ್ತುಕೊಂಡಿದ್ದು, ತಮ್ಮ ಸರ್ಕಾರದ ಕಾರ್ಯವೈಖರಿಯನ್ನು ತಿದ್ದಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ಪ್ರಕರಣ ಸಂಬಂಧ ಜಾನ್ಸನ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ವಿಪಕ್ಷ ಹಾಗೂ ಆಡಳಿತಾರೂಢದ ಕನ್ಸರ್ವೇಟಿವ್ ಸಂಸದರು ಒತ್ತಾಯಿಸಿದ್ದರು.
ಕರ್ನಾಟಕದ ಕೊರೋನಾ ಲೆಕ್ಕ.. ಇಳಿಕೆಯ ಹಾದಿ
3ನೇ ಅಲೆ ಗರಿಷ್ಠದ ಅರ್ಧಕ್ಕಿಳಿದ ಸೋಂಕು! : ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, 24 ಸಾವಿರ ಆಸುಪಾಸಿಗೆ ತಲುಪಿವೆ. ಈ ಮೂಲಕ ಮೂರನೇ ಅಲೆಯಲ್ಲಿ ಜ.23ರಂದು ದಾಖಲಾದ ಗರಿಷ್ಠ (50210)ಪ್ರಕರಣಗಳ ಅರ್ಧಕ್ಕಿಂತ ಕಡಿಮೆ ಪ್ರಕರಣಗಳು ಸದ್ಯ ವರದಿಯಾಗಿವೆ. ಸೋಮವಾರ 24,172 ಮಂದಿ ಸೋಂಕಿತರಾಗಿದ್ದು, 56 ಸೋಂಕಿತರು ಸಾವಿಗೀಡಾಗಿದ್ದಾರೆ. 30,869 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2.4 ಲಕ್ಷ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 1.4 ಲಕ್ಷ ನಡೆದಿದ್ದು, ಪಾಸಿಟಿವಿಟಿ ದರ ಶೇ.17 ರಷ್ಟುದಾಖಲಾಗಿದೆ.
ಇಬ್ಬರು ಮಕ್ಕಳು ಸಾವು: ಸೋಂಕಿತರ ಸಾವು ಸತತ ಮೂರನೇ ದಿನ ಇಳಿಕೆಯಾಗುತ್ತಿದೆ. ಭಾನುವಾರ 68 ಇದ್ದ ಸಾವು ಒಂದೇ ದಿನಕ್ಕೆ 12 ಕಡಿಮೆಯಾಗಿದೆ. ಸೋಮವಾರ ಸಾವಿಗೀಡಾದವರ ಪೈಕಿ ಚಿಕ್ಕ ಬಳ್ಳಾಪುರದ 15 ವರ್ಷದ ಬಾಲಕಿ, ಕಲಬುರಗಿಯಲ್ಲಿ ಎರಡು ವರ್ಷದ ಹೆಣ್ಣು ಮಗು ಇದೆ. ಅತಿ ಹೆಚ್ಚು ಸಾವು ಬೆಂಗಳೂರಿನಲ್ಲಿ 12, ದಕ್ಷಿಣ ಕನ್ನಡ 6, ಬಳ್ಳಾರಿ 5, ಹಾಸನ 4 ವರದಿಯಾಗಿವೆ.
ಸೋಂಕು ಹೊಸ ಪ್ರಕರಣಗಳು ಕಳೆದ ಒಂದು ವಾರದಿಂದ ನಿರಂತರವಾಗಿ ಇಳಿಕೆಯಾಗುತ್ತಿವೆ. ಮೂರನೇ ಅಲೆಯಲ್ಲಿ ಜ.23ರಂದು ಗರಿಷ್ಠ 50210 ಕೇಸ್ ದಾಖಲಾಗಿತ್ತು. ಇದಾಗ 9 ದಿನಕ್ಕೆ ಇದರ ಅರ್ಧದಷ್ಟುಕೇಸ್ ಇಳಿಕೆಯಾಗಿದೆ. ಈ ಮೂಲಕ ಸೋಂಕಿನ ಇಳಿಕೆ ಹಾದಿಯಲ್ಲಿ ಅರ್ಧಕ್ಕೆ ಬಂದು ತಲುಪಿದಂತಾಗಿದೆ. ಇನ್ನು ಬೆಂಗಳೂರಿನಲ್ಲಿ 30 ಸಾವಿರಕ್ಕೆ ಹೆಚ್ಚಳವಾಗಿದ್ದ ಹೊಸ ಪ್ರಕರಣಗಳು ಇಳಿಕೆಯಾಗುತ್ತಾ ಸಾಗಿ 10 ಸಾವಿರ ಆಸುಪಾಸಿನಲ್ಲಿ ವರದಿಯಾಗುತ್ತಿವೆ. ಆದರೆ, ಸೋಂಕಿನ ಪಾಸಿಟಿವಿಟಿ ದರ ಮಾತ್ರ ಶೇ.17 ಆಸುಪಾಸಿನಲ್ಲಿಯೇ ಮುಂದುವರೆದಿದೆ.
ಹೆಚ್ಚು ಸೋಂಕು ಎಲ್ಲಿ?: ಬೆಂಗಳೂರು ಹೊರತು ಪಡಿಸಿದರೆ ಧಾರವಾಡ, ಮೈಸೂರು ಹಾಗೂ ತುಮಕೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ ಹಾಗೂ ಉತ್ತರ ಕನ್ನಡ 500ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಬೀದರ್ ಮತ್ತು ರಾಮನಗರದಲ್ಲಿ 100ಕ್ಕಿಂತ ಕಡಿಮೆ ಇವೆ. ಮೂರು ಅಲೆಗಳನ್ನು ಸೇರಿ ಈವರೆಗಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 38.09 ಲಕ್ಷಕ್ಕೆ, ಗುಣಮುಖರ ಸಂಖ್ಯೆ 35.26 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 38,998ಕ್ಕೆ ಏರಿಕೆಯಾಗಿದೆ.