ಮಾಂಸಕ್ಕಾಗಿ ಜಾನುವಾರು ಆಮದಿಗೆ ಗೋವಾ ಬಿಜೆಪಿ ಸರ್ಕಾರ ಅನುಮತಿ!

By Suvarna NewsFirst Published Dec 24, 2020, 1:24 PM IST
Highlights

ಮಾಂಸಕ್ಕಾಗಿ ಜಾನುವಾರು ಆಮದಿಗೆ ಗೋವಾ ಬಿಜೆಪಿ ಸರ್ಕಾರ ಅನುಮತಿ| ಗೋಮಾಂಸ ಕೊರತೆ ಆಗದಂತೆ ನೋಡಿಕೊಳ್ಳಲು ಸಿಎಂ ಸೂಚನೆ

ಪಣಜಿ(ಡಿ.24): ಕರ್ನಾಟಕದಿಂದ ಪೂರೈಕೆ ಆಗುತ್ತಿದ್ದ ಗೋಮಾಂಸ ಕಳೆದ ಎಂಟು ದಿನಗಳಿಂದ ಸ್ಥಗಿತಗೊಂಡಿದ್ದರ ಪರಿಣಾಮವಾಗಿ ಗೋವಾದಲ್ಲಿ ಗೋಮಾಂಸದ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೋಮಾಂಸದ ಕೊರತೆ ಆಗದಂತೆ ನೋಡಿಕೊಳ್ಳಲು ದಲ್ಲಾಳಿಗಳು ಬೇರೆ ರಾಜ್ಯಗಳಿಂದ ಜಾನುವಾರುಗಳನ್ನು ತರಿಸಿಕೊಳ್ಳುವುದಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅನುಮತಿ ನೀಡಿದ್ದಾರೆ.

ಗೋವಾದಲ್ಲಿನ ಅಲ್ಪಸಂಖ್ಯಾತರ ಪೈಕಿ ಶೇ.30ರಷ್ಟುಮಂದಿ ಗೋಮಾಂಸ ಸೇವನೆ ಮಾಡುತ್ತಿದ್ದಾರೆ. ಗೋಮಾಂಸಕ್ಕಾಗಿ ಗೋವಾ ರಾಜ್ಯ ಕರ್ನಾಟಕದ ಬೆಳಗಾವಿಯ ಮೇಲೆ ಹೆಚ್ಚು ಅವಲಂಬಿಸಿದೆ. ಆದರೆ, ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡ ಬಳಿಕ ಪಶುವೈದ್ಯರು ಗೋಮಾಂಸ ಮತ್ತು ಜಾನುವಾರುಗಳ ಮಾರಾಟಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಗೋಮಾಂಸ ಹಾಗೂ ಜಾನುವಾರುಗಳು ಗೋವಾಕ್ಕೆ ಪೂರೈಕೆ ಸ್ಥಗಿತಗೊಂಡಿತ್ತು. ಈ ಮಧ್ಯೆ ಭಾನುವಾರದಿಂದ ಗೋವಾಕ್ಕೆ ಗೋಮಾಂಸ ಪೂರೈಕೆ ಆರಂಭವಾಗಿದ್ದರೂ, ಬೆಳಗಾವಿಯಿಂದ ಪೂರೈಕೆ ಆಗುತ್ತಿದ್ದ ಗೋಮಾಂಸದಲ್ಲಿ ಶೇ.75ರಷ್ಟುಇಳಿಕೆ ಆಗಿದೆ. ಹೀಗಾಗಿ ಮಾಂಸ ವ್ಯಾಪಾರಿಗಳು ದೆಹಲಿ ಹಾಗೂ ಕೇರಳದಿಂದ ರೈಲಿನಲ್ಲಿ ಮಾಂಸ ಆಮದು ಮಾಡಿಕೊಳ್ಳುವ ಬಗ್ಗೆಯೂ ಯತ್ನ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೋಮಾಂಸದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಅನ್ಯ ರಾಜ್ಯಗಳಿಂದ ಜೀವಂತ ಜಾನುವಾರುಗಳನ್ನು ತರಿಸಿಕೊಳ್ಳಲು ದಲ್ಲಾಳಿಗಳಿಗೆ ಅನುಮತಿ ನೀಡುವಂತೆ ಪಶುಸಂಗೋಪನಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

click me!