ವಿಧಾನಸೌಧ ನೌಕರರು ಕೆಲಸಕ್ಕೆ ಚಕ್ಕರ್‌ ಹೊಡೆಯೋದು ಇನ್ನು ಅಸಾಧ್ಯ!

Published : Feb 09, 2020, 08:40 AM IST
ವಿಧಾನಸೌಧ ನೌಕರರು ಕೆಲಸಕ್ಕೆ ಚಕ್ಕರ್‌ ಹೊಡೆಯೋದು ಇನ್ನು ಅಸಾಧ್ಯ!

ಸಾರಾಂಶ

ವಿಧಾನಸೌಧ ನೌಕರರು ಕೆಲಸಕ್ಕೆ ಚಕ್ಕರ್‌ ಹೊಡೆಯದಂತೆ ಸರ್ಕಾರ ನಿರ್ಬಂಧ| ಚಲನವಲನದ ಮೇಲೆ ನಿಗಾ ಇಡುವಂತೆ ಸರ್ಕಾರದಿಂದ ಆದೇಶ| ಸಚಿವಾಲಯ ಸಿಬ್ಬಂದಿ ಕಚೇರಿ ವೇಳೆ ಕಾಲಹರಣ ಮಾಡುವಂತಿಲ್ಲ

ಬೆಂಗಳೂರು[ಫೆ.09]: ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಚಿವಾಲಯದ ಅಧಿಕಾರಿಗಳು ಹಾಗೂ ನೌಕರರು ಕಚೇರಿ ವೇಳೆಯಲ್ಲಿ ಅನಗತ್ಯವಾಗಿ ಹೊರಗಡೆ ಕಾಲಹರಣ ಮಾಡುವುದು, ವೈಯಕ್ತಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಚಿವಾಲಯದ ಸಿಬ್ಬಂದಿ ಕಚೇರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ. ಕಚೇರಿ ಸಮಯದಲ್ಲಿ ತಮ್ಮ ಸ್ಥಾನದಲ್ಲೇ ಕುಳಿತು ಕಾರ್ಯನಿರ್ವಹಿಸಬೇಕು. ಸಿಬ್ಬಂದಿಯಲ್ಲಿ ಶಿಸ್ತು ಹಾಗೂ ಸಮಯ ಪ್ರಜ್ಞೆ ಮೂಡಿಸಲು ಸಿಬ್ಬಂದಿಯ ಚಲನವಲನಗಳ ಬಗ್ಗೆ ನಿಗಾ ವಹಿಸಲು ಚಲನವಲನ ವಹಿ ನಿರ್ವಹಣೆ ಮಾಡಬೇಕು. ಒಂದು ವೇಳೆ ಹೊರಗಡೆ ಹೋಗಬೇಕಾದರೆ ಹಿರಿಯ ಅಧಿಕಾರಿಯ ಅನುಮತಿ ಪಡೆದು, ಹೊರಗೆ ಹೋಗುತ್ತಿರುವ ಕಾರಣ ಮತ್ತು ವಾಪಸು ಬಂದ ಸಮಯವನ್ನು ಸಹಿಯ ಸಮೇತ ಬರೆಯಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಮತ್ತು ನೌಕರರು ವೈಯಕ್ತಿಕ ಕೆಲಸ, ಅನ್ಯ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಇದಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಕಚೇರಿ ವೇಳೆಯಲ್ಲಿ ವೈಯಕ್ತಿಕ ಕೆಲಸ, ಕ್ಯಾಂಟೀನ್‌ ಇತ್ಯಾದಿ ಕಾರಣಗಳನ್ನು ನೀಡಿ ಹೊರಗೆ ಹೋಗುವಂತಿಲ್ಲ.

ಈ ಬಗ್ಗೆ ನಿಗಾ ವಹಿಸಲು ಪ್ರತಿಯೊಂದು ಶಾಖೆಯಲ್ಲಿಯೂ ಒಂದು ಚಲನವಲನ ವಹಿ ನಿರ್ವಹಿಸಬೇಕು. ಹೊರಗೆ ಹೋಗುವವರು ಅನುಮತಿ ಪಡೆಯದೆ, ಕಾರಣ ನಮೂದಿಸದೆ ಹೋಗಿದ್ದರೆ ಅನಧಿಕೃತ ಗೈರು ಎಂದು ಪರಿಗಣಿಸಿ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಆಗಾಗ್ಗೆ ಹಿರಿಯ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು ಪರಿವೀಕ್ಷಣೆ ನಡೆಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!