
ಪಾಲಕ್ಕಾಡ್: ಸ್ಥಳೀಯ ರೈಲ್ವೆ ವಲಯವನ್ನು ವಿಭಜಿಸಿ ಮಂಗಳೂರು ಮತ್ತು ಅದರ ಸುತ್ತಮುತ್ತಲ ರೈಲ್ವೆ ನಿಲ್ದಾಣಗಳನ್ನು ಮೈಸೂರು ವ್ಯಾಪ್ತಿಗೆ (Mysore Division) ಸೇರಿಸುವ ನಿರ್ಧಾರದ ಹಿಂದೆ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ರಣತಂತ್ರ ಅಡಗಿದೆ ಎಂದು ಕೇರಳದ ಆಡಳಿತಾರೂಢ ಯುಡಿಎಫ್ ಮೈತ್ರಿಕೂಟ ಆರೋಪಿಸಿದೆ.
ಪಾಲಕ್ಕಾಡ್ ರೈಲ್ವೆ ವಲಯ ವಿಭಜಿಸುವ ಕೇಂದ್ರ ರೈಲ್ವೆ ಮಂಡಳಿ ನಿರ್ಧಾರ ಖಂಡಿಸಿ ಬುಧವಾರ ಇಲ್ಲಿನ ವಲಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಮುಂದೆ ಪ್ರತಿಭಟನೆ ಮತ್ತು ಸತ್ಯಾಗ್ರಹ ನಡೆಸಿದ ಯುಡಿಎಫ್ ನಾಯಕರು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ರೈಲ್ವೆ ವಲಯ ವಿಭಜನೆಯ ತಂತ್ರ ರೂಪಿಸಿದೆ ಎಂಬ ಗಂಭೀರ ಆರೋಪ ಮಾಡಿದರು.
ಮಂಗಳೂರು ಮತ್ತು ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳು ಕೈತಪ್ಪಿದರೆ ಪಾಲಕ್ಕಾಡ್ ರೈಲ್ವೆ ವಲಯಕ್ಕೆ ವಾರ್ಷಿಕ 1000 ಕೋಟಿ ರು.ಗೂ ಹೆಚ್ಚಿನ ನಷ್ಟವಾಗಲಿದೆ. ವಲಯದ ಒಟ್ಟು ಸರಕು ಸಾಗಣೆ ಆದಾಯದಲ್ಲಿ 650 ಕೋಟಿ ರು.ಗಳಷ್ಟು ಕೇವಲ ಮಂಗಳೂರು ವಲಯವೊಂದರಿಂದಲೇ ಬರುತ್ತದೆ. ಜೊತೆಗೆ ವಲಯದ ಒಟ್ಟಾರೆ 1650 ಕೋಟಿ ರು. ಆದಾಯದಲ್ಲಿ ಶೇ.50ಕ್ಕಿಂತ ಹೆಚ್ಚಿನ ಪಾಲು ಮಂಗಳೂರು ವಲಯದಿಂದಲೇ ಬರುತ್ತದೆ. ಹೀಗಿರುವಾಗ ಈ ಪ್ರದೇಶವನ್ನೇ ಹೊರಗೆ ಹಾಕಿದರೆ ನಾಳೆ ಪಾಲಕ್ಕಾಡ್ ವಲಯ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಘೋಷಿಸಿದರೆ ಆಗ ಮಂಗಳೂರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರು ಮತ್ತು ಕಿರಿಯ ಸಿಬ್ಬಂದಿ ವರ್ಗಾವಣೆ ಅನಿವಾರ್ಯತೆಗೆ ಸಿಕ್ಕಿಬೀಳುತ್ತದೆ. ಹೀಗಾಗಿ ಇದು ಅತ್ಯಂತ ಸ್ಪಷ್ಟವಾಗಿ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ರಾಜಕೀಯ ಅಜೆಂಡಾ ಎಂದು ಯುಡಿಎಫ್ ನಾಯಕರು ಕಿಡಿಕಾರಿದರು.
ಅಲ್ಲದೆ ವಿಭಜನೆ ಕೈಬಿಡದೇ ಹೋದರೆ ನಾವು ಹೋರಾಟ ತೀವ್ರಗೊಳಿಸಲಿದ್ದೇವೆ. ದೆಹಲಿಗೂ ತೆರಳಿ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ. ದೆಹಲಿಯಲ್ಲೂ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸದೇ ಕೈಗೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಸದ ವಿ.ಕೆ.ಶ್ರೀಕಂಠನ್, ಶಫಿ ಪರಾಂಬಿ, ಎಂ.ಕೆ.ರಾಘವನ್, ರಾಜಮೋಹನ್ ಉನ್ನ್ನಿಥನ್, ಆ್ಯಂಟೊ ಆ್ಯಂಟೋನಿ, ಇ.ಟಿ.ಮೊಹ್ಮಮದ್ ಬಶೀರ್, ಡೀನ್ ಕುರಿಯಾಕೋಸ್, ಕೇರಳದ ಸಚಿವರಾದ ಕೆ.ಎ.ತುಳಸಿ, ಶಾಸಕ ರಮೇಶ್ ಮೊದಲಾದವರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ