
ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಆಧ್ಯಾತ್ಮಿಕ ಗುರು ಸದ್ಗುರು ಅವರ ಇಶಾ ಫೌಂಡೇಶನ್‌ನ 77 ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ಈ ಭೀಕರ ನೈಸರ್ಗಿಕ ವಿಕೋಪದ ಬೆನ್ನಲ್ಲೇ ಸದ್ಗುರುಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕ ಹಂಚಿಕೊಂಡಿದ್ದು ಎಂತಹ ಅಪಾಯವಿದ್ದರೂ ತಾವೇ ಸ್ವತಃ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಇಶಾ ಫೌಂಡೇಶನ್‌ನ ತಂಡ ಟಿಬೆಟ್‌ನ ಗೈರಾಂಗ್ (Gyirong) ಪೋರ್ಟ್ ಬಳಿಯ ಇಮಿಗ್ರೇಷನ್ ಕಚೇರಿಯಲ್ಲಿದ್ದಾಗ ದುರಂತ ಸಂಭವಿಸಿದೆ. ಟಿಬೆಟ್ ಕಡೆಯಿಂದ ಹರಿದುಬಂದ ಸುನಾಮಿ ಮಾದರಿಯ ಬೃಹತ್ ಅಲೆಗಳು ಇಮಿಗ್ರೇಷನ್ ಕಚೇರಿಯ ಮೇಲೆ ಅಪ್ಪಳಿಸಿ ಇಡೀ ಕಟ್ಟಡವನ್ನೇ ಆವರಿಸಿಕೊಂಡಿವೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡಲು ಪ್ರಳಯದಂತೆ ಭಾಸವಾಗುತ್ತಿದೆ.
ದುರಂತದ ಬಗ್ಗೆ ಮಾಹಿತಿ ನೀಡಿರುವ ಸದ್ಗುರುಗಳು.. ಟಿಬೆಟ್-ಚೀನಾ ಗಡಿಯ ಗೈರಾಂಗ್‌ನಲ್ಲಿ ಭೀಕರ ಜಲಪ್ರಳಯ ಸಂಭವಿಸಿದೆ. ನಮ್ಮ ಇಶಾ ತಂಡದ ಒಂದು ಗುಂಪು ಈ ಪ್ರವಾಹಕ್ಕೆ ಸಿಲುಕಿದೆ. ಇಮಿಗ್ರೇಷನ್ ಕಚೇರಿಯಲ್ಲಿದ್ದ 77 ಮಂದಿಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಮ್ಮ ಸ್ವಯಂಸೇವಕರು ಮತ್ತು ಬೆಂಬಲ ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಸತತ ಪ್ರಯತ್ನ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯು ನಾಪತ್ತೆಯಾಗಿರುವ ಒಟ್ಟು 105 ಭಾರತೀಯ ಯಾತ್ರಾರ್ಥಿಗಳ ಪಟ್ಟಿಯನ್ನು ನೀಡಿದ್ದು, ಇದರಲ್ಲಿ ಇಶಾ ಫೌಂಡೇಶನ್‌ನ 77 ಮಂದಿ ಸೇರಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ 384 ಮಂದಿ (291 ವಿದೇಶಿಯರು ಮತ್ತು 93 ನೇಪಾಳಿಗಳು) ಸಂಪರ್ಕಕ್ಕೆ ಸಿಗುತ್ತಿಲ್ಲ. ಈವರೆಗೆ ನೇಪಾಳದಾದ್ಯಂತ ಪ್ರವಾಹಕ್ಕೆ 95 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಯಾತ್ರಾರ್ಥಿಗಳ ಕುಟುಂಬಸ್ಥರ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯಾವುದೇ ಅಪಾಯವಿದ್ದರೂ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ನಾವು ಸಿದ್ಧರಿದ್ದೇವೆ. ಸದ್ಯ ನಾನು ಇದೇ ಭಾಗದಲ್ಲಿದ್ದು, ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಸದ್ಗುರುಗಳು ಯಾತ್ರಾರ್ಥಿಗಳ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ. ಭೋಟೆಕೋಶಿ ನದಿಯ ಅಬ್ಬರಕ್ಕೆ ರಸುವಾ ಜಿಲ್ಲೆಯ ಸೇತುವೆಗಳು ಮತ್ತು ಮನೆಗಳು ಕೊಚ್ಚಿ ಹೋಗಿದ್ದು, ರಕ್ಷಣಾ ಕಾರ್ಯಕ್ಕೆ ಹವಾಮಾನ ವೈಪರೀತ್ಯ ಅಡ್ಡಿಯಾಗಿದೆ.
ಟಿಬೆಟ್ ಗಡಿಯ ಇಮಿಗ್ರೇಷನ್ ಕಚೇರಿಯ ಮೇಲೆ ಪ್ರವಾಹ ಅಪ್ಪಳಿಸಿದ ಪರಿಣಾಮ ಇಶಾ ಫೌಂಡೇಶನ್‌ನ 77 ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ಸದ್ಗುರುಗಳು ಸ್ವತಃ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದ್ದು, ನಾಪತ್ತೆಯಾದವರ ಪತ್ತೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
A terrible and tragic flash flood has taken place at Gyirong in Tibet - China, and one of our Kailash groups was caught in it. While on their way back, they were at the immigration office when the flood occurred and the building and much of the town seems to have been flooded.… pic.twitter.com/CqOBxsPlWo
— Sadhguru (@SadhguruJV) August 26, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ