ಸೋನಿಯಾ ಗಾಂಧಿಯ 'ಕರ್ನಾಟಕಕ್ಕೆ ಸಾರ್ವಭೌಮತ್ವ' ಹೇಳಿಕೆ, ಚುನಾವಣಾ ಆಯೋಗದಿಂದ ಖರ್ಗೆಗೆ ನೋಟಿಸ್‌!

By Santosh NaikFirst Published May 8, 2023, 10:35 PM IST
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಕರ್ನಾಟಕಕ್ಕೆ ಸಾರ್ವಭೌಮತ್ವದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದಲ್ಲದೆ, ಬಿಜೆಪಿ ಈ ಕುರಿತಾಗಿ ಚುನಾವಣಾ ಆಯೋಗಕ್ಕೆ ದೂರು ಕೂಡ ನೀಡಿತ್ತು.

ನವದೆಹಲಿ (ಮೇ.8): ಕೇಂದ್ರ ಚುನಾವಣಾ ಆಯೋಗ ಸೋಮವಾರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೋಟಿಸ್‌ ಜಾರಿ ಮಾಡಿದೆ. ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿಯವರ "ಸಾರ್ವಭೌಮತ್ವ" ಹೇಳಿಕೆಯ ಕುರಿತು ಹಾಗೂ ಪಕ್ಷದ ಸಾಮಾಜಿಕ ಮಾಧ್ಯಮ ಪೋಸ್ಟ್ ಕುರಿತಾಗಿ ಸ್ಪಷ್ಟನೆ ನೀಡುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಈ ಕುರಿತಾಗಿ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಿಜೆಪಿ ನೀಡಿದ ದೂರನ್ನು ಪರಿಶೀಲಿಸಿದ ಬಳಿಕ ಚುನಾವಣಾ ಆಯೋಗ ಸ್ಪಷ್ಟನೆ ಕೋರಿ ನೋಟಿಸ್‌ ಜಾರಿ ಮಾಡಿದೆ. ವಿರೋಧ ಪಕ್ಷದ ಸದಸ್ಯೆಯಾಗಿರುವ ಸೋನಿಯಾ ಗಾಂಧಿ ಅವರು ಹೇಳಿರುವ ಮಾತಿಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಹಾಗೂ ಪಕ್ಷದ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಅದಲ್ಲದೆ, ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆಯೂ ಬಿಜೆಪಿ ಒತ್ತಾಯ ಮಾಡಿತ್ತು. ಕೇಂದ್ರ ಸಚಿವ ಭೂಪೇಂದರ್ ಯಾದವ್ ನೇತೃತ್ವದ ಬಿಜೆಪಿ ನಿಯೋಗವು ದೆಹಲಿಯ ಚುನಾವಣಾ ಸಮಿತಿಗೆ ಈ ವಿಷಯದ ಕುರಿತು ಮನವಿ ಪತ್ರವನ್ನು ಸಲ್ಲಿಸಿದೆ.

"ಭಾರತೀಯ ಚುನಾವಣಾ ಆಯೋಗವು ಇಂದು ಅಧಿಕೃತ ಐಎನ್‌ಸಿ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಾಕಲಾದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡಲು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಐಎನ್‌ಸಿ ಅಧ್ಯಕ್ಷರಿಗೆ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ' ಎಂದು ಇಸಿಐ ( ECI )ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!