Bitcoin Scam| ಕಳವಾಗಿದ್ದರೆ ಕ್ರಿಪ್ಟೋ ಕಂಪನಿ ಕೇಳ್ತಿರಲಿಲ್ಲವೆ?: ಕೈ ಪ್ರಶ್ನೆಗೆ ಸುಧಾಕರ್ ಕೌಂಟರ್!

By Kannadaprabha News  |  First Published Nov 14, 2021, 6:50 AM IST

* ದಂಧೆಕೋರರನ್ನು ಹಿಡಿದ ಬೊಮ್ಮಾಯಿ ತಪ್ಪಿತಸ್ಥರಾ?

* ಕಳವಾಗಿದ್ದರೆ ಕ್ರಿಪ್ಟೋ ಕಂಪನಿ ಕೇಳ್ತಿರಲಿಲ್ಲವೆ?

* ಬಿಟ್‌ಕಾಯಿನ್‌ ಕಳವಾಗಿದ್ದರೆ ಏಜೆನ್ಸಿ ಸುಮ್ಮನಿರುತ್ತಿತ್ತಾ?


ಬೆಂಗಳೂರು(ನ.14): ‘ಬಿಟ್‌ ಕಾಯಿನ್‌ ಪ್ರಕರಣದ (Bitcoin Scam)ಬಗ್ಗೆ ತನಿಖೆ ನಡೆಯುತ್ತಿದೆ. ದೇಶದಲ್ಲಿ ಕರ್ನಾಟಕ ಪೊಲೀಸರ ಬಗ್ಗೆ ದೊಡ್ಡ ಗೌರವ ಇದೆ. ರಾಜಕಾರಣಿಗಳು ಅದಕ್ಕೆ ಅಪಮಾನ ಮಾಡಬಾರದು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ತೀಕ್ಷವಾಗಿ ಹೇಳಿದ್ದಾರೆ.

"

Tap to resize

Latest Videos

ಶನಿವಾರ ರಾತ್ರಿ ಸರ್ಕಾರದ ಪರವಾಗಿ ಪ್ರತಿಪಕ್ಷ ಕಾಂಗ್ರೆಸ್‌ನ (Congress) ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep Singh Surjewala) ಅವರ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ಸುಧಾಕರ್‌, ದೊಡ್ಡ ಸುಳ್ಳಿನ ಕಂತೆಗಳನ್ನು ಹೇಗಾದರೂ ಮಾಡಿ ನಿಜವಾಗುವಂತೆ ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರವು ಪ್ರಕರಣದಲ್ಲಿ ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಯಾವುದೇ ಬಿಟ್‌ ಕಾಯಿನ್‌ (Bitcoin) ವರ್ಗಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯವನ್ನು ರಾಜಕೀಯ ನೆಲೆಗಟ್ಟಿನ ಮೇಲೆ ಹೋರಾಟ ನಡೆಸಬೇಕು. ಯಾವುದೇ ಕಾರಣಕ್ಕೂ ಯಾರ ಚಾರಿತ್ರ್ಯವನ್ನೂ ವಧೆ ಮಾಡಬಾರದು. ಅದು ಅಪರಾಧ. ಪಾರದರ್ಶಕವಾಗಿ ತನಿಖೆ ನಡೆಸಿ ಗುಣಮಟ್ಟದ ಸರ್ಕಾರ ನಿಭಾಯಿಸಲಾಗುತ್ತಿದೆ. ಜನಸಾಮಾನ್ಯರು ಮುಖ್ಯಮಂತ್ರಿಯಾಗಿದ್ದಕ್ಕೆ ಕಾಂಗ್ರೆಸ್‌ಗೆ ಹೊಟ್ಟೆಕಿಚ್ಚು. ಬಿಳಿ ಶರ್ಟ್‌ ಮೇಲೆ ಇಂಕ್‌ ಹಾಕಬೇಕಾ? ಇಂತಹ ವ್ಯರ್ಥ ಪ್ರಯತ್ನ ನಡೆಯುವುದಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎನ್ನುತ್ತೇವೆ. ಅದನ್ನು ನೋಡಿಕೊಳ್ಳದಿದ್ದರೆ ಏನು ಮಾಡಲಾಗುತ್ತದೆ. ಇಲಿಯನ್ನು ಹೆಗ್ಗಣ ಮಾಡುತ್ತಿದ್ದಾರೆ. ಏನು ಇಲ್ಲದಿದ್ದರೂ ಎಲ್ಲವೂ ಇದೆ ಎಂದು ಮಾಡಲು ಹೊರಟಿದ್ದಾರೆ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಎಸೆದಿದ್ದ ಆರು ಪ್ರಶ್ನೆಗಳಿಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕೌಂಟರ್ ನೀಡಿದ್ದಾರೆ.

1. ಸಿಎಂ ಬೊಮ್ಮಾಯಿ ಗೃಹ ಸಚಿವರಾಗಿದ್ದ ಹಿಂದಿನ ಸರ್ಕಾರದಲ್ಲೇ ತನಿಖೆಗೆ ಆದೇಶ ಮಾಡಲಾಗಿತ್ತು. ಹಾಗಿರುವಾಗ ಅವರು ಇದಕ್ಕೆ ಸೂತ್ರಧಾರರಾ? ಹ್ಯಾಕರ್‌ಗಳನ್ನು ಪತ್ತೆ ಮಾಡಿದ ಇತಿಹಾಸ ಇಲ್ಲ. ಬೊಮ್ಮಾಯಿ ಅಂತಹ ಕೆಲಸ ಮಾಡಿದ್ದಾರೆ.

2. ಯಾರೂ ಸಹ ಸರಳವಾಗಿ ಕ್ರಿಪ್ಟೋಕರೆನ್ಸಿ ಖಾತೆ ನೋಡಲು ಸಾಧ್ಯವಿಲ್ಲ. 31.8 ಬಿಟ್‌ಕಾಯಿನ್‌ ಇದೆ ಎಂದು ಶ್ರೀಕಿ ಹೇಳಿದ್ದ. ಅದನ್ನು ಕೋರ್ಟ್‌ಗೆ ತಿಳಿಸಿದ್ದೇವೆ. ನಂತರ ವ್ಯಾಲೆಟ್‌ನಲ್ಲಿ 186.1 ಬಿಟ್‌ಕಾಯಿನ್‌ ಇದೆ ಎಂದಿದ್ದ. ಈ ಬಗ್ಗೆ ಪೊಲೀಸರು ಸೈಬರ್‌ ತಜ್ಞರು, ಐಐಎಸ್‌ಸಿ ತಜ್ಞರ ನೆರವಿನಿಂದ ಪರಿಶೀಲನೆ ನಡೆಸಿದಾಗ ಆತನ ಹೇಳಿಕೆ ಸುಳ್ಳೆಂದು ತಿಳಿದಿದೆ.

3. 14,682 ಬಿಟ್‌ ಕಾಯಿನ್‌ ಕಳ್ಳತನ ಆಗಿದೆ ಎಂಬ ಮಾತು ಕೇಳಿಬಂದಾಗ ಆರೋಪಿ ಶ್ರೀಕಿ ಪೊಲೀಸ್‌ ವಶದಲ್ಲಿದ್ದ. 14,682 ಬಿಟಿಸಿ ನಿಜವಾಗಲೂ ಕಳ್ಳತನವಾಗಿದ್ದರೆ ಬಿಟ್‌ಕಾಯಿನ್‌ ಕಂಪನಿ, ಎಕ್ಸ್‌ಚೇಂಜ್‌ ಅಥವಾ ವಿವಿಧ ದೇಶಗಳ ವಿದೇಶಾಂಗ ಏಜೆನ್ಸಿಗಳು ಭಾರತವನ್ನು ಕೇಳುತ್ತಿರಲಿಲ್ಲವೇ? ಈವರೆಗೆ ಯಾವುದೇ ಕಂಪನಿ ಭಾರತ ಸರ್ಕಾರವನ್ನಾಗಲೀ, ಕರ್ನಾಟಕ ಸರ್ಕಾರವನ್ನಾಗಲೀ ಕೇಳಿಲ್ಲ. ಬಿಟ್‌ಫೀನಿಕ್ಸ್‌ ಕಂಪನಿ ತನ್ನ ಬಿಟ್‌ಕಾಯಿನ್‌ ಕಳವಾಗಿದೆ ಎಂದು ಹೇಳಿಲ್ಲ.

4. ಬೊಮ್ಮಾಯಿ ಅವರು ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಕೇವಲ ತನಿಖೆಗೆ ಆದೇಶ ನೀಡಿ ಜವಾಬ್ದಾರಿ ನಿಭಾಯಿಸಿಲ್ಲ. ಡಿಐಜಿ ಮಟ್ಟದಲ್ಲಿ ತಂಡ ರಚನೆ ಮಾಡಿದ್ದಾರೆ. ಐಐಎಸ್‌ಸಿ, ಇ-ಆಡಳಿತ, ಸೈಬರ್‌ ತಜ್ಞರನ್ನು ತನಿಖಾಧಿಕಾರಿಗಳ ಜತೆಗೆ ಜೋಡಿಸಿದ್ದಾರೆ.

5. ಪ್ರಕರಣದ ಆರೋಪಿ ಶ್ರೀಕಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಪ್ರಭಾವಿ ವ್ಯಕ್ತಿಗಳ ವ್ಯವಹಾರ ಹ್ಯಾಕ್‌ ಮಾಡಿದ್ದಾನೆ. ಅದರ ತನಿಖೆ ಮಾಡಬೇಕೋ ಬೇಡವೋ?

6. ಯಾವುದೇ ಪ್ರಕರಣಗಳಲ್ಲಿ ಅಕ್ರಮ ನಡೆದಿರುವುದು ಸತ್ಯ ಎಂದು ಮೇಲ್ನೋಟಕ್ಕೆ ಕಂಡುಬಂದರೆ ತನಿಖಾ ಸಂಸ್ಥೆಗಳೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಕೇಳುತ್ತವೆ. ಈ ವಿಚಾರದಲ್ಲಿ ನಮ್ಮ ಸರ್ಕಾರವೇ ಇ.ಡಿ., ಇಂಟರ್‌ಪೋಲ್‌ಗೆ ಮಾಹಿತಿ ನೀಡಿದೆ.

click me!