ಕನ್ನಡಿಗರ ನೆರವಿಗೆ 24*7 ಹೆಲ್ಪ್‌ಲೈನ್, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತನ್ನಿ: ಕೇಂದ್ರಕ್ಕೆ ರಾಜ್ಯ ಪತ್ರ

Kannadaprabha News   | Kannada Prabha
Published : Mar 02, 2026, 08:53 AM IST
khamenei death

ಸಾರಾಂಶ

ಇರಾನ್‌-ಇಸ್ರೇಲ್‌ ಯುದ್ಧದ ಕಾರಣ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ 24/7 ತುರ್ತು ಕಾರ್ಯಾಚರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ.

ಬೆಂಗಳೂರು: ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಸರ್ಕಾರದ ಸೂಚನೆಯಂತೆ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರ(ಎಸ್‌ಇಒಸಿ) ಮತ್ತು ಎಲ್ಲಾ ಜಿಲ್ಲೆಗಳ ತುರ್ತು ಕಾರ್ಯಾಚರಣಾ ಕೇಂದ್ರಗಳು (ಡಿಇಒಸಿ) ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಆರಂಭಿಸಲಾಗಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಬಂದ್‌ ಮಾಡಿವೆ. ಪರಿಣಾಮ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ. ಇದರಿಂದ ಕರ್ನಾಟಕ ಸೇರಿ ನಮ್ಮ ದೇಶದ ವಿವಿಧ ರಾಜ್ಯಗಳ ಸಾಕಷ್ಟು ಸಂಖ್ಯೆ ಪ್ರಯಾಣಿಕರು ಮಧ್ಯಪ್ರಾಚ್ಯ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಯುಎಇ (ದುಬೈ) ನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ನೆರವಿಗಾಗಿ ಈ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯಾರಂಭಿಸಿವೆ ಎಂದು ತಿಳಿಸಿದ್ದಾರೆ.

ಅಗತ್ಯ ನೆರವಿಗೆ ಕ್ರಮ:

ಸಾರ್ವಜನಿಕರಿಂದ ಬರುವ ಕರೆ, ಮಾಹಿತಿ ಆಧರಿಸಿ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿಯನ್ನು ವಿದೇಶಾಂಗ ಸಚಿವಾಲಯ ಮತ್ತು ದೆಹಲಿ ಕರ್ನಾಟಕ ಭವನದ ಆಯುಕ್ತರ ನೇತೃತ್ವದ ತಂಡಕ್ಕೆ ರವಾನಿಸಿ ಅವರ ರಕ್ಷಣೆ ಹಾಗೂ ವಾಪಸ್‌ ಕರೆತರಲು ಅಗತ್ಯ ನೆರವಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ನಿರ್ದೇಶನದಂತೆ, ದುಬೈ ಸೇರಿ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ನಮ್ಮ ರಾಜ್ಯದ ನಾಗರಿಕರಿಗೆ ನೆರವಾಗಲು ರಾಜ್ಯ ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣಾ ಕೇಂದ್ರಗಳನ್ನು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಸೂಚಿಸಿದ್ದು ಅದರಂತೆ ಅವು ಕಾರ್ಯಾರಂಭಿಸಿವೆ. ಈ ಕೇಂದ್ರಗಳಲ್ಲಿ ರಾಯಭಾರ ಕಚೇರಿಗಳ ಸಹಾಯವಾಣಿ ಸಂಖ್ಯೆಗಳು ಮತ್ತು ಸಲಹೆಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಜೊತೆಗೆ ಎಕ್ಸ್‌, ವಾಟ್ಸ್‌ಅಪ್‌ ಸೇರಿ ಇತರೆ ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಲಾಗಿದೆ.

ರಾಯಭಾರ ಕಚೇರಿ ಜತೆ ಸಂಪರ್ಕ:

ಪರಿಸ್ಥಿತಿ ಮೇಲ್ವಿಚಾರಣೆ ಮೂಲಕ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಅವರಿಂದ ಬರುವ ನಿರ್ದೇಶನ, ಸೂಚನೆಗಳ ಅನುಸಾರ ಸಂಕಷ್ಟದಲ್ಲಿರುವವರ ನೆರವಿಗೆ ಈ ಕೇಂದ್ರಗಳ ಸಿಬ್ಬಂದಿ ಕ್ರಮ ವಹಿಸಲಿದ್ದಾರೆ. ಜೊತೆಗೆ ದೆಹಲಿಯ ಕರ್ನಾಟಕ ಭವನದ ಆಯುಕ್ತರು ನೇತೃತ್ವದ ತಂಡವನ್ನು ಕೂಡ ಸಮನ್ವಯಕ್ಕಾಗಿ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ಮಧ್ಯಪ್ರಾಚ್ಯ ದೇಶಗಳಲ್ಲಿ ವಾಸಿಸುವ ಕರ್ನಾಟಕದ ಜನರು ಸ್ಥಳೀಯ ಸರ್ಕಾರಗಳು ನೀಡುವ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವರ ಸಹಾಯವಾಣಿ ಸಂಖ್ಯೆಗಳ ಮೂಲಕ ಆಯಾ ಭಾರತೀಯ ರಾಯಭಾರ ಕಚೇರಿಗಳನ್ನು ಸಂಪರ್ಕಿಸಲು ಮತ್ತು ಸಾರಥಿ ಸಹಾಯ ಪೋರ್ಟಲ್ ಮತ್ತು ಸಂಬಂಧಪಟ್ಟ ದೂತಾವಾಸಗಳ ಇತರ ಅಧಿಕೃತ ಪೋರ್ಟಲ್‌ಗಳಲ್ಲಿ ತಮ್ಮ ಮಾಹಿತಿ ನೋಂದಾಯಿಸುವಂತೆ ಸೂಚಿಸಲಾಗಿದೆ.

ಸಹಾಯವಾಣಿ ಸಂಖ್ಯೆ

ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದ ಸಹಾಯವಾಣಿ- 080-22340676, 080-22253707 (ಶಾರ್ಟ್‌ ಕೋಡ್‌ 1070).

ಕನ್ನಡಿಗರ ರಕ್ಷಣೆ, ಸುರಕ್ಷಿತವಾಗಿ ಕರೆತರಲು ಕೇಂದ್ರಕ್ಕೆ ರಾಜ್ಯ ಪತ್ರ

ಬೆಂಗಳೂರು: ಪಶ್ಚಿಮ ಏಷ್ಯಾ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಹಾಗೂ ಇದಕ್ಕಾಗಿ ಅಗತ್ಯ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರಿಗೆ ಪತ್ರ ಬರೆದಿರುವ ಅವರು, ಮಧ್ಯಪ್ರಾಚ್ಯ ದೇಶಗಳಲ್ಲಿ ಸೃಷ್ಟಿಯಾಗಿರುವ ಭೌಗೋಳಿಕ ರಾಜಕೀಯ ಬೆಳವಣಿಗೆ ಹಾಗೂ ಸೇನಾ ಚಟುವಟಿಕೆಗಳಿಂದ ಕನ್ನಡಿಗರು ಸೇರಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಗರಿಕರ ಸಂಚಾರ ಮೊಟಕು, ವಾಯುಗಡಿ ನಿರ್ಬಂಧದಿಂದ ಅಲ್ಲಿನ ಭಾರತೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಯುದ್ಧ ಪರಿಸ್ಥಿತಿ ಪರಿಣಾಮವು ದುಬೈ ಸೇರಿ ಪಶ್ಚಿಮ ಏಷ್ಯಾದ ದೇಶಗಳ ಮೇಲೂ ಬಿದ್ದಿದೆ. ಉದ್ಯೋಗಕ್ಕಾಗಿ ಇಲ್ಲಿ ನೆಲೆಸಿರುವ ಕನ್ನಡಿಗರು, ಉನ್ನತ ಶಿಕ್ಷಣ, ವ್ಯವಹಾರ, ಪ್ರವಾಸ ಹಾಗೂ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಹೋಗಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ ಕೇಂದ್ರ ಸರ್ಕಾರ ಭಾರತೀಯ ರಾಯಭಾರಿ, ಕಾನ್ಸುಲೇಟ್‌ ಕಚೇರಿಗಳ ಮೂಲಕ ಕನ್ನಡಿಗರಿಗೆ ಸುರಕ್ಷತೆ ಖಚಿತಪಡಿಸಿ ಆರೈಕೆ ಮಾಡಬೇಕು. ಕರ್ನಾಟಕ ಹಾಗೂ ಭಾರತದ ವಿವಿಧ ರಾಜ್ಯಗಳ ಜನರನ್ನು ಆದ್ಯತೆ ಮೇರೆಗೆ ತಾಯತ್ನಾಡಿಗೆ ಮರಳಲು ವ್ಯವಸ್ಥೆ ಮಾಡಬೇಕು ಎಂದು ಶಾಲಿನಿ ರಜನೀಶ್ ಪತ್ರದಲ್ಲಿ ತಿಳಿಸಿದ್ದಾರೆ.

ಅಗತ್ಯ ವಿಮಾನ ಸೇವೆ ಒದಗಿಸಿ:

ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮಿರ್‌ ಕುಮಾರ್‌ ಸಿನ್ಹಾ ಅವರಿಗೆ ಪತ್ರ ಬರೆದಿರುವ ಶಾಲಿನಿ ರಜನೀಶ್, ಯುದ್ಧದ ಸ್ಥಿತಿಯಲ್ಲಿರುವ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ರಿಟರ್ನ್ ಟಿಕೆಟ್‌ ಬುಕ್‌ ಮಾಡಿದ್ದರೂ ವಿಮಾನಗಳ ಸೇವೆಯಲ್ಲಿ ಅಡಚಣೆ ಉಂಟಾಗಿದೆ. ಮಾ.2ರವರೆಗೆ ಎಲ್ಲಾ ವಿಮಾನಸೇವೆ ಬಂದ್‌ ಮಾಡಲಾಗಿದೆ. ಹೀಗಾಗಿ ಉಂಟಾಗಿರುವ ಅನಿಶ್ಚಿತತೆಯಿಂದ ಅವರು ವಾಪಸ್‌ ಆಗುತ್ತಿಲ್ಲ. ಹೀಗಾಗಿ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಕನ್ನಡಿಗರು ಸೇರಿದಂತೆ ದೇಶದ ಜನರನ್ನು ಸುರಕ್ಷಿತವಾಗಿ ವಾಪಸು ಕಳುಹಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಿ ಅಂತಹ ಕನ್ನಡಿಗರು ಹಾಗೂ ಭಾರತೀಯರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಬಳಿಕ ವಿಮಾನ ವ್ಯವಸ್ಥೆ ಮಾಡಿ ಟಿಕೆಟ್‌ಗಳನ್ನು ಮರು ಹೊಂದಾಣಿಕೆ ಮಾಡಬೇಕು. ಜತೆಗೆ ಹೆಚ್ಚುವರಿ ದರ ವಸೂಲಿ ಮಾಡದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಲ್ಲಿ ಯುದ್ದ: ಸಂಕಷ್ಟದಲ್ಲಿ 150ಕ್ಕೂ ಹೆಚ್ಚು ಕನ್ನಡಿಗರು! ಯುದ್ದಾತಂಕದ ಬಗ್ಗೆ ಡ್ರೋನ್ ಪ್ರತಾಪ್ ಹೇಳಿದ್ದೇನು?
India News Live: ಕನ್ನಡಿಗರ ನೆರವಿಗೆ 24*7 ಹೆಲ್ಪ್‌ಲೈನ್, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತನ್ನಿ - ಕೇಂದ್ರಕ್ಕೆ ರಾಜ್ಯ ಪತ್ರ